ವಸತಿ, ಶಿಕ್ಷಣ, ಆರೋಗ್ಯ ಸೌಕರ್ಯಕ್ಕೆ ಒತ್ತು

7

ವಸತಿ, ಶಿಕ್ಷಣ, ಆರೋಗ್ಯ ಸೌಕರ್ಯಕ್ಕೆ ಒತ್ತು

Published:
Updated:

ಹಿರಿಯೂರು: ತಾಲ್ಲೂಕಿನ ಜವನ ಗೊಂಡನಹಳ್ಳಿ ಜಿ.ಪಂ. ಕ್ಷೇತ್ರದ ವಿಜೇತ ಅಭ್ಯರ್ಥಿ ಕೆ. ಕರಿಯಮ್ಮ ಶಿವಣ್ಣ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.* ರಾಜಕೀಯ ಕ್ಷೇತ್ರಕ್ಕೆ ಇಷ್ಟಪಟ್ಟು ಬಂದದ್ದೆ?

1994-95ರಲ್ಲಿ ತಾಲ್ಲೂಕು ಪಂಚಾಯ್ತಿ ಚುನಾವಣೆ ಘೋಷಣೆಯಾಯಿತು. ಜನಾಂಗದ ಹಿರಿಯ ಮುಖಂಡರಾದ ಸಂ. ರಂಗಯ್ಯನವರು ಮನೆಗೆ ಬಂದು, ತಾ.ಪಂ.ಗೆ ಸ್ಪರ್ಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ನ ಟಿಕೆಟ್ ಕೊಡಿಸಿದರು. ಪತಿ ದಿಂಡಾವರ ಮಂಡಲ್ ಪ್ರಧಾನರಾಗಿ ಸಲ್ಲಿಸಿದ್ದ ಸೇವೆ, ರಂಗಯ್ಯ ಅವರ ಬೆಂಬಲದಿಂದ ಸುಲಭವಾಗಿ ಗೆಲುವು ಪಡೆದು, ರಾಜಕೀಯರಂಗದ ಪ್ರವೇಶ ಆಯಿತು.* ಕ್ಷೇತ್ರದಲ್ಲಿ ತಮಗೆ ಕಂಡು ಬಂದಿರುವ ಪ್ರಮುಖ ಸಮಸ್ಯೆಗಳು?


ಹೋಬಳಿಯಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿದ್ದು, ಗಾಯತ್ರಿ ಜಲಾಶಯದಿಂದ ಹಳ್ಳಿಗಳಿಗೆ ಕುಡಿಯುವನೀರು ಪೂರೈಸುವ ಯೋಜನೆ ತಯಾರಾಗಿದೆ ಎಂಬ ಮಾಹಿತಿ ಇದೆ. ಅಂತಹ ಯೋಜನೆ ಇದ್ದರೆ ಅದರ ಜಾರಿಗೆ ಒತ್ತು ನೀಡುತ್ತೇನೆ. ಗೌಡ್ನಹಳ್ಳಿ- ಪಿಲ್ಲಾಲಿ- ದಿಂಡಾವರ ಭಾಗದಲ್ಲಿ ಸರ್ಕಾರಿ ಪಿಯು ಕಾಲೇಜು ಅಗತ್ಯ ಇದೆ. ಹಾಲು ಮಾದೇನಹಳ್ಳಿ ಅಥವಾ ಚಿಗಳಿಕಟ್ಟೆ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಬೇಕಿದೆ. ರಸ್ತೆಗಳ ಸುಧಾರಣೆ, ಹಾಲುಮಾದೇನಹಳ್ಳಿ ಬಳಿ ರಸ್ತೆಗೆ ಸೇತುವೆ ನಿರ್ಮಾಣಕ್ಕೆ ಆದ್ಯತೆ.* ವಸತಿ-ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಹೇಗಿದೆ?

ಬಹುಶಃ ತಾಲ್ಲೂಕಿನಲ್ಲಿ ಅತಿ ಹೆಚ್ಚು ಗುಡಿಸಲು ವಾಸಿಗಳು ನನ್ನ ಕ್ಷೇತ್ರದಲ್ಲಿದ್ದಾರೆ. ಅಲೆಮಾರಿ-ಅರೆ ಅಲೆಮಾರಿ ಯೋಜನೆಯಡಿ ಗುಡಿಸಲು ಹೆಚ್ಚಿರುವ ಊರುಗಳಲ್ಲಿ ವಾಸವಾಗಿರುವ ಗೊಲ್ಲ, ಯಳವ, ದೊಂಬಿದಾಸರು ಮೊದಲಾದ ಜನಾಂಗದವರಿಗೆ ಮನೆ ಕಟ್ಟಿಸಿ ಕೊಡಬೇಕೆಂಬ ಮಹದಾಸೆ ಇದೆ. ದಿಂಡಾವರ, ಯಲ್ಲದಕೆರೆ ಆಸ್ಪತ್ರೆಗಳ ಸ್ಥಿತಿ ಸುಧಾರಿಸಬೇಕಿದೆ. ಜವನ ಗೊಂಡನಹಳ್ಳಿಯಲ್ಲಿ 24 ಗಂಟೆ ವೈದ್ಯರ ಸೇವೆ ಲಭ್ಯವಿರುವಂತೆ ಪ್ರಯತ್ನಿಸುತ್ತೇನೆ. ಈ ಭಾಗದಲ್ಲಿ ಪದೇಪದೇ ಕಂಡುಬರುತ್ತಿರುವ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲಾಗುವುದು.* ಅಧಿಕಾರದ ಅವಧಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆ?

ನಾನು ಆಶಾವಾದಿ. ಗ್ರಾ.ಪಂ. ನಿಂದ ಜಿ.ಪಂ.ವರೆಗೆ ಹಾಗೂ ಸರ್ಕಾರದಮಟ್ಟದಲ್ಲಿ ಪ್ರಯತ್ನ ನಡೆಸಿ, ಹೆಚ್ಚಿನ ಅನುದಾನ ತರಲು ಶ್ರಮಿಸುತ್ತೇನೆ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸದೆ ಎಲ್ಲಮಟ್ಟದ ಜನಪ್ರತಿನಿಧಿಗಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಅಭಿವೃದ್ಧಿ ಸಾಧಿಸುತ್ತೇನೆ.* ಸರ್ಕಾರದಿಂದ ನಿರೀಕ್ಷಿತ ಅನುದಾನ ಬರುವ ಭರವಸೆ ಇದೆಯೇ?


ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸ್ಥಳೀಯವಾಗಿ ಆಡಳಿತದಲ್ಲಿರುವ ಪಕ್ಷವೇ ರಾಜ್ಯದಲ್ಲೂ ಇದ್ದರೆ ಅನುದಾನ ತರುವುದು ಸುಲಭ. ನನ್ನ ಪತಿಯ ರಾಜಕೀಯ ಅನುಭವ ಬಳಸಿಕೊಂಡು ಹೆಚ್ಚು ಅನುದಾನ ತರುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry