‘ಗಡ್ಡದಲ್ಲಿ ಬೆಳ್ಳಿಗೂದಲು ಇಣುಕತೊಡಗಿದಾಗ ನಿವೃತ್ತಿಯ ಸಮಯ ಬಂದಿದೆ ಎಂದರ್ಥ’ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಸ್ಯದ ಧಾಟಿಯಲ್ಲಿ ಹೇಳಿದ್ದರು. ಆದರೆ, ಕೆಲವು ದಿಗ್ಗಜ ಕ್ರೀಡಾಪಟುಗಳಿಗೆ ಈ ಮಾತು ಅನ್ವಯಿಸುವುದಿಲ್ಲ. ಗಡ್ಡದಲ್ಲಿ ನರೆಗೂದಲು ಹೆಚ್ಚಾದಷ್ಟೂ ಅವರ ಆಟದ ಸೊಬಗೂ ಹೊಳೆಯುತ್ತ ಹೋಗುತ್ತದೆ. ಹಳತಾದಂತೆ ಮೌಲ್ಯ ಮತ್ತು ರುಚಿ ಹೆಚ್ಚಾಗುವ ದ್ರಾಕ್ಷಾರಸದಂತೆಯೇ ಅವರ ವೃತ್ತಿಜೀವನವೂ ಕಳೆಗಟ್ಟುತ್ತದೆ. ಟೆನಿಸ್ ತಾರೆ ರೋಹನ್ ಬೋಪಣ್ಣ ಕೂಡ ಅಂತಹ ಆಟಗಾರರಲ್ಲಿ ಪ್ರಮುಖರು.

ಹಾಕಿ ಕ್ರೀಡೆಯು ಕೌಟುಂಬಿಕ ಸಂಸ್ಕೃತಿಯಾಗಿರುವ ಕೊಡಗು ಜಿಲ್ಲೆಯಿಂದ ಟೆನಿಸ್ ಕ್ರೀಡೆಗೆ ಅವರು ಕಾಲಿಟ್ಟಿದ್ದೇ ಒಂದು ರೋಚಕಗಾಥೆ. ಸುಮಾರು 23 ವರ್ಷಗಳ ಕಾಲ ತಮ್ಮ ಗಟ್ಟಿ ಮನೋಬಲ ಮತ್ತು ಅವಿರತ ಪರಿಶ್ರಮದ ಮೂಲಕ ಹೊಸ ಮಾದರಿಯನ್ನು ತೋರಿಸಿಕೊಟ್ಟ ಆಟಗಾರ ರೋಹನ್, ಇತ್ತೀಚೆಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಅದರೊಂದಿಗೆ ಭಾರತದ ಟೆನಿಸ್ನಲ್ಲಿ ಒಂದು ಯುಗ ಕೊನೆಗೊಂಡಂತಾಗಿದೆ. ಹೊಸದೊಂದು ಅಧ್ಯಾಯ ಬರೆಯುವ ಪ್ರತಿಭಾನ್ವಿತ ರಿಗಾಗಿ ಟೆನಿಸ್ ಅಂಕಣ ಎದುರು ನೋಡುತ್ತಿದೆ. ಇಂದಲ್ಲಾ ನಾಳೆ ಹೊಸ ತಾರೆಗಳು ಮಿಂಚಬಹುದು. ರೋಹನ್ ಅವರಿಗಿಂತಲೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ದಾಖಲೆಯನ್ನೂ ಮಾಡಬಹುದು. ಆದರೆ, ಪದೇ ಪದೇ ಎದುರಾದ ಸೋಲುಗಳನ್ನು ಸ್ವೀಕರಿಸಿ ಪುಟಿದೆದ್ದು ನಿಲ್ಲುವ ಅವರ ಗುಣವನ್ನು ಸರಿಗಟ್ಟುವ ಛಲದಂಕಮಲ್ಲರು ಬರುವರೇ?

