ಬುಧವಾರ, ಜೂನ್ 23, 2021
28 °C

ವಸ್ತುಸಂಗ್ರಹಾಲಯ ಲೋಕಾರ್ಪಣೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ‘ಗ್ರಾಮಕ್ಕೊಂದು ಕೆರೆ, ಬಿಳಿಗಿರಿಬನದ ವೈವಿಧ್ಯಮಯ ಪ್ರಾಕೃತಿಕ ಸಂಪತ್ತು, ಪೌರಾಣಿಕ ಹಿನ್ನೆಲೆಯುಳ್ಳ ಬಿಳಿಗಿರಿ ರಂಗನಾಥಸ್ವಾಮಿ, ಉದ್ಭವ ಗಂಗಾಧರೇಶ್ವರ ಮುಂತಾದ ದೇಗುಲ, ಷಡಕ್ಷರ, ಮುಪ್ಪಿನ ಷಡಕ್ಷರಿ, ಸಂಸ ರಂತಹ ಮಹಾನ್‌ ಸಾಹಿತ್ಯ ರತ್ನಗಳನ್ನು ನಾಡಿಗೆ ನೀಡಿದ ಕೀರ್ತಿ, ಇನ್ನೊಂದೆಡೆ ವಿಶ್ವದಲ್ಲೇ ಅಪರೂಪದ ಕಲ್ಲಿನ ಬಳೆಗಳನ್ನು ನಾಡಿಗೆ ನೀಡಿದ ಮಂಟಪವನ್ನು ಹೊಂದಿದ ಖ್ಯಾತಿ, ಇದರ ಜೊತೆಗೆ ಈಗ ಜಿಲ್ಲೆಯಲ್ಲೇ ಮೊದಲ ವಸ್ತು ಸಂಗ್ರಹಾಲಯ ನೀಡಿದ ಹೆಗ್ಗಳಿಕೆ’.ಇದು ನಾಡಿನ ಅತ್ಯಂತ ಪುಟ್ಟ ತಾಲ್ಲೂಕಾದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಪುಟ್ಟ ಪರಿಚಯ. ಪಟ್ಟಣದ ಹೃದಯ ಭಾಗದಲ್ಲಿರುವ ಇಂಡೋ ಸಾರ್ಸೆನಿಕ್‌ ಶೈಲಿಯ ಜಹಗೀರ್‌್ದಾರ್‌ ಬಂಗಲೆ ಸಂಸದ ಆರ್‌. ಧ್ರುವನಾರಾಯಣ ಅವರ ಪರಿಶ್ರಮದ ಫಲವಾಗಿ ಜಿಲ್ಲೆಯ ಮೊದಲ ವಸ್ತು ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. 

ದಿವಾನ್‌ ಪೂರ್ಣಯ್ಯ ಅವರು ತಾಲ್ಲೂಕನ್ನು ಜಹಗೀರಾಗಿ ಪಡೆದು ಇಲ್ಲೇ ಉಳಿದುಕೊಂಡು ವ್ಯವಹರಿಸಲು  ಕಟ್ಟಿಸಿದ್ದ 4 ಕಟ್ಟಡಗಳಲ್ಲಿ ಇದು ದೊಡ್ಡದಾದ ಕಟ್ಟವಾಗಿದೆ. ಇವರ ವಂಶಸ್ಥರ ಒಪ್ಪಂದವನ್ನು ಪಡೆದುಕೊಂಡು ಇಲ್ಲಿ ದಿವಾನ್‌ ಪೂರ್ಣಯ್ಯ ಅವರ ಬಗ್ಗೆ ಮಾಹಿತಿ ನೀಡುವ ಅಪೂರ್ವ ಚಿತ್ರಗಳು, ಜೀವನ ಸಾಧನೆ, ನಾಡಿನ ಕಲೆ ವಾಸ್ತು ಶಿಲ್ಪಗಳನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಈಗಾಗಲೇ ಇಲ್ಲಿ ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.