ಭಾನುವಾರ, ಮೇ 9, 2021
27 °C

ವಿಲೀನ: ಪ್ರಥಮ ದರ್ಜೆ ಕಾಲೇಜು ಸರದಿ

ಪ್ರಜಾವಾಣಿ ವಾರ್ತೆ/ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಮೈಸೂರು: ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ವಿದ್ಯಾರ್ಥಿ ನಿಲಯಗಳನ್ನು ವಿಲೀನಗೊಳಿಸಿದ್ದ ಶಿಕ್ಷಣ ಇಲಾಖೆ, ಇದೀಗ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಪ್ರಥಮ ಪದವಿ ಕೋರ್ಸುಗಳ ವಿಲೀನಕ್ಕೆ ಮುಂದಾಗಿದೆ.2013-14ನೇ ಸಾಲಿನಿಂದ ಅನ್ವಯವಾಗುವಂತೆ ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ಪದವಿ ಕೋರ್ಸುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣದ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ.ಬಿ.ಎ, ಬಿ.ಎಸ್ಸಿ, ಬಿ.ಬಿ.ಎಂ ಮತ್ತು ಬಿ.ಸಿ.ಎ ಮುಂತಾದ ಪದವಿ ಕೋರ್ಸು/ಸಂಯೋಜನೆಗಳಿಗೆ  (ಐಚ್ಛಿಕ ವಿಷಯ ಸಮೂಹ) 15 ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಲ್ಲಿ, ಆ ವಿದ್ಯಾರ್ಥಿಗಳನ್ನು 15ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ ಸಮೀಪದ ಸರ್ಕಾರಿ ಕಾಲೇಜುಗಳಿಗೆ ವರ್ಗಾವಣೆ/ವಿಲೀನ ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಬಿ.ಎ, ಬಿ.ಎಸ್ಸಿ, ಬಿ.ಬಿ.ಎಂ ಮತ್ತು ಬಿ.ಸಿ.ಎ ಕೋರ್ಸುಗಳಿಗೆ 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶಾತಿ ಕೋರಿದಲ್ಲಿ ಯಾವುದೇ ಕಾರಣಕ್ಕೂ (ಕಡ್ಡಾಯ) ಪ್ರವೇಶ ನೀಡಬಾರದು. ಇದೇ ರೀತಿ, ಭಾಷೆಗಳಿಗೆ ಸಂಬಂಧಿಸಿದಂತೆ 5ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಲ್ಲಿ, ಅಂತಹ ವಿದ್ಯಾರ್ಥಿಗಳು ಆ ಭಾಷೆಯನ್ನು ಸ್ವಯಂ ಅಧ್ಯಯನ ಮಾಡಬೇಕು ಎಂದು ಪ್ರವೇಶಾತಿ ಸಂದರ್ಭದಲ್ಲೇ ಅವರಿಗೆ ಸೂಚಿಸಬೇಕು. ಒಂದು ವೇಳೆ ಯಾವುದೇ ಪ್ರಥಮ ಪದವಿ ಕೋರ್ಸು/ಸಂಯೋಜನೆಗಳಿಗೆ  15ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಂಡಲ್ಲಿ ಮುಂದಿನ ಎಲ್ಲಾ ಪರಿಣಾಮಗಳಿಗೆ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.ಕೆಲವು ವಿಷಯಗಳಿಗೆ ಸಡಿಲಿಕೆ: ವಿಶೇಷ ಪ್ರಕರಣ ಎಂದು ಪರಿಗಣಿಸಿ, ಸೀಮಿತ ಕಾಲೇಜುಗಳಲ್ಲಿ ಮಾತ್ರ ಲಭ್ಯವಿರುವ ಗೃಹ ವಿಜ್ಞಾನ ಮತ್ತು ಅದರ ಉಪವಿಭಾಗಗಳು, ಸಂಗೀತ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್, ಸಂಖ್ಯಾಶಾಸ್ತ್ರ, ಮಹಿಳಾ ಅಧ್ಯಯನ, ಅಪರಾಧಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಷಯಗಳನ್ನು ಹೊಂದಿರುವ ಕೋರ್ಸು/ಸಂಯೋಜನೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು ಸಡಿಲಿಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.`ಕಳೆದ ವರ್ಷ ಶಿಕ್ಷಣ ಇಲಾಖೆ ಈ ಬಗ್ಗೆ ಮೌಖಿಕವಾಗಿ ಸೂಚನೆ ನೀಡಿತ್ತು. ಆದರೆ, ಈ ವರ್ಷ ಅಧಿಕೃತ ಸುತ್ತೋಲೆ ಹೊರಡಿಸಿದೆ. ಪ್ರವೇಶ ಮಾಡಿಕೊಳ್ಳುವಲ್ಲಿ ಸಮಸ್ಯೆ ಏನಿಲ್ಲ. ಆದರೆ, ವಿದ್ಯಾರ್ಥಿಗಳ ಸಂಖ್ಯೆ 15 ಮೀರದಿದ್ದರೆ ಸಮೀಪದ ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ. ಹೀಗೆ ಮಾಡುವುದರಿಂದ ನಮ್ಮ ಕಾಲೇಜಿನಲ್ಲಿ ವರ್ಷವಿಡೀ ವಿದ್ಯಾರ್ಥಿಗಳು ಇಲ್ಲದಂತಾಗುತ್ತದೆ. ಆಗ ನಾವೇನು ಮಾಡಬೇಕು ಎಂಬುದರ ಕುರಿತು ಇಲಾಖೆ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆಯೋ ಕಾದು ನೋಡಬೇಕಿದೆ' ಎಂದು ಹೆಸರು ಹೇಳಲು ಇಚ್ಛಿಸದ ಮೈಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೇಳುತ್ತಾರೆ.`ರಾಜ್ಯದಲ್ಲಿ 359 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 10,507 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ಈ ವರ್ಷ ಪ್ರವೇಶ ನೀಡಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರವೇಶ ನೀಡದ ಕಾಲೇಜುಗಳ ಉಪನ್ಯಾಸಕರನ್ನು 15ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರುವ (20ರಿಂದ 25 ಕಿ.ಮೀ. ವ್ಯಾಪ್ತಿ) ಕಾಲೇಜುಗಳಿಗೆ ನಿಯೋಜನೆ ಮಾಡಲಾಗುವುದು.ಇದರಿಂದ ಅತಿಥಿ ಉಪನ್ಯಾಸಕರ ನೇಮಕ ಸಮಸ್ಯೆ ತಪ್ಪುತ್ತದೆ. ಪ್ರವೇಶ ನಿರಾಕರಣೆಯಿಂದ ಪೋಷಕರು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ಹೀಗಾಗಿ, ಅವರು ಆತಂಕ ಪಡುವ ಅಗತ್ಯವಿಲ್ಲ' ಎಂದು ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.