ಸೋಮವಾರ, ಮಾರ್ಚ್ 1, 2021
31 °C
ಬಡಾವಣೆ ಸುತ್ತಮುತ್ತ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ಜನರ ಬದುಕು ಮೂರಾಬಟ್ಟೆ

ವಿನೋಬಾ ನಗರದಲ್ಲಿ ಸಮಸ್ಯೆಗಳ ಸರಮಾಲೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

ವಿನೋಬಾ ನಗರದಲ್ಲಿ ಸಮಸ್ಯೆಗಳ ಸರಮಾಲೆ

ಕೋಲಾರ: ನಗರದ ಹಳೆ ಬಡಾವಣೆಗಳಲ್ಲಿ ಒಂದಾದ ವಿನೋಬಾ ನಗರದಲ್ಲಿ ಮೂಲ ಸೌಕರ್ಯ ಸಮಸ್ಯೆ ಗಂಭೀರವಾಗಿದೆ. ಒಳಚರಂಡಿ, ರಸ್ತೆ, ನೀರು, ನೈರ್ಮಲ್ಯ, ಶೌಚಾಲಯ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ.ಅಂಬೇಡ್ಕರ್‌ ನಗರ ವಾರ್ಡ್‌ (6ನೇ ವಾರ್ಡ್‌) ವ್ಯಾಪ್ತಿಯ ವಿನೋಬಾ ನಗರದಲ್ಲಿ ಸುಮಾರು 200 ಮನೆಗಳಿವೆ ಹಾಗೂ 800ಕ್ಕೂ ಹೆಚ್ಚು ಜನವಸತಿ ಇದೆ. ಬಡಾವಣೆಯು ನಗರಸಭೆ ವ್ಯಾಪ್ತಿಗೆ ಸೇರಿ 15 ವರ್ಷ ಕಳೆದರೂ ಸ್ಥಳೀಯರಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ.ಬಂಗಾರಪೇಟೆ ರಸ್ತೆಗೆ ಹೊಂದಿಕೊಂಡಂತಿರುವ ಬಡಾವಣೆಯ ಸುತ್ತಮುತ್ತ ಪ್ರತಿಷ್ಠಿತ ಶಾಲಾ ಕಾಲೇಜುಗಳು ಹಾಗೂ ಆಸ್ಪತ್ರೆಗಳು ಇವೆ. ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ರಾಜಕೀಯ ಪಕ್ಷಗಳು ಬಡಾವಣೆ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಇಡೀ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ಇಲ್ಲ. ಹೀಗಾಗಿ ಮನೆಗಳ ಶೌಚಾಲಯಗಳನ್ನು ಚರಂಡಿಗೆ ಸಂಪರ್ಕಿಸಲಾಗಿದೆ.ಶೌಚಾಲಯಗಳಿಂದ ಬರುವ ಮಲಮೂತ್ರ ಚರಂಡಿಯಲ್ಲೇ ಸಾಗಬೇಕಿದೆ. ಆದರೆ, ಹಲವು ತಿಂಗಳುಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದ ಚರಂಡಿಗಳು ಕಟ್ಟಿಕೊಂಡು ಹಲವೆಡೆ ಮಲಮೂತ್ರ ರಸ್ತೆ ಮೇಲೆ ಹರಿದು ನಿಂತಿದೆ. ಸುತ್ತಲ ಪ್ರದೇಶದಲ್ಲಿ ದುರ್ನಾತ ಹೆಚ್ಚಿದ್ದು, ಇಡೀ ಬಡಾವಣೆ ಕೊಳೆಗೇರಿಯಂತಾಗಿದೆ.ಚರಂಡಿಯಲ್ಲಿನ ಮಲಮೂತ್ರ ಹಾಗೂ ಕೊಳಚೆ ನೀರಿನಿಂದ ಸೊಳ್ಳೆ, ನೊಣ ಮತ್ತು ಹಂದಿಗಳ ಕಾಟ ಹೆಚ್ಚಿದೆ. ಇದರಿಂದ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಮನೆ ಮಾಡಿದ್ದು, ಈಗಾಗಲೇ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಸ್ಥಳೀಯರು ದುಡಿಮೆಯ ಹಣವನ್ನೆಲ್ಲಾ ಆಸ್ಪತ್ರೆಗೆ ತೆರುವಂತಾಗಿದೆ.ಬಯಲು ಬಹಿರ್ದೆಸೆ: ಶೌಚಾಲಯ ವ್ಯವಸ್ಥೆ ಇಲ್ಲದ ಮನೆಗಳ ನಿವಾಸಿಗಳು ಸಮೀಪದ ರೈಲು ಹಳಿ ಬಳಿಯ ತೋಪುಗಳಲ್ಲಿ ಬಹಿರ್ದೆಸೆಗೆ ಹೋಗುವಂತಾಗಿದೆ. ಮಹಿಳೆಯರು ಬಯಲಿನಲ್ಲೇ ಬಹಿರ್ದೆಸೆಗೆ ಹೋಗಬೇಕಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ನಗರಸಭೆಯು ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ.ಮತ್ತೊಂದೆಡೆ ಪೌರ ಕಾರ್ಮಿಕರು ಪ್ರತಿನಿತ್ಯ ಮನೆಗಳ ಬಳಿ ಬಂದು ತ್ಯಾಜ್ಯ ಸಂಗ್ರಹಿಸುತ್ತಿಲ್ಲ ಮತ್ತು ಬಡಾವಣೆಯಲ್ಲಿ ಕಸ ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿಲ್ಲ. ಇದರಿಂದಾಗಿ ಸ್ಥಳೀಯರು ರಸ್ತೆ ಪಕ್ಕದ ರೈಲು ಹಳಿಯ ಬಳಿ ಕಸ ಸುರಿಯುತ್ತಿದ್ದಾರೆ.ಜಾಣ ಕುರುಡು: ಬಡಾವಣೆಯ ಬಹುಪಾಲು ರಸ್ತೆಗಳಲ್ಲಿ ಬೀದಿದೀಪಗಳಿಲ್ಲ. ಸೂಕ್ತ ನಿರ್ವಹಣೆ ಇಲ್ಲದೆ ಬೀದಿ ದೀಪಗಳು ಕೆಟ್ಟು ಹೋಗಿವೆ. ಇದರಿಂದ ಸಾರ್ವಜನಿಕರು ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ವಿದ್ಯುತ್‌ ಕಂಬಗಳು ಬಾಗಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿವೆ.ಈ ಬಗ್ಗೆ ಸ್ಥಳೀಯರು ಬೆಸ್ಕಾಂಗೆ ದೂರು ಕೊಟ್ಟರೂ ಸಮಸ್ಯೆ ಬಗೆಹರಿದಿಲ್ಲ. ಬಡಾವಣೆ ಕಡೆ ತಿರುಗಿಯೂ ನೋಡದ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.ನೀರಿಗೆ ತತ್ವಾರ: ಬಡಾವಣೆಯಲ್ಲಿ ಹಾಕಿರುವ ಕೊಳಾಯಿಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಬರುತ್ತಿದೆ. ನೀರಿನಲ್ಲಿ ಹುಳುಗಳು ಮತ್ತು ಮಣ್ಣು ಮಿಶ್ರಿತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಇದರಿಂದಾಗಿ ಸ್ಥಳೀಯರು ಒಂದು ಬಿಂದಿಗೆಗೆ ₹ 8ರಂತೆ ಹಣ ಕೊಟ್ಟು ಕುಡಿಯುವ ನೀರು ಖರೀದಿಸುತ್ತಿದ್ದಾರೆ.ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಗಂಭೀರವಾಗುವುದರಿಂದ ಖಾಸಗಿ ಟ್ಯಾಂಕರ್‌ ಮಾಲೀಕರಿಂದ  ನೀರು ಖರೀದಿಸುವುದು ಸಾಮಾನ್ಯವಾಗಿದೆ.ಸಮಸ್ಯೆಗೆ ಸ್ಪಂದಿಸುತ್ತಿಲ್ಲ

