ಬುಧವಾರ, ಮೇ 25, 2022
24 °C

ವಾರದ ವಿನೋದ: ಪರಪ್ಪನ ಅಗ್ರಹಾರ- ಒಂದು ಅಧ್ಯಯನ

ಸಿ. ಎನ್. ಕೃಷ್ಣಮಾಚಾರ್ Updated:

ಅಕ್ಷರ ಗಾತ್ರ : | |

ವಿಶ್ವವಿದ್ಯಾಲಯಗಳು ಏನೇನಕ್ಕೊ ಡಾಕ್ಟರೇಟ್ ನೀಡಿ ಇತಿಹಾಸ ನಿರ್ಮಿಸುತ್ತವೆ. `ಉಳ್ಳಾಗಡ್ಡಿ ಉರಳ್ ಚೆಟ್ನಿ - ಒಂದು ಅಧ್ಯಯನ~, `ಲೈಂಗಿಕ ಅಲ್ಪಸಂಖ್ಯಾತರ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಅಧ್ಯಯನ~ ಹೀಗೆ ಬಗೆ ಬಗೆಯ ಅಧ್ಯಯನಗಳ ಮಹಾಪ್ರಬಂಧಗಳಿಗೆ ಡಾಕ್ಟರೇಟ್ ಕೊಡುತ್ತಾ ಹೋದಂತೆ ಒಂದು ದಿನ `ಕಿಸೆಗಳ್ಳರು, ಸರಗಳ್ಳರು, ಸ್ತ್ರೀಗಳ್ಳರ ತವಕ ತಲ್ಲಣ - ಒಂದು ಅಧ್ಯಯನಕ್ಕೂ ಕೊಟ್ಟಾರು. ಆ ದಿನ ಬರಲೆಂದು ಹಾರೈಸುತ್ತೇನೆ. ಅರಿವಿನ ದಿಗಂತ ವಿಸ್ತರಿಸುತ್ತದೆ. ನಾಡ ತುಂಬ ಅರಿಗರ ಸಂಖ್ಯೆಯೇ ಹೆಚ್ಚು, ಕುರಿಗಳ ಸಂಖ್ಯೆ ಕುಂಠಿತ ಗೊಳ್ಳುತ್ತದೆ. (ತಪ್ಪು! ತಪ್ಪು! ಕುರಿಗಳು ಸಾರ್ ಕುರಿಗಳು~ ಅಂತ ಕಾಲೆಳೆಯುವ ದಿನ ಇನ್ನಿಲ್ಲ. ಕುರಿಗಳು ಮನುಷ್ಯನಿಗಿಂತ ಹೆಚ್ಚಿನ ಮೇಧಾಶಕ್ತಿ ಪಡೆದಿರುತ್ತವೆಯಂತೆ) ಆಗ ನನ್ನ `ಪರಪ್ಪನ ಅಗ್ರಹಾರ - ಒಂದು ಅಧ್ಯಯನ~ ಥೀಸಿಸ್‌ಗೂ ಡಾಕ್ಟರೇಟ್ ಸಿಕ್ಕೀತೆಂಬ ಭರವಸೆಯ ಮೇಲೆ ಈ ಟಿಪ್ಪಣಿ ಸಿದ್ಧಪಡಿಸಿದ್ದೇವೆ.