ಗುರುವಾರ , ನವೆಂಬರ್ 21, 2019
22 °C

ವಾಲ್ಮೀಕಿ ಬಗ್ಗೆ ಸಂಶೋಧನೆ ಅಗತ್ಯ

Published:
Updated:

ಚಿಕ್ಕಬಳ್ಳಾಪುರ: ರಾಮಾಯಣ ಮಹಾಕಾವ್ಯ ರಚಿಸಿರುವ ಮಹರ್ಷಿ ವಾಲ್ಮೀಕಿ ಬಗ್ಗೆ ಹಲವಾರು ಐತಿಹ್ಯಗಳಿದ್ದು, ಅವರ ಪೂರ್ವಾಶ್ರಮದ ಕುರಿತು ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಬೇಡರ ಸಮುದಾಯದ ವಾಲ್ಮೀಕಿ ಬಗ್ಗೆ ಗೊತ್ತಿರದ ಹಲವು ಸಂಗತಿಗಳು ಇನ್ನೂ ಬೆಳಕಿಗೆ ಬರಬೇಕಿದೆ ಎಂದು ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿಪ್ರಾಯಪಟ್ಟರು.ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ನಂದಿ ರಂಗಮಂದಿರ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಜಾಬ್ ರಾಜ್ಯದ ಪಟಿಯಾಲಾ ವಿಶ್ವವಿದ್ಯಾನಿಲಯದಲ್ಲಿ ವಾಲ್ಮೀಕಿ ಪೀಠವಿದ್ದು, ಅಲ್ಲಿ ಗಂಭೀರ ಅಧ್ಯಯನ ನಡೆಯುತ್ತಿದೆ ಎಂದರು.ವಾಲ್ಮೀಕಿ ಪೀಠದ ಮುಖ್ಯಸ್ಥೆಯಾದ ಡಾ.ಮಂಜುಳಾ, ವಾಲ್ಮೀಕಿಯವರ ಕೃತಿಯನ್ನು ರಚಿಸಿದ್ದು, ಹಲವು ವೈಜ್ಞಾನಿಕ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಅಲ್ಲಿನ ನ್ಯಾಯಮೂರ್ತಿ ರಾಜೀವ್ ಬಲ್ಲಾ ಅವರು ವಾಲ್ಮೀಕಿ ಕುರಿತು ಐತಿಹಾಸಿಕ ತೀರ್ಪು ನೀಡಿದ್ದಾರೆ ಎಂದು ಅವರು ತಿಳಿಸಿದರು.ಕ್ರಿಸ್ತಪೂರ್ವ ಮತ್ತು ಕ್ರಿಸ್ತಶಕ 9ರ ಅವಧಿಯಲ್ಲಿ ವೈದಿಕ ಶ್ಲೋಕ ಮತ್ತು ಸಂಗತಿಗಳ ಬಗ್ಗೆ ನಡೆಸಿರುವ ಸಂಶೋಧನೆಗಳ ಪ್ರಕಾರ, ವಾಲ್ಮೀಕಿ ದರೋಡೆಕೋರ ಅಥವಾ ಹಿಂಸೆಯಲ್ಲಿ ತೊಡಗಿದ್ದರು ಎಂಬುದರ ಕುರಿತು ಅಲ್ಲಿಯೂ ಸಾಕ್ಷಿ ಮತ್ತು ಪುರಾವೆಯಿಲ್ಲ ಎಂದು ಅವರು ತಿಳಿಸಿದರು.ರಾಮಾಯಣವನ್ನು ಕವಿಗಳು, ಸಾಹಿತಿಗಳು, ಸಂಶೋಧಕರು ಬೇರೆ ಬೇರೆ ದೃಷ್ಟಿಕೋನದಿಂದ ನೋಡಿದ್ದಾರೆ. ಹಲವಾರು ರೀತಿ ವ್ಯಾಖ್ಯಾನಿಸಿದ್ದಾರೆ. ರಾಮಾಯಣವನ್ನು ಪ್ರತಿ ಸಲ ಓದಿದಾಗಲೂ ಹೊಸ ವಿಚಾರ, ವಿಷಯ ಅರಿವಿಗೆ ಬರುತ್ತದೆ ಎಂದು ಅವರು ಹೇಳಿದರು.ರಾಮಾಯಣ ಮಹಾಕಾವ್ಯ ಒಟ್ಟಾರೆ ಮೂರು ಕುಟುಂಬಗಳ ಕತೆ. ಅಯೋಧ್ಯೆ, ಕಿಷ್ಕಿಂದೆ ಮತ್ತು ಲಂಕೆಯ ಕುಟುಂಬಗಳನ್ನು ಆಧರಿಸಿದ ರಾಮಾಯಣವು ಆಯಾ ಕುಟುಂಬದ ಸ್ಥಿತಿಗತಿ, ಅಲ್ಲಿನ ಪರಿಸರವನ್ನು ಅತ್ಯುತ್ತಮ ರೀತಿಯಲ್ಲಿ ಅವಲೋಕಿಸಿದ್ದಾರೆ ಎಂದು ಅವರು ಹೇಳಿದರು. ಸಾಹಿತಿ ಎಲ್.ಎನ್.ಮುಕುಂದರಾಜು ವಿಶೇಷ ಉಪನ್ಯಾಸ ನೀಡಿದರು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ವಿವಿಧ ಜಾನಪದ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು. ಗಾಯಕ ಗಾನಾ ಅಶ್ವತ್ಥ್ ಮತ್ತು ತಂಡದ ಸದಸ್ಯರು ಗೀತೆಗಳನ್ನು ಹಾಡಿದರು.