ಮಂಗಳವಾರ, ಜೂನ್ 15, 2021
24 °C
ಚೆಲುವಿನ ಚಿತ್ತಾರ

ವಿನ್ಯಾಸದ ದುಬಾರಿ ಜಮಾನ

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಸೀರೆ ಮತ್ತು ರವಿಕೆಯ ವಿಚಾರಕ್ಕೆ ಬಂದರೆ ರವಿಕೆಯೆಂಬುದು ಸೀರೆಯ ಬಣ್ಣಕ್ಕೆ ಹೊಂದುವಂತಿರಬೇಕು ಎಂಬಂತಿದ್ದ ಕಾಲವೊಂದಿತ್ತು. ಸೀರೆಯೊಂದಿಗೇ ರವಿಕೆ ಕಣವೂ ಬಂದರೆ ಅದನ್ನು ಟೈಲರ್‌ಗೆ ಅಳತೆಯ ರವಿಕೆಯೊಂದಿಗೆ ಕೊಟ್ಟರೆ ವಾಪಸ್‌ ತಂದಾಗ ಒಮ್ಮೆ ಹಾಕಿಕೊಂಡು ಅಳತೆ ನೋಡಿದರೆ  ಮುಗಿಯಿತು. ಆದರೆ ಈಗ ತಿರುವು ಮುರುವು.

ಸೀರೆಗಿಂತಲೂ ಹೆಚ್ಚಿನ ಮೌಲ್ಯ ರವಿಕೆಗೆ ಬಂದಿದೆ. ಮಹಿಳೆಯರು ರವಿಕೆಯ ಕಣ ಹೊಂದಿಸಿಕೊಳ್ಳಲು ಹಾಗೂ ಅದನ್ನು ವಿಭಿನ್ನ ಮಾದರಿಯಲ್ಲಿ ಹೊಲಿಯುವ ಡಿಸೈನರ್‌ ಟೈಲರ್‌ನ ಆಯ್ಕೆ ಮಾಡಲೂ ಜಾಣ್ಮೆ ತೋರುವಂತಾಗಿದೆ. ಡಿಸೈನರ್‌ ರವಿಕೆಗಳನ್ನು ಹೊಲಿಯುವ ಟೈಲರ್‌ಗಳ ದೊಡ್ಡದೊಂದು ಪಟ್ಟಿ ಅಂತರ್ಜಾಲದಲ್ಲಿ ಸಿಗುತ್ತದೆ.ಸಾಮಾನ್ಯವಾಗಿ ರವಿಕೆಯ ವಿನ್ಯಾಸದಲ್ಲಿ ಬದಲಾಗುತ್ತಿದ್ದುದು ಕೈಯ ಉದ್ದಳತೆ ಮತ್ತು ಬೆನ್ನಿನ ಆಕಾರ.  ಹೆಚ್ಚು ಪ್ರಚಲಿತದಲ್ಲಿರುವ ವಿನ್ಯಾಸದ ಅರಿವಿಲ್ಲದ ಗ್ರಾಹಕಿಯರಿಗೆ ಟೈಲರ್‌ ಸಲಹೆ ನೀಡಿ ಪ್ರಸಕ್ತ ವಿನ್ಯಾಸದಲ್ಲಿ ಹೊಲಿದುಕೊಡುವುದು ರೂಢಿಯಲ್ಲಿತ್ತು. ಆದರೆ ಈಗ ಟೈಲರ್‌ ಕೊಡುವ ಡಿಸೈನ್‌ ಪುಸ್ತಕದಲ್ಲಿ ಕಣ್ಣಾಡಿಸಿ ಮನಸ್ಸಿಗೆ, ದೇಹಾಕಾರಕ್ಕೆ ಒಪ್ಪುವ ವಿನ್ಯಾಸವನ್ನು ಆಯ್ಕೆ ಮಾಡುವುದೇ ಒಂದು ಸವಾಲು. ಅಷ್ಟೊಂದು ವಿನ್ಯಾಸಗಳು ಚಾಲ್ತಿಯಲ್ಲಿವೆ. ರವಿಕೆಯ ಕತ್ತು, ಬೆನ್ನು ಮತ್ತು ತೋಳಿನ ವಿನ್ಯಾಸಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಟ್ಟಾಗಲೂ ಒಂದೊಂದರಲ್ಲೂ ನೂರಾರು ವಿನ್ಯಾಸಗಳಿರುತ್ತವೆ.ಎಲ್ಲರಿಗೂ ಅಚ್ಚುಮೆಚ್ಚು