ಸದರಿ ಪರಪ್ಪನನ್ನು ಕಂಡಿಲ್ಲ. ನಾನಾಗಲಿ, ನನ್ನಪ್ಪ, ಅಜ್ಜ ಯಾರೂ ಕಂಡಿಲ್ಲದ ಪುಣ್ಯಾತ್ಮ. ಯಲಹಂಕ ಭೂಪಾಲ ಕೆಂಪೇಗೌಡರ ಕಾಲದವನಿರಬೇಕು. ಅಥವಾ ಯಾವ ಧಣಿಯೋ ಕಾಣೆ, ಭೂಮಿ ಪೂಜೆ ನಡೆಸಿದ ಹಾರುವರಿಗೆ ಒಂದು ಅಗ್ರಹಾರವನ್ನೆ ಬಿಟ್ಟುಕೊಟ್ಟಿರಬೇಕು. ಅದು ಆಕಾಲ. ಮೈಸೂರಿನ ಅಗ್ರಹಾರಗಳೆಲ್ಲವನ್ನೂ ಇಕ್ಕುಳದಲ್ಲಿ ಹಿಡಿದೆತ್ತಿ ಊರಹೊರಗಿಟ್ಟರೆ, ಒಳಗೆ ಉಳಿಯುವುದು ಒಂದೆರಡು ಮೊಹಲ್ಲಾ. ಟಿಪ್ಪು ಸುಲ್ತಾನರು ಇತ್ತ ತೋಫಾಗಳು. ಮುಂದೆ ಅವೂ ಹೇಳಹೆಸರಿಲ್ಲದಂತಾಗಿ, ಯಾರೋ ಲ್ಯಾಂಡ್ ಡೆವಲಪರ್‌ನ ಹೆಸರನ್ನು ಇಟ್ಟರೂ ಇಟ್ಟಾರು. ಆಗ `ಯೇ ರಾತೇ, ಯೇ ಮಂಜಿಲ್, ಯೇ ದುನಿಯಾ, ಕಹಾ ಹೈ, ಕಹಾ ಹೈ - ಕಹಾಹೈ? ಎಂದು ಮಂದಿ ಅರಸುತ್ತ ಕತ್ತಲಲ್ಲಿ ಅಂಡಲೆಯುವ ಕಾಲ ಬಂದರೂ ಬಂದೀತು.ಆದರೆ ಬೆಂಗಳೂರಿನಲ್ಲಿ ಅಗ್ರಹಾರಗಳು ಹುಟ್ಟಿದ್ದು ಹೇಗೆ? ಕಾಳೇನ ಅಗ್ರಹಾರ, ಕೊಣೇನ ಅಗ್ರಹಾರ, ರೂಪೇನ ಅಗ್ರಹಾರ, ಕೆಂಚೇನ ಅಗ್ರಹಾರ, ನವರತ್ನ ಅಗ್ರಹಾರ, ಕಾಶೀಪತಿ ಅಗ್ರಹಾರ, ಕಪಿನೀಪತಿ ಅಗ್ರಹಾರ, ದಾಸರಹಳ್ಳಿ ಅಗ್ರಹಾರ ಎಲ್ಲ ಮರೆತು ಈಗ ಪರಪ್ಪನ ಅಗ್ರಹಾರ ಸುದ್ದಿಯಲ್ಲಿದೆ. ಮಿಕ್ಕೆಲ್ಲ ಕಡೆ ಅಗ್ರಹಾರದ ಕಲ್ಪನೆಯೇ ಕಾಣದಾಗಿದೆ. ಎಲ್ಲೆಲ್ಲೂ ಬಜಾರುಗಳ ಕಾರು ಬಾರು, ನಾಟಿ ಶೈಲಿಯ ಬ್ಯೂಟಿಪಾರ್ಲರು.

