ಗುರುವಾರ , ಜೂನ್ 24, 2021
23 °C

ವಿಜ್ಞಾನ ಸಂಶೋಧನೆಯತ್ತ ಆಸಕ್ತಿ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಮೂಲ ವಿಜ್ಞಾನ ಅಧ್ಯಯನದತ್ತ ವಿದ್ಯಾರ್ಥಿಗಳ ಒಲವು  ಕಡಿಮೆಯಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಯತ್ತ ಆಸಕ್ತರಾಗಬೇಕು~ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎಸ್. ಶೇರಿಗಾರ್ ಹೇಳಿದರು.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಹಭಾಗಿತ್ವದಲ್ಲಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.`ವಿಜ್ಞಾನ ಕ್ಷೇತ್ರದ ಸಂಶೋಧನೆಗೆ ಸರ್.ಸಿ.ವಿ.ರಾಮನ್ ಕೊಡುಗೆಯಾದ ರಾಮನ್ ಪರಿಣಾಮ  ನೆನಪಿಸಿಕೊಳ್ಳುವ ಸಲುವಾಗಿ ಈ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಸರ್.ಸಿ.ವಿ. ರಾಮನ್ ಕೇವಲ ರೂ.300 ಬೆಲೆಬಾಳುವ ಉಪಕರಣಗಳನ್ನಷ್ಟೇ ಬಳಸಿಕೊಂಡು ಈ ಸಂಶೋಧನೆ ನಡೆಸಿದರು. ಅವರ ಸಾಧನೆಗಾಗಿ ನೊಬೆಲ್ ಮತ್ತು ನೈಟ್‌ಹುಡ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.   ರಾಮನ್ ಅವರ ಸಾಧನೆ, ಜೀವನ ಚರಿತ್ರೆಗಳಿಂದ ಯುವಜನರು ಪ್ರೇರಿತರಾಗಬೇಕಾಗಿದೆ~ ಎಂದರು.`ವಿಜ್ಞಾನ ಕ್ಷೇತ್ರವು ಸಾಕಷ್ಟು ಬೆಳೆದಿದ್ದು ಅನೇಕ ನೂತನ ಉಪಕರಣಗಳು ಸಂಶೋಧನೆಗೆ ಸಹಕರಿಸುತ್ತಿವೆ. ನ್ಯಾನೊ ತಂತ್ರಜ್ಞಾನ ಮೂಲಕ ತಲೆಕೂದಲಿನ ದಪ್ಪವನ್ನು 1 ಲಕ್ಷ ನ್ಯಾನೋ ಮೀಟರ್ ಎಂದು ಅಳೆದಿದ್ದಾರೆ~ ಎಂದರು.ಪರಮಾಣು ಶಕ್ತಿಯ ಲಾಭ ಮತ್ತು ಅಪಾಯಗಳ ಕುರಿತು ವಿವರಿಸಿದ ಅವರು, `ಪರ‌್ಯಾಯ ಇಂಧನ ಕಂಡು ಹಿಡಿಯುವ ಅನಿವಾರ್ಯತೆ ಬಂದೊದಗಿದೆ. ಪವನಶಕ್ತಿ ಮತ್ತು ಸೌರಶಕ್ತಿಗಳಿಂದ ಪರ‌್ಯಾಯ ಇಂಧನವನ್ನು ಪಡೆಯುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ~ ಎಂದರು.ಪರಿಸರ ವಿಜ್ಞಾನಿ ಎನ್.ಎ. ಮಧ್ಯಸ್ಥ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸರ್.ಸಿ.ವಿ.ರಾಮನ್ ಅವರ ಉಪನ್ಯಾಸದಿಂದ ಪ್ರಭಾವಿತಗೊಂಡಿದ್ದನ್ನು ನೆನಪಿಸಿಕೊಂಡರು. ಪ್ರಾಂಶುಪಾಲ ಕೆ.ಸದಾಶಿವ ರಾವ್ ಅಧ್ಯಕ್ಷತೆ ವಹಿಸಿದ್ದರು.ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎ.ಪಿ.ಭಟ್, ರಸಾಯನಶಾಸ್ತ್ರದ ಮುಖ್ಯಸ್ಥೆ  ಸಂಧ್ಯಾ, ಗಣಿತ ವಿಭಾಗದ ಮುಖ್ಯಸ್ಥ ರಾಘವೇಂದ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.