‘ಯಾವುದೇ ಆಟಗಾರನಿಗೂ ಇರಬೇಕಾದ ಮೂಲಗುಣವೇ ಮಾನಸಿಕ ದೃಢತೆ. ನಂತರ ಉಳಿದದ್ದು ಸುಗಮ’ ಎಂದು ರೋಹನ್ ಒಂದು ಪಾಡ್ಕಾಸ್ಟ್ನಲ್ಲಿ ಹೇಳಿದ್ದರು.

ಅಪಾರ ಪರಿಶ್ರಮದ ನಂತರವೂ ನಿರೀಕ್ಷಿತ ಯಶಸ್ಸು ದೊರೆಯದೇ ಹೋದಾಗ ಹತಾಶರಾಗಿ ಕೈಕೊಡವಿ ಎದ್ದು ಹೋಗುವವರೇ ಹೆಚ್ಚು. ಆದರೆ, ರೋಹನ್ ಅವರ ವೃತ್ತಿಜೀವನದ ಪುಟಗಳನ್ನು ತೆಗೆದುನೋಡಿದರೆ ಅಚ್ಚರಿ ಮೂಡುವುದು ಸಹಜ. 2003ರಲ್ಲಿ ಮೊದಲ ಬಾರಿಗೆ ವೃತ್ತಿಪರ ಟೆನಿಸ್ಗೆ ಕಾಲಿಟ್ಟ ಅವರಿಗೆ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಒಲಿದಿದ್ದು 14 ವರ್ಷಗಳ ನಂತರ. ಫ್ರೆಂಚ್ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ನಲ್ಲಿ ಕೆನಡಾದ ಗ್ಯಾಬ್ರಿಯೆಲಾ ಡೆಬ್ರೊವಸ್ಕಿ ಅವರೊಂದಿಗೆ ಗೆದ್ದಿದ್ದರು. 2007ರಿಂದಲೇ ಗ್ರ್ಯಾನ್ಸ್ಲಾಮ್ ಟೂರ್ನಿಗಳಲ್ಲಿ ಅವರು ಆಡಿದ್ದರು. ಅದರಲ್ಲಿ ಕೆಲವು ಬಾರಿ ಸೆಮಿಫೈನಲ್ ಮತ್ತು ಫೈನಲ್ವರೆಗೂ ಅರ್ಹತೆ ಗಳಿಸಿದ್ದರು. ಡಬಲ್ಸ್ ಮತ್ತು ಮಿಶ್ರ ಡಬಲ್ಸ್ನಲ್ಲಿ ಬೇರೆ ಬೇರೆ ದೇಶಗಳ ಜೊತೆಗಾರರೊಂದಿಗೆ ಹೊಂದಾಣಿಕೆ ಸಾಧಿಸುತ್ತ ತಮ್ಮ ಲಯವನ್ನೂ ಉಳಿಸಿಕೊಂಡು ‘ಮರಳಿ ಮರಳಿ ಯತ್ನವ’ ಮಾಡುತ್ತ ಸಾಗಿದವರು. ಹುಲ್ಲಿನಂಕಣ, ಮಣ್ಣಿನಂಕಣ ಮತ್ತು ಹಾರ್ಡ್ ಕೋರ್ಟ್ಗಳಲ್ಲಿ ಆಡುವ ಕೌಶಲಗಳನ್ನು ಕಲಿಯುತ್ತಲೇ ಬೆಳೆದರು.

