ಭಾನುವಾರ, ಮೇ 9, 2021
22 °C
ಕುಡಿದ ಮತ್ತಿನಲ್ಲಿ ಜೋ ರೂಟ್ ಮೇಲೆ ದೈಹಿಕ ಹಲ್ಲೆ

ವಾರ್ನರ್ ವಿರುದ್ಧ ಕಠಿಣ ಕ್ರಮ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ/ಐಎಎನ್‌ಎಸ್): ಕುಡಿದ ಮತ್ತಿನಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪಕ್ಕೆ ಸಿಲುಕಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡೇವಿಡ್ ವಾರ್ನರ್ ಅವರ ವಿರುದ್ಧ `ಕ್ರಿಕೆಟ್ ಆಸ್ಟ್ರೇಲಿಯಾ' ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.



ಅನುಚಿತ ವರ್ತನೆ ಘಟನೆಯ ಬಗ್ಗೆ `ಕ್ರಿಕೆಟ್ ಆಸ್ಟ್ರೇಲಿಯಾ' ತನಿಖೆ ಆರಂಭಿಸಿದ್ದು, ಬರ್ಮಿಂಗ್‌ಹ್ಯಾಮ್‌ನಲ್ಲಿ ಬುಧವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಾರ್ನರ್ ಅವರಿಗೆ ಸ್ಥಾನ ನೀಡಿರಲಿಲ್ಲ. ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.



ಭಾನುವಾರ ನಡೆದ ಟೂರ್ನಿಯ `ಎ' ಗುಂಪಿನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿತ್ತು. ಆ ಪಂದ್ಯ ಮುಗಿದ ಬಳಿಕ ಆತಿಥೇಯ ತಂಡದ ಜೋ ರೂಟ್ ಅವರ ಮೇಲೆ ವಾರ್ನರ್ ಬರ್ಮಿಂಗ್‌ಹ್ಯಾಮ್‌ನ ಬಾರೊಂದರಲ್ಲಿ ಹಲ್ಲೆ ನಡೆಸಿದ್ದರು ಎಂಬುದು ತಿಳಿದುಬಂದಿದೆ.



`ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಕಾರಣಕ್ಕಾಗಿ ಕಿವೀಸ್ ಎದುರಿನ ಪಂದ್ಯದಲ್ಲಿ ವಾರ್ನರ್‌ಗೆ ಸ್ಥಾನ ನೀಡಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಈ ವಿಷಯದ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.



ಆರಂಭಿಕ ಬ್ಯಾಟ್ಸ್‌ಮನ್ ವಾರ್ನರ್ ಈ ಸಂಬಂಧ ಈಗಾಗಲೇ ಕ್ಷಮೆ ಕೋರಿದ್ದಾರೆ.



ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಕೂಡ ಈ ಸಂಬಂಧ ಪತ್ರಿಕಾ ಹೇಳಿಕೆ ಹೊರಡಿಸಿದೆ. ದೈಹಿಕ ಹಲ್ಲೆಗೆ ಒಳಗಾಗಿರುವ ರೂಟ್ ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಯಾವುದೇ ಕಾರಣವಿಲ್ಲದೇ ತಮ್ಮ ತಂಡದ ಆಟಗಾರನ ಮೇಲೆ ವಾರ್ನರ್ ಹಲ್ಲೆ ನಡೆಸಿದ್ದಾರೆ ಎಂಬುದನ್ನು ಇಸಿಬಿ ಸ್ಪಷ್ಟಪಡಿಸಿದೆ.



`ಅಸಭ್ಯವಾಗಿ ವರ್ತಿಸಿರುವುದರ ಬಗ್ಗೆ ವಾರ್ನರ್ ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ಈ ಘಟನೆ ಕುರಿತು ನಾವು ಕೂಡ ತನಿಖೆ ನಡೆಸಿದ್ದೇವೆ. ಆದರೆ ಯಾವುದೇ ಹಂತದಲ್ಲೂ ಇಂಗ್ಲೆಂಡ್ ತಂಡದ ಆಟಗಾರ ತಪ್ಪು ಮಾಡಿಲ್ಲ ಎಂಬುದು ಗೊತ್ತಾಗಿದೆ' ಎಂದು ಇಸಿಬಿ ತಿಳಿಸಿದೆ.



ವಾರ್ನರ್ ಐಪಿಎಲ್ ವೇಳೆ ಕೂಡ ಸಮಸ್ಯೆಯೊಂದರಲ್ಲಿ ಸಿಲುಕಿದ್ದರು. ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಕ್ರಿಕೆಟ್ ಬರಹಗಾರರನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದ ಅವರ ಮೇಲೆ `ಕ್ರಿಕೆಟ್ ಆಸ್ಟ್ರೇಲಿಯಾ' 3.1 ಲಕ್ಷ ರೂಪಾಯಿ ದಂಡ ವಿಧಿಸಿತ್ತು.



`ಹಲವು ಹಗರಣಗಳಿಂದ ತುಂಬಿರುವ ಐಪಿಎಲ್ ಕಸದ ತೊಟ್ಟಿ' ಎಂದು ಆಸ್ಟ್ರೇಲಿಯಾದ ಕೆಲ ಕ್ರಿಕೆಟ್ ಬರಹಗಾರರು ತಮ್ಮ ಲೇಖನಗಳಲ್ಲಿ ಬರೆದಿದ್ದರು. ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಪ್ರತಿನಿಧಿಸುವ ವಾರ್ನರ್ ಅದನ್ನು ಕಟುವಾಗಿ ಟೀಕಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.