ಶಾಸಕ ಕೆ.ಪಿ.ಬಚ್ಚೇಗೌಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಕೆ.ವಿ.ನಾಗರಾಜ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಯೋಜನೆ ಪ್ರಾಧಿಕಾರ ಅಧ್ಯಕ್ಷ ಕೆ.ನಾರಯಣಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಆರ್.ನರಸಿಂಹಮೂರ್ತಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್, ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸಮಾಜದ ಮುಖ್ಯವಾಹಿನಿಗೆ ಬರಲು ಸಲಹೆ

ಶಿಡ್ಲಘಟ್ಟ: ಪಟ್ಟಣದ ಮಯೂರ ವೃತ್ತದ ಬಳಿ ಸೋಮವಾರ ವಾಲ್ಮೀಕಿ ದೇವಾಲಯದ ಮುಂದೆ ಮಹರ್ಷಿ ವಾಲ್ಮೀಕಿ ಭಾವಚಿತ್ರವಿದ್ದ ಹೂವಿನ ಪಲ್ಲಕ್ಕಿ ಮತ್ತು ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ಚಾಲನೆ ನೀಡಿದರು.ವಾಲ್ಮೀಕಿ ಮಹರ್ಷಿ ದೇವಾಲಯದಲ್ಲಿ ಪೂಜೆಯನ್ನು ಸಲ್ಲಿಸಿದ ನಂತರ, ಹೂವಿನ ಪಲ್ಲಕ್ಕಿ, ಕೋಲಾಟ, ಕೀಲುಕುದುರೆ, ಕುದುರೆಯ ರಥ, ವೀರಗಾಸೆ, ಡೊಳ್ಳುಕುಣಿತ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಲಾತಂಡಗಳ ಜೊತೆಯಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಮುನಿಯಪ್ಪ ಮಾತನಾಡಿ, ತಲಕಾಯಲಬೆಟ್ಟದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ತಮ್ಮ ಅನುದಾನದಿಂದ 10 ಲಕ್ಷ ರೂಪಾಯಿ ನೀಡುತ್ತೇನೆ. ಹಿಂದುಳಿದಿರುವ ವಾಲ್ಮೀಕಿ ಜನಾಂಗ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಸೂಕ್ತ ಮಾರ್ಗ. ಸರ್ಕಾರದ ಎಲ್ಲಾ ಸೌಲಭ್ಯಗಳೂ ಜನರಿಗೆ ತಲುಪಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.ಕೈವಾರದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಖಾಸಿಂ ಅವರು ಮಹರ್ಷಿ ವಾಲ್ಮೀಕಿ ಮತ್ತು ರಾಮಾಯಣ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಾಲ್ಮೀಕಿ ಜನಾಂಗದ ಹಿರಿಯರಾದ ನರಸಿಂಹಪ್ಪ, ಕೋಟಗಲ್ ಹನುಮಪ್ಪ, ಯರ‌್ರಬಚ್ಚಪ್ಪ, ದಿಬ್ಬೂರಹಳ್ಳಿ ನರಸಿಂಹಪ್ಪ, ವೆಂಕಟೇಶಪ್ಪ, ವೆಂಕಟರಾಯಪ್ಪ, ಕೊತ್ತನೂರು ನರಸಿಂಹಪ್ಪ, ಮುನಿನಾರಾಯಣಪ್ಪ, ಈ.ತಿಮ್ಮಸಂದ್ರ ಸುಬ್ಬಣ್ಣ, ಕೊತ್ತನೂರು ಕದಿರಪ್ಪ, ಬಂಕ್ ಮುನಿಯಪ್ಪ ಮತ್ತು ಎನ್.ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಈ.ತಿಮ್ಮಸಂದ್ರದ ಟಿ.ಎಸ್.ಸುಜಾತ, ಎಚ್.ಕ್ರಾಸ್‌ನ ಎಂ.ಲಲಿತಾ, ಕೆ.ಎನ್.ಜಮುನಾ, ಎಂ.