ಮಂಗಳವಾರ, ಮೇ 18, 2021
28 °C
ಮುಖ್ಯಮಂತ್ರಿಗಳ ಬಳಿ ನಿಯೋಗಕ್ಕೆ ನಿರ್ಧಾರ

ವಿಚಾರಣೆ ನೆಪದಲ್ಲಿ ಕಿರುಕುಳ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಯಶವಂತಪುರದಲ್ಲಿನ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವಿಚಾರಣೆಯ ನೆಪದಲ್ಲಿ ಅಖಿಲ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತರ ಕನ್ನಡ ಸಂಘದ ಪದಾಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ' ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ಆರೊಪಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಕ್ಟರ್ ಅವರ ಹತ್ಯೆಯಾಗಿ ಎರಡು ತಿಂಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹಲವು ವರ್ಷಗಳಿಂದ ಕನ್ನಡಕ್ಕಾಗಿ ಶಾಂತಿಯುತ ಹೋರಾಟ ಮಾಡಿಕೊಂಡು ಬರುತ್ತಿರುವ ಸಂಘದ ಪದಾಧಿಕಾರಿಗಳ ಮೇಲೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ ಎಂದರು.ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಾಸ್, ಡಿಸಿಪಿ ವಿಕ್ಟರ್ ಡಿಸೋಜಾ, ಧರ್ಮಕ್ಷೇತ್ರದ ಚಾನ್ಸಲರ್ ಫಾದರ್ ಎ.ಎಸ್.ಅಂಥೋಣಿ ಸ್ವಾಮಿ ಅವರ ಕುಮ್ಮಕ್ಕಿನಿಂದಾಗಿ ಪೊಲೀಸರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿದರು.ಚರ್ಚ್‌ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು, ಕನ್ನಡದವರನ್ನು ಧರ್ಮಗುರುಗಳನ್ನಾಗಿ ನೇಮಿಸಬೇಕು ಎಂಬ ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದ ನನ್ನ ಮೇಲೆ ಐಪಿಸಿ ಸೆಕ್ಷನ್ 107ರ ಪ್ರಕಾರ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ತಪ್ಪೊಪ್ಪಿಗೆ ಪತ್ರ ನೀಡುವಂತೆ ಪದಾಧಿಕಾರಿಗಳ ಮೇಲೆ ಬೆದರಿಕೆ ಹಾಕಿದ್ದಾರೆ. ಪೊಲೀಸರ ಈ ನಡವಳಿಕೆಯಿಂದ ಪದಾಧಿಕಾರಿಗಳು ತೀವ್ರವಾಗಿ ನೊಂದಿದ್ದಾರೆ ಎಂದರು.ಆರೋಪಿಗಳ ಪತ್ತೆಗೆ ಸಂಘದ ವತಿಯಿಂದ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಪೊಲೀಸರು ಈ ಕಿರುಕುಳವನ್ನು ನಿಲ್ಲಿಸಬೇಕು. ಸಂಘದ ಪದಾಧಿಕಾರಿಗಳಿಗೆ ನ್ಯಾಯ ಒದಗಿಸುವಂತೆ ಕೋರಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಸಂಘದ ಅಧ್ಯಕ್ಷ ಜೆ.ಆರ್.ಪೆರೇರಾ, ಸಂಚಾಲಕ ಡಿ.ಕುಮಾರ್, ಉಪಾಧ್ಯಕ್ಷ ಎ. ದೇವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.