ಸೋಮವಾರ, ಏಪ್ರಿಲ್ 19, 2021
32 °C

ವಿದ್ಯುತ್ ಕಡಿತ ತಡೆಗೆ ಹೊಸ ಸೂತ್ರ

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಡ್‌ಶೆಡ್ಡಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೃಹತ್ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಪರ್ಕಗಳಿಗೆ ವಿದ್ಯುತ್ ಬಳಕೆಯ ವೇಳೆ ಆಧರಿಸಿ ಹೆಚ್ಚಿನ ದರ ವಿಧಿಸುವ ಹೊಸ ಸೂತ್ರವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ರೂಪಿಸಿದೆ. ಸೆಪ್ಟೆಂಬರ್ ಒಂದರಿಂದಲೇ ರಾಜ್ಯದಾದ್ಯಂತ ಈ ಪದ್ಧತಿ ಜಾರಿಗೆ ಬರಲಿದೆ. 
ನೋಟಿಸ್ ಜಾರಿ...

500 ಕೆ.ವಿ. ಮತ್ತು ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ಸಂಪರ್ಕಗಳನ್ನು ಹೊಂದಿರುವ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ದೊಡ್ಡ ದೊಡ್ಡ ಮಾಲ್‌ಗಳಿಗೆ ಈಗಾಗಲೇ ನೋಟಿಸ್ ನೀಡಿ, ಮೀಟರ್ ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.ಆಯೋಗದ ಸೂಚನೆಯಂತೆ ಸೆಪ್ಟೆಂಬರ್ 1ರಿಂದ ಬಳಕೆಯ ವೇಳೆ ಆಧರಿಸಿ ದರ ವಿಧಿಸಲಾಗುವುದು.ಮೀಟರ್ ಬದಲಾಯಿಸಿಕೊಳ್ಳುವುದು ವಿಳಂಬ ವಾದರೂ, ಸಂಜೆ 6ರಿಂದ 10ರವರೆಗೆ ಬಳಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ಒಂದು ರೂಪಾಯಿ ಹೆಚ್ಚಿನ ದರ ವಿಧಿಸುವುದು ಖಚಿತ. 

       - ಪಿ.ಮಣಿವಣ್ಣನ್, 

         ವ್ಯವಸ್ಥಾಪಕ ನಿರ್ದೇಶಕರು,    ಬೆಸ್ಕಾಂ

500 ಕೆ.ವಿ. ಮತ್ತು ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಹೈಟೆನ್ಷನ್ ವಿದ್ಯುತ್ ಸಂಪರ್ಕವನ್ನು (ಎಚ್.ಟಿ.-2 ಎ ಮತ್ತು ಬಿ) ಹೊಂದಿರುವ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಇದು ಅನ್ವಯವಾಗಲಿದೆ. ಈ ಪದ್ಧತಿ ಕಡ್ಡಾಯವಾಗಿದ್ದು, ಇದರ ಅನುಷ್ಠಾನಕ್ಕೆ ವಿದ್ಯುತ್ ಸರಬರಾಜು ಕಂಪೆನಿಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಈ ಪದ್ಧತಿಯ ವ್ಯಾಪ್ತಿಗೆ ಬರುವ ಗ್ರಾಹಕರು ಸಂಜೆ 6ರಿಂದ ರಾತ್ರಿ 10 ಗಂಟೆವರೆಗೆ ಬಳಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ಸಾಮಾನ್ಯ ದರಕ್ಕಿಂತ ಒಂದು ರೂಪಾಯಿ ಹೆಚ್ಚಿಗೆ ಪಾವತಿಸಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಬಳಸುವ ಪ್ರತಿ ಯೂನಿಟ್ ವಿದ್ಯುತ್‌ಗೆ ರೂ 1.25 ರಿಯಾಯಿತಿ ಸಿಗಲಿದೆ. ಬೆಳಿಗ್ಗೆ 6ರಿಂದ 8 ಗಂಟೆವರೆಗೆ ಮತ್ತು ಸಂಜೆ 6ರಿಂದ ರಾತ್ರಿ 10ರವರೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ, ಬೇಡಿಕೆ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯಾಗದ ಕಾರಣ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ವೇಳೆ ಆಧರಿಸಿ ದರ ವಿಧಿಸುವ ಪದ್ಧತಿ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಅವರು `ಪ್ರಜಾವಾಣಿ~ಗೆ ತಿಳಿಸಿದರು. ನೂತನ ಪದ್ಧತಿಯಿಂದ ನಿತ್ಯ ಸುಮಾರು 400 ಮೆಗಾವಾಟ್ ವಿದ್ಯುತ್ ಉಳಿತಾಯವಾಗಲಿದೆ. ಇದರಿಂದ ಸಾಧ್ಯವಾದಷ್ಟು ಮಟ್ಟಿಗೆ ಲೋಡ್‌ಶೆಡ್ಡಿಂಗ್ ತಪ್ಪಿಸಬಹುದಾಗಿದೆ. ಅಲ್ಲದೆ ವಿದ್ಯುತ್ ಬೇಡಿಕೆ ಹೆಚ್ಚಿಗೆ ಇರುವ ಅವಧಿಯಲ್ಲಿ ದುಬಾರಿ ದರದಲ್ಲಿ ಖರೀದಿ ಮಾಡುವುದು ತಪ್ಪುತ್ತದೆ. ಬೊಕ್ಕಸಕ್ಕೆ ಉಳಿತಾಯವಾಗುತ್ತದೆ ಎನ್ನುತ್ತಾರೆ ಶ್ರೀನಿವಾಸಮೂರ್ತಿ. ವಿದ್ಯುತ್ ಬಳಕೆಯ ವೇಳೆ ಆಧರಿಸಿ ದರ ವಿಧಿಸುವುದರಿಂದ ಅತಿ ಹೆಚ್ಚು ಬೇಡಿಕೆ ಇರುವ ಸಂಜೆ ವೇಳೆಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿ, ಉಳಿದ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ಪ್ರೊತ್ಸಾಹಿಸಲು ಅವಕಾಶ ದೊರೆಯುತ್ತದೆ. ಕೈಗಾರಿಕೆಗಳು ವಿದ್ಯುತ್ ಬಳಕೆ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಸಾಯಂಕಾಲ ಲೋಡ್‌ಶೆಡ್ಡಿಂಗ್ ತಪ್ಪಿಸಲು ಸಾಧ್ಯವಾಗಲಿದೆ ಎಂದು ಅವರು ವಿವರಿಸಿದರು. ಈಗ ಕಡ್ಡಾಯ: ಮೂರು ವರ್ಷಗಳಿಂದ ಈ ಪದ್ಧತಿ ಐಚ್ಛಿಕವಾಗಿ ಜಾರಿಯಲ್ಲಿದೆ. ಬೆರಳೆಣಿಕೆಯಷ್ಟು ಕೈಗಾರಿಕೆಗಳು ಮಾತ್ರ ಇದನ್ನು ಅಳವಡಿಸಿಕೊಂಡಿವೆ. ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈಗ ಕಡ್ಡಾಯ ಮಾಡಲಾಗಿದೆ. ಕೆಲವರಿಗೆ ಅನನುಕೂಲ ಆಗಬಹುದು. ಆದರೆ, ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು. ಬೇರೆ ರಾಜ್ಯಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ನಂತರವೇ ರಾಜ್ಯದಲ್ಲೂ ಇದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಒಂದೆರಡು ಪತ್ರಗಳು ಬಂದಿವೆ. ಇದರಿಂದ ಯಾವ ರೀತಿ ತೊಂದರೆ ಆಗುತ್ತದೆ ಎಂದು ಬಲವಾದ ಕಾರಣಗಳನ್ನು ನೀಡಿದರೆ, ಆಯೋಗ ವಿಚಾರಣೆ ನಡೆಸಿ ಅಹವಾಲುಗಳನ್ನು ಆಲಿಸಲಿದೆ ಎಂದು ಅವರು ತಿಳಿಸಿದರು.ಕೆಇಆರ್‌ಸಿಗೆ ಅರ್ಜಿ: ಆರ್ಥಿಕ ಹಿಂಜರಿತದಿಂದಾಗಿ ಕೈಗಾರಿಕೆಗಳು ಶೋಚನಿಯ ಸ್ಥಿತಿಯಲ್ಲಿವೆ. ಉತ್ಪನ್ನಗಳಿಗೆ ಬೇಡಿಕೆ ಇಲ್ಲ. ಎರಡು ಪಾಳಿಯಲ್ಲಿ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಹೊಸ ಪದ್ಧತಿ ಅಳವಡಿಸಿಕೊಳ್ಳಲು ಕೈಗಾರಿಕೆಗಳು ನಿರುತ್ಸಾಹ ತೋರಿವೆ ಎನ್ನುತ್ತಾರೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಇಂಧನ ಸಮಿತಿ ಅಧ್ಯಕ್ಷ ಎಂ.ಜಿ.ಪ್ರಭಾಕರ್. `ವೇಳೆ ಆಧರಿಸಿ ದರ ವಿಧಿಸುವುದಕ್ಕೆ ತಾತ್ವಿಕ ವಿರೋಧವಿಲ್ಲ. ಕೈಗಾರಿಕಾ ಚಟುವಟಿಕೆಗಳು ಕುಂಠಿತ ಆಗಿರುವುದರಿಂದ ಇದು ಸಕಾಲ ಅಲ್ಲ ಎಂಬ ಅಭಿಪ್ರಾಯವನ್ನು ಎಫ್‌ಕೆಸಿಸಿಐನ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸದ್ಯಕ್ಕೆ ಈ ಪದ್ಧತಿಯನ್ನು ಮುಂದೂಡಿ ಎಂದು ಕೆಇಆರ್‌ಸಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ~ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಮೀಟರ್ ಬದಲಾಯಿಸಿಕೊಳ್ಳುವ ಅಗತ್ಯವಿಲ್ಲ. ಈಗಿರುವ ಮೀಟರ್‌ನ `ಪ್ರೋಗ್ರಾಮಿಂಗ್~ನಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಕೆಇಆರ್‌ಸಿಗೆ ಅರ್ಜಿ ಹಾಕುವ ಸಂಬಂಧ ವಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.