ಭಾನುವಾರ, ಮೇ 9, 2021
18 °C

ವಿದ್ಯುತ್ ದೀಪದ ನೆರಳು-ಬೆಳಕಿನಲ್ಲಿ ಜಲಧಾರೆ ದೃಶ್ಯ ಕಾವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್ ದೀಪದ ನೆರಳು-ಬೆಳಕಿನಲ್ಲಿ ಜಲಧಾರೆ ದೃಶ್ಯ ಕಾವ್ಯ

ಎರಡು ದಿನಗಳ ಗಗನಚುಕ್ಕಿ ಜಲಪಾತೋತ್ಸವಕ್ಕೆ ಚಾಲನೆ

ಮಳವಳ್ಳಿ: ಜಿಲ್ಲೆಯ ಎಲ್ಲ ಶಾಸಕರ ಜೊತೆಗೆ ಚರ್ಚಿಸಿ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದ್ದು, ಈ ಕುರಿತು ಸರ್ಕಾರದೊಂದಿಗೂ ಚರ್ಚೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.ತಾಲ್ಲೂಕಿನ ಗಗನಚುಕ್ಕಿ ಜಲಪಾತದ ಆವರಣದಲ್ಲಿ ನಿರ್ಮಿಸಲಾಗಿರುವ ವಿಶಾಲವೇದಿಕೆಯಲ್ಲಿ ಎರಡು ದಿನಗಳ ಗಗನಚುಕ್ಕಿ ಜಲಪಾತೋತ್ಸವವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತಂತೆ ಈಗಾಗಲೇ ಎಲ್ಲ ಏಳು ಶಾಸಕರ ಜತೆಗೆ ಒಂದು ಸುತ್ತಿನ ಚರ್ಚೆ ನಡೆದಿದೆ ಎಂದರು.ಹಂಪಿ ಉತ್ಸವ ಮತ್ತು ದಸರಾ ಉತ್ಸವದ ಮಾದರಿಯಲ್ಲಿಯೇ ಜಲಪಾತೋತ್ಸವ ನಡೆಯುತ್ತಿರುವುದು ಸಂತಸದ ಸಂಗತಿ. ಇಂಥ ಉತ್ಸವಗಳು ಪ್ರವಾಸಿಗರನ್ನು ಸೆಳೆಯಲು ಅನುಕೂಲ. ಇದಕ್ಕೆ ಪೂರಕವಾಗಿ  ಇಲ್ಲಿ ಅಗತ್ಯಮೂಲಸೌಕರ್ಯಗಳನ್ನು ಒದಗಿಸಲು ಯತ್ನಿಸಲಾಗುವುದು ಎಂದರು. ಈಗಾಗಲೇ ಜಿಲ್ಲೆಯಲ್ಲಿ ಮೇಲುಕೋಟೆ ಅಭಿವೃದ್ಧಿಗೆ 10 ಕೋಟಿ ರೂಪಾಯಿ, ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮೇಲುಕೋಟೆಗೆ ಅಭಿವೃದ್ದಿಗೆ ಅಕ್ಟೋಬರ್ 13ರಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು, ಇದು ಯಾರದೇ ವಿಜೃಂಬಣೆಗಾಗಿ ಮಾಡುತ್ತಿರುವ ಉತ್ಸವ ಅಲ್ಲ. ಸ್ಥಳದ ಮಹತ್ವವನ್ನು ತಿಳಿಸುವುದೇ ಇದರ ಉದ್ದೇಶ. ಹೀಗಾಗಿ, ಯಾರ ಅಪಸ್ವರವು ಬೇಡ ಎಂದು ಕೋರಿದರು.ಈಗಾಗಲೇ ಈ ತಾಣದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಒಟ್ಟಾರೆ 971 ಲಕ್ಷ ರೂಪಾಯಿಗಳಯೋಜನೆಗೆ ಅನುಮೋದನೆ ನೀಡಿದೆ. ಆದಷ್ಟು ಶೀಘ್ರ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು,ಜಿಲ್ಲೆಯಲ್ಲಿ ಭೌಗೋಳಿಕ ಮಹತ್ವಕ್ಕೆ ಅನುಗುಣವಾಗಿ ಮೂರುಭಾಗವಾಗಿ ಪರಿಗಣಿಸಿ ಅಭಿವೃದ್ಧಿಗೆ ರೂಪುರೇಖೆ ರೂಪಿಸಲಾಗಿದೆ ಎಂದರು. ಐತಿಹಾಸಿಕ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ, ಧಾರ್ಮಿಕ ಹಿನ್ನೆಲೆಯಲಿ ನಾಗಮಂಗಲ ಮತ್ತು ಮೇಲುಕೋಟೆ ಮತ್ತು ಪರಿಸರದ ಹಿನ್ನೆಲೆಯಲ್ಲಿ ಮಳವಳ್ಳಿ, ಮದ್ದೂರು ಭಾಗವನ್ನು ಅಭಿವೃದ್ಧಿ ಪಡಿಸಲಿದ್ದು, ಪೂರಕವಾಗಿ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ ಎಂದರು.ಪ್ರತಿಭಟನೆ: ಕಾರ್ಯಕ್ರಮಕ್ಕೂ ಮುನ್ನ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಹಲಗೂರು ಭಾಗದಲ್ಲಿ ಮೂಲಸೌಕರ್ಯವೇ ಇಲ್ಲ. ಇಂಥ ಸಂದರ್ಭದಲ್ಲಿ ಇಂಥ ಅದ್ದೂರಿ ಕಾರ್ಯಕ್ರಮದ ಅಗತ್ಯ ಇತ್ತಾ ಎಂದು ಆಕ್ಷೇಪಿಸಿ ಪ್ರತಿಭಟನೆ ನಡೆಸಿದರು.ವೇದಿಕೆಯಲ್ಲಿ ಶಾಸಕ ಬಿ.ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎಂ.ಸುಮಿತ್ರಾ ಶಿವಮಾದೇಗೌಡ, ಉಪಾಧ್ಯಕ್ಷೆ ನಾಗಮಣಿ, ಜಿಪಂ ಸದಸ್ಯರಾದ ವಿಶ್ವಾಸ್, ಶಿವಮ್ಮ, ಸಿ.ಎಂ. ಸತೀಶ್, ಪುರಸಭೆ ಸದಸ್ಯೆ ರಶ್ಮಿ, ರತ್ನಮ್ಮ, ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಪೊಲೀಸ್ ಆಧಿಕಾರಿ ನಂಜುಂಡಸ್ವಾಮಿ ಇದ್ದರು.

