ಶನಿವಾರ, ಮೇ 15, 2021
23 °C

ವಿವೇಕಾನಂದರು ಧರ್ಮವಂತರಿಗೆ ಸೇರಿದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸ್ವಾಮಿ ವಿವೇಕಾನಂದರು ಯಾವುದೇ ಜಾತಿ, ಮತಕ್ಕೆ ಸೀಮಿತವಲ್ಲ. ಅವರು ಎಲ್ಲ ಧರ್ಮವಂತರಿಗೆ ಸೇರಿದವರು ಎಂದು ಚೆನ್ನೈನ ರಾಮಕೃಷ್ಣ ಮಠದ ಅಧ್ಯಕ್ಷ ಮತ್ತುಪಶ್ಚಿಮ ಬಂಗಾಳದ ಬೇಲೂರು ಮಠದ ರಾಮಕೃಷ್ಣ ಮಟ್ಟದ ಹಿರಿಯ ಟ್ರಸ್ಟಿ ಸ್ವಾಮೀ ಗೌತಮಾನಂದ ಮಹಾರಾಜ್ ಹೇಳಿದರು.ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವದ ಅಂಗವಾಗಿ ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಆಯೋಜಿಸಲಾ ಗಿರುವ ಭಾರತೀಯ ಆಧ್ಯಾತ್ಮಿಕ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿದ ಅವರು ಮಾತನಾಡಿದರು.`ವಿವೇಕಾನಂದರು ಭಾರತದಲ್ಲಿ ಹಿಂದೂ ಧರ್ಮವನ್ನು ಸಂರಕ್ಷಿಸಿದರು. ಸ್ವಾತಂತ್ರ್ಯ ಸಿಗಲು ಅವರು ದಾರಿದೀಪವಾದರು. ಇಂದು ಅವುಗಳನ್ನು ನಾವು ಎಚ್ಚರಿಕೆಯಿಂದ ಕಾಪಾಡಿಕೊಂಡು ಹೋಗಬೇಕು. ನಾವೆಲ್ಲ ಹಿಂದುಗಳು, ಭಾರತೀಯರು ವೈದಿಕ ಧರ್ಮಕ್ಕೆ ಸೇರಿದವರು, ನಮ್ಮೆಲ್ಲರಿಗೂ ವೇದಗಳು ಜೀವನ ನಡೆಸುವುದನ್ನು ಹೇಳಿಕೊಡುತ್ತವೆ. ಇಲ್ಲಿ ಜಾತಿ, ಮತ ಭೇದವಿಲ್ಲ ಎಂದು ವಿವೇಕರು ಹೇಳಿದ್ದಾರೆ~ ಎಂದರು.`ಉಪನಿಷತ್ತು ನಮಗೆ ಸರಳವಾದ ಧರ್ಮವನ್ನು ಕಲಿಸಿದೆ. ಇಂದ್ರೀಯ ಸಂಯಮ, ಹೃದಯ ಪಾವಿತ್ರ್ಯ, ಪ್ರೀತಿ ಮತ್ತು ತ್ಯಾಗಗಳಿಗೆ ಮಹತ್ವ ನೀಡಿದೆ. ಆಧುನಿಕರ ಮಾತುಗಳಲ್ಲಿ ಹುರುಳಿಲ್ಲ. ಈ ಸಂದೇಶ ಸಾರಲು ಸಾವಿರಾರು ಶೀಲವಂತ ಮತ್ತು ಆತ್ಮವಿಶ್ವಾಸಭರಿತ ಯುವಪಡೆಯ ಅಗತ್ಯವಿದೆ. ದೀನ ದಲಿತರ ಸೇವೆಯ ಮೂಲಕ ಶಿವಸೇವೆ ಮಾತಬೇಕು~ ಎಂದು ಹೇಳಿದರು.`ತಮಿಳುನಾಡಿನ ತಿರುವಳ್ಳುವರ್‌ನಲ್ಲಿ ಬಡಕುಟುಂಬಗಳು ಬಹಳಷ್ಟಿವೆ. ಅಲ್ಲಿಯ ಯುವಕರಿಗಾಗಿ ನಮ್ಮ ಮಠವು ಸಂಜೆ ಕಾಲೇಜು ನಡೆಸುತ್ತಿದೆ. ಅವರಿಗೆ ಶಾಲೆ, ಕಾಲೇಜು ಶಿಕ್ಷಣ ನೀಡಿ, ಉದ್ಯೋಗ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದ ಸುಮಾರು ಮೂರು ಸಾವಿರ ಯುವಕರಿಗೆ ಕೆಲಸ ಸಿಕ್ಕಿದೆ~ ಎಂದು ವಿವರಿಸಿದರು.