ಮನೆ ಮುಂದಿನ ಚರಂಡಿಯಲ್ಲಿ ಕೊಳಚೆ ನೀರು ಕಟ್ಟಿಕೊಂಡು ಸಾಕಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ನಗರಸಭೆ ಸ್ಥಳೀಯ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ದೂರು ಕೊಟ್ಟಿದ್ದೇವೆ. ಆದರೆ, ಸದಸ್ಯರು ಹಾಗೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

–ಕವಿತಾ, ವಿನೋಭ ನಗರ ನಿವಾಸಿಯುಜಿಡಿ ಸರ್ವೆ

ಬಡಾವಣೆಗೆ ಯುಜಿಡಿ ವ್ಯವಸ್ಥೆ ಕಲ್ಪಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಅಧಿಕಾರಿಗಳು ಯುಜಿಡಿ ಕಾಮಗಾರಿಗೆ ಬಡಾವಣೆಯಲ್ಲಿ ಈಗಾಗಲೇ ಸರ್ವೆ ಮಾಡಿದ್ದಾರೆ. ಸದ್ಯದಲ್ಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುತ್ತದೆ.

–ಎ.ರಮೇಶ್‌, ಅಂಬೇಡ್ಕರ್‌ ನಗರ ವಾರ್ಡ್‌ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.