ಮಧುಕುಮಾರ್, ನಯನಾ ನಾಯಕ್ ಅವರಿಗೆ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಯಿತು.ತಹಶೀಲ್ದಾರ್ ಭೀಮಾನಾಯ್ಕ, ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ನಟರಾಜ್, ರಾಜೇಂದ್ರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಯರ‌್ರಬಚ್ಚಪ್ಪ, ವೇಣುಗೋಪಾಲ್, ರಾಜಣ್ಣ, ಎ.ಜಿ.ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷೆ ಮಂಜುಳಾಮಣಿ, ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ಪಿ.ವಿ.ನಾಗರಾಜ್, ಮುಗಿಲಡಿಪಿ ನಂಜಪ್ಪ, ಜೆ.ಎಂ.ವೆಂಕಟೇಶ್, ಶಿವಶಂಕರ್, ಡಾ.ಸತ್ಯನಾರಾಯಣ್,  ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಪಿ.ಎಂ.ರಾಧಾಕೃಷ್ಣ, ರೇಷ್ಮೆ ವಿಸ್ತರಣಾಧಿಕಾರಿ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಶೀಘ್ರದಲ್ಲಿ ವಾಲ್ಮೀಕಿ ಭವನ ನಿರ್ಮಾಣ

ಬಾಗೇಪಲ್ಲಿ: ಪಟ್ಟಣ ಹೊರವಲಯದ 1 ಎಕರೆ ನಿವೇಶನದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಶೀಘ್ರವೇ ಕ್ರಮ ಜರುಗಿಸಲಾಗುವುದು. ಭವನ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಎನ್.ಸಂಪಂಗಿ ತಿಳಿಸಿದರು.ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಪಟ್ಟಣದ ಸರ್ಕಾರಿ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮೀಸಲಾತಿ ಮತ್ತು ಶಿಕ್ಷಣ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ಸಮುದಾಯಗಳ ಕಲ್ಯಾಣಕ್ಕಾಗಿ ಸರ್ಕಾರವು ಎಲ್ಲ ರೀತಿ ನೆರವು ನೀಡುತ್ತಿದೆ ಎಂದು ಅವರು ತಿಳಿಸಿದರು.ಬರಪೀಡಿತ ಪ್ರದೇಶವಾಗಿರುವ ನಮ್ಮ ತಾಲ್ಲೂಕಿನಲ್ಲಿ ಜನರು ಮಳೆಗಾಗಿ ಪ್ರಾರ್ಥನೆ ಮಾಡಬೇಕಿದೆ. ಅಭಿವೃದ್ಧಿ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದು, ಈ ಅಂಶವನ್ನು ಕೈಬಿಡಬೇಕು. ಪ್ರಚಾರಕ್ಕಾಗಿ ಚಟುವಟಿಕೆ ನಡೆಸುವವರು ಮುಂದಿನ ದಿನಗಳಲ್ಲಿ ಏನನ್ನೂ ಸಾಧಿಸಲು ಆಗುವುದಿಲ್ಲ ಎಂದರು. ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಮಯ್ಯ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಅಮರಾವತಿ, ಬಿ.ಸಾವಿತ್ರಮ್ಮ, ನಾರಾಯಣಮ್ಮ, ತಹಶೀಲ್ದಾರ್ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಜಯರಾಂ, ಅಧ್ಯಕ್ಷೆ ಶೋಭಾರಾಣಿ, ಸದಸ್ಯ ಲಕ್ಷ್ಮೀನರಸಿಂಹಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಕೆ.ವೆಂಕಟೇಶ್, ಪುರಸಭೆ ಅಧ್ಯಕ್ಷೆ ಸುಜಾತಮ್ಮ, ಸದಸ್ಯರಾದ ಮಹಮದ್ ನೂರುಲ್ಲಾ, ಮುಖ್ಯಾಧಿಕಾರಿ ಶ್ರೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಆನಂದ್, ಮುಖಂಡರಾದ ಮರಿಯಪ್ಪ, ಬಿ.ಎನ್.ಚಂದ್ರಶೇಖರ್, ಈರಪ್ಪ, ನರಸಪ್ಪ, ಗೂಳೂರು ಲಕ್ಷ್ಮೀನಾರಾಯಣ, ಶ್ರೀನಿವಾಸ್, ಗೂಳೂರುಬಾಬು  ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಿಕ್ಷಣ ಸೌಲಭ್ಯ ಸದ್ಬಳಕೆಗೆ ಸಲಹೆ

ಗುಡಿಬಂಡೆ: ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಮತ್ತು ಪ್ರಗತಿ ಸಾಧಿಸಲು ಶಿಕ್ಷಣವೊಂದೇ ಪ್ರಮುಖ ಮಾರ್ಗವಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ಶಾಸಕ ಎನ್.ಸಂಪಂಗಿ ತಿಳಿಸಿದರು.ಪಟ್ಟಣದ ಬಾಲಕರ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡುವ ಜವಾಬ್ದಾರಿಯಿಂದ ಪೋಷಕರು ವಿಮುಖರಾಗಬಾರದು. ಮಕ್ಕಳನ್ನು ಶಾಲೆಗೆ ಸೆಳೆಯಲೆಂದು ಕೇಂದ್ರ, ರಾಜ್ಯ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿವೆ. ಸೌಲಭ್ಯ ಸದ್ಬಳಕೆ ಮಾಡಿಕೊಂಡು ಮಕ್ಕಳು ಶಾಲೆಗೆ ಬರಬೇಕು ಎಂದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್. ಅಶ್ವತ್ಥಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ಒಂದೇ ಜನಾಂಗಕ್ಕೆ ಸೀಮಿತರಾದವರಲ್ಲ. ವಾಲ್ಮೀಕಿ ಜಯಂತಿಯನ್ನು ಎಲ್ಲಾ ಜನಾಂಗದವರು ಆಚರಿಸಬೇಕು ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಎಂಟು ಮಂದಿಯನ್ನು ಸನ್ಮಾನಿಸಲಾಯಿತು. ಬಾಲಕಿ ರಕ್ಷಿತಾ ನೃತ್ಯ ಪ್ರದರ್ಶಿಸಿದಳು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯರಸ್ತೆಯಲ್ಲಿ ತಮಟೆ ಕಲಾತಂಡ, ಚಕ್ಕೆ ಭಜನೆ ಕಲಾತಂಡ, ಗಾರುಡಿ ಗೊಂಬೆ, ಡೋಲು ಮೇಳಗಳಿಂದ ಮೆರವಣಿಗೆ ನಡೆಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಎನ್.ಮಂಜುಳಾ, ಉಪಾಧ್ಯಕ್ಷ ನಾರಾಯಣಸ್ವಾಮಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಇಸ್ಮಾಯಿಲ್ ಅಜಾದ್, ತಹಶೀಲ್ದಾರ್ ಮಹೇಶ್ ಬಾಬು, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಸಿ.ರವಿಕುಮಾರ್, ಪ್ರಭಾರ ಸಮಾಜಕಲ್ಯಾಣಾಧಿಕಾರಿ ಅಬ್ದಲ್ ನಜೀರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರಿರಾಮರೆಡ್ಡಿ, ಮುಖಂಡರಾದ ನಾಗರಾಜ್, ಆಂಜಿನಪ್ಪ, ಆನಂದಪ್ಪ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)