`ಸಾಮಾನ್ಯಜನರಿಗೆ ಕೇವಲ ಹೊಟ್ಟೆಗೆ, ಬಟ್ಟೆಗೆ ಸಾಕಾಗುವಷ್ಟು ಕೊಟ್ಟರೆ ಸಾಲದು. ಅವರಲ್ಲಿ ಚಿಂತನಾಶಕ್ತಿ ಬೆಳೆಸಬೇಕು. ಆಧ್ಯಾತ್ಮಿಕ ಜ್ಞಾನದಿಂದ ನಿಸ್ವಾರ್ಥದಿಂದ ಸೇವೆ ಸಲ್ಲಿಸಬೇಕು~ ಎಂದರು.`ವಿವೇಕ ಜಾಗೃತಿ~ ಪುಸ್ತಕವನ್ನು ಬಿಡುಗಡೆ ಮಾಡಿದ ಸುತ್ತೂರುಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, `ಎಲ್ಲ ಧರ್ಮಗಳ ನೆಲೆಗಟ್ಟು ಸಚ್ಚಾರಿತ್ರವೇ ಆಗಿದೆ.  ಶಾಂತಿ, ನೆಮ್ಮದಿಯನ್ನು ಎಲ್ಲ ಧರ್ಮಗಳೂ ಪ್ರತಿಪಾದಿಸುತ್ತವೆ. ರಾಷ್ಟ್ರಗಳ ನಡುವೆ ಶಾಂತಿಯ ಸಂಬಂಧ ಏರ್ಪಟ್ಟಾಗ ಮಾತ್ರ ಜಗತ್ತಿನ ಪ್ರಗತಿಯಾಗಿದೆ. ಯುದ್ಧಗಳು ನಡೆದಾಗ ಅಪಾರ ಹಿಂಸೆ, ಅವನತಿಯ ಹಾದಿ ಹಿಡಿದಿವೆ. ಅಹಿಂಸೆ ಹೇಡಿತನದ ಸಂಕೇತವಲ್ಲ, ಧೀರತ್ವದ ಪ್ರತೀಕ~ ಎಂದರು.`ವೈಜ್ಞಾನಿಕ ಯುಗದಲ್ಲಿ ಆಧ್ಯಾತ್ಮಕ್ಕೆ ಹಲವು ಸವಾಲುಗಳಿವೆ. ಭಾರತ ವಿಭಿನ್ನ ಸಂಸ್ಕೃತಿಗಳ ನಾಡು. ದೀಪಗಳು ಹಲವಾರಿದ್ದರೂ ಬೆಳಕು ಮಾತ್ರ ಒಂದು. ಯಾವುದೇ ಕಾರ್ಯದಲ್ಲಿ ಹೃದಯಶುದ್ಧತೆ ಬೇಕು. ಮಾಡುವ ಕಾರ್ಯದಲ್ಲಿ, ನೆರವುಗಳಲ್ಲಿ ಅಹಂ ತುಂಬಿದ್ದರೆ ಅದರಲ್ಲಿ ಆತ್ಮೀಯತೆ ಇರುವುದಿಲ್ಲ.ಚಿತ್ತಭಿತ್ತಿಯಲ್ಲಿ ಶುದ್ಧತೆಯಿದ್ದರೆ ಮಾತ್ರ ಬಿಂಬವೂ ನಿರ್ಮಲವಾಗಿ ರುತ್ತದೆ~ ಎಂದು ಹೇಳಿದರು.

ಸ್ವಾಮಿ ಮುಕ್ತಿದಾನಂದಜೀ ಸ್ವಾಗತಿಸಿದರು. ಸ್ವಾಮೀ ಸುರೇಶಾನಂದಜೀ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.