ವಿನ್ಯಾಸ ಎಂದಮೇಲೆ ಹೊಲಿದ ಶುಲ್ಕವೂ ದುಬಾರಿಯಾಗಲೇಬೇಕಲ್ಲ? 50, 100, 200 ರೂಪಾಯಿಯ ಆಜೂಬಾಜೂ ಇದ್ದ ಶುಲ್ಕ ಈಗ ಅದೇ ರವಿಕೆಗೆ ಒಂದು ಸರಳವಾದ ವಿನ್ಯಾಸ ಕೊಟ್ಟರೂ 500 ರೂಪಾಯಿಗೇರುತ್ತದೆ. ಕೈ, ಭುಜ ಮತ್ತು ಬೆನ್ನಿಗೆ ಸೀರೆಯ ಅಂಚು ಇಟ್ಟೋ, ಕಾಂಟ್ರಾಸ್ಟ್‌ ಬಣ್ಣದ ಅದೇ ಮಾದರಿಯ ಬಟ್ಟೆಯನ್ನಿಟ್ಟೋ ಹೊಲಿದರೆ ಅದು ಡಿಸೈನರ್‌ ಬ್ಲೌಸ್‌ ಆಗಿಬಿಡುತ್ತದೆ. ಶುಲ್ಕವೂ ಸಾವಿರದ ಗಡಿ ದಾಟಿ ದಾಟುತ್ತದೆ.ಮದುವೆಗೆ ಸಂಬಂಧಿಸಿದ ಯಾವುದೇ ಸಮಾರಂಭಕ್ಕಾದರೂ ಮದುಮಗಳಷ್ಟೇ ಅಲ್ಲ, ಅವಳ ಇಡೀ ಮನೆಯವರಿಗೂ, ಮದುಮಗನ ಮನೆಯವರಿಗೂ ಡಿಸೈನರ್‌ ಬ್ಲೌಸ್‌ಗಳೇ ಆಗಬೇಕು. ಡಿಸೈನರ್‌ ರವಿಕೆ ಹೊಲಿಯಲು ಕೊಟ್ಟು ಒಂದರಿಂದ ಒಂದೂವರೆ ತಿಂಗಳ ನಂತರಷ್ಟೇ ನಮ್ಮ ಕೈಸೇರೋದು. ಹೀಗಾಗಿ ಮದುವೆ ಮನೆಯ ಸೀರೆ ಶಾಪಿಂಗ್‌ ಒಂದೆರಡು ತಿಂಗಳ ಮುಂಚೆಯೇ ನಡೆಯುವುದು ಈಗಿನ ಫ್ಯಾಷನ್‌. ಕಾರಣ ರವಿಕೆ!ವಿನ್ಯಾಸಕ್ಕಾಗಿ ಹೊರಗುತ್ತಿಗೆ