ಅವರಿಗೆ ಎರಡನೇ ಗ್ರ್ಯಾನ್ಸ್ಲಾಮ್ ಒಲಿದಿದ್ದು ಹೋದ ವರ್ಷದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ. ಪುರುಷರ ಡಬಲ್ಸ್ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಪ್ರಶಸ್ತಿ ಜಯಿಸಿದ್ದರು. ಅಲ್ಲದೆ, ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಆಗ ಅವರಿಗೆ 43 ವರ್ಷ ವಯಸ್ಸಾಗಿತ್ತು. ಗ್ರ್ಯಾನ್ಸ್ಲಾಮ್ ಟೆನಿಸ್ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ವಯಸ್ಸಿನ ಆಟಗಾರನೆಂಬ ಗೌರವಕ್ಕೂ ಅವರು ಪಾತ್ರ ರಾದರು. ರಾಡ್ ಲೆವರ್ ಟೆನಿಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಟಲಿಯ ಸಿಮೊನ್ ಬೊಲೆಲಿ ಹಾಗೂ ಆ್ಯಂಡ್ರಿಯಾ ವಾವಸೋರಿ ಜೋಡಿಯು ಕಠಿಣ ಪೈಪೋಟಿಯೊಡ್ಡಿತ್ತು. ರೋಹನ್ ಮತ್ತು ಮ್ಯಾಥ್ಯೂ ಜೋಡಿಯು ಅದನ್ನು ಮೀರಿ ನಿಂತಿತ್ತು.

ಇಷ್ಟು ವರ್ಷ ಆಡಿ ಕೇವಲ ಎರಡು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಸಾಕೇ ಎನ್ನುವ ಪ್ರಶ್ನೆ ಮೂಡಬಹುದು. ಅದರಾಚೆ ನೋಡುವುದಾದರೆ, ನಿರಂತರ ಸಾಧನೆಯ ಹಾದಿಯಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳುವ ಮನೋಭಾವವೇ ಶ್ರೇಷ್ಠವೆನಿಸುತ್ತದೆ. ಬಹಳಷ್ಟು ಶ್ರೇಷ್ಠ ಅಥ್ಲೀಟ್ಗಳಲ್ಲಿ ಕಾಣುವ ಗುಣವೇ ಇದು. ಕ್ರಿಕೆಟಿಗ ಜಸ್ಪ್ರೀತ್ ಬೂಮ್ರಾ ಅವರನ್ನೇ ನೋಡಿ. ಟೆಸ್ಟ್ ಕ್ರಿಕೆಟ್ನಲ್ಲಿ ಅವರು ಇದುವರೆಗೆ ಸುಮಾರು 10 ಸಾವಿರ ಎಸೆತಗಳನ್ನು ಹಾಕಿದ್ದಾರೆ. ಪಡೆದಿರುವುದು 226 ವಿಕೆಟ್ ಮಾತ್ರ. ಹಾಗೆಂದು ಉಳಿದ ಎಸೆತಗಳು ವ್ಯರ್ಥ ಎಂದು ಹೇಳಲಾಗದು. ಸಚಿನ್ ತೆಂಡೂಲ್ಕರ್ ಆಡಿದ್ದು 200 ಟೆಸ್ಟ್ ಪಂದ್ಯಗಳನ್ನು ಮಾತ್ರ. ಅದರಲ್ಲಿ ಅವರು ಗಳಿಸಿರುವುದು 51 ಶತಕಗಳನ್ನಷ್ಟೇ. ಹಾಗೆಂದು ಅವರ ಉಳಿದ ಇನಿಂಗ್ಸ್ಗಳು ಮಹತ್ವದ್ದಲ್ಲ ಎಂದು ಹೇಳಲಾಗದು. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಒಬ್ಬ ವ್ಯಕ್ತಿಯ ಮಾನದಂಡ ಬರೀ ಅಂಕಿ–ಅಂಶ ಅಲ್ಲ. ಸೋತಾಗ ಪುಟಿದೆದ್ದು ನಿಲ್ಲುವ ಗುಣದಿಂದ ಮತ್ತು ತಾಳ್ಮೆಯ ಸ್ವಭಾವದಿಂದ ಶ್ರೇಷ್ಠತೆಯ ಹಾದಿಯತ್ತ ಸಾಗುತ್ತಾರೆ. ಅದಕ್ಕಾಗಿ ಜನಮಾನಸದಲ್ಲಿ ಸ್ಥಾನ ಗಳಿಸುತ್ತಾರೆ. ‘ಸ್ವಭಾವ’ವೇ ವ್ಯಕ್ತಿತ್ತ ರೂಪಿಸುತ್ತದೆ.

