ಶನಿವಾರ, ಮೇ 15, 2021
25 °C

ವಿದ್ಯುತ್ ಆಘಾತ: ಕುಟಂಬಕ್ಕೆ ಹೊಡೆತ- ಮೆಸ್ಕಾಂ ಇಲಾಖೆ ಮೌನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ: ಬಂಟ್ವಾಳ ತಾಲ್ಲೂಕಿನ ಬಿಳಿಯೂರು ಗ್ರಾಮದ ಪಟ್ಲ ಎಂಬಲ್ಲಿ ವಾಸವಿರುವ ಕಡು ಬಡತನದ ಡೊಂಬಯ್ಯ (32) ಎಂಬವರು ಕೆಲ ತಿಂಗಳ ಹಿಂದೆ ಕೂಲಿ ಕೆಲಸ ಮಾಡುತ್ತಿದ್ದ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಅವರ ದೇಹ ಅರೆಬರೆ ಸುಟ್ಟು ಹೋಗಿದೆ. ಅವರು ಹಾಸಿಗೆ ಹಿಡಿದಿದ್ದು, ವಿದ್ಯುತ್ ಇಲಾಖೆಯಿಂದ ಪರಿಹಾರ ದೊರೆಯದೇ ಕುಟುಂಬ ದಿಕ್ಕುಪಾಲಾಗಿದೆ.ಘಟನೆ ಹಿನ್ನೆಲೆ: ಕುಟುಂಬದ ಬೆನ್ನೆಲುಬು ಆಗಿದ್ದ ಡೊಂಬಯ್ಯ ಹೊಟ್ಟೆ ಪಾಡಿಗಾಗಿ (ಜುಲೈ 30) 11 ತಿಂಗಳ ಹಿಂದೆ ಬಜ್ಪೆ ಸಮೀಪದ ಕೆಂಜಾರು ಚಂದ್ರಶೇಖರ ಅವರ ತೋಟದ ಬದಿಯಲ್ಲಿ ಬೇಲಿ ಹಾಕುತ್ತಿದ್ದರು. ಆಗ ಅವರ ಕೈಯಲ್ಲಿನ ಕಬ್ಬಿಣದ ಸಲಾಕೆ ಜೋಗದಿಂದ ಮಂಗಳೂರಿಗೆ ಹಾದು ಹೋಗುತ್ತಿದ್ದ ವಿದ್ಯುತ್ ಹೈಟೆನ್ಷನ್ ತಂತಿ ಸ್ಪರ್ಶಿಸಿತು. ಅವರ ದೇಹಕ್ಕೆ ವಿದ್ಯುತ್ ಆಘಾತವಾಗಿ ಮೈ ಪೂರ್ತಿ ಸುಟ್ಟು ಹೋಯಿತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಅವರು ಪಾರಾಗಿದ್ದರು. ಘಟನೆಯಿಂದ ಅವರ ಕಾಲು, ಕೈ, ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು, ಸಂಪೂರ್ಣವಾಗಿ ಅವರು ಗುಣಮುಖರಾಗಿಲ್ಲ.ದೇಹದ ಚರ್ಮ ಗಟ್ಟಿಯಾಗಿ ಬಿಟ್ಟಿದೆ. ಕೈಕಾಲುಗಳನ್ನು ಮೇಲೆತ್ತಲು ಆಗುತ್ತಿಲ್ಲ. ಇಂತಹ ಶೋಚನೀಯ ಸ್ಥಿತಿಯಲ್ಲಿ ಅವರು ದಿನ ದೂಡುತ್ತಿದ್ದಾರೆ.