‘ಡಿಸೈನರ್‌ ರವಿಕೆ ವಿನ್ಯಾಸ ಮಾಡುವುದು ಮತ್ತು ಹೊಲಿಯುವುದು ಹೊಸದೊಂದು ಕಸುಬುದಾರಿಕೆಗೆ ವೇದಿಕೆಯಾಗಿವೆ. ಸ್ಪೆಷಲಿಸ್ಟ್‌ ಟೈಲರ್‌ಗಳಿಂದ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದ ಬುಟಿಕ್‌ಗಳಲ್ಲಿಯೂ ಡಿಸೈನರ್‌ ಬ್ಲೌಸ್‌ಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ನಮ್ಮ ಬುಟಿಕ್‌ನಲ್ಲಿಯೂ ಈಗ ಮಾರ್ಕಿಂಗ್‌ ಮತ್ತು ಕಟಿಂಗ್‌ಗೆ ಒಬ್ಬರು, ಹೊಲಿಗೆಗೆ ಒಬ್ಬರು, ಹೆಮಿಂಗ್‌ಗೆ ಮತ್ತೊಬ್ಬರು ಕಟ್‌ಪೀಸ್‌ ವರ್ಕ್‌ ಮಾಡುತ್ತಾರೆ.ಕಸೂತಿ ಅಥವಾ ಇನ್ಯಾವುದೇ ರೀತಿಯ ವಿಶೇಷ ವಿನ್ಯಾಸದ ಕೆಲಸವನ್ನು ಔಟ್‌ಸೋರ್ಸಿಂಗ್‌ ಮಾಡುತ್ತೇವೆ. ಹೀಗಾಗಿ ನಮ್ಮಲ್ಲಿ ರವಿಕೆಯ ಶುಲ್ಕ 750ರೂಪಾಯಿಯಿಂದ ಶುರುವಾಗಿ 4ಸಾವಿರದವರೆಗೂ ಇರುತ್ತದೆ’ ಎಂದು ವಿವರಿಸುತ್ತಾರೆ, ಹಂಪಿನಗರದಲ್ಲಿ ಬುಟಿಕ್‌ ನಡೆಸುತ್ತಿರುವ ಡ್ರೆಸ್‌ ಡಿಸೈನರ್‌ ವಿಜಯಶ್ರೀ.ರವಿಕೆಯ ವಿನ್ಯಾಸ ನಮ್ಮ ಅಭಿರುಚಿ, ಟ್ರೆಂಡ್‌ ಬಗೆಗಿನ ಜ್ಞಾನವನ್ನೂ ತೋರಿಸುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ವಿಶಿಷ್ಟ ವಿನ್ಯಾಸದ ರವಿಕೆ ಧರಿಸಿದವಳು ಹತ್ತು ಮಂದಿ ಭಾರೀ ಸೀರೆಯುಟ್ಟ ಮಹಿಳೆಯರಿಗಿಂತ ಹೆಚ್ಚು ಗಮನ ಸೆಳೆಯುತ್ತಾಳೆ ಎನ್ನುವುದೂ ವಾಸ್ತವ.