ಇದರ ಜೊತೆಗೆ ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ದೊರಕುವ ಜಿಲ್ಲೆಯ ತಾಲ್ಲೂಕಿನ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಿ ಇಡಲು ಇದನ್ನು ರೂಪಿಸಲಾಗಿದೆ. ಬಂಗಲೆ ಹಿಂಭಾಗದಲ್ಲಿನ ಶಿಥಿಲವಾಗಿದ್ದ ಕಟ್ಟಡವನ್ನು ತೆರವುಗೊಳಿಸಿ ತೊಟ್ಟಿ ಮನೆ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಹಾಗೂ ಪಕ್ಕದಲ್ಲಿ ಉದ್ಯಾನವನ ನಿರ್ಮಿಸಲು ಈಗಾಗಲೇ ಅಲಂಕಾರಿಕ ಗಿಡಗಳನ್ನು ನೆಡಲಾಗಿದ್ದು, ಸುತ್ತುಗೋಡೆಯ ಕಾಮಗಾಗಿಯೂ ಭರದಿಂದ ಸಾಗಿದೆ.ಬಳೇಮಂಟಪಕ್ಕೂ ಕಾಯಕಲ್ಪ: ಬಂಗಲೆಯ ಮುಂಭಾಗದಲ್ಲೇ ಐತಿಹಾಸಿಕ ಗೌರೇಶ್ವರ ದೇಗುಲ ಹಾಗೂ ಬಳೇಮಂಟಪಗಳಿವೆ. ಇದನ್ನು ನವೀಕರಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸುಮಾರು ಮೂರು ಅಡಿಗೂ ಹೆಚ್ಚು ಆಳವಾಗಿ ಮಣ್ಣನ್ನು ತೆಗೆಯುವ ಕಾಮಗಾರಿ ಆರಂಭವಾಗಿದೆ. ಬಳೇಮಂಟಪ ಒಂದೆಡೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಇದನ್ನು ತೆರವುಗೊಳಿಸಿ ಮರುಜೋಡಣೆ ಮಾಡಲು ಪ್ರಾಚ್ಯವಸ್ತು ಇಲಾಖೆ ಕ್ರಮ ವಹಿಸಿದ್ದು ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ.ಇಂದು ಉದ್ಘಾಟನೆ: ಯಳಂದೂರು ಪಟ್ಟಣ ದಿವಾನ್‌ ಪೂರ್ಣಯ್ಯ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ಮಾರ್ಚ್ 5ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ನೆರವೇರಿಸಲಿದ್ದಾರೆ. ದಿವಾನ್‌ ಪೂರ್ಣಯ್ಯ ರವರ ಭಾವಚಿತ್ರವನ್ನು ಸಂಸದ ಆರ್‌. ಧ್ರುವನಾರಾಯಣ ಅನಾವರಣಗೊಳಿಸಲಿದ್ದಾರೆ. ಶಾಸಕರಾದ ಎಸ್‌. ಜಯಣ್ಣ, ಸಿ. ಪುಟ್ಟರಂಗಶೆಟ್ಟಿ, ಆರ್‌. ನರೇಂದ್ರ, ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್‌, ಆರ್. ಧರ್ಮಸೇನಾ, ಜಿ.ಪಂ. ಅಧ್ಯಕ್ಷೆ ಯಶೋದಾ ಪ್ರಭುಸ್ವಾಮಿ, ತಾ.ಪಂ. ಅಧ್ಯಕ್ಷೆ ಗಂಗಾಮಣಿ ರೇವಣ್ಣ, ಉಪಾಧ್ಯಕ್ಷ ಎನ್‌. ಮಹೇಶ್‌ಕುಮಾರ್‌, ಸರ್ಕಾರದ ಕಾರ್ಯದರ್ಶಿ ಕೆ.ಆರ್‌. ನಿರಂಜನ್‌, ಪ್ರಾಚ್ಯ ಇಲಾಖೆಯ ಡಾ.ಸಿ.ಜಿ. ಬೆಟಸೂರಮಠ, ಕೆ. ದೊರೆರಾಜು, ಎಂ. ದೊರೆರಾಜು, ಎಚ್.ಟಿ. ತಳವಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.