ರಾಮನಗರ: ವಿಪತ್ತು ನಿಯಂತ್ರಿಸುವ ಕುರಿತು ನೀಡಲಾಗುತ್ತಿರುವ ತರಬೇತಿಯನ್ನು ಪಡೆಯಲು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಮಿನಿ ವಿಧಾನಸೌದ ಆವರಣದಲ್ಲಿ ಜಿಲ್ಲಾ ಗೃಹ ರಕ್ಷಕ ದಳ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಪತ್ತು ನಿಯಂತ್ರಣಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ತಮ್ಮ ಕಚೇರಿಯಲ್ಲಿ ಹೆಚ್ಚು ಕೆಲಸವಿದೆ. ಸಭೆ, ಸಮಾರಂಭಗಳಿಗೆ ಹೋಗಬೇಕು. ಕ್ಷೇತ್ರ ಕಾರ್ಯಕ್ಕೆ ಹೋಗಬೇಕು. ಕೋರ್ಟ್ ಪ್ರಕರಣಗಳಿಗೆ ತೆರಳಬೇಕು ಎಂಬ ಕಾರಣಗಳನ್ನು ನೀಡುವ ಮೂಲಕ ಅಧಿಕಾರಿಗಳು ತರಬೇತಿಗೆ ಹಾಜರಾಗುತ್ತಿಲ್ಲ’ ಎಂದು ಅವರು ದೂರಿದರು.
ಆಕಸ್ಮಿಕವಾಗಿ ಎದುರಾಗು ವಿಪತ್ತುಗಳ ಸಮರ್ಥವಾಗಿ ಎದುರಿಸಲು ನಾಗರಿಕರು ಸಹ ಸನ್ನದರಾಗಿರಬೇಕು. ವಿಪತ್ತುಗಳು ನೈಸರ್ಗಿಕವಾಗಿರಲಿ, ಮಾನವ ನಿರ್ಮಿತವಾಗಿರಲಿ ಅವುಗಳ ಪರಿಣಾಮ ನೇರವಾಗಿ ಜನ ಸಮುದಾಯ ಮತ್ತು ಪರಿಸರದ ಮೇಲೆ ಆಗುತ್ತವೆ. ಹೀಗಾಗಿ ನಾಗರಿಕ ಸಮಾಜ ಸರ್ಕಾರದೊಂದಿಗೆ ಕೈಜೋಡಿಸಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಸದಾ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿದ್ದರೆ ವಿಪತ್ತಿನ ಪರಿಣಾಮವನ್ನು ಕಡಿಮೆಗೊಳಿಸಬಹುದು ಎಂದು ಹೇಳಿದರು.
ನಗರದ ಸರ್ಕಲ್ ಇನ್‌ಸ್ಪೆಕ್ಟರ್ ಸುಬ್ರಹ್ಮಣ್ಯ ಮಾತನಾಡಿ, ವಿಪತ್ತುಗಳನ್ನು ಎದುರಿಸುವ ಮತ್ತು ಕಡಿಮೆಗೊಳಿಸುವ ಕುರಿತು ಸಾರ್ವತ್ರಿಕ ಅರಿವು ಮೂಡಿಸಬೇಕಿದೆ. ವಿಪತ್ತುಗಳು ಎದುರಾದ ಸನ್ನಿವೇಶದಲ್ಲಿ ಜನ ಸಮುದಾಯದ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳ ಬಗ್ಗೆ ಅವರಲ್ಲಿ ತಿಳಿ ಹೇಳುವ ಕಾರ್ಯವೂ ಹೆಚ್ಚಾಗಿ ನಡೆಯಬೇಕಿದೆ ಎಂದು ತಿಳಿಸಿದರು.
ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠಿ ಕೆ.ಕೆಂಪಯ್ಯ ಮಾತನಾಡಿ, ವಿಪತ್ತುಗಳ ಸಂದರ್ಭದಲ್ಲಿ ಜನರು ಆತಂಕಕ್ಕೆ ಒಳಗಾಗಬಾರದು. ಪರಿಸ್ಥಿತಿ ಬಿಗಡಾಯಿಸದಂತೆ ಕ್ರಮಗಳನ್ನು ಕೈಗೊಂಡು ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಬೇಕು. ವಿಪತ್ತು ಸಂಭವಿಸುವ ಮುನ್ನ ಹಾಗೂ ಆ ನಂತರದ ಪರಿಸ್ಥಿತಿಗಳನ್ನು ಎದುರಿಸಲು ಕ್ರಿಯಾ ಯೋಜನೆ, ಸುಧಾರಣೆ ಮತ್ತು ತಾತ್ಕಾಲಿಕ ಪರಿಹಾರ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಅನಾಹುತಗಳು ಸಂಭವಿಸಿದಾಗ ದೂ. ಸಂ: 080-–27272265 ಸಂಪರ್ಕಿಸಬಹುದು ಎಂದರು.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಸವಿತಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ನಡೆಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ನೀಲಕಂಠಸ್ವಾಮಿ, ವಿಜಯ್ ಕುಮಾರ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಹಮೀದ್ಖಾನ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಗುರುಲಿಂಗಯ್ಯ, ಸಹಾಯಕ ಅಗ್ನಿಶಾಮಕ ಸಹಾಯಕ ಅಧಿಕಾರಿ ರಾಜೇಂದ್ರಸಿಂಗ್ ಮತ್ತಿರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.