ಇತಿಹಾಸದ ಪುಟದಲ್ಲಿ

ರವಿಕೆಯ ಇತಿಹಾಸ ಸೀರೆಯಷ್ಟು ಹಳೆಯದಲ್ಲ. ಆದರೆ ಕ್ರಿಸ್ತಪೂರ್ವದಿಂದಲೇ ರವಿಕೆಯ ಪರಿಕಲ್ಪನೆ ಇದ್ದುದನ್ನು ರಾಜವಂಶಸ್ಥರ ಇತಿಹಾಸದಿಂದ ತಿಳಿದುಕೊಳ್ಳಬಹುದು.ಮೌರ್ಯರ ಆಡಳಿತ ಕಾಲದಲ್ಲಿ ಸೀರೆ ಮತ್ತು ರವಿಕೆಯ ಉಲ್ಲೇಖವಿದೆ. ಆಗ ರವಿಕೆಯನ್ನು ಉತ್ತರೀಯದ ರೂಪದಲ್ಲಿ ಧರಿಸಲಾಗುತ್ತಿತ್ತು. ಕಾಯಬಂಧವಾಗಿಯೂ ರವಿಕೆ ಬಳಕೆಯಾಗುತ್ತಿತ್ತು. ಭಾರೀ ಆಭರಣಗಳನ್ನೂ ಕಂಚುಕಕ್ಕೆ ಪರ್ಯಾಯವಾಗಿ ಧರಿಸುತ್ತಿದ್ದರು. ಆ ನಂತರ ಶಾತವಾಹನರ ಕಾಲದಲ್ಲಿ ಹೊಲಿಗೆ ಹಾಕಿದ ಬಟ್ಟೆಯನ್ನು ಸೀರೆಯ ಮೇಲೆ ಹೊದ್ದುಕೊಳ್ಳಲು ಶುರು ಮಾಡಿದರು.ಕುಶಾಣರು ಮತ್ತು ಗುಪ್ತರ ಆಡಳಿತಾವಧಿಯಲ್ಲಿ ಪಾಶ್ಚಿಮಾತ್ಯ ಪ್ರಭಾವವನ್ನು ಒಳಗೊಂಡ ಮೇಲುಡುಗೆ ರವಿಕೆಯಾಗಿ ಬಳಕೆಯಾಗುತ್ತಿತ್ತು. ಆದರೆ ಗುಪ್ತರ ಕಾಲದ ರಾಜ ಮಹಿಳೆಯರು ‘ಕಂಚೋಲಿಕ’ ಹೆಸರಿನಲ್ಲಿ ರವಿಕೆಗೆ ಆಧುನಿಕ ಸ್ಪರ್ಶ ಕೊಟ್ಟರು. ಅಲ್ಲಿಂದೀಚೆ ರವಿಕೆಯ ವಿನ್ಯಾಸದಲ್ಲಿ ಉಲ್ಲೇಖಾರ್ಹ ಬದಲಾವಣೆಗಳಾಗುತ್ತಾ ಬಂದವು.ಇದೀಗ ಸೀರೆಗಿಂತಲೂ ರವಿಕೆಗೇ ಹೆಚ್ಚಿನ ‘ತೂಕ’. ಡಿಸೈನರ್‌ ಬ್ಲೌಸ್‌ ಎಂಬ ಪರಿಕಲ್ಪನೆ ಶುರುವಾದ ಮೇಲಂತೂ ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಿದೆ. ರವಿಕೆ ಯಾವ ಸೀರೆಗೆ, ಯಾವ ಸಂದರ್ಭಕ್ಕೆ ತೊಡಬೇಕಾಗಿದೆ ಎಂಬುದನ್ನು ನೋಡಿಕೊಂಡು ವಿನ್ಯಾಸವನ್ನೂ ನಿರ್ಧರಿಸಬೇಕು. ವಿನ್ಯಾಸಕ್ಕೆ ಇನ್ನಷ್ಟು ಶ್ರೀಮಂತ ನೋಟ ನೀಡುವಲ್ಲಿ ಅದರ ಕಸೂತಿಯೊಂದಿಗೆ  ಕುಂದನ್, ಜರ್ದೋಸಿ, ಸ್ಪ್ರಿಂಗ್, ಬೀಡ್ಸ್ ಮತ್ತು ಸ್ಟೋನ್‌ ವರ್ಕ್‌ಗಳು ಮುಖ್ಯ.ಇನ್ನೊಂದು ಗುಟ್ಟು ಏನೆಂದರೆ, ರವಿಕೆಗಳ ಬೆನ್ನು ವಿಶಾಲವಾಗಿದ್ದಷ್ಟೂ ವಿಶೇಷ ಲುಕ್‌ ಸಿಗುತ್ತದೆ. ಹೀಗಾದಾಗ ಬ್ರಾದ ಪಟ್ಟಿ ಹೊರಗೆ ಇಣುಕುವ ಸಮಸ್ಯೆ ಇದ್ದೇ ಇರುತ್ತದೆ. ಇದಕ್ಕಾಗಿ, ರವಿಕೆಯಲ್ಲೇ ಕಂಚುಕವನ್ನೂ ವಿನ್ಯಾಸ ಮಾಡಿಬಿಡುತ್ತೇವೆ. ಇದನ್ನು ಬ್ಯಾಕ್‌ಲೆಸ್‌ ಅನ್ನುತ್ತೇವೆ.ಮಿಕ್ಸ್‌ ಅಂಡ್‌ ಮ್ಯಾಚ್‌ ಈಗಿನ ಟ್ರೆಂಡ್‌. ಇದಕ್ಕೆ ಗೋಲ್ಡನ್, ಸಿಲ್ವರ್‌ ಅಥವಾ ಕಪ್ಪು ಬಣ್ಣದ ಚಮಕಿ, ಟಿಕಿಲಿ ಅಥವಾ ಜರಿಯ ಚಿತ್ತಾರವಿರುವ ರವಿಕೆಯಿದ್ದರೆ ಉತ್ತಮ. ಪ್ಲೇನ್‌ ಫ್ಯಾಬ್ರಿಕ್‌ ಇದ್ದರೆ ಜರಿಯ ದಾರದಿಂದ ಮೆಶ್‌ ವರ್ಕ್‌ ಮಾಡಿಸಿದರಂತೂ ಸೀರೆಯನ್ನೂ ಮೀರಿ ಮಿಂಚುತ್ತದೆ ರವಿಕೆ.

– ಅಂಜಲಿ ಶರ್ಮ, ಸೆಲೆಬ್ರಿಟಿ ವಸ್ತ್ರ ವಿನ್ಯಾಸಕಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.