ಶನಿವಾರ, ಜನವರಿ 18, 2020
26 °C
ವಿವಿಯೊಳಗೊಂದು ಸುತ್ತು...

ವಿ.ವಿ. ವಸತಿಗೃಹಗಳು ಖಾಲಿ ಖಾಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ವಿ. ವಸತಿಗೃಹಗಳು ಖಾಲಿ ಖಾಲಿ...

ಧಾರವಾಡ: ವಿಶ್ವವಿದ್ಯಾಲಯ ಧನ­ಸಹಾಯ ಆಯೋಗವು ವಿಶ್ವವಿದ್ಯಾಲ­ಯದ ಬೋಧಕ ಸಿಬ್ಬಂದಿಯ ವೇತನ­ವನ್ನು 2010ರಲ್ಲಿ ಭಾರಿ ಪ್ರಮಾಣ­ದಲ್ಲಿ ಏರಿಕೆ ಮಾಡಿದ ಪರಿಣಾಮ ವಿ.ವಿ.ಯ ವಸತಿಗೃಹಗಳು ಖಾಲಿ ಉಳಿಯುತ್ತಿವೆ!ಅದಕ್ಕೂ ಇದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ಪ್ರಮುಖ ಕಾರಣವೂ ಇದೆ. ಪ್ರೊಫೆಸರ್‌ ಶ್ರೇಣಿಯ ಬೋಧಕರು ಸರಾಸರಿ ಮಾಸಿಕ ₨ 1.20 ಲಕ್ಷ ವೇತನ ಜೇಬಿಗಿಳಿಸುತ್ತಾರೆ. ಜೊತೆಗೆ ಅವರ ಒಟ್ಟೂ ವೇತನದ ಮನೆ ಬಾಡಿಗೆ ಭತ್ಯೆ ವಿ.ವಿ. ಲೆಕ್ಕಕ್ಕೆ ಕಡಿತವಾಗುತ್ತದೆ. ವಸತಿಗೃಹದಲ್ಲಿ ವಾಸಿಸುವ ಪ್ರಾಧ್ಯಾಪ­ಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಉಪನ್ಯಾಸಕರ ವೇತನದ ಶೇ 10ರಷ್ಟು ಭಾಗ ಕಡಿತ­ವಾಗುವುದರಿಂದ ಚಿಂತೆಗೊಳಗಾದ ಹಲವು ಪ್ರಾಧ್ಯಾಪಕರು ವಸತಿಗೃಹ­ಗಳನ್ನು ಖಾಲಿ ಮಾಡಿ ವಿ.ವಿ.ಗೆ ಸಮೀಪದ ಬಡಾವಣೆಗಳಲ್ಲಿ ಕಡಿಮೆ ಬಾಡಿಗೆಗೆ ಮನೆ ಹಿಡಿಯುತ್ತಿದ್ದಾರೆ. ಹಿರಿಯ ಪ್ರಾಧ್ಯಾಪಕರ ಸಂಬಳದ ಶೇ 10ರಷ್ಟು ಅಂದರೆ ₨ 12 ಸಾವಿರ. ಹೊರಗಡೆ ₨ 5ರಿಂದ ₨ 7 ಸಾವಿರ ಕೊಟ್ಟರೆ ಉತ್ತಮ ವ್ಯವಸ್ಥೆಯುಳ್ಳ ಮನೆಗಳು ದೊರೆಯುತ್ತವೆ. ತಿಂಗಳಿಗೆ ₨ 5 ಸಾವಿರ ಉಳಿಸಿದರೂ ವರ್ಷಕ್ಕೆ ₨ 60 ಸಾವಿರ ಉಳಿತಾಯವಾಗುತ್ತದೆ. ಉಳಿಕೆ ಹಣದಿಂದ ನಿವೇಶನವನ್ನೋ, ಮಗಳ ಮದುವೆಯನ್ನೋ, ಮಗನ ಓದಿನ ಖರ್ಚನ್ನೋ ಪೂರೈಸಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾಗಿ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.ಡಿ.ಸಿ.ಪಾವಟೆ ಅವರು ಕುಲಪತಿಗಳಿದ್ದಾಗಲೇ ವಿ.ವಿ.