ಸೋಮವಾರ, ಮೇ 16, 2022
29 °C

ವಿದ್ಯಾರ್ಥಿಯನ್ನು ಹೊರಹಾಕಿದ ಶಾಲೆ ವಿರುದ್ಧ ಸಿ.ಎಂ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಣಚರ್ಮದ ಸಮಸ್ಯೆ ಯಿಂದ ಬಳಲುತ್ತಿರುವ ಬಾಲಕನೊಬ್ಬ ನನ್ನು ಶಾಲೆಯಿಂದ ಹೊರಹಾಕಿರುವ ಇಲ್ಲಿನ ಸಿಂಗಾಪುರದ ನವೋದಯ ಕಿಶೋರ ಕೇಂದ್ರದ ವಿರುದ್ಧ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣವೇ ಆ ವಿದ್ಯಾರ್ಥಿಯನ್ನು ಮತ್ತೆ ಶಾಲೆಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.ಸಿಂಗಾಪುರ ಗ್ರಾಮದ ನಿವಾಸಿ ಹರೀಶ್ ಎಂಬುವರ ಪುತ್ರನಿಗೆ ಒಣ ಚರ್ಮದ ಸಮಸ್ಯೆ ಇದೆ. ಅದೇ ಗ್ರಾಮದ ನವೋದಯ ಕಿಶೋರ ಕೇಂದ್ರದಲ್ಲಿ ಮಗನನ್ನು ಎಲ್‌ಕೆಜಿಗೆ ಸೇರಿಸಿದ್ದರು. `ಬಾಲಕನಿಗೆ ಇರುವ ಸಮಸ್ಯೆ ಅಂಟು ರೋಗ ಅಲ್ಲ. ಆತ, ಇತರೆ ಮಕ್ಕಳ ಜೊತೆ ಬೆರೆತರೆ ಸಮಸ್ಯೆ ಇಲ್ಲ' ಎಂದು ವೈದ್ಯರು ಪ್ರಮಾಣಪತ್ರವನ್ನೂ ನೀಡಿದ್ದರು. ಆದರೆ, ಇತರೆ ಮಕ್ಕಳ ಪೋಷಕರಿಂದ ವಿರೋಧ ವ್ಯಕ್ತವಾಗಿದೆ ಎಂಬ ಕಾರಣ ನೀಡಿದ್ದ ಶಾಲೆಯ ಆಡಳಿತ ಮಂಡಳಿ, ಮಗನನ್ನು ಶಾಲೆಗೆ ಕಳುಹಿಸದಂತೆ ಹರೀಶ್ ಅವರಿಗೆ 15 ದಿನಗಳ ಹಿಂದೆ ಸೂಚಿಸಿತ್ತು. ಇತರೆ ಮಕ್ಕಳ ಪೋಷಕರ ಜೊತೆ ಸಮಾಲೋಚನೆ ನಡೆಸಲು ಅವಕಾಶ ಕಲ್ಪಿಸುವಂತೆ ಬಾಲಕನ ಪೋಷ ಕರು ಮಾಡಿದ್ದ ಮನವಿಗೂ ಕಿವಿಗೊಟ್ಟಿರಲಿಲ್ಲ.ಮುಖ್ಯಮಂತ್ರಿಯವರು ಶುಕ್ರವಾರ ಜನತಾ ದರ್ಶನ ನಡೆಸುತ್ತಿದ್ದ ವೇಳೆ ಮಗನೊಂದಿಗೆ ಅಲ್ಲಿಗೆ ಆಗಮಿಸಿದ ಹರೀಶ್, ಸಮಸ್ಯೆ ಹೇಳಿಕೊಂಡು ಗದ್ಗದಿತರಾದರು. ಮಗನಿಗೆ ಶಾಲೆಯಲ್ಲಿ ಪ್ರವೇಶ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕರೆಸಿದ ಮುಖ್ಯಮಂತ್ರಿ, ಬಾಲಕ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರವೇಶ ನಿರಾಕರಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ  ಕ್ರಮದ ಎಚ್ಚರಿಕೆಯನ್ನೂ ನೀಡಿದರು.ಸೋಮವಾರ ನಿರ್ಧಾರ: ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶುಕ್ರವಾರ ಸಂಜೆ ಸಿಂಗಾಪುರಕ್ಕೆ ತೆರಳು ನವೋದಯ ಕಿಶೋರ ಕೇಂದ್ರಕ್ಕೆ ತೆರಳಿ ಆಡಳಿತ ಮಂಡಳಿ ಪ್ರತಿನಿಧಿಗಳ ಜೊತೆ ಚರ್ಚಿಸಿದ್ದಾರೆ. ಆದರೆ, ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಸೋಮವಾರ ನಿರ್ಧಾರ ಕೈಗೊಳ್ಳುವುದಾಗಿ ಆಡಳಿತ ಮಂಡಳಿಯವರು ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.