ಶನಿವಾರ, ಮೇ 8, 2021
19 °C

ವಾಣಿಜ್ಯ ಕಟ್ಟಡ ನಕ್ಷೆ ಮಂಜೂರಾತಿ: ಸೇವೆಗೆ ಲಂಚದ ಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ಕೆಲವು ಕಚೇರಿಗಳ ನಿರ್ವಹಣೆಗೆ ಲಂಚದ ಹಣ ಬಳಕೆಯಾಗುತ್ತಿದೆ! ಕೆಲ ಕಚೇರಿಗಳಲ್ಲಿ ಅಧಿಕಾರಿಗಳು ಅನಧಿಕೃತವಾಗಿ ನೇಮಿಸಿಕೊಂಡ ಸಿಬ್ಬಂದಿಗೆ ಈ ಹಣದಿಂದಲೇ ವೇತನ ನೀಡಲಾಗುತ್ತಿದೆ. ಪಾಲಿಕೆಯ ಹಲವು ಸದಸ್ಯರು ಕೈಗೊಳ್ಳುವ ಸಮಾಜ ಸೇವಾ ಕಾರ್ಯಗಳಿಗೆ ಇದೇ ಹಣ ವಿನಿಯೋಗವಾಗುತ್ತಿದೆ. ಇದು ಅಚ್ಚರಿ ಎನಿಸಿದರೂ ಸತ್ಯ.ನಿಯಮ ಉಲ್ಲಂಘಿಸಿ ನಿರ್ಮಾಣವಾಗುವ ಕಟ್ಟಡಗಳ ಮಾಲೀಕರಿಂದ ಪಡೆಯುವ ಹಣ ಈ ರೀತಿಯ ಕಾರ್ಯಗಳಿಗೆ ಬಳಕೆಯಾಗುತ್ತಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಇದು ಪಾಲಿಕೆಯಲ್ಲಿ ಯಾವ ಮಟ್ಟದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದನ್ನು ತೋರುತ್ತದೆ.ವಾಣಿಜ್ಯ ಕಟ್ಟಡ ನಿರ್ಮಿಸುವವರು ಆರ್ಥಿಕವಾಗಿ ಬಲಾಢ್ಯರು ಎಂಬ ಭಾವನೆ ಬಹುಪಾಲು ಅಧಿಕಾರಿಗಳಲ್ಲಿದೆ. ಹಾಗಾಗಿ ಅವರನ್ನು ನೋಡುವ ದೃಷ್ಟಿಯೇ ಬೇರೆ. ಅವರನ್ನು ಬೆದರಿಸಿದಷ್ಟು ಹೆಚ್ಚು ಹಣ ಸುಲಿಯಬಹುದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು. ಹಾಗಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಿದ್ದಂತೆ ಹಣಕ್ಕೆ ಪೀಡಿಸಲಾರಂಭಿಸುತ್ತಾರೆ.ಲಕ್ಷದವರೆಗೂ ಲಂಚ: 60/40 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲು ಕನಿಷ್ಠ 80 ಸಾವಿರದಿಂದ ಲಕ್ಷ ರೂಪಾಯಿವರೆಗೆ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಹಾಗೆಯೇ 50/80 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಡದ ನಕ್ಷೆ ಮಂಜೂರಾತಿಗೆ ಮೂರ‌್ನಾಲ್ಕು ಲಕ್ಷ ರೂಪಾಯಿ ಹಣ ನೀಡುವಂತೆ ಕೇಳುವವರಿದ್ದಾರೆ. ನಿವೇಶನದ ವಿಸ್ತೀರ್ಣ ಹಾಗೂ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಈ ದರ ನಿಗದಿಯಾಗುತ್ತದೆ.ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವವರು ಒಂದಿಷ್ಟು ಹಣವನ್ನು ಮುಂಗಡವಾಗಿ ನೀಡಬೇಕು. ಇಲ್ಲದಿದ್ದರೆ ಕಡತ ಒಂದು ಕುರ್ಚಿಯಿಂದ ಮತ್ತೊಂದು ಕುರ್ಚಿಗೆ ತಲುಪುವುದೇ ಇಲ್ಲ. ಒಂದೇ ಬಾರಿಗೆ ಹಣ ನೀಡಿದರೆ ತಕ್ಷಣವೇ ಸ್ಥಳ ಪರಿಶೀಲನೆ `ಶಾಸ್ತ್ರ~ ಮುಗಿಸಿ ಮಂಜೂರಾತಿ ನೀಡುತ್ತಾರೆ. ಇಷ್ಟಕ್ಕೆ ಸಮಸ್ಯೆ ನಿವಾರಣೆಯಾಯಿತು ಎಂದು ಭಾವಿಸುವಂತಿಲ್ಲ.ಉಪವಿಧಿಗಳ ಪಾಲನೆಯ ಮೇಲ್ವಿಚಾರಣೆ ನಡೆಸುವ ಅಧಿಕಾರಿಗಳು ಕಟ್ಟಡದ ಮೇಲೆ ಸದಾ ನಿಗಾ ವಹಿಸಿರುತ್ತಾರೆ. ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದರೂ ಸುಮ್ಮನಿರುತ್ತಾರೆ. ಕಟ್ಟಡ ನಿರ್ಮಾಣ ಕಾರ್ಯ ಒಂದು ಸ್ವರೂಪಕ್ಕೆ ಬಂದ ಮೇಲೆ ಹೊಸ `ಅಸ್ತ್ರ~ಗಳನ್ನು ಪ್ರಯೋಗಿಸುತ್ತಾರೆ.ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ, ಸೆಟ್‌ಬ್ಯಾಕ್ ಬಿಡದಿರುವುದು ಕಂಡು ಬಂದರೆ ನೋಟಿಸ್ ನೀಡುವುದಾಗಿ ಬೆದರಿಸುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಉಲ್ಲಂಘನೆ ಮಾಡಿದ ತಪ್ಪಿಗೆ `ಪರಿಹಾರ~ ನಿಧಿ ನೀಡುವಂತೆ ಸೂಚಿಸುತ್ತಾರೆ.ಲಂಚಕ್ಕೆ ಹೇಳುವ ಕಾರಣಗಳು: ಬಹುತೇಕ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ ತಪ್ಪಿಗೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳುವುದಿಲ್ಲ. ಅಲ್ಲದೇ ಅನಧಿಕೃತ ಭಾಗವನ್ನು ತೆರವುಗೊಳಿಸುವ ಗೋಜಿಗೂ ಹೋಗುವುದಿಲ್ಲ. ಬದಲಿಗೆ ಅಕ್ರಮವನ್ನು ಮುಚ್ಚಿ ಹಾಕುವ ವಿಧಾನಗಳ ಬಗ್ಗೆ ನಿವೇಶನದಾರರಿಗೆ ಹೇಳುತ್ತಾ ಹೋಗುತ್ತಾರೆ.ವಾಣಿಜ್ಯ ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ಲಂಚ ವಸೂಲಿ ಮಾಡುತ್ತಾರೆ. ಮಹಡಿಗಳ ಸಂಖ್ಯೆಯ ಆಧಾರದ ಮೇಲೆ ಇಲ್ಲವೇ ಕಟ್ಟಡದ ಒಟ್ಟು ನಿರ್ಮಾಣ ವೆಚ್ಚದ ಶೇ 10ರಷ್ಟು ಹಣವನ್ನು ನೀಡುವಂತೆ ಒತ್ತಾಯಿಸುತ್ತಾರೆ.ಇದು ದುಬಾರಿ ಮೊತ್ತ ಎನಿಸಿದರೂ ಇದನ್ನು ಭರಿಸುವ ನಿವೇಶನದಾರರೂ ಇದ್ದಾರೆ. ಏಕೆಂದರೆ ನಿಯಮಬಾಹಿರವಾಗಿ ಒಟ್ಟು ನಿರ್ಮಾಣ ಪ್ರದೇಶವನ್ನು ಹೆಚ್ಚಿಗೆ ಮಾಡಿಕೊಂಡಿರುತ್ತಾರೆ. ಅಲ್ಲದೇ ವಾಹನ ನಿಲುಗಡೆ ತಾಣದಲ್ಲೂ ಮಳಿಗೆಗಳನ್ನು ನಿರ್ಮಿಸಿರುತ್ತಾರೆ. ಹಾಗಾಗಿ ಕೇಳಿದಷ್ಟು ಲಂಚ ನೀಡಬೇಕಾಗುತ್ತದೆ. ಇದರಿಂದಾಗಿಯೇ ನಗರದಲ್ಲಿ ಎಲ್ಲೆಡೆ ವಾಹನ ನಿಲುಗಡೆ ಸಮಸ್ಯೆ ತಲೆನೋವಾಗಿ ಪರಿಣಮಿಸಿರುವುದು.ಕಚೇರಿ ನಿರ್ವಹಣೆಗೆ ಹಣ ಕೊಡಿ:

`ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ ನಾವೇ ಕೆಲವರನ್ನು ನೇಮಿಸಿಕೊಂಡಿದ್ದೇವೆ. ಅವರಿಗೆಲ್ಲಾ ಪ್ರತಿ ತಿಂಗಳು ವೇತನ ನೀಡಬೇಕು. ಅಲ್ಲದೇ ಕಿರಿಯ ಅಧಿಕಾರಿಗಳಿಗೂ ಸ್ವಲ್ಪ ಹಣ ಕೊಡಬೇಕು. ಒಟ್ಟಾರೆ ಕಚೇರಿ ನಿರ್ವಹಣೆಗೆ ಸಾವಿರಾರು ರೂಪಾಯಿ ಬೇಕಾಗುತ್ತದೆ. ಆ ಹಣವನ್ನು ಈ ರೂಪದಲ್ಲಿ ಸಂಗ್ರಹಿಸುತ್ತೇವೆ~ ಎಂದು ನೇರವಾಗಿ ಹೇಳುವ ಅಧಿಕಾರಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ.ಇನ್ನು ಈ ಪ್ರಕರಣ ಪಾಲಿಕೆ ಸದಸ್ಯರ ಗಮನಕ್ಕೆ ಹೋಯಿತು ಎಂದು ಭಾವಿಸೋಣ. ನಿವೇಶನದಾರರು ಅಪರಿಚಿತರಾಗಿದ್ದರೆ, `ಅದೆಲ್ಲಾ ನನಗೆ ಗೊತ್ತಿಲ್ಲ. ನೀವುಂಟು, ಆ ಅಧಿಕಾರಿಗಳುಂಟು. ಇದೇ ಪ್ರದೇಶದಲ್ಲಿ ಮುಂದೆಯೂ ವ್ಯವಹರಿಸಬೇಕಾಗಿರುವುದರಿಂದ ಕೇಳಿದಷ್ಟು ಕೊಟ್ಟು ಬಿಡಿ~ ಎನ್ನುವ ಸದಸ್ಯರಿಗೆ ಕೊರತೆ ಇಲ್ಲ.

ಒಂದೊಮ್ಮೆ ಅರ್ಜಿದಾರರು ಪರಿಚಿತರಾಗಿದ್ದರೆ ಅವರು ನಡೆದುಕೊಳ್ಳುವ ರೀತಿಯೇ ಬೇರೆ.`ನಿಯಮ ಉಲ್ಲಂಘನೆ ಮಾಡಬಾರದಿತ್ತು. ಹಾಗಾಗಿ ಅಧಿಕಾರಿಗಳು ಹಣಕ್ಕೆ ಪೀಡಿಸುತ್ತಾರೆ. ನನಗೇನು ನೀಡಬೇಡಿ. ಅಧಿಕಾರಿಗಳನ್ನು ನೋಡಿಕೊಳ್ಳಿ. ಆದರೆ, ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್, ಶೂ, ಸಮವಸ್ತ್ರ ನೀಡಬೇಕೆಂದಿದ್ದೇನೆ. ಅದಕ್ಕೊಂದು 50,000 ಕೊಟ್ಟು ಬಿಡಿ~ ಎಂದು ನಯವಾಗಿಯೇ ಬೇಡಿಕೆ ಇಡುವವರಿದ್ದಾರೆ. ಅವರಿಂದ ಹಣ ಪಡೆದು ಮಕ್ಕಳಿಗೆ ಹಂಚಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆದೇ ಇದೆ.ಜನಪ್ರತಿನಿಧಿಗಳ ಅಡ್ಡಿ: ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಬೇಕಾದ ಜನಪ್ರತಿನಿಧಿಗಳ ಪೈಕಿ ಹಲವರು ಇದಕ್ಕೆ ಕುಮ್ಮಕ್ಕು ನೀಡುತ್ತಾರೆ. ಇತ್ತೀಚೆಗೆ ನಿಯಮ ಉಲ್ಲಂಘನೆಗೆ ಕಾರಣಕ್ಕೆ ನೋಟಿಸ್ ನೀಡಲು ಮುಂದಾದ ಅಧಿಕಾರಿಯನ್ನು ಪೂರ್ವ ಭಾಗದ ಶಾಸಕರೊಬ್ಬರು ತರಾಟೆಗೆ ತೆಗೆದುಕೊಂಡು ವರ್ಗಾವಣೆ ಮಾಡುವ ಬೆದರಿಕೆ ಹಾಕಿದ್ದಾರೆ. ಜನಪ್ರತಿನಿಧಿಗಳ ಮಟ್ಟದಲ್ಲೇ `ಒಪ್ಪಂದ~ವಾಗಿದ್ದರೆ, ಆ ಕಟ್ಟಡಗಳತ್ತ ಸುಳಿಯದಂತೆ ಅಧಿಕಾರಿಗಳಿಗೆ ತಾಕೀತು ಸಹ ಮಾಡಲಾಗುತ್ತದೆ.ಹಾಗಾಗಿ ಅಧಿಕಾರಿಗಳು ಕಾನೂನು ಪಾಲನೆಗೆ ಹೆಚ್ಚು ಒತ್ತು ನೀಡುವುದಿಲ್ಲ. ಪಾಲಿಗೆ ಬಂದದ್ದನ್ನು ಪಡೆದು ಸುಮ್ಮನಾಗುತ್ತಾರೆ. ಕೆಲ ವರ್ಷಗಳಲ್ಲೇ ವರ್ಗಾವಣೆಯಾದರೆ ಅಲ್ಲಿಗೆ ಪ್ರಕರಣ ಅಂತ್ಯವಾದಂತೆ.

 

 - ಮುಂದುವರಿಯುವುದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.