ಸಹಾಯಧನ: ಡೊಂಬಯ್ಯ ಅವರ ಕರುಣಾಜನಕ ಸ್ಥಿತಿಯನ್ನು ಕಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ, ಮೇಲ್ವಿಚಾರಕರು, ಪ್ರಗತಿಬಂಧು ಸ್ವ-ಸಹಾಯ ಒಕ್ಕೂಟದ ಪದಾಧಿಕಾರಿಗಳು ನಿರಂತರ ಇವರಿಗೆ ನೆರವು ನೀಡುತ್ತಿದ್ದಾರೆ. ಈ ನೊಂದ ಕುಟುಂಬಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹಗ್ಗಡೆ ಅವರು ತಿಂಗಳಿಗೆ ತಲಾ 750 ರೂಪಾಯಿಯಂತೆ ಮಾಸಾಶನ ನೀಡುತ್ತಿದ್ದಾರೆ. ಬುಧವಾರ ಅವರ ಮನೆಗೆ ಭೇಟಿ ನೀಡಿದ ಯೋಜನೆಯ ಬಂಟ್ವಾಳ ತಾಲ್ಲೂಕು ಯೋಜನಾಧಿಕಾರಿ ದಯಾವತಿ ಅವರು ಮಾಣಿ ವಲಯದ ವತಿಯಿಂದ 21 ಸಾವಿರ ರೂಪಾಯಿ ನಗದು ಹಾಗೂ ಕೇಂದ್ರ ಒಕ್ಕೂಟದ ವತಿಯಿಂದ 50 ಕೆ.ಜಿ ಅಕ್ಕಿ ವಿತರಿಸಿದರು.ಯೋಜನೆಯ ಮಾಣಿ ವಲಯ ಮೇಲ್ವಿಚಾರಕ ಯೋಗಿಶ್ ಬಿ.ಆರ್, ಬಿಳಿಯೂರು ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಸಫಲ್ಯ, ಮಾಣಿ ವಲಯ ಅಧ್ಯಕ್ಷ ಶರಣ್ ನರೋನ್ಹ ವಿವಿಧ ವಲಯಗಳ ಒಕ್ಕೂಟದ ಅಧ್ಯಕ್ಷರಾದ ಜಯಂತಿ, ಕೃಷ್ಣಪ್ಪ ಪೂಜಾರಿ, ಗಿರಿಯಪ್ಪ ಪೂಜಾರಿ, ಮಹಾಬಲ ಶೆಟ್ಟಿ, ರಮೇಶ್ ತೋಟ ಮೊದಲಾದವರು ಉಪಸ್ಥಿತರಿದ್ದರು.ಬಡ ಕುಟುಂಬ: ಡೊಂಬಯ್ಯ ಅವರದ್ದು ಚಿಕ್ಕ ಮನೆಯಾಗಿದ್ದು, ಮನೆಯ ಅಂಗಳ ಬಿಟ್ಟರೆ ಬೇರೆ ಯಾವುದೇ ಸ್ಥಳವಿಲ್ಲ. ಕೃಷಿ ಮಾಡಲು ಜಾಗವಿಲ್ಲ. ಕೂಲಿ ಕೆಲಸವೇ ಅವರಿಗೆ ಆಧಾರವಾಗಿದೆ. ಕೂಲಿ ಕೆಲಸ ಮಾಡಲು ಅವರ ಕೈಕಾಲುಗಳಿಗೆ ಬಲವಿಲ್ಲ. ಮೂರು ವರ್ಷದ ಹಿಂದೆ ಅವರಿಗೆ ಸುಜಾತಾ (28) ಎಂಬವರೊಂದಿಗೆ ವಿವಾಹವಾಗಿದ್ದು, ಎಳೆಯ ಒಂದು ಹೆಣ್ಣು ಮಗುವಿದೆ. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಸುಜಾತ ಅವರು ಇದೀಗ ಅವರ ಆರೈಕೆ ಮಾಡುತ್ತಿದ್ದಾರೆ. ಇವರು ಇಂತಹ ದುಃಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರೂ ಒಬ್ಬರೇ ಒಬ್ಬ ಜನಪ್ರತಿನಿಧಿ, ರಾಜಕೀಯ ಮುಖಂಡರು ಇತ್ತ ಕಡೆ ಸುಳಿದಿಲ್ಲ.  ಕೆಪಿಟಿಸಿಎಲ್ ಅಥವಾ ಮೆಸ್ಕಾಂನಿಂದಲೂ ಅವರಿಗೆ ಪರಿಹಾರ ದೊರೆತಿಲ್ಲ. ವಿಚಾರಿಸಿದರೆ ಇಲಾಖೆಯಿಂದ ಭರವಸೆ ಮಾತ್ರ ದೊರೆಯುತ್ತದೆ ಎಂದು ಅವರ ಕುಟುಂಬಿಕರು ಹೇಳುತ್ತಾರೆ.ಸಹಾಯಕ್ಕಾಗಿ ಮೊರೆ: ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಿದರೆ ಅವರು ಸಂಪೂರ್ಣವಾಗಿ ಗುಣಮುಖರಾಗುವ ಸಾಧ್ಯತೆಯಿದ್ದು, ಅವರೀಗ ಸಹಾಯಕ್ಕಾಗಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆಗಳ ಮೋರೆ ಹೋಗಿದ್ದಾರೆ. ಈ ಬಡಕುಟುಂಬಕ್ಕೆ ಸಹಾಯ ನೀಡುವವರು ಡೊಂಬಯ್ಯ ಅವರ ಪತ್ನಿ ಸುಜಾತಾ ಅವರ ಹೆಸರಿನಲ್ಲಿ ಪೆರ್ನೆ ಶಾಖೆಯ ವಿಜಯ ಬ್ಯಾಂಕ್ ಖಾತೆ ಸಂಖ್ಯೆ 146901011000963- ಐ.ಎಫ್.ಸಿ ಕೋಡ್ ವಿಐಜೆಬಿ 0001469 ನಲ್ಲಿ ಜಮೆ ಮಾಡಬಹುದು ಅಥವಾ ಅವರ ಮೊಬೈಲ್ ಸಂಖ್ಯೆ 96326 62647 ಅನ್ನು ಸಂಪರ್ಕಿಸಬಹುದು ಎಂದು ಅವರು ವಿನಂತಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.