ಸೋಮವಾರ, ಮೇ 17, 2021
31 °C

ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ಡಿಸೆಂಬರ್ ತಿಂಗಳಲ್ಲಿ ತರಗತಿ ಬಹಿಷ್ಕರಿಸಿದ್ದ ಪಿಯು ಕಾಲೇಜುಗಳ ಶಿಕ್ಷಕರು ಈಗ ಮೌಲ್ಯಮಾಪನ ಬಹಿಷ್ಕರಿಸುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಿದ್ದಾರೆ.ತಮ್ಮ ಬೇಡಿಕೆಗೆ ಲಕ್ಷಾಂತರ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಬದುಕನ್ನು ಒತ್ತೆಯಾಗಿರಿಸಿಕೊಂಡು ಸರ್ಕಾರ ಮಣಿಯುವಂತೆ ಮಾಡುವ ಈ ವರ್ತನೆ ಬ್ಲಾಕ್‌ಮೇಲ್‌ಗಿಂತ ಭಿನ್ನವಲ್ಲ.ಪರೀಕ್ಷೆ ಫಲಿತಾಂಶ ನಿರ್ದಿಷ್ಟ ಕಾಲಮಿತಿಯಲ್ಲಿ ಪ್ರಕಟವಾಗುವುದು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಈ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿಕೊಂಡು ತಮ್ಮ ಸಂಬಳ ಹೆಚ್ಚಿಸಿಕೊಳ್ಳುವ ಶಿಕ್ಷಕರ ದುಷ್ಟ ತಂತ್ರವನ್ನು ಸರ್ಕಾರ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಕ್ರಮಕ್ಕೆ ಮುಂದಾಗಬೇಕು.

 

ವೇತನ ಶ್ರೇಣಿಯಲ್ಲಿ ತಾರತಮ್ಯವಿದ್ದರೆ ಅದನ್ನು ಪಡೆಯುವುದಕ್ಕೆ ಚಳವಳಿಯ ಮಾರ್ಗ ಹಿಡಿಯುವುದು ತಪ್ಪೇನೂ ಅಲ್ಲ. ಆದರೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಗುರಾಣಿಯಾಗಿ ಹಿಡಿದುಕೊಂಡಂತೆ ಮೌಲ್ಯಮಾಪನ ಬಹಿಷ್ಕಾರ ಹಾಕುವುದು ಶಿಕ್ಷಕ ವೃತ್ತಿಗೆ ಅಪಚಾರ, ಕರ್ತವ್ಯಚ್ಯುತಿ.ಬೋಧನೆಯ ಜೊತೆಗೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಶಿಕ್ಷಕರ ಕರ್ತವ್ಯದ ಭಾಗ; ಅದರಲ್ಲಿ ಚ್ಯುತಿಯಾದರೆ ಕ್ರಮಕ್ಕೆ ಆಸ್ಪದವಿರುವಂತೆ ಸರ್ಕಾರ ನಿಯಮಗಳನ್ನು ರೂಪಿಸಬೇಕು. ಪಿಯು ಶಿಕ್ಷಕರ ಮೌಲ್ಯಮಾಪನ ಬಹಿಷ್ಕಾರದಿಂದ ಪರೀಕ್ಷಾ ಫಲಿತಾಂಶ ಪ್ರಕಟಣೆ ಅನಿಶ್ಚಿತವಾಗಿದೆ.ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಅವಕಾಶ ಗಳಿಸುವ ದೃಷ್ಟಿಯಿಂದ ಪಿಯು ಫಲಿತಾಂಶ ತ್ವರಿತವಾಗಿ ಪ್ರಕಟವಾಗುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಸರ್ಕಾರ ಕೂಡಲೇ ಈ ಬಹಿಷ್ಕಾರದ ತೆರವಿಗೆ ಅವಶ್ಯಕ ಕ್ರಮ ಕೈಗೊಳ್ಳಬೇಕು.ಕಳೆದ ಒಂದು ವರ್ಷದಿಂದ ಪಿಯು ಶಿಕ್ಷಕರು ಆಗಾಗ ಮುಷ್ಕರ ನಡೆಸಿದ್ದಾರೆ. ಪ್ರತಿ ಸಲವೂ ಸರ್ಕಾರ ಭರವಸೆಗಳನ್ನು ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದೆ. ಆದರೆ, ಅವೆಲ್ಲ ತಾತ್ಕಾಲಿಕ ಉಪಶಮನದಂತೆ ಆಗಿದೆಯೇ ವಿನಾ ಶಿಕ್ಷಕರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.ಶಿಕ್ಷಕರಿಗೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳದಿರುವುದು ಸರ್ಕಾರದ ಹೊಣೆಗೇಡಿತನ. ಆದರೆ, ಸರ್ಕಾರದ ಲೋಪಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದು ಸರಿಯೇ ಎಂದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಲಿ.

 

ಪಿಯು ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಮೊದಲು ಈಚಿನ ಹತ್ತು ವರ್ಷಗಳಲ್ಲಿ 2005ರಿಂದ 2007ರ ವರೆಗಿನ ಮೂರು ವರ್ಷಗಳನ್ನು ಬಿಟ್ಟರೆ ಯಾವ ವರ್ಷದಲ್ಲೂ ಎರಡನೇ ಪಿಯು ಪರೀಕ್ಷೆಯ ಫಲಿತಾಂಶ ಶೇ 50ರಷ್ಟನ್ನೂ ಮೀರಿಲ್ಲವೆಂಬ ಸಂಗತಿಯನ್ನೂ ಈ ಶಿಕ್ಷಕ ಸಂಘಟನೆಗಳ ಗಮನಕ್ಕೆ ತರಬೇಕು. ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕೆ ಕೊರತೆ ಇಲ್ಲದಿದ್ದರೂ ಕಳಪೆ ಫಲಿತಾಂಶ ಬರುತ್ತಿರುವುದಕ್ಕೆ ಶಿಕ್ಷಕರೂ ಜವಾಬ್ದಾರರು ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಡಬೇಕು.ಸದ್ಯ ಉದ್ಭವಿಸಿದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ದಿಟ್ಟ ಮಾರ್ಗ ಅನುಸರಿಸಬೇಕು. ಶಿಕ್ಷಕರ ಸಾಂಘಿಕ ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿಯದೆ ಶಿಸ್ತುಕ್ರಮಕ್ಕೆ ಮುಂದಾಗಲಿ. ಪಿಯು ಶಿಕ್ಷಕ ಕರ್ತವ್ಯ ನಿರ್ವಹಿಸಬಲ್ಲ ಸಾವಿರಾರು ನಿರುದ್ಯೋಗಿ ಸ್ನಾತಕೋತ್ತರ ಪದವೀಧರರು ಅವಕಾಶಕ್ಕಾಗಿ ಕಾದಿರುವುದನ್ನೂ ಲಕ್ಷ್ಯದಲ್ಲಿಡಲಿ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.