ಸೋಮವಾರ, ಮೇ 16, 2022
27 °C

ವಿದ್ಯುತ್ ಕಡಿತ: ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಕಲಗೂಡು: ಬೇಕಾಬಿಟ್ಟಿ ವಿದ್ಯುತ್ ಕಡಿತಗೊಳಿಸಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಗ್ರಾಮಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ತಾಲ್ಲೂಕಿನ ದೊಡ್ಡಮಗ್ಗೆ ಹೋಬಳಿ ಬಿಟ್ಟಗೋಡನಹಳ್ಳಿ ಗ್ರಾಮಸ್ಥರು ದಸಂಸ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಬೈಚನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ಅಧಿಕಾರಿ ಶ್ರೀನಿವಾಸ್ ಗ್ರಾಮದ ಅನಧಿಕೃತ ಪಂಪ್ ಸೆಟ್‌ಗಳ ವಿದ್ಯುತ್ ಬಳಕೆದಾರರ ಸಂಪರ್ಕ ಕಡಿತ ಗೊಳಿಸುವ ಬದಲು ಅಧಿಕೃತ ಸಂಪರ್ಕ ಹೊಂದಿದ ರೈತರ ಹಾಗೂ ಗೃಹ ಬಳಕೆ ವಿದ್ಯುತ್ ಲೈನ್‌ಗಳ ಸಂಪರ್ಕ ಕಡಿತಗೊಳಿಸಿದ್ದು ಮೂರು ದಿನಗಳಿಂದ ಸುಮಾರು 20 ಕುಟುಂಬಗಳು ಕತ್ತಲಲ್ಲಿ ದಿನ ದೂಡುವ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.ವಿದ್ಯುತ್ ಕಡಿತದ ಕ್ರಮದ ಬಗ್ಗೆ ಅಧಿಕಾರಿಯನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಇವರ ಬೇಜಾವಾಬ್ದಾರಿ ವರ್ತನೆಯಿಂದ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗದೆ ಸುಮಾರು 30 ಎಕರೆ ಪ್ರದೇಶದ ಬೆಳೆ ಒಣಗಿ ನಷ್ಟವಾಗಿದೆ. ಇದನ್ನು ವಿದ್ಯುತ್ ಇಲಾಖೆ ತುಂಬಿ ಕೊಡುವಂತೆ ಆಗ್ರಹಿಸಿದರು. ಕರ್ತವ್ಯ ಲೋಪ ಎಸಗಿರುವ ಈ ಅಧಿಕಾರಿಯನ್ನು ಅಮಾನತ್ತು ಪಡಿಸುವಂತೆ ಅಗ್ರಹಿಸಿದರು. ಸೆಸ್ಕ್ ಎ.ಇ.ಇ. ಶಿವಕುಮಾರ್ ಪ್ರತಿಭಟನಾ ನಿರತರನ್ನು ಸಮಾಧಾನಗೊಳಿಸಿ ಕೂಡಲೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.ದಸಂಸ ಮುಖಂಡರಾದ ಡಿ.ಸಿ. ಸಣ್ಣಸ್ವಾಮಿ, ಪುಟ್ಟರಾಜು, ಬೊಮ್ಮಯ್ಯ, ರಾಮು, ಹೊನ್ನವಳ್ಳಿ ಗ್ರಾ.ಪಂ. ಸದಸ್ಯ ಎಚ್.ಇ.ದೇವರಾಜ್, ದೊಡ್ಡೇಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.