ಮಂಗಳವಾರ, ಜುಲೈ 27, 2021
21 °C

ವಿವಿಗಳಿಗೆ ನೀಡಿದ ಅನುದಾನ ತನಿಖೆಯಾಗಲಿ: ಬರಗೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಗೆ ಬಿಡುಗಡೆ ಮಾಡಿದ ಅನುದಾನದ ಬಳಕೆ ಕುರಿತು ತನಿಖೆ ನಡೆಸುವಂತೆ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಸರ್ಕಾರವನ್ನು ಆಗ್ರಹಿಸಿದರು.ನಗರದಲ್ಲಿ ಸೋಮವಾರ ಆರಂಭವಾದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, `ಹಿಂದಿನ ಬಿಜೆಪಿ ಸರ್ಕಾರ ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ಯೋಜನೆಗಳನ್ನು ಕೈಗೊಳ್ಳಲು ಪ್ರತಿ ವಿಶ್ವವಿದ್ಯಾಲಯಕ್ಕೆ ್ಙ 1 ಕೋಟಿ ಅನುದಾನ ನೀಡಿತ್ತು. ತುಮಕೂರು ವಿಶ್ವವಿದ್ಯಾಲಯದವರು ಆ ಅನುದಾನದಲ್ಲಿ ವಿ.ಎಸ್.ಆಚಾರ್ಯ ಸ್ಮರಣೋತ್ತರ ಸಂಚಿಕೆ, ಓಶೊ ಅವರಿಗೆ  ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿತು. ಹೀಗೆ ಅಸಂಬದ್ಧ ಕಾರ್ಯಗಳ ಮೂಲಕ ಅನುದಾನ ಪೋಲಾಗಿದೆ ಎಂದು ದೂರಿದರು.`ಶಾಸ್ತ್ರೀಯ ಭಾಷೆ ಅನುಷ್ಠಾನದ ಕೆಲಸವನ್ನು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನಕ್ಕೆ (ಸಿಐಐಎಲ್) ವಹಿಸಲಾಗಿದೆ. ಆದರೆ ಅಲ್ಲಿನ ಕಾರ್ಯಗಳೇ ಹೆಚ್ಚಾಗಿರುವುದರಿಂದ, ಈ ಹೊಸ ಜವಾಬ್ದಾರಿ ನಿಭಾಯಿಸುವುದು ಕಷ್ಟ. ಇವುಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸಬೇಕು. ಆ ಸಂಸ್ಥೆಯ ಮೂಲಕ ಅನುದಾನ ಬಿಡುಗಡೆಯಾಗಬೇಕು. ತಮಿಳು ನಾಡಿನಲ್ಲಿ ಈ ಕಾರ್ಯ ನಡೆದಿದೆ. ಅಲ್ಲಿನ ಸಾಹಿತಿಗಳು ಕೇಂದ್ರದೊಂದಿಗೆ ಹೋರಾಟ ಮಾಡಿ ಶಾಸ್ತ್ರೀಯ ಭಾಷೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಂಸ್ಥೆ ನಿರ್ಮಾಣಕ್ಕೆ ಮುಂದಾಗಿದ್ದಾರೆ' ಎಂದು ಅವರು ವಿವರಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ತಮ್ಮ ಸಮ್ಮೇಳನದ ಆಶಯ ನುಡಿಗಳಲ್ಲಿ,  ಸರ್ಕಾರ ಅಕಾಡೆಮಿಯ ಅಧ್ಯಕ್ಷರ ರಾಜೀನಾಮೆ ಕೇಳಿರುವುದು, ಅದಕ್ಕೆ ಪರ- ವಿರೋಧ ವ್ಯಕ್ತವಾಗುತ್ತಿರುವುದು, ಇದಕ್ಕೆ ಸರ್ಕಾರ ಉತ್ತರಿಸದೇ ಮೌನ ವಹಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.`ಅಕಾಡೆಮಿಗಳು ಸಾಂಸ್ಕೃತಿಕ ಜಗತ್ತಿನ ರಾಯಭಾರಿಗಳು. ಇವುಗಳು ರಾಜಕೀಯದಿಂದ ಹೊರತಾಗಿರಬೇಕು. ಇದಕ್ಕಾಗಿ ವಿಶೇಷ ನಿಯಮಾವಳಿಗಳನ್ನು ರೂಪಿಸಬೇಕು. ರಾಜಕಿಯೇತರ ವ್ಯಕ್ತಿಗಳನ್ನು ಅಕಾಡೆಮಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಸಾಂಸ್ಕೃತಿಕ ಜಗತ್ತಿನ ಶ್ರೀಮಂತಿಕೆಯನ್ನು ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು' ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.ಸಮ್ಮೇಳನದ ಅಧ್ಯಕ್ಷ ಬಿ.ಎಲ್.ವೇಣು, ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೇರಿದಂತೆ ವಿವಿಧ ಗಣ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.