ಮಳವಳ್ಳಿ: ಹಸಿರು ಗುಡ್ಡಗಳು, ದಟ್ಟ ವನರಾಶಿ, ಸಂಗೀತದ ಹಿಮ್ಮೇಳ, ವಿದ್ಯುತ್ ದೀಪದ ನೆರಳು-ಬೆಳಕಿಗೆ ನಲಿದಾಡುತ್ತ ಧುಮುಕುವ ಜಲಧಾರೆ...ಬಹುಶಃ ಕಣ್ಣು ಮತ್ತು ಮನಸ್ಸಿನಲ್ಲಿ ತುಂಬಿಕೊಂಡು ಸುಖಿಸಲು ಇದಿಷ್ಟು ಸಾಕು.ಅದು, ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತ. ಸುಮಾರು 300 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಯ ಆರ್ಭಟ-ದಬೆದಬೆ ಸದ್ದು, ಮೇಲೇಳುವ ನೀರಿನ ತುಂತುರು ಹನಿಗಳು ತಂಗಾಳಿಯ ರಾಯಭಾರದಲ್ಲಿ ವೀಕ್ಷಕರನ್ನು ಮುತ್ತಿಕ್ಕುತ್ತಿತ್ತು.ಎರಡು ವರ್ಷಗಳ ತರುವಾಯ ನಡೆದ ಗಗನಚುಕ್ಕಿ ಜಲಪಾತೋತ್ಸ ವವು, ಪ್ರಕತಿ ಪ್ರಿಯರಿಗೆ ವಿಶಿಷ್ಟ ಅನುಭೂತಿ ನೀಡಿತು. ದಶ್ಯ-ಸಂಗೀತದ ಮಾಧುರ್ಯ ಸಮೀಕರಣಗೊಂಡು ಹೊಸದೊಂದು ಲೋಕವನ್ನೇ ಸಷ್ಟಿಸಿತು.

ಮೈ ತುಂಬಿ ಹರಿಯುತ್ತಿದ್ದ ಕಾವೇರಿ, ನೊರೆ ಹಾಲಿನ ತರಹ ಮೇಲಿಂದ ಜಿಗಿಯುತ್ತ ಮತ್ತಷ್ಟು ಸೊಬಗು ತುಂಬುತ್ತಿದ್ದಳು. ಮೊದಲ ದಿನ ಜಲಪಾತೋತ್ಸವಕ್ಕೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ.ಜಲಧಾರೆ ಸೊಬಗಿನ ಜೊತೆಗೆ, ಈ ನೆಲದ ಸಂಸ್ಕೃತಿಯಾದ ಜಾನಪದ ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ  ಜಾನಪದ ಝರಿ ಯೂ ಜೋರಗಿಯೇ ಹರಿದು, ಜನರನ್ನು ರಂಜಿಸಿತು. ಮಂಡ್ಯ ಜಿಲ್ಲೆಯ ಕಲಾವಿದರು ಪ್ರಸ್ತುತ ಪಡಿಸಿದ, ಜಾನಪದ ಗಾಯನ, ಸೋಮನಕುಣಿತ, ಪಟಕುಣಿತ, ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ ಸೇರಿದಂತೆ ಗ್ರಾಮೀಣ ಸೊಗಡಿನ ವಿವಿಧ ಜಾನಪದ ಕಲಾಪ್ರಕಾರಗಳು ಗಮನ ಸೆಳೆಯಿತು.ಮೋಡಿ ಮಾಡಿದ ಗಾನಸುಧೆ