ಕೆ.ಎಫ್.ಸಿ. ವೆಂಕಾಬ್, ಸುಗುಣಾ ಕೋಳಿಯ ಗೂಡು. ಕುರಿಗಳ ಜಾಡು, ದರ್ಶನಿ ಎಂಬ ಹೆಸರಲ್ಲಿ ನಡೆಸುವ ಕಸಾಯಿಖಾನೆಗಳು, ಮತ್ತಲ್ಲಿ ಉಂಡು ಮತ್ತೇರಿ ಕಕ್ಕುವ `ಘಾ~ ಗಳ ಚಿಕಿತ್ಸೆಗಾಗಿ ದವಾಖಾನೆಗಳು ವಗೈರೆ ವಗೈರೆ. ಹಿಂದೊಮ್ಮೆ ಪರಪ್ಪನ ಅಗ್ರಹಾರಕ್ಕೆ ನೊಣಗಳು ನುಸುಳುವುದಕ್ಕೂ ಮುಂಚೆ ಎರಡೆರಡು ಬಾರಿ ಯೋಚಿಸುತ್ತಿದ್ದವು. ಇಲ್ಲಿ ತಲೆ ಎತ್ತಿದ ಕಾರಾಗೃಹ ಬಿಕೋ ಎನ್ನುತ್ತಿತ್ತು. ಎಲ್ಲವೂ ಖಾಲಿಯೋ ಖಾಲಿ. ಏನಾಗಿದೆ ಈ ಕ್ರೈಂಸಿಟಿಗೆ ಎಂದು ಬೆಕ್ಕಸಬೆರಗಾಗಿ ಅಗ್ರಹಾರದ ಮಂದಿಯೇ ಮಾತ್ರವಲ್ಲ, ಬೆಂಗಳೂರಿಗೆ ಬೆಂಗಳೂರೇ ಅವಾಕ್ಕಾಗಿತ್ತು. ಈಗ ನೋಡಿ ಜೈಲಿನಲ್ಲಿ ಹವೆ ಜುಮ್ಮೊ ಎನ್ನುತ್ತಿದೆ.`ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ~ ಎಂದು ಶಾಸಕರು, ಮುಖ್ಯಮಂತ್ರಿಗಳು, ಹುಟ್ಟಾರಾಜಕಾರಣಿಗಳು, `ಕಟ್ಟಾ~ ರಾಜಕಾರಣಿಗಳು, ಕುಡುಕರು, ಕಳ್ಳರು, ಕೊಲೆಗಡುಕರೆಂಬ ಭೇದವಿಲ್ಲದೆ ಒಬ್ಬರನ್ನೊಬ್ಬರು ತಬ್ಬಿ `ಹಾಯ್ ಹೌಡುಯು ಡೂ?~ ಎಂದು ಉಭಯ ಕುಶಲೋಪರಿ ನಡೆಸುತ್ತಿದ್ದಾರೆ! ಒಬ್ಬ ಹೇಳುತ್ತಾನೆ - `ಐ ಡಿಡ್ ಆ್ಯಸ್ಕ್ ಬ್ಯಾಡ್ ಆ್ಯಸ್ ಯೂ ಅಂಡ್ ದಟ್ಸ್ ವೈ ವಿ ಆರ್ ಇನ್‌ದ ಸೇಮ್~ ಸೆಲ್ (ಷೇಮ್ ಷೆಲ್!) ಮತ್ತೊಬ್ಬ `ನಾ ಹೆಂಗೆ ಬಂದೆನೋ ಶಿವನೇ~? ಎಂದು ಷೆಲ್‌ಷಾಕ್ ಆಗಿದ್ದಾನೆ. `ಇನ್‌ಫ್ಯಾಕ್ಟ್ ನನಗೆ ಜಾಮೀನು ಸಿಗುತ್ತೆ ಅಂದುಕೊಂಡಿದ್ದೆ. ನಿಮಗೆ ಸಿಗೊಲ್ಲ ಅನ್ನೋದೂ ಗೊತ್ತಿತ್ತು. ಆ ಪಾಟಿ ನೆಲ ಉಂಡರೆ?~ ಎಂದು ಅಪರಾಧ ವಿಶ್ಲೇಷಣೆಗೆ ಇಳಿಯುತ್ತಾನೆ.