ಯ ವಸತಿಗೃಹಗಳನ್ನು ಕಟ್ಟಿಸಲಾಗಿತ್ತು. ಇದೀಗ ಅವು ನಿರ್ವಹಣೆ ಇಲ್ಲದೇ ಇರುವುದರಿಂದ ಪ್ರಾಧ್ಯಾಪಕರೂ ಅಲ್ಲಿ ವಾಸವಾಗಲು ಇಷ್ಟಪಡುವುದಿಲ್ಲ. ಅಪಾರ್ಟ್‌ಮೆಂಟ್‌ ಸಂಸ್ಕೃತಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ದೂರ ದೂರ ಇರುವ ಈ ವಸತಿಗೃಹಗಳಲ್ಲಿ ವಾಸಿಸುವ ಒಲವು ಕಡಿಮೆಯಾಗುತ್ತಿದೆ. ಹಲವು ವರ್ಷಗಳಿಂದ ವಸತಿಗೃಹದಲ್ಲಿದ್ದ ಪ್ರಾಧ್ಯಾಪಕರೊಬ್ಬರು ಇದೀಗ ಅವುಗಳನ್ನು ಖಾಲಿ ಮಾಡಿ ಬೇರೆ ಬಡಾವಣೆಯಲ್ಲಿ ಮನೆ ಮಾಡಿದ್ದಾರೆ. ಅವರ ಸೇವಾವಧಿ ಇನ್ನೂ 7 ವರ್ಷಗಳಿದ್ದು, ನಿವೃತ್ತಿಯವರೆಗೂ ಲಕ್ಷಾಂತರ ರೂಪಾಯಿ ಮನೆಬಾಡಿಗೆ ಭತ್ಯೆ ಉಳಿಯಲಿದೆ ಎಂಬ ಅಂದಾಜಿನಿಂದಲೇ ಮನೆ ಬದಲಿಸಿದ್ದಾರೆ ಎಂಬುದು ಅವರ ಸ್ನೇಹಿತ ಪ್ರಾಧ್ಯಾಪಕರು ನೀಡುವ ವಿವರಣೆ.‘ವಿ.ವಿ.ಯಲ್ಲಿ ಎ ಶ್ರೇಣಿಯ 28, ಬಿ–9, ಡಿ–24, ಎಫ್‌–32, ಜೆ–14, ಪಿ–12, ಟಿ–16 ಹಾಗೂ ಇ ಶ್ರೇಣಿಯ 60 ವಸತಿಗೃಹಗಳು ಸೇರಿದಂತೆ 195 ವಸತಿಗೃಹಗಳಿವೆ. ಈ ಎಲ್ಲವುಗಳ ನಿರ್ವಹಣೆಗೆಂದು ವಾರ್ಷಿಕ ಕೇವಲ ₨ 20 ಲಕ್ಷ ನಿಧಿಯನ್ನು ಮೀಸಲಿಡಲಾಗುತ್ತದೆ. ಇದು ಯಾತಕ್ಕೂ ಸಾಲದು. ಕನಿಷ್ಟ ಎಲ್ಲ ವಸತಿಗೃಹಗಳ ನವೀಕರಣಕ್ಕೆ ₨ 3 ಕೋಟಿ ಬೇಕಾಗುತ್ತದೆ’ ಎಂಬ ವಿವರ ನೀಡುತ್ತಾರೆ ವಿ.ವಿ. ಕಟ್ಟಡ ವಿಭಾಗದ ಸ್ಥಾನಿಕ ಎಂಜಿನಿಯರ್‌ ಎಸ್‌.ಪಿ.ಬಗಲಿ.195ರ ಪೈಕಿ ಎ ಶ್ರೇಣಿಯ 3, ಎಫ್‌ ಶ್ರೇಣಿಯ 2, ಟಿ ಶ್ರೇಣಿಯ 1 ಹಾಗೂ ಇ ಶ್ರೇಣಿಯ 22 ಮನೆಗಳು ಖಾಲಿ ಇವೆ ಎಂಬ ವಿವರವನ್ನೂ ಅವರು ನೀಡಿದರು.‘ಬಾಡಿಗೆ ಕಡಿತಕ್ಕೆ ಚಿಂತನೆ’

ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)ಯ ಶೇ 10ರಷ್ಟು ಕಡಿತ ಮಾಡುತ್ತಿರುವುದರಿಂದ ಬಹುತೇಕ ಉತ್ತಮ ಸಂಬಳದ ಪ್ರಾಧ್ಯಾಪಕರು ವಸತಿಗೃಹಗಳನ್ನು ಖಾಲಿ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಮನೆ ಬಾಡಿಗೆಯನ್ನು ಕಡಿಮೆಗೊಳಿಸಲು ಯೋಜಿ­ಸಿದ್ದೇವೆ. ಈ ಬಗ್ಗೆ ಬರುವ ಸಿಂಡಿ­ಕೇಟ್‌ ಸಭೆಯಲ್ಲಿ ಚರ್ಚಿಸುತ್ತೇವೆ.

–ಡಾ.ಎಚ್‌.ಬಿ.ವಾಲೀಕಾರ, ಕವಿವಿ ಕುಲಪತಿ

ಪ್ರತಿಕ್ರಿಯಿಸಿ (+)