ಭಾನುವಾರ, ಮಾರ್ಚ್ 7, 2021
32 °C

ವಿಜೃಂಭಣೆಯ ಚಾಮುಂಡೇಶ್ವರಿ ತೇರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜೃಂಭಣೆಯ ಚಾಮುಂಡೇಶ್ವರಿ ತೇರು

ಕಾರಟಗಿ: ಸಮೀಪದ ಹುಳ್ಕಿಹಾಳ ಗ್ರಾಮದಲ್ಲಿ 39ನೇ ವರ್ಷದ ಚಾಮುಂಡೇಶ್ವರಿ ದೇವಿ ರಥೋತ್ಸವವು ಶ್ರದ್ಧಾ, ಭಕ್ತಿ ಹಾಗೂ ವೈಭವದೊಂದಿಗೆ ಈಚೆಗೆ ಜರುಗಿತು.ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ದೇವಾಲಯದಿಂದ ಸಾಗಿದ ರಥೋತ್ಸವವು ಮುಖ್ಯಬೀದಿಯ ಮೂಲಕ ಎದುರು ಬಸವಣ್ಣವರೆಗೆ ಸಾಗಿ ವಾಪಸ್ಸಾಯಿತು. ನಾಗರಿಕರು, ಮಹಿಳೆಯರು ರಸ್ತೆಯಲ್ಲಿ, ಮನೆಯ ಮೇಲೆ ನಿಂತು ಹೂವಿನ ಬಾಳೆಹಣ್ಣು, ಉತ್ತತ್ತಿ ಎಸೆದು ನಮಸ್ಕರಿಸಿ ಪುನೀತರಾದರು. ಹುಳ್ಕಿಹಾಳ ಸೇರಿದಂತೆ ವಿವಿಧ ಹತ್ತಾರು ಗ್ರಾಮಗಳ ಸಾವಿರಾರು ನಾಗರಿಕರು, ಮಹಿಳೆಯರು ರಥೋತ್ಸವಕ್ಕೆ ಸಾಕ್ಷಿಯಾದರು.ಬೆಳಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಾಲಯದ ಕಳಸಾರೋಹಣ, ಉಚ್ಛಾಯ, ಗಣಾರಾಧನೆಯ ನಂತರ ಪೂರ್ಣಕುಂಭ, ಕಳಸ ಹೊತ್ತ ಮಹಿಳೆಯರೊಂದಿಗೆ ಸಕಲ ವಾದ್ಯಮೇಳಗಳೊಂದಿಗೆ ಗಂಗೆಸ್ಥಳಕ್ಕೆ ಹೋಗಿಬರಲಾಯಿತು.ರಥೋತ್ಸವದ ನಿಮಿತ್ಯ 10ನೇ ವರ್ಷದ ಶರಣಬಸವೇಶ್ವರರ ಪುರಾಣ ಪ್ರವಚನ ಮಹಾಮಂಗಲವು ಇದೇ ಸಂದರ್ಭದಲ್ಲಿ ನಡೆಯಿತು. ಮೌನೇಶ್ವರ ಆಚಾರ್ಯ ಶಾಸ್ತ್ರಿ ಗುಡಿಕಲಕೇರಿಯಿಂದ ಪ್ರವಚನ, ರೇವಣಸಿದ್ದಯ್ಯಸ್ವಾಮಿ ಹಿರೇಮಠರಿಂದ ಪಠಣ, ಜಗದೀಶ್ ಪತ್ತಾರ ತಳವಗೇರಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಸಾಮೂಹಿಕ ವಿವಾಹ: ಬೆಳಿಗ್ಗೆ ನಡೆದ ಸಾಮೂಹಿಕ ವಿವಾಹದಲ್ಲಿ 20 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅಂಗವಿಕಲ ಯುವಕಗೆ ಅವರ ನಿವಾಸದ ಮುಂದೆ ವಿವಾಹಕ್ಕೆ ಸಮಿತಿ ಅವಕಾಶ ನೀಡಿತ್ತು.

ನೆಕ್ಕಂಟಿ ನಾಗರಾಜ್ ತಾಳಿದಾನ ಮಾಡಿದ್ದರು. ಇತರ ದಾನಿಗಳ ಹಾಗೂ ನಾಗರಿಕರ ಸಹಾಯದೊಂದಿಗೆ ಸಾಮೂಹಿಕ ವಿವಾಹಗಳು ನಡೆದವು.ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ, ಸಿದ್ದಾಪೂರ ಪಾಲಾಕ್ಷಯ್ಯತಾತ, ರೇವಣಸಿದ್ದಯ್ಯಸ್ವಾಮಿ, ಸೋಮನಾಳ ಮಲ್ಲಯ್ಯಸ್ವಾಮಿ, ಪ್ರಮುಖರಾದ ಮುಕುಂದರಾವ್ ಭವಾನಿಮಠ, ವಿಶ್ವನಾಥರೆಡ್ಡಿ ಹೊಸಮನಿ, ಬಿಲ್ಗಾರ್ ನಾಗರಾಜ್, ನಾಗರಾಜ್ ತಂಗಡಗಿ, ಸಾಹುಕಾರ ಪಂಪಾಪತೆಪ್ಪ, ಅಮರೇಶ್ ಹುಳ್ಕಿಹಾಳ, ಮಲ್ಲಿಕಾರ್ಜುನ ಯತ್ನಟ್ಟಿ ಸೇರಿದಂತೆ ಅನೇಕರು ನೂತನ ದಂಪತಿಗಳಿಗೆ ಶುಭ ಹಾರೈಸಿದರು.ಶನಿವಾರ ಸೇಡಿಗಾಗಿ ಸಿಡಿದೆದ್ದ ಶಿವನಾಗ ಅರ್ಥಾತ್ ಕಣ್ಣೀರಿನ ಕಡಲು ಸಾಮಾಜಿಕ ನಾಟಕದ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.