ಗುರುವಾರ , ಏಪ್ರಿಲ್ 15, 2021
26 °C

ವಿಜೃಂಭಣೆಯ ಆಂಜನೇಯ ಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ತಾಲ್ಲೂಕಿನ ಮಾಡ್ಲಗೇರಿ ಗ್ರಾಮದಲ್ಲಿ ಶನಿವಾರ ನಡೆದ ಆಂಜನೇಯಸ್ವಾಮಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.ಹರಪನಹಳ್ಳಿಯ ಪಾಳೇಗಾರ ದೊರೆ ರಾಜಾ ಸೋಮಶೇಖರ ನಾಯಕ ಯುದ್ಧಕ್ಕೆ ಬೇಕಾದ ಕತ್ತಿ- ಗುರಾಣಿಗಳನ್ನು ಮಾಡಿಕೊಟ್ಟಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾಡ್ಲಗೇರಿಯಲ್ಲಿ ಆಂಜನೇಯ ರಥೋತ್ಸವ ಕಳೆದ 50 ವರ್ಷಗಳಿಂದ ಸ್ಥಗಿತಗೊಂಡಿತ್ತು.ಹಾಗಾಗಿ, ಈ ಬಾರಿಯ ರಥೋತ್ಸವಕ್ಕೆ ನೂತನ ರಥವನ್ನು ಸಹ ನಿರ್ಮಾಣ ಮಾಡಲಾಗಿತ್ತು. ಆಕರ್ಷಕ  ಬಣ್ಣಬಣ್ಣದ ಬಟ್ಟೆಗಳ ಶೃಂಗಾರದ ಹೊದಿಕೆ ಹೊದಿಸಲಾಗಿದ್ದ ರಥವನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದಿಂದ ಆಂಜನೇಯ ಮೂರ್ತಿಯನ್ನು ಪೂಜಾವಿಧಿ -ವಿಧಾನಗಳನ್ನು ಪೂರೈಸಿದ ನಂತರ ಅಲಂಕೃತ ಪಲ್ಲಕ್ಕಿಯಲ್ಲಿ, ಅಶ್ವದೊಂದಿಗೆ ಜಾಂಜ್‌ಮೇಳ, ಹಲಗೆ, ನಂದಿಕೋಲು, ಸಮಾಳ ಇತ್ಯಾದಿ ವಾದ್ಯಪರಿಕರಗಳ ಮೆರವಣಿಗೆಯೊಂದಿಗೆ ರಥದ ಬಳಿ ಕರೆ ತರಲಾಯಿತು.

ಅರ್ಚಕರ ಪೂಜೆ ಹಾಗೂ ಸ್ವಾಮಿಯ ಧ್ವಜ ಹರಾಜು ಪ್ರಕ್ರಿಯೆ ಪೂರೈಸಿದ ನಂತರ ಜಯಘೋಷಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಸಾವಿರಾರು ಭಕ್ತರ ನಡುವೆ ಪೂರ್ವಾಭಿಮುಖವಾಗಿ ಚಲಿಸಿದ ರಥ, ಊರ ಮುಂದಿನ ರಸ್ತೆ ತಲುಪಿತು. ಅಲ್ಲಿಂದ ಮತ್ತೆ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳರಿಸಿ, ಸಕಲ ವಾದ್ಯಗಳ ಮೆರವಣಿಗೆಯೊಂದಿಗೆ ಊರ ಹೊರ ವಲಯದ ಪಾದಗಟ್ಟೆಗೆ ಕರೆದೊಯ್ಯಲಾಯಿತು. ನಂತರ ಪೂಜೆ ನೆರವೇರಿಸಿ ಮತ್ತೆ ಮೂಲ ಸ್ಥಳ ತಲುಪಲಾಯಿತು.

ಭಕ್ತರು ರಥಕ್ಕೆ ಬಾಳೆಹಣ್ಣು, ಮೆಣಸು ಎಸೆದು, ತೆಂಗಿನಕಾಯಿ ಒಡೆದು ಸ್ವಾಮಿಗೆ ಭಕ್ತಿ ಸಮರ್ಪಿಸಿದರು.ನೀಲಗುಂದದ  ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ಚನ್ನಹಳ್ಳಿಯ ಅಭಿನವ ಹಾಲವೀರಪ್ಪ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಬಳ್ಳಾರಿ ಜಿ.ಪಂ. ಸದಸ್ಯ  ವಸಂತ, ಪುರಸಭಾ ಸದಸ್ಯ ಪರಶುರಾಮಪ್ಪ, ಅಭಿಯಂತರ ಟಿ. ಮಂಜುನಾಥ ಮತ್ತಿತರರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.