ಚಿತ್ತಾಪುರ: ರಾಜ್ಯದ ಗಮನ ಸೆಳೆದಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಗಣವೇಷಧಾರಿಗಳ ಪಥಸಂಚಲನವು ಪೊಲೀಸ್ ಸರ್ಪಗಾವಲಿನ ನಡುವೆ ಭಾನುವಾರ ಶಾಂತಿಯುತವಾಗಿ ಸಂಪನ್ನಗೊಂಡಿತು.

ಆರ್ಎಸ್ಎಸ್ ಶತಾಬ್ದಿ ಹಾಗೂ ವಿಜಯದಶಮಿ ಅಂಗವಾಗಿ ನಡೆದ ‘ಪಥಸಂಚಲನ’ ಸಾಗುವ 1.3 ಕಿ.ಮೀ ಮಾರ್ಗವು ‘ಕೇಸರಿ’ಮಯವಾಗಿತ್ತು. ಭಗವಾ ಧ್ವಜಗಳು, ಬಂಟಿಂಗ್ಸ್ಗಳು, ಬ್ಯಾನರ್ಗಳು ರಾರಾಜಿಸಿದವು. ಅಲ್ಲಲ್ಲಿ ರಂಗೋಲಿಯನ್ನೂ ಬಿಡಿಸಲಾಗಿತ್ತು.

ಮಧ್ಯಾಹ್ನ 3 ಗಂಟೆ ಹೊತ್ತಿಗೆ ಗಣವೇಷಧಾರಿಗಳು ಪಟ್ಟಣದ ಬಜಾಜ್ ಕಲ್ಯಾಣದ ಮಂಟಪದ ಆವರಣದಲ್ಲಿ ‘ಸಂಪದ’ಗೊಂಡರು. ಗೇಟ್ನಲ್ಲಿದ್ದ ಪೊಲೀಸರು ನಿಗದಿತ ಪಟ್ಟಿಯಲ್ಲಿ ಹೆಸರಿದ್ದವರನ್ನು ಮಾತ್ರವೇ ಪರಿಶೀಲಿಸಿ ಒಳಗೆ ಬಿಟ್ಟರು.

ಬಿಸಿಲು ತಣಿದು ಸೂರ್ಯ ಪಡುವಣದತ್ತ ಓಟಕ್ಕೆ ಅನುವಾಗಿದ್ದ ಸಮಯದಲ್ಲಿ ಪಥಸಂಚಲನ ಆರಂಭವಾಯಿತು. ಆಗ ನೆರೆದಿದ್ದ ಜನರಿಂದ ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’, ‘ಜೈ ಶ್ರೀರಾಮ’, ‘ಜೈ ಭವಾನಿ, ಜೈ ಶಿವಾಜಿ’ ಘೋಷಣೆಗಳನ್ನು ಮೊಳಗಿದವು. ಮಧ್ಯಾಹ್ನ 3.45ಕ್ಕೆ ಆರಂಭವಾದ ಪಥಸಂಚಲನ 45 ನಿಮಿಷಗಳಲ್ಲಿ ಮುಗಿಯಿತು.

ಹೈಕೋರ್ಟ್ ‘ಅಂಗಳ’ದಲ್ಲಿ ಚಿತ್ತಾಪುರ ತಾಲ್ಲೂಕು ಆಡಳಿತ ನೀಡಿದ್ದ ಷರತ್ತುಗಳಿಗೆ ಬದ್ಧವಾಗಿ 50 ಮಂದಿ ‘ಘೋಷ್’ನವರು ಹಾಗೂ 300 ಗಣವೇಷಧಾರಿಗಳು ಹಲವು ತಂಡಗಳಾಗಿ ಪಥಸಂಚಲನದಲ್ಲಿ ಹೆಜ್ಜೆಹಾಕಿದರು.

ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಮಹಿಳೆಯರೂ ಸೇರಿದಂತೆ ಸಾರ್ವಜನಿಕರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದು, ಸ್ವಾಗತಿಸಿದರು.

