ಮಂಗಳವಾರ, ಮಾರ್ಚ್ 2, 2021
31 °C
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ

ವಿಮಾನಕ್ಕೆ ಬೆಂಕಿ; ಪ್ರಯಾಣಿಕರು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮಾನಕ್ಕೆ ಬೆಂಕಿ; ಪ್ರಯಾಣಿಕರು ಪಾರು

ದುಬೈ (ಪಿಟಿಐ): ಇಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ   ಬುಧವಾರ ತುರ್ತುಭೂಸ್ಪರ್ಶ ಮಾಡಿದ ಎಮಿರೆಟ್ಸ್‌ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಏಳು ಶಿಶುಗಳು ಸೇರಿದಂತೆ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಎಮಿರಟ್ಸ್‌ನ ಇಕೆ521 ವಿಮಾನ ತಿರುವನಂತಪುರದಿಂದ ದುಬೈಗೆ ಹೊರಟ್ಟಿತ್ತು. ಪ್ರಯಾಣಿಕರು, ಸಿಬ್ಬಂದಿ ಸೇರಿ ವಿಮಾನದಲ್ಲಿ 300 ಮಂದಿ ಇದ್ದರು. ಅವರಲ್ಲಿ ಬಹುತೇಕರು ಭಾರತೀಯರು ಎಂದು ಅಧಿಕಾರಿಗಳು ಹೇಳಿದ್ದಾರೆ.ಇಕೆ521 ವಿಮಾನದಲ್ಲಿ 282 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು. 226 ಭಾರತೀರು, 24 ಇಂಗ್ಲೆಂಡ್‌, ಯುಎಇಯ 11 ಮತ್ತು ಆರು ಮಂದಿ ಅಮೆರಿಕ ಹಾಗೂ ಸೌದಿ ಅರೇಬಿಯಾದ ಪ್ರಯಾಣಿಕರು ಇದ್ದರು ಎಂದು ಎಮಿರಟ್ಸ್‌ ತಿಳಿಸಿದೆ. ‘ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಎಲ್ಲ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ರಕ್ಷಿಸಲಾಗಿದೆ’ ಎಂದು ಎಮಿರಟ್ಸ್‌ ಹೊರಡಿಸಿದ ಪ್ರಕಟಣೆ ತಿಳಿಸಿದೆ.ಹೊಗೆಯುಕ್ತ ಗಾಳಿ ಉಸಿರಾಡಿದ್ದರಿಂದ ಅಸ್ವಸ್ಥಗೊಂಡ 10 ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗಿದ್ದು, ಒಬ್ಬ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಬೆಳಿಗ್ಗೆ 10. 19ಕ್ಕೆ  ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಮಧ್ಯಾಹ್ನ 12.50ಕ್ಕೆ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.ವಿಮಾನದಲ್ಲಿ ಭಾರತ ಮೂಲದ ಇಬ್ಬರು ಸಿಬ್ಬಂದಿ ಇದ್ದರು ಎಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜಾರ್ಜ್‌ ತರಕ್ಕನ್‌ ತಿಳಿಸಿದ್ದಾರೆ.ಈ ಘಟನೆಯ ನಂತರ ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.‘ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ತುರ್ತು ಕಾರ್ಯಾಚರಣೆ ಪಡೆಗಳು ವಿಮಾನಕ್ಕೆ ಹತ್ತಿಕೊಂಡ ಬೆಂಕಿಯನ್ನು ನಂದಿಸಿದವು’ ಎಂದು ದುಬೈ ಮಾಧ್ಯಮ ಕಚೇರಿ ಟ್ವಿಟ್‌ ಮಾಡಿದೆ. ‘ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಬಹುತೇಕರು ಕೇರಳೀಯರು. ವಿಮಾನ ಹಾರಾಟದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಕಾಣಿಸಿರಲಿಲ್ಲ’ ಎಂದು ಪ್ರಯಾಣಿಕ ಸಾಯಿ ಭಾಸ್ಕರ್‌ ಹೇಳಿದ್ದಾರೆ.‘ತಾಂತ್ರಿಕ ಸಮಸ್ಯೆ ಇರುವ ಬಗ್ಗೆ ವಿಮಾನದಲ್ಲಿ ಘೋಷಣೆ ಮಾಡಿರಲಿಲ್ಲ. ವಿಮಾನದೊಳಗೆ ಹೊಗೆ ಆವರಿಸಿಕೊಂಡಾಗಲೇ ಏನೋ ಆಗಿದೆ ಎನ್ನುವುದು ನಮಗೆ ತಿಳಿಯಿತು ಎಂದು ಅವರು ತಿಳಿಸಿದ್ದಾರೆ.ವಿಮಾನಕ್ಕೆ ಬೆಂಕಿಹತ್ತಿಕೊಂಡ ಕಾರಣ ಇನ್ನೂ ಗೊತ್ತಾಗಿಲ್ಲ. ವಿಮಾನದ ಮುಂದಿನ ಲ್ಯಾಂಡಿಂಗ್‌ ಗೇರ್‌ ಕುಸಿತಗೊಂಡಿದ್ದರಿಂದ ವಿಮಾನ ವಾಲಿತು. ಇದರಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಎಮಿರೆಟ್ಸ್‌ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.