`ಒಲೆ ಹತ್ತಿ ಉರಿದೊಡೆ ಹೇಗೋ ಫೈರ್ ಬ್ರಿಗೇಡ್‌ನ ಕರೆಯಿಸಬಹುದು. ನೆಲಹೊತ್ತಿ ಉರಿದೊಡೆ? ತಾಯಿ ಹಾಲೆ ವಿಷವಾದೊಡೆ, ಬೇಲಿ ಎದ್ದು ಹೊಲ ಮೆಯ್ದ್‌ಡೆ ಆರಿಗೆ ಮೊರೆಯಿಡುವರಯ್ಯಾ ಕೂಡಲ ಸಂಗಮ ದೇವ?~ ಇಲ್ಲಿ ಕೆಲವರು ಸಂಜೆಯಾಗುತ್ತಿದ್ದಂತೆ `ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ, ಅಸಿವೆಯನ್ನು ತಾಳಲಾರೆ ಕಾಪಾಡಯ್ಯ ಅರನೇ!~ ಎಂದು ಬಾಯೊಳಗೆ ಬರ್ಗರ್ ತುರುಕಿಕೊಂಡು ಮೂಲ (ವ್ಯಾಧಿ) ಗಾಯಕ ಸಿ. ಎಸ್. ಜಯರಾಮನ್ ಧಾಟಿಯಲ್ಲಿ ಭಜನೆ ಮಾಡುತ್ತಾರಂತೆ. ಇನ್ನು ಕೆಲವರು `ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲಾ~ ಎಂದು ಅತ್ತರೆ ಸಂಗೀತ ಜ್ಞಾನವಿಲ್ಲದವರು `ಹಳೇ ಪಾತ್ರೆ ಹಳೆ ಕಬ್ಬಿಣ, ಹಳೇ ಪೇಪರ್~, `ಹೇಳೇ ಪಂಕಜ~, `ಊರಿಗೊಬ್ಬಳೆ ಪದ್ಮಾವತಿ~, `ಅಂದರ್ ಬಾಹರ್~ ಗೀತೆಗಳನ್ನು ಎಗ್ಗಿಲ್ಲದೆ ಹಾಡುತ್ತಾರಂತೆ. ಮತ್ತೆ ಇವರೆಲ್ಲರನ್ನು ನೋಡಿ ಮಿಕ್ಕವರು `ಅಮ್ಮ ಲೂಸಾ, ಅಪ್ಪ ಲೂಸಾ, ನಾ ಲೂಸಾ, ಅದು ಸರಿ  ಅದು ಸರಿ~ ಎಂದು ಪಲುಕುತ್ತಾರೆಂಬುದೆಲ್ಲ ಶುದ್ಧ ಕುಹಕ. ಸುಭಾಷಿತವೊಂದು ನೆನಪಾಗುತ್ತದೆ. ಆದರೆ ನನ್ನ ಗೆಳೆಯರು ಮುನಿಯುತ್ತಾರೆ. `ಎಲ್ಲ ಸರಿ. ನೀನು ಕನ್ನಡದಲ್ಲೆ ಬರೆದರೆ ಓದಬಹುದು. ಮಿಕ್ಕದ್ದನ್ನು ನಾಕು ನಾಕು ಬಾರಿ ಓದಬೇಕು. ಟೈಂ ಎಲ್ಲಿದೆ?~ ಎನ್ನುತ್ತಾರೆ. ಕನ್ನಡದಲ್ಲಿ `ಮಾಡಿದ್ದುಣ್ಣೋ ಮಾರಾಯ~ ಸುಭಾಷಿತಬೇಕೆಂದವರಿಗೆ - `ನೀ ಚೈರ್ಗಚ್ಛತ್ಯು ಪರಿಚದಶಾ ಚಕ್ರನೇಮಿ ಕ್ರಮೇಣ~ ನೇಮಿ ಎಂದರೆ ಗಾಲಿ, ಅಥವಾ ಗಾಲಿಯ ಕಡ್ಡಿಗಳು (ಸ್ಪೋಕ್ಸ್) ಅವು ಒಮ್ಮೆ ಮೇಲೆ, ಮತ್ತೊಮ್ಮೆ ಕೆಳಗೆ ಬರುವುದು ಕಾಲ ನಿಯಮ.

