ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ಗಾಯನ: ಸುಸಂಗತ ಹಾರ್ಮೋನಿಯಂ

Last Updated 21 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ಕಾಲೇಜ್ ಆಫ್ ಪರ್ಕಷನ್‌ನ 46ನೆಯ ವಾರ್ಷಿಕ ಸಂಗೀತೋತ್ಸವದಲ್ಲಿ ಸಂಗೀತ ಪ್ರೇಮಿಗಳಿಗೆ ