ಸೋಮವಾರ, ಏಪ್ರಿಲ್ 19, 2021
25 °C

ವಸತಿ ರಹಿತರಿಗೆ ರಾತ್ರಿ ವೇಳೆ ಉಚಿತ ಸೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾತ್ರಿ ವೇಳೆ ಬೀದಿ ಬದಿ ಮಲಗುವಂತಹ ವಸತಿರಹಿತ ನಾಗರಿಕರಿಗೆ ಬಿಬಿಎಂಪಿಯು ತನ್ನ ಎಂಟು ವಲಯಗಳ 13 ಸೇವಾ ಕೇಂದ್ರಗಳಲ್ಲಿ ಉಚಿತವಾಗಿ  ತಂಗಲು ವ್ಯವಸ್ಥೆ ಮಾಡುತ್ತಿದೆ. ನಗರದಲ್ಲಿ ರಸ್ತೆ, ದೇವಸ್ಥಾನ, ಚರ್ಚ್, ಪ್ರಾರ್ಥನಾ ಮಂದಿರಗಳ ಬಳಿ ಮಲಗುವಂತಹ 746 ವಸತಿರಹಿತ ನಾಗರಿಕರನ್ನು ಗುರುತಿಸಲಾಗಿದ್ದು, ಸದ್ಯಕ್ಕೆ 188 ವಸತಿರಹಿತರಿಗೆ ಸೇವಾ ಕೇಂದ್ರಗಳಲ್ಲಿ ಮಲಗಲು ಅವಕಾಶ ಕಲ್ಪಿಸಲಾಗಿದೆ.ವಸತಿರಹಿತ ನಾಗರಿಕರಿಗೆ ಮಲಗಲು ಹಾಸಿಗೆ, ಹೊದಿಕೆ, ಜಮಖಾನದ ಜತೆಗೆ ಪೇಸ್ಟ್, ಬ್ರಷ್ ಕೂಡ ನೀಡಲಾಗುತ್ತಿದೆ. ಸುಪ್ರೀಂಕೋರ್ಟ್‌ನ ತೀರ್ಪಿನ ಮೇರೆಗೆ ಪಾಲಿಕೆಯು ವಸತಿರಹಿತ ನಾಗರಿಕರಿಗೆ ರಾತ್ರಿ ವೇಳೆ ಸೇವಾ ಕೇಂದ್ರಗಳಲ್ಲಿ ತಂಗಲು ವ್ಯವಸ್ಥೆ ಮಾಡುತ್ತಿದೆ.ಬೊಮ್ಮನಹಳ್ಳಿ ವಲಯದ ಜಂಬೂಸವಾರಿ ದಿಣ್ಣೆಯ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿರುವ ರಾತ್ರಿ ವಸತಿರಹಿತ ನಾಗರಿಕರ ಸೇವಾ ಕೇಂದ್ರ ಹಾಗೂ ಜೆ.ಸಿ. ರಸ್ತೆಯ ವಸತಿರಹಿತ ಕೂಲಿ ಕಾರ್ಮಿಕರ ತಂಗುದಾಣಗಳಿಗೆ ಸೋಮವಾರ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದಿದ್ದ ಪಾಲಿಕೆ ಅಧಿಕಾರಿಗಳು, ಸೇವಾ ಕೇಂದ್ರಗಳಲ್ಲಿ ವಸತಿರಹಿತ ನಾಗರಿಕರಿಗೆ ಒದಗಿಸುತ್ತಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಬೊಮ್ಮನಹಳ್ಳಿ ವಲಯದ ಜಂಬೂಸವಾರಿ ದಿಣ್ಣೆಯ ಸಮುದಾಯ ಭವನದಲ್ಲಿ 22 ಮಂದಿ ರಾತ್ರಿ ವಸತಿರಹಿತ ನಾಗರಿಕರಿಗೆ ತಂಗಲು ವ್ಯವಸ್ಥೆ ಮಾಡಲಾಗಿದ್ದು, ವಸಂತಪುರದ ಸಮುದಾಯ ಭವನದಲ್ಲಿ 27 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ವಲಯದ ಜಂಟಿ ಆಯುಕ್ತ ಶಿವಬಸವಯ್ಯ ಸುದ್ದಿಗಾರರಿಗೆ ತಿಳಿಸಿದರು.ವಸತಿರಹಿತ ನಿರಾಶ್ರಿತರ ಆಯ್ಕೆ ಹೇಗೆ?: ಬಿಬಿಎಂಪಿಯು ಹಲವು ಸ್ವಯಂ ಸೇವಾ ಸಂಸ್ಥೆಗಳಿಗೆ ಈ ರಾತ್ರಿ ವಸತಿರಹಿತ ನಾಗರಿಕರ ಸೇವಾ ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿದೆ. ಆ ಸ್ವಯಂಸೇವಾ ಸಂಸ್ಥೆಗಳೇ ನಗರದ ವಿವಿಧೆಡೆ ರಾತ್ರಿ ವೇಳೆ ಮಲಗುವಂತಹ ನಾಗರಿಕರನ್ನು ಗುರುತಿಸಿ ಕೇಂದ್ರಗಳಿಗೆ ಕರೆತರಲಿವೆ. ಇಂತಹ ವ್ಯಕ್ತಿಗಳಿಗೆ ಸರ್ಕಾರಿ ಅಥವಾ ಪಾಲಿಕೆ ಆಸ್ಪತ್ರೆಗಳಲ್ಲಿ ಮೊದಲು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ನಂತರ ಕೇಂದ್ರಕ್ಕೆ ಕರೆತಂದು ಕೌನ್ಸೆಲಿಂಗ್ ನೀಡಲಾಗುತ್ತದೆ.ಜಂಬೂಸವಾರಿ ದಿಣ್ಣೆಯ ರಾತ್ರಿ ವಸತಿರಹಿತ ನಾಗರಿಕರ ಸೇವಾ ಕೇಂದ್ರದ ನಾಗರಿಕರಿಗೆ `ಇಸ್ಕಾನ್~ ಸಂಸ್ಥೆಯ ವತಿಯಿಂದ ಒಂದು ಬಾರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೇಂದ್ರದಲ್ಲಿನ 15 ಮಕ್ಕಳ ಪೈಕಿ ಎಂಟು ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೆ ಕಳಿಸಲಾಗುತ್ತಿದೆ. ಅಲ್ಲದೆ, ಪ್ರತಿ ದಿನ ಸಂಜೆ 4 ಗಂಟೆಯಿಂದ ಈ ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕಿಯೊಬ್ಬರನ್ನು ನಿಯೋಜಿಸಲಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದರು.ಪುರುಷರು ಹಾಗೂ ಮಹಿಳೆಯರಿಗೆ ತಂಗಲು ಪ್ರತ್ಯೇಕ ವ್ಯವಸ್ಥೆ ಮಾಡಲಾದೆ. ಅಲ್ಲದೆ, ಎರಡೂ ಅಂತಸ್ತುಗಳಲ್ಲಿ ಶೌಚಾಲಯ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ರಾತ್ರಿ ವಸತಿರಹಿತರ ಬಗ್ಗೆ ಸರ್ವೆ ನಡೆಸಿ ಗುರುತಿಸುವುದು, ಅವರಿಗೆ ಕೌನ್ಸೆಲಿಂಗ್ ನೀಡುವುದು ಹಾಗೂ ಕೇಂದ್ರಗಳ ನಿರ್ವಹಣೆಗಾಗಿ ಸುರಭಿ ಫೌಂಡೇಷನ್ ಟ್ರಸ್ಟ್‌ಗೆ ಕೇಂದ್ರವೊಂದಕ್ಕೆ ಮಾಸಿಕ 32,100 ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದರು.

ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ 2010ರ ಆಗಸ್ಟ್‌ನಲ್ಲಿ ನಡೆಸಿದ ಸರ್ವೆ ಪ್ರಕಾರ 108 ಹಾಗೂ 2011ರ ಜೂನ್‌ನಲ್ಲಿ ನಡೆದ ಸರ್ವೆ ಪ್ರಕಾರ 84 ಮಂದಿ ರಾತ್ರಿವಸತಿ ರಹಿತ ನಾಗರಿಕರನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.ಜೆ.ಸಿ. ರಸ್ತೆಯಲ್ಲಿ 40ರಿಂದ 50 ಜನರಿಗೆ ಆಶ್ರಯ: ಜೆ.ಸಿ. ರಸ್ತೆಯಲ್ಲಿರುವ ವಸತಿರಹಿತ ಕೂಲಿ ಕಾರ್ಮಿಕರ ಸೇವಾ ಕೇಂದ್ರದಲ್ಲಿಯೂ 40ರಿಂದ 50 ಮಂದಿಗೆ ರಾತ್ರಿ ವೇಳೆ ಮಲಗಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಲ್ಲಿ ತಂಗುವ ಕಾರ್ಮಿಕರಿಗೆ ಕಬ್ಬಿಣದ ಮಂಚದ ಜತೆಗೆ ಹಾಸಿಗೆ, ಹೊದಿಕೆ ನೀಡಲಾಗುತ್ತಿದೆ.

ಅಲ್ಲದೆ, ಫ್ಯಾನ್ ಸೌಕರ್ಯ ಕೂಡ ಇದೆ. ಕಾರ್ಮಿಕರ ಅಧ್ಯಯನಕ್ಕಾಗಿ ದಿನಪತ್ರಿಕೆಗಳನ್ನೂ ತರಿಸಲಾಗುತ್ತಿದೆ ಎಂದು ಕೇಂದ್ರದ ನಿರ್ವಹಣೆ ಹೊಣೆ ಹೊತ್ತಿರುವ ಇಂಡೋ-ಗ್ಲೋಬಲ್ ಸೋಷಿಯಲ್ ಸರ್ವೀಸ್ ಸೊಸೈಟಿಯ ರಜಿನಿ ತಿಳಿಸಿದರು.`ತಮಿಳುನಾಡು, ಆಂಧ್ರಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ರಾತ್ರಿ ವಸತಿರಹಿತ ಕಾರ್ಮಿಕರಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗಿದೆ. ಕಾರ್ಮಿಕರ ಅನುಕೂಲಕ್ಕಾಗಿ ದೂರವಾಣಿ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ರಾತ್ರಿ ಸಂಸ್ಥೆಯ ಸಿಬ್ಬಂದಿ ಕೂಡ ಅವರ ನೆರವಿಗೆ ಇರುತ್ತಾರೆ. ಅಲ್ಲದೆ, ರಾತ್ರಿ ವೇಳೆ ಪ್ರತಿ ಮೂರು ಗಂಟೆಗೊಮ್ಮೆ ಪೊಲೀಸರು ಕೇಂದ್ರದ ಬಳಿ ಆಗಮಿಸಿ ನಿಗಾ ವಹಿಸಲಿದ್ದಾರೆ~ ಎಂದು ಅವರು ಮಾಹಿತಿ ನೀಡಿದರು.ದಿನಗೂಲಿ ಕಾರ್ಮಿಕರು, ನಿರಾಶ್ರಿತ ಕಟ್ಟಡ ಕಾರ್ಮಿಕರು, ಚಿಂದಿ ಹಾಯುವವರು, ರೈಲ್ವೆ ನಿಲ್ದಾಣ, ಉದ್ಯಾನ, ಬೀದಿ ಹಾಗೂ ಬಸ್ ನಿಲ್ದಾಣಗಳಲ್ಲಿ ರಾತ್ರಿ ವೇಳೆ ಮಲಗುವ ವಸತಿರಹಿತ ನಾಗರಿಕರಿಗೆ ಇಲ್ಲಿ ತಂಗಲು ಆಶ್ರಯ ಕಲ್ಪಿಸಲಾಗಿದೆ. ಪಾಲಿಕೆಯ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಕುಡಿದು ಗಲಾಟೆ: ಸ್ಥಳೀಯರ ಆರೋಪ

`ಪ್ರತಿ ದಿನ ಕಾರ್ಮಿಕರು ಮದ್ಯಪಾನ ಮಾಡಿಯೇ ಕೇಂದ್ರಕ್ಕೆ ಬರುತ್ತಾರೆ. ರಾತ್ರಿಯಿಡೀ ಕೂಗಾಡುತ್ತಾರೆ. ಮೂರು ತಿಂಗಳ ಹಿಂದೆ ದಂಪತಿ ಮಗುವನ್ನು ಮೇಲಿಂದ ಕೆಳಗೆ ಎಸೆಯಲು ಪ್ರಯತ್ನಿಸಿತು. ನಾವೆಲ್ಲಾ ಜೋರಾಗಿ ಕೂಗಿಕೊಂಡಿದ್ದರಿಂದ ಮಗು ಬಚಾವಾಯಿತು~ ಎಂದು ಬೊಮ್ಮನಹಳ್ಳಿ ವಲಯದ ಜಂಬೂಸವಾರಿ ದಿಣ್ಣೆಯ ರಾತ್ರಿವಸತಿರಹಿತ ನಾಗರಿಕರ ಕೇಂದ್ರದ ಸುತ್ತಲಿನ ನಿವಾಸಿಗಳು ಆರೋಪಿಸಿದರು.`ಕಾರ್ಮಿಕರು ಕೇಂದ್ರಕ್ಕೆ ಆಗಮಿಸುವ ಮೊದಲೇ ಮದ್ಯಪಾನ ಮಾಡಿ ಬರುವುದರಿಂದ ನಾವು ಕೂಡ ಏನೂ ಮಾಡಲು ಸಾಧ್ಯವಾಗುತ್ತಿಲ್ಲ~ ಎಂದು ಕೇಂದ್ರದ ಭದ್ರತಾ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.

`ಮದ್ಯಪಾನ ಮಾಡಿ ಬರುವಂತಹ ನಾಗರಿಕರಿಗೆ ಮುಂದಿನ ದಿನಗಳಲ್ಲಿ ಕೌನ್ಸೆಲಿಂಗ್‌ನಲ್ಲಿ ಸೂಕ್ತ ಸಲಹೆ ನೀಡುವ ಮೂಲಕ ಮನಪರಿವರ್ತನೆ ಮಾಡಲು ಪ್ರಯತ್ನಿಸಲಾಗುವುದು~ ಎಂದು ಪಾಲಿಕೆ ಅಧಿಕಾರಿಗಳು ಸ್ಥಳೀಯರಿಗೆ ಭರವಸೆ ನೀಡಿದರು.

ಶಾಶ್ವತ ಕೇಂದ್ರಕ್ಕೆ 9 ಕೋಟಿ

ನಗರದಲ್ಲಿ ರಾತ್ರಿ ವಸತಿರಹಿತ ನಾಗರಿಕರಿಗೆ ಆಶ್ರಯ ಕಲ್ಪಿಸಲು ಶಾಶ್ವತವಾದ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ 9 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಹುಳಿಮಾವು ಬಳಿ ಕೇಂದ್ರಕ್ಕಾಗಿ 1.28 ಎಕರೆ ಜಾಗ ಗುರುತಿಸಲಾಗಿದೆ ಎಂದು ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಶಿವಸಬವಯ್ಯ ತಿಳಿಸಿದರು.ಈ ಕೇಂದ್ರಗಳ ನಿರ್ವಹಣೆಗಾಗಿ ಪಾಲಿಕೆ ಕೂಡ 5 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಪೌರಾಡಳಿತ ನಿರ್ದೇಶನಾಲಯದ ಮಾರ್ಗಸೂಚಿಯನ್ವಯ ಕೇಂದ್ರ ಸ್ಥಾಪಿಸಲಾಗುವುದು. ಸದ್ಯಕ್ಕೆ 13 ಕೇಂದ್ರಗಳಲ್ಲಿ 549 ಮಂದಿಗೆ ಅವಕಾಶ ಕಲ್ಪಿಸಲು ಅವಕಾಶವಿದೆ. ವಾರದ ಏಳು ದಿನ ದಿನದ 24 ಗಂಟೆಗಳಲ್ಲಿಯೂ ಈ ಕೇಂದ್ರಗಳು ನಿರ್ವಹಿಸಲಿದ್ದು, ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಕೇಂದ್ರಗಳನ್ನು ತೆರೆಯಲು ಪಾಲಿಕೆ ಉದ್ದೇಶಿಸಿದೆ ಎಂದು ಅವರು ತಿಳಿಸಿದರು.ಹಗಲು ಹೊತ್ತಿನಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರು, ವಲಸಿಗರಿಗೆ ಇಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಭಿಕ್ಷುಕರಿಗೆ ಈ ಕೇಂದ್ರಗಳಲ್ಲಿ ಆಶ್ರಯ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.