ಶುಕ್ರವಾರ, ಮೇ 27, 2022
21 °C

ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ: ವಾಹನ ತಡೆದು ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ, ವಾಹನದಿಂದ ಕೆಳಗೆ ತಳ್ಳಿ ದ್ವಿಚಕ್ರ ವಾಹನ ಮತ್ತು ಎರಡು ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.ಅಬೂಬಕರ್ ದರೋಡೆಗೊಳಗಾದವರು. ಶಾಮಣ್ಣ ಗಾರ್ಡನ್‌ನಲ್ಲಿ ಅವರು ಎಲೆಕ್ಟ್ರಾನಿಕ್ಸ್ ಉಪಕರಣಗಳ ಅಂಗಡಿ ಇಟ್ಟುಕೊಂಡಿದ್ದಾರೆ. ರಾತ್ರಿ ಹತ್ತು ಗಂಟೆ ಸುಮಾರಿಗೆ ಅಂಗಡಿ ಬಾಗಿಲು ಮುಚ್ಚಿದ ಅವರು ಮನೆಗೆ ಹೋಗುತ್ತಿದ್ದ ವೇಳೆ ಆರ್‌ಪಿಸಿ ಲೇಔಟ್‌ನಲ್ಲಿ ಮೂರು ಮಂದಿ ಅವರನ್ನು ಅಡ್ಡಗಟ್ಟಿದರು. ಅಬೂಬಕರ್ ಅವರನ್ನು ತಳ್ಳಿದ ದುಷ್ಕರ್ಮಿಗಳು ದ್ವಿಚಕ್ರ ವಾಹನ ತೆಗೆದುಕೊಂಡು ಪರಾರಿಯಾಗಿದ್ದಾರೆ. ವಾಹನದ ಡಿಕ್ಕಿಯಲ್ಲಿ ಎರಡು ಲಕ್ಷ ರೂಪಾಯಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಅಬೂಬಕರ್ ವ್ಯವಹಾರದ ಬಗ್ಗೆ ತಿಳಿದುಕೊಂಡವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಎರಡು ಲಕ್ಷ ರೂಪಾಯಿ ನಗದು ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ತಿಳಿದುಕೊಂಡು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಘಾತ: ಒಬ್ಬ ಸಾವು

ಏಕಮುಖ ಸಂಚಾರದ ವಿರುದ್ಧ ದಿಕ್ಕಿನಲ್ಲಿ ನುಗ್ಗಿದ ಬೈಕ್ ಸವಾರ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಮೇಲು ಸೇತುವೆಯಲ್ಲಿ ಬುಧವಾರ ರಾತ್ರಿ ನಡೆದಿದೆ.ನಂದಗುಡಿ ಸಮೀಪದ ಇಂಡಿಗನಾಳ ಗ್ರಾಮದ ಗೋವಿಂದರಾಜು (36) ಮೃತಪಟ್ಟವರು. ಚಿಕ್ಕಜಾಲದ ಕೆಎಸ್‌ಎನ್ ಕಲ್ಯಾಣ ಮಂಟಪದಲ್ಲಿ ನಡೆದ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಗೋವಿಂದರಾಜು ಮತ್ತು ಅವರ ಗೆಳೆಯ ನಾಗರಾಜ್ ಮನೆಗೆ ಬೈಕ್‌ನಲ್ಲಿ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.ನಿಯಮ ಉಲ್ಲಂಘಿಸಿ ಏಕಮುಕ ಸಂಚಾರ ಮಾರ್ಗದ ವಿರುದ್ಧ ದಿಕ್ಕಿನಲ್ಲಿ ಬೈಕ್‌ನಲ್ಲಿ ನುಗ್ಗಿದ ಮಧು ಮತ್ತು ಆತನ ಗೆಳೆಯ, ಗೋವಿಂದರಾಜು ಅವರ ಬೈಕ್‌ಗೆ ಡಿಕ್ಕಿ ಹೊಡೆದಾಗ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.ನಾಗರಾಜ್ ಮತ್ತು ಮಧು ಅವರ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿವಾಹಿತರಾಗಿದ್ದ ಗೋವಿಂದರಾಜು ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೆ ಮೇಲೆ ಗುಂಪಿನ ದಾಳಿ

ದುಷ್ಕರ್ಮಿಗಳ ಗುಂಪೊಂದು ಲೋಕೇಶ್ ಎಂಬುವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ತ್ಯಾಗರಾಜನಗರದ ಜವರಯ್ಯ ಗಾರ್ಡನ್‌ನಲ್ಲಿ ಗುರುವಾರ ಹಾಡಹಗಲೇ ನಡೆದಿದೆ. ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಲೋಕೇಶ್ ಅವರ ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ.ಅವರ ಕಾರಿನ ಗಾಜುಗಳನ್ನೂ ಒಡೆದು ಹಾಕಿದ್ದಾರೆ  ಎಂದು ತ್ಯಾಗರಾಜನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.‘ಜೈಲಿನಲ್ಲಿರುವ ಬಾಂಬೆ ರವಿ ಮತ್ತು ಅರುಣಾ ಎಂಬುವರು ಮೊಬೈಲ್ ಫೋನ್‌ಗೆ ಕರೆ ಮಾಡಿ ಹಣ ನೀಡುವಂತೆ ಪೀಡಿಸುತ್ತಿದ್ದರು. ಹಣ ನೀಡದ ಕಾರಣ ಅವರೇ ಈ ಕೃತ್ಯ ಮಾಡಿಸಿದ್ದಾರೆ’ ಎಂದು ಲೋಕೇಶ್ ಅವರು ದೂರು ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.