ಗಣವೇಷಧಾರಿಗಳು ಬಜಾಜ್ ಕಲ್ಯಾಣ ಮಂಟಪದಿಂದ ಹೊರಟು ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವ ಆಸ್ಪತ್ರೆ, ಹಳೇ ಗಂಜ್ ವೃತ್ತ, ಕೆನರಾ ಬ್ಯಾಂಕ್ ಎದುರಿನಿಂದ ತಾಲ್ಲೂಕು ಪಂಚಾಯಿತಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಮರಳಿ ಬಜಾಜ್ ಕಲ್ಯಾಣ ಮಂಟಪ ತಲುಪಿದರು. 1200ರಷ್ಟು ಪೊಲೀಸರು, ಡ್ರೋನ್ ಹಾಗೂ 56 ಸಿಸಿಟಿವಿ ಕ್ಯಾಮೆರಾಗಳ ನಿಗಾದಲ್ಲಿ ‘ಪಥಸಂಚಲನ’ ಸುಮಾರು 45 ನಿಮಿಷಗಳಲ್ಲಿ ಮುಗಿಯಿತು. ಹಲವು ಬಾಲಕಿಯರು ಭಾರತ ಮಾತೆಯ ವೇಷದಲ್ಲಿ ಕಂಗೊಳಿಸಿದರು. ಕೆಲ ಬಾಲಕರಿಗೂ ಗಣವೇಷ ತೊಡಿಸಲಾಗಿತ್ತು.

ಅ.19ರಂದು ನಡೆಯಬೇಕಿದ್ದ ಆರ್ಎಸ್ಎಸ್ ಪಥಸಂಚಲನಕ್ಕೆ ಚಿತ್ತಾಪುರ ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಅಶೋಕ ಪಾಟೀಲ ಹೈಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಈ ಪ್ರಕರಣವು ಸಂಘಟನೆಗಳ ‘ಶಕ್ತಿ’ ಪ್ರದರ್ಶನಕ್ಕೂ ಕಾರಣವಾಗಿತ್ತು. ಎರಡು ಸುತ್ತಿನ ಶಾಂತಿಸಭೆ, ಒಂದು ತಿಂಗಳ ಹಗ್ಗ ಜಗ್ಗಾಟದ ಬಳಿಕ ಹೈಕೋರ್ಟ್ ಸಮ್ಮುಖದಲ್ಲಿ ಪಥಸಂಚಲನಕ್ಕೆ ಆರ್ಎಸ್ಎಸ್ಗೆ ಷರತ್ತು ಬದ್ಧ ಅನುಮತಿ ದೊರೆತಿತ್ತು.

‘ಸಂಚಲನ ಸೃಷ್ಟಿಸಿದ ಪಥಸಂಚಲನ’

‘ಚಿತ್ತಾಪುರದಲ್ಲಿ ನ್ಯಾಯವಾಗಿ ಅ.19ರಂದು ಗಣವೇಷಧಾರಿಗಳ ಪಥಸಂಚಲನ ನಡೆಯಬೇಕಿತ್ತು. ಸುಮಾರು ಒಂದು ತಿಂಗಳ ವಿಳಂಬವಾಗಿ ನ.16ಕ್ಕೆ ನಡೆದಿದೆ. ಕಾರಣಗಳ ಹಿನ್ನೆಲೆಗೆ ನಾನು ಹೋಗಲ್ಲ. ಆದರೆ, ಭಾನುವಾರ ನಡೆದ ಪಥಸಂಚಲನವು ‘ಸಂಚಲನ’ ಮೂಡಿಸಿದೆ. ಮಾರ್ಗದಲ್ಲಿ ಸಿಕ್ಕ ಸ್ವಾಗತ, ಪುಷ್ಪವೃಷ್ಟಿ, ತಾಯಿಂದಿರು ಸಮ್ಮುಖ, ಪೊಲೀಸರ ಬಿಗಿ ಭದತ್ರೆ ಎಲ್ಲವೂ ಪಥಸಂಚಲನದ ಸಂಭ್ರಮ ಹೆಚ್ಚಿಸಿದೆ’ ಎಂದು ಆರ್ಎಸ್ಎಸ್ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಹೇಳಿದರು.

ಪಥಸಂಚಲನದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಘ 100 ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಅನೇಕರು ಪ್ರಶ್ನಿಸುತ್ತಿದ್ದಾರೆ. ಸಂಘವು 100 ವರ್ಷ ಒಂದು ವಿಚಾರಕ್ಕಾಗಿ, ಅಖಂಡವಾಗಿ, ಅವಿಚ್ಛಿನ್ನವಾಗಿ ದುಡಿಯುತ್ತಿದೆ. ದೇಶಕ್ಕೋಸ್ಕರ ಕೆಲಸ ಮಾಡುವ ಲಕ್ಷಾಂತರ ಜನರ ಸಂಘಟನೆಯನ್ನು ಕಟ್ಟಿದೆ. 100 ವರ್ಷಗಳ ಹಿಂದೆ ಅಸಂಘಟಿತರಾಗಿದ್ದ ಹಿಂದೂಗಳನ್ನು ಆರ್ಎಸ್ಎಸ್ ಸಂಘಟಿಸಿದೆ’ ಎಂದರು.