ಎಡಿಯೂರರು ಈಗಷ್ಟೆ ಹೇಳಿದ್ದಾರೆ - `ಇನ್ನೆರಡು ತಿಂಗಳಿನಲ್ಲಿ ನಾನೇ ಬರುತ್ತೇನೆ~.ಆಂಗ್ಲ ಪತ್ರಿಕೆಗಳು ಒಂದು `ಡಿ~ ಸಾಲದೆಂದು ಹೆಸರಿಗೆ ಮತ್ತೊಂದು `ಡಿ~ ಸೇರಿಸಿ ಎಡ್ಡಿಯೂರಪ್ಪ ಮಾಡಿವೆ. ನಾಮಕರಣ ಮಹಿಮೆ! ನೇರೂಲಜಿಸ್ಟ್‌ಗಳನ್ನು ನಂಬದಿರಿ. ವಿಧಿಯನ್ನು ನಂಬಿ. ಉಂಡ ಉಪ್ಪೆಷ್ಟು ಕುಡಿಯಬೇಕಾದ ನೀರೆಷ್ಟು ಎಂಬ ಪ್ರಜ್ಞೆಇರಲಿ.ಈ ನಡುವೆ `ಕುಮ್ಮಿ~ ಕುಮಾರಪ್ಪ `ಈ ಅರೆಸ್ಟ್ ನನಗೆ ಬೇಸರ ತಂದಿದೆ~ ಎಂದು ಹಲುಬಿದ್ದಾರೆ. ಅದು ವರುಷದ ಬೆಸ್ಟ್ ಜೋಕ್ ಅಂತೂ ಅಲ್ಲ. ನಮ್ಮಲ್ಲೊಂದು ಸಾಮತಿ ಇದೆ. `ಹಾಲುಂಡು ಮೇಲುಂಬರೆ? ಮೊಸರುಂಡು ಮೇಲುಂಬರೆ?~ ಹಾಗೆಯೇ ಹಗೆ ನೆಲಕಚ್ಚಿದ ಮೇಲೆ, ನೋಡಿ ನಗುವುದು ಕ್ರೌರ್ಯ. ಪ್ರತಿಪಕ್ಷದ ಕಾರ್ಯಕರ್ತರು ಕೈಲಾಸಂ ನುಡಿಗಳನ್ನು ನೆನಪಿಡಬೇಕು - `ಬೀದಿಯಲ್ಲಿ ಬಾಳೆ ಹಣ್ಣು ಸಿಪ್ಪೆ ತುಳಿದು ಕಾಲು ಜಾರಿದಾಗ ನಕ್ಕರೆ ಅದು ಸಹಜ. ಆದರೆ ಬಿದ್ದು ಕಾಲು ಮುರಿದಾಗಲೂ ನಗುತ್ತಲೇ ಇದ್ದರೆ ಅದು ಕ್ರೌರ್ಯ~.ಪುಡಾರಿಯಾಗಲು ಅರ್ಹತೆ ಏನು ಗೊತ್ತೆ? `ಓದಿಗೆ ಎಳ್ಳು ನೀರು ಬಿಡಬೇಕು. ಉಪ್ಪಿಟ್ಟವನ ಬೆನ್ನಿಗೆ ಚೂರಿ ಇಡಬೇಕು. ಎರಡು ವಾಕ್ಯಗಳ ನಡುವೆ, ಬಾಪೂಜಿ, ಲೋಹಿಯಾ, ಜೆ. ಪಿ.ಗಳ ಹೆಸರೆತ್ತಬೇಕು. ಯಾರಾದರೂ ಸತ್ತಾಗ `ಸಾರಿ~ ಹೇಳಲು ಮರೆತರೂ ಸರಿ `ಕಂಗ್ರಾಟ್ಸ್~ ಹೇಳಲು ಮರೆಯಬಾರದು. ಥೀಸಿಸ್‌ಗೆ ಈ ಟಿಪ್ಪಣಿ ಸಾಕೆ?~.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.