ಎಂ,ಮಹಾದೇವಸ್ವಾಮಿ ಮತ್ತು ತಂಡದ ಸದಸ್ಯರು ಭಕ್ತಿಗೀತೆಗಳ ಹೂರಣ ಬಡಿಸಿದರು. ಓ ಮಹದೇಶ್ವರ ದಯಬಾರದೇ ಎಂಬುದು ಸೇರಿದಂತೆ ಅನೇಕ ಲಯಬದ್ಧ ಭಕ್ತಿಗೀತೆಗಳ ಇಳಿಸಂಜೆಗೆ ಉತ್ತಮ ಆರಂಭ ನೀಡಿತು.ಮಿಮಿಕ್ರಿ ದಯಾನಂದ್ ಅವರು ಪ್ರಸ್ತುತ ಪಡಿಸಿದ ಹಾಸ್ಯ ಕಾರಂಜಿಯು ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತು. ಕೆಲ ಚಿತ್ರನಟರು ಹಾಗೂ ರಾಜಕಾರಣಿಗಳಾದ ಕುಮಾರಸ್ವಾಮಿ, ಧರ್ಮಸಿಂಗ್, ಸಿದ್ದರಾಮಯ್ಯ ಅವರ ಧ್ವನಿ ಅಣಕು ಮಾಡುವ ಮೂಲಕ ನಗೆ ಉಕ್ಕಿಸಿದರು. ಕುಮಾರಿ ಶ್ರುತಿ ಶ್ರೀನಿವಾಸನ್ ತಂಡದ ಸದಸ್ಯರು ಪ್ರದರ್ಶಿಸಿದ  ಭಗೀರಥ ಗಂಗಾ  ಕಾರ್ಯಕ್ರಮ ಚಪ್ಪಾಳೆ ಗಿಟ್ಟಿಸುವಲ್ಲಿ ಸಫಲವಾಯಿತು.ಸಂಗೀತ ನಿರ್ದೇಶಕ ಮನೋಮೂರ್ತಿ ಮತ್ತು ತಂಡ ಪ್ರಸ್ತುತ ಪಡಿಸಿದ ಸಂಗೀತ-ನತ್ಯ, ಕಾರ್ಯಕ್ರಮದ ಹೈಲೆಟ್.ಗಾಯಕ;ಗಾಯಕಿಯರ ಕಂಠಸಿರಿಯಲ್ಲಿ ಹೊಮ್ಮಿದ ಕನ್ನಡ ಹಳೆಯ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದ ಪ್ರೇಕ್ಷಕರನ್ನು ರಂಜಿಸಿದವು. ಕೆಲ ಹಾಡುಗಳಿಗೆ ವೀಕ್ಷಕರೂ ಕುಣಿದು-ಕುಪ್ಪಳಿಸಿ ಸಂಭ್ರಮಿಸಿದರು.ಜಲಸಿರಿ ವೈಭವ ಕಂಡು ಅಲ್ಲಿ ನೆರದಿದ್ದ ಎಲ್ಲರೂ ಗುನುಗುತಿದ್ದದ್ದು ಒಂದೇ...ಎಂಥಾ ಸೌಂದರ್ಯ ನೋಡು..!

ತಡವಾದ ಕಾರ್ಯಕ್ರಮ: ಎರಡು ವರ್ಷಗಳ ತರುವಾಯ ನಡೆದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಮೊದಲ ದಿನ ಸಾರ್ವಜನಿಕರಿಂದ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಉದ್ಘಾಟನಾ ಕಾರ್ಯಕ್ರಮ ಸುಮಾರು 1 ಗಂಟೆ ತಡವಾಗಿ ಆರಂಭವಾದರೂ, ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.ಆರಂಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಖಾಲಿಯಿದ್ದ ಆಸನಗಳು, ಹೊತ್ತು ಸರಿದಂತೆ ಭರ್ತಿಯಾದವು.ಜಿಲ್ಲೆಯ ವಿವಿಧೆಡೆಗಳಿಂದ ಜಲಪಾತೋತ್ಸವದ ಸ್ಥಳಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಅಶೋಕ್ ಗೈರು ಹಾಜರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.