ಕೆರಳಿಸುವ ಪೋಸ್ಟ್: ವ್ಯಕ್ತಿ ವಶಕ್ಕೆ

ಚಿತ್ತಾಪುರ (ಕಲಬುರಗಿ ಜಿಲ್ಲೆ): ಪಥಸಂಚಲನ ಮುಗಿದ ಬೆನ್ನಲ್ಲೆ, ‘ಗೆಲುವು ನಿಶ್ಚಿತ ಅಂದ ಮೇಲೆ ತಾಳ್ಮೆ ಸಹ ಅಗತ್ಯ. ಜೈ ಶ್ರೀರಾಮ. ನಿಲ್ಸಿದ್ರಿ ಅಂತ ನಿಲ್ಲುತ್ತೆ ಅನ್ಕೊಂಡ ನೀಲಿ ಬಣ್ಣಕ್ಕೆ ಏನು ಗೊತ್ತು ಕೇಸರಿ ಬಣ್ಣ ಗತ್ತು’ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಯುವಕ ಪ್ರಶಾಂತ ಬಸವರಾಜ ಸಿಂಧೆ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.

ಸಂಘರ್ಷ ಈಗ ಪ್ರಾರಂಭ: ಪ್ರಿಯಾಂಕ್

ಕಲಬುರಗಿ: ‘ಆರ್ಎಸ್ಎಸ್ನೊಂದಿಗೆ ಸಂಘರ್ಷ ಈಗ ಪ್ರಾರಂಭವಾಗಿದೆ. ಅವರು ಆದಾಯ ತೆರಿಗೆಯಿಂದ ಹೇಗೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕೆಲವೇ ದಿನಗಳಲ್ಲಿ ದಾಖಲೆ ಸಮೇತ ತೋರಿಸುತ್ತೇನೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಎಸ್ಎಸ್ ನೋಂದಣಿ ಮಾಡುವ ಅಗತ್ಯವಿಲ್ಲ ಎಂದು ಆರ್ಎಸ್ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಅವರು ಹೇಳುವುದು ಸಂವಿಧಾನವೇ? ಅಥವಾ ಸಂವಿಧಾನದಲ್ಲಿರುವುದು ಸಂವಿಧಾನವೇ? ಸಂಘದ ನೋಂದಣಿ ಮಾಡಿದರೆ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತಾರೆ. ಅವರು ಹೇಳುವ ಗುರುದಕ್ಷಿಣೆ ಕೂಡ ಆಡಿಟ್ ಆಗಬೇಕಾಗುತ್ತದೆ. ದೇವಸ್ಥಾನದಲ್ಲಿ ಭಕ್ತರು ದೇವರ ಹೆಸರಿನಲ್ಲಿ ನೀಡುವ ದೇಣಿಗೆ ಕೂಡ ಆಡಿಟ್, ಮೌಲ್ಯಮಾಪನ ಆಗುತ್ತದೆ. ಆದರೆ, ಆರ್ಎಸ್ಎಸ್ ಆದಾಯ ಮೌಲ್ಯಮಾಪನ ಬೇಡವೇ?’ ಎಂದರು.

ಕೆಕೆಆರ್ಡಿಬಿ ದುಡ್ಡು ಆರ್ಎಸ್ಎಸ್ನವರು ಹೇಗೆ ಲೂಟಿ ಹೊಡೆದಿದ್ದಾರೆ ಎಂಬುದನ್ನು ಸಾಕ್ಷ್ಯ ಸಮೇತ 15–20 ದಿನಗಳಲ್ಲಿ ಕೊಡುತ್ತೇನೆ. ಆಗ ಅವರು ಎಷ್ಟು ದರೋಡೆಕೋರರು ಎಂದು ಗೊತ್ತಾಗಲಿದೆ
ಪ್ರಿಯಾಂಕ್ ಖರ್ಗೆ, ಸಚಿವ
.ಚಿತ್ತಾಪುರ| ಆರ್ಎಸ್ಎಸ್ ಪಥಸಂಚಲನ: ಗಣವೇಷಧಾರಿಗಳಿಗೆ ಜನರಿಂದ ಅದ್ದೂರಿ ಸ್ವಾಗತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.