ಎರಡು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಬಿಟ್ಟರೆ ರೋಹನ್ ಅವರ ಖಾತೆಯಲ್ಲಿ 20ಕ್ಕೂ ಹೆಚ್ಚು ಎಟಿಪಿ ಪ್ರಶಸ್ತಿಗಳಿವೆ. ಇದೆಲ್ಲದರೊಂದಿಗೆ ಒಲಿಂಪಿಕ್ ಕೂಟಗಳು, ಡೇವಿಸ್ ಕಪ್ಗಳಲ್ಲಿ ಆಡಿದ ಅಗಾಧ ಅನುಭವ ಅವರಿಗೆ ಇದೆ.

ಅವರಿಗೆ ತಾಳ್ಮೆ ಮತ್ತು ಛಲದ ಗುಣ ಬಂದಿದ್ದು ಬಾಲ್ಯದಿಂದಲೇ. ಏಕೆಂದರೆ ಅವರು ಜನಿಸಿದ ಊರು, ಪರಿಸರದಲ್ಲಿ ಟೆನಿಸ್ ಆಟ ಅಷ್ಟೇನೂ ಪರಿಚಿತವಾಗಿರಲಿಲ್ಲ. ಹಾಕಿ ಆಟಗಾರರಾಗುವ ಅಥವಾ ಸೇನೆಗೆ ಸೇರುವ ಗುರಿಯಿಟ್ಟುಕೊಂಡ ಹುಡುಗರ ನಡುವೆ ಬೆಳೆದವರು ರೋಹನ್. ಮೈಸೂರು, ಬೆಂಗಳೂರು ಮತ್ತು ಪುಣೆಯಲ್ಲಿ ತರಬೇತಿ ಪಡೆಯುವ ಮೂಲಕ ಬೆಳೆದರು. ತಮ್ಮ ಕುಟುಂಬದಿಂದ ಲಭಿಸಿದ ಪ್ರೋತ್ಸಾಹವನ್ನು ಸಮರ್ಥವಾಗಿ ಬಳಸಿಕೊಂಡರು. ಆರ್ಥಿಕವಾಗಿ ಎಲ್ಲ ಅನುಕೂಲಗಳಿದ್ದಾಗಲೂ ಬೇರೆ ಬೇರೆ ಆಕರ್ಷಣೆಗಳಿಗೆ ಬಲಿಯಾಗಿ ಗುರಿಯಿಂದ ವಿಮುಖರಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಚಾಂಚಲ್ಯವನ್ನು ಮೀರಿ ಬೆಳೆಯುವುದು ಸುಲಭ ಸಾಧ್ಯವಲ್ಲ. ಆ ಪರೀಕ್ಷೆಯಲ್ಲಿ ರೋಹನ್ ಗೆದ್ದರು. ಟೆನಿಸ್ ಆಟದ ಪ್ರೇಮಿಯಾಗಿದ್ದ ತಂದೆ ಎಂ.ಜಿ. ಬೋಪಣ್ಣ ಅವರೇ ರೋಹನ್ ಅವರಿಗೆ ಮೊದಲ ಗುರು. ಜಿಮ್ನಾಷಿಯಂಗಳೇ ಇಲ್ಲದ ಊರಲ್ಲಿ ತಂದೆ ಹೇಳಿಕೊಟ್ಟ ಮೂಲಪಾಠಗಳು ರೋಹನ್ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸಿದವು.

ಜೂನಿಯರ್ ಹಂತದಲ್ಲಿ ರೋಹನ್ ತಮ್ಮ ಚುರುಕಿನ ಆಟದ ಮೂಲಕ ಬಹುಬೇಗನೆ ಗಮನ ಸೆಳೆದರು. ವೇಗದ ಸರ್ವ್ಗಳು, ಬಲಶಾಲಿ ರಿಟರ್ನ್ಗಳನ್ನು ಆಡುವ ಕಲೆಯನ್ನು ಕರಗತ ಮಾಡಿಕೊಂಡರು. ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಸೈ ಎನಿಸಿಕೊಂಡರು. 17ನೇ ವಯಸ್ಸಿನಲ್ಲಿಯೇ ಐಟಿಎಫ್ ಪ್ರಶಸ್ತಿಗೆ ಮುತ್ತಿಕ್ಕಿದರು.

2003ರಲ್ಲಿ ಅವರು ವೃತ್ತಿಪರ ಟೆನಿಸ್ಗೆ ಕಾಲಿಟ್ಟರು. ಅದೇ ವರ್ಷ ಅವರು ಹೈದರಾಬಾದ್ನಲ್ಲಿ ನಡೆದ ಆಫ್ರೊ ಏಷ್ಯನ್ ಗೇಮ್ಸ್ನ ಪುರುಷರ ಡಬಲ್ಸ್ನಲ್ಲಿ ಮಹೇಶ್ ಭೂಪತಿ ಅವರೊಂದಿಗೆ ಚಿನ್ನದ ಪದಕ ಗೆದ್ದರು. ತಂಡ ವಿಭಾಗದಲ್ಲಿ ಪ್ರಕಾಶ್ ಅಮೃತರಾಜ್, ವಿಜಯ್ ಕಣ್ಣನ್ ಮತ್ತು ವಿಶಾಲ್ ಉಪ್ಪಳ ಅವರೊಂದಿಗೆ ರೋಹನ್ ಚಿನ್ನ ಗಳಿಸಿದರು. ಈ ಸಾಧನೆಯು ಅವರಲ್ಲಿದ್ದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. 90ರ ದಶಕದಲ್ಲಿ ಸ್ಮಾರ್ಟ್ಫೋನ್ ಕಲ್ಪನೆಯೂ ಇರದ ಕಾಲದಲ್ಲಿ ರೋಹನ್ ಆಟ ಆರಂಭವಾಯಿತು. ವೃತ್ತಿಜೀವನದ ಅಂತ್ಯದ ವರ್ಷಗಳಲ್ಲಿ ‘ಕೃತಕ ಬುದ್ಧಿಮತ್ತೆ’ ಆಧಾರಿತ ತಂತ್ರಜ್ಞಾನದ ತರಬೇತಿ ಪದ್ಧತಿಗೂ ಒಗ್ಗಿಕೊಂಡವರು ಅವರು. ಕಾಲಕ್ಕೆ ತಕ್ಕಂತೆ ಬದಲಾಗುತ್ತ ಬೆಳೆದರು. ಸಿಂಗಲ್ಸ್ನಲ್ಲಿ ಅಷ್ಟೇನೂ ಫಲ ಸಿಗದ ಕಾರಣ ಡಬಲ್ಸ್ನತ್ತ ಹೆಜ್ಜೆ ಇಟ್ಟರು. ಏಷ್ಯನ್ ಗೇಮ್ಸ್ನಲ್ಲಿ ಎರಡು ಚಿನ್ನ, ಆಫ್ರೋ ಏಷ್ಯನ್ ಕೂಟಗಳಲ್ಲಿ ಎರಡು ಚಿನ್ನ ಗೆದ್ದರು.

ಕ್ರಿಕೆಟ್ನಲ್ಲಿ ಖ್ಯಾತನಾಮರ ನಿವೃತ್ತಿಯಾದ ಕೆಲ ಕಾಲದಲ್ಲಿಯೇ ಮತ್ತಷ್ಟು ತಾರೆಗಳು ಪ್ರವರ್ಧಮಾನಕ್ಕೆ ಬರುತ್ತಾರೆ. ಉಳಿದ ಕ್ರೀಡೆಗಳಲ್ಲಿ ಅಂತಹ ಸ್ಥಿತಿಯಿಲ್ಲ. ಈಗ ಟೆನಿಸ್ ಅಂಗಣ ಕೂಡ ಖಾಲಿ ಎನಿಸುತ್ತಿದೆ. ಸುಮಿತ್ ನಗಾಲ್, ರಾಮಕುಮಾರ್ ರಾಮನಾಥನ್ ಅಂತಹ ಬೆರಳೆಣಿಕೆಯಷ್ಟು ಆಟಗಾರರು ಮಾತ್ರ ಕಾಣ ಸಿಗುತ್ತಿದ್ದಾರೆ. ಮಹಿಳೆಯರ ವಿಭಾಗದಲ್ಲಿಯೂ ಅಷ್ಟೇ. ಸಾನಿಯಾ ಮಿರ್ಜಾ ನಂತರ ಹೊಸ ತಾರೆಯ ಉದಯದ ನಿರೀಕ್ಷೆಯಲ್ಲಿ ಟೆನಿಸ್ ಅಂಗಳ ಇದೆ. ಅಂಕಿತಾ ರೈನಾ, ಪ್ರಾರ್ಥನಾ ಠೊಂಬರೆ, ಸಹಜಾ ಯಮಲಪಲ್ಲಿ, ಶ್ರೀವಲ್ಲಿ ಭಮಿಡಿಪಾಟಿ ಹಾಗೂ ರಿಯಾ ಭಾಟಿಯಾ ಅವರು ಭರವಸೆ ಮೂಡಿಸಿರುವ ಆಟಗಾರ್ತಿಯರಾಗಿದ್ದಾರೆ. ಆದರೆ, ಸಾನಿಯಾ ಅವರ ಮಟ್ಟಕ್ಕೇರಲು ಇನ್ನೂ ಅವರಿಗೆ ಬಹಳಷ್ಟು ಸಮಯ ಬೇಕಾಗಬಹುದು.

ಗ್ರಾಮಾಂತರ ವಿಭಾಗಗಳಲ್ಲಿ ಐಟಿಎಫ್, ಎಟಿಪಿ, ಡಬ್ಲ್ಯುಟಿಪಿಯಂತಹ ಟೂರ್ನಿಗಳು ನಡೆಯುತ್ತಿವೆ. ಅದರಿಂದಾಗಿ ಮಕ್ಕಳಲ್ಲಿ ಟೆನಿಸ್ ಮೇಲಿನ ಪ್ರೀತಿ ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಆದರೆ, ಇವತ್ತಿಗೂ ಮಧ್ಯಮ ಮತ್ತು ಕೆಳಮಧ್ಯಮವರ್ಗದ ಮಕ್ಕಳಿಗೆ ಈ ಆಟವು ಕೈಗೆಟುಕುವುದು ಕಷ್ಟ. ಕ್ರಿಕೆಟ್, ಬ್ಯಾಡ್ಮಿಂಟನ್, ಫುಟ್ಬಾಲ್ ಕ್ರೀಡೆಗಳಿಗೆ ಕೆಳಮಧ್ಯಮ ವರ್ಗದವರು ಮತ್ತು ಗ್ರಾಮಾಂತರ ಪ್ರತಿಭೆಗಳು ಬಂದು ಬೆಳಗುತ್ತಿದ್ದಾರೆ. ಅಂತಹ ಒಂದು ವ್ಯವಸ್ಥೆ ಟೆನಿಸ್ನಲ್ಲಿಯೂ ಆಗಬೇಕು. ಆ ನಿಟ್ಟಿನಲ್ಲಿ ರೋಹನ್ ಅವರಂತಹ ತಾರೆಯರು ಯೋಜನೆಗಳನ್ನು ರೂಪಿಸಬೇಕು. ‘ಲವ್ ಗೇಮ್’ ಖ್ಯಾತಿಯ ಟೆನಿಸ್ಪ್ರೀತಿ ಸಮಾಜದ ತಳಮಟ್ಟದಿಂದ ಚಿಗುರುವಂತಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.