ಮಂಗಳವಾರ, ಮೇ 11, 2021
20 °C

ವಿವಿಯಲ್ಲಿ ಚಿಯರ್ ಗರ್ಲ್ಸ್..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಿ-20 ಕ್ರಿಕೆಟ್‌ನಲ್ಲಿ ಕ್ರೀಡಾಪ್ರೇಮಿಗಳ ಹೃದಯ ಬಡಿತ ಹೆಚ್ಚಿಸಿದ್ದ ಚಿಯರ್ ಗರ್ಲ್ಸ್‌ಗಳು ಬುಧವಾರ ಸಂಜೆ ಬೆಂಗಳೂರು ವಿವಿಯಲ್ಲಿ ಪ್ರತ್ಯಕ್ಷರಾಗಿದ್ದರು. ಚಿಯರ್ ಗರ್ಲ್ಸ್‌ಗಳ ಲಯಬದ್ಧ ಕುಣಿತಕ್ಕೆ ಸಭಾಂಗಣವೇ ಪ್ರತಿಸ್ಪಂದಿಸಿತು. ಪ್ರೇಕ್ಷಕರ ಸಮೂಹದಲ್ಲೂ ಹಾಸ್ಯ, ನೃತ್ಯ, ಹಾಡಿನ ಕಲರವದ ಪ್ರತಿಸ್ಪಂದನ. ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ವಿವಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ `ಕಾಮ್ ವಿಷನ್-2012~ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪ್ರದರ್ಶನದ ಝಲಕ್ ಇದು. ಇಳಿಸಂಜೆ ಹೊತ್ತಲ್ಲಿ ಸಭಾಂಗಣದಲ್ಲಿ ಯುವ ಹೃದಯಗಳು ಹುಚ್ಚೆದ್ದು ಕುಣಿದವು. ಅಲ್ಲಿ ವಿದ್ಯಾರ್ಥಿಗಳ ಸಂಭ್ರಮಕ್ಕೆ ಮೇರೆ ಇರಲಿಲ್ಲ. ಜಾನಪದ ಸೊಗಡಿನ ಪ್ರದರ್ಶನವಿತ್ತು. ದೇಸಿ ಸೊಬಗು ಇತ್ತು.ವಿವಾದ, ಪರಸ್ಪರ ಕೆಸರೆರಚಾಟ, ಪಾಠ ಪ್ರವಚನದಿಂದ ಸದಾ ಸುದ್ದಿಯಾಗುತ್ತಿರುವ ವಿವಿಗೆ ಗುರುವಾರ ಸಂಜೆ ಹೊಸ ರಂಗು ಬಂದಿತ್ತು. ನೃತ್ಯ, ಹಾಡಿನ ನಡುನಡುವೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಉಪನ್ಯಾಸಕರನ್ನು ಕಿಚಾಯಿಸಿದರು. ನೃತ್ಯ ಪಟುಗಳು ಸ್ವಲ್ಪ ತಡವರಿಸಿದರೂ ಪ್ರೇಕ್ಷಕ ಪಡೆಯಿಂದ ಕೇಕೆ, ನಗುವಿನ ಉತ್ತರ.ಮೆಚ್ಚಿನ ಹಾಡಿಗೆ ಚಪ್ಪಾಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಒಬ್ಬರು `ಕೊಲವರಿ ಡಿ~ ಎಂದರೆ, ಮತ್ತೊಂದು ಜೋಡಿ `ಪ್ಯಾರ್‌ಗೆ ಆಗ್ಬುಟೈತೆ~ ಎಂದು ಹಾಡಿತು. ನೃತ್ಯದ ನಡುನಡುವೆ ಮೈಕ್ ಕೈ ಕೊಡುತ್ತಿದ್ದುದು ನೃತ್ಯಪಟುಗಳ ರಸಾಭಂಗಕ್ಕೆ ಕಾರಣವಾಯಿತು.      

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.