ಮಂಗಳವಾರ, ಮೇ 11, 2021
20 °C

ವಾಣಿಜ್ಯ ಹಡಗು ನಿರ್ವಹಣೆ: ಮಂಗಳೂರು ಮೈಲುಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಾಣಿಜ್ಯ ಹಡಗುಗಳನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ ನಡೆಯುವ ಐಸಿಎಸ್(ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್‌ಷಿಪ್ ಬ್ರೋಕರ್ಸ್‌) ತರಬೇತಿ ಕಾರ್ಯಕ್ರಮ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಮೊದಲ ಬ್ಯಾಚ್‌ನ ಮೂವರು ಅಭ್ಯರ್ಥಿಗಳನ್ನು ಶುಕ್ರವಾರ ಸನ್ಮಾನಿಸಲಾಯಿತು.ಕೆನರಾ ವಾಣಿಜ್ಯೋದ್ಯಮ ಸಂಘದ(ಕೆಸಿಸಿಐ) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಅಂತರರಾಷ್ಟ್ರೀಯ ಖ್ಯಾತಿಯ ಹಡಗು ನಿರ್ವಹಣಾ ತರಬೇತುದಾರ ಕ್ಯಾಪ್ಟನ್ ಜೆ.ಪಿ.ಮಿನೇಜಸ್ ಅವರು ಅತಿ ಹೆಚ್ಚಿನ ಅಂಕದೊಂದಿಗೆ ತರಬೇತಿ ಪೂರೈಸಿದವರನ್ನು ಸನ್ಮಾನಿಸಿದರು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದು ಏಳು ಪ್ರಶ್ನೆಪತ್ರಿಕೆಗಳಿರುವ ಅತ್ಯಂತ ಕ್ಲಿಷ್ಟಕರ ಪರೀಕ್ಷೆ. ಜಗತ್ತಿನ 85 ಸ್ಥಳಗಳಲ್ಲಿ ಮಾತ್ರ ಐಸಿಎಸ್ ತರಬೇತಿ/ಪರೀಕ್ಷಾ ಕೇಂದ್ರಗಳಿವೆ. ಇವುಗಳಲ್ಲಿ ಮಂಗಳೂರು ಸಹ ಒಂದು. 2ರಿಂದ 3 ವರ್ಷದೊಳಗೆ ಈ ಕೋರ್ಸ್ ಪೂರ್ಣಗೊಳಿಸಬಹುದಾಗಿದ್ದು, ಭಾರಿ ಉದ್ಯೋಗ ಅವಕಾಶವೇ ಇದೆ ಎಂದರು.ವಾಣಿಜ್ಯ ಹಡಗುಗಳನ್ನು ನಿರ್ವಹಿಸಿದ ಮೂರು ವರ್ಷಗಳ ಅನುಭವ ಅಭ್ಯರ್ಥಿಗೆ ಇರಬೇಕು. ಅತ್ಯಂತ ಕಷ್ಟಕರವಾದ ಈ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಕನಿಷ್ಠ ಮಾಸಿಕ 30 ಸಾವಿರ ರೂಪಾಯಿಯಿಂದ ಲಕ್ಷವರೆಗೂ ಅಧಿಕ ವೇತನದ ಕೆಲಸ ಪಡೆಯುವ ಅವಕಾಶವಿದೆ. ವಿದೇಶದಲ್ಲಿ ಈ ತರಬೇತಿ ಪಡೆದವರಿಗೆ ಅಧಿಕ ಬೇಡಿಕೆ ಇದೆ ಎಂದು ಗಮನ ಸೆಳೆದರು.ಈ ತರಬೇತಿಗೆ ನೋಂದಣಿ ಶುಲ್ಕ ಕೇವಲ 4 ಸಾವಿರ ರೂಪಾಯಿ, ಪ್ರತಿ ಪ್ರಶ್ನೆಪತ್ರಿಕೆಗೆ 2 ಸಾವಿರ ರೂಪಾಯಿ ಶುಲ್ಕವಿದೆ. ಕನಿಷ್ಠ ಎಸ್‌ಎಸ್‌ಎಲ್‌ಸಿ ತೇರ್ಗಡೆ ಆದವರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.ಮಂಗಳೂರಿನಲ್ಲಿ 2009-10ನೇ ಸಾಲಿನಿಂದ ಐಸಿಎಸ್ ತರಬೇತಿ ಕಾರ್ಯಕ್ರಮ ಆರಂಭವಾಗಿದೆ. ಮೊದಲ ಬ್ಯಾಚ್‌ನಲ್ಲಿ 16 ಮಂದಿ ಇದ್ದರು. ಇದೀಗ ಆ ಬ್ಯಾಚ್‌ನ ಆರ್.ಕುಮಾರ್, ಸಿ.ಎಲ್.ಪ್ರಶಾಂತ್ ಮತ್ತು ಹ್ಯೂಬರ್ಟ್ ಡಿಸೋಜ ಅಧಿಕ ಅಂಕಗಳೊಂದಿಗೆ ತರಬೇತಿ ಪೂರ್ಣಗೊಳಿಸಿದ್ದಾರೆ. ಶೇ 54ರಷ್ಟು ಫಲಿತಾಂಶ ಬಂದಿದೆ. ಸಾಮಾನ್ಯವಾಗಿ ಶೇ 40ಕ್ಕಿಂತ ಅಧಿಕ ಉತ್ತೀರ್ಣ ಪ್ರಮಾಣ ಇಲ್ಲದಿರುವುದನ್ನು ನೋಡಿದರೆ ಮಂಗಳೂರಿನಲ್ಲಿ ಹೆಚ್ಚಿನ ಸಾಧನೆ ಆಗಿರುವುದು ಸ್ಪಷ್ಟ ಎಂದು ಹರ್ಷ ವ್ಯಕ್ತಪಡಿಸಿದರು.ಈ ಪರೀಕ್ಷೆ 1986ರಲ್ಲಷ್ಟೇ ಆರಂಭವಾಗಿದ್ದು, ಭಾರತಕ್ಕೆ 1990ರಲ್ಲಿ ಕಾಲಿಟ್ಟಿತು. ಇದೊಂದು ಅಂತರರಾಷ್ಟ್ರೀಯ ಮಾನದಂಡದ ಪರೀಕ್ಷೆ. ಮೌಲ್ಯಮಾಪನ ಸಹ ಅಂತರರಾಷ್ಟ್ರೀಯ ಮಟ್ಟದಲ್ಲೇ ನಡೆಯುತ್ತದೆ. ಹೀಗಾಗಿ ಹಡಗಿನ ಮೂಲಕ ವ್ಯಾಪಾರ ವಹಿವಾಟು ನಡೆಸುವ ಕಂಪೆನಿಗಳು, ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ತರಬೇತಿ ಪಡೆದವರನ್ನು ನೇಮಿಸಿಕೊಳ್ಳುವುದಕ್ಕೆ ಅವಕಾಶ ಇದೆ ಎಂದರು.ಎನ್‌ಎಂಪಿಟಿ ಹಡಗು ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಸ್.ಪಿಳ್ಳೈ, ಕೆಸಿಸಿಐ ಅಧ್ಯಕ್ಷೆ ಲತಾ ಆರ್.ಕಿಣಿ, ಉಪಾಧ್ಯಕ್ಷ ಮೊಹಮ್ಮದ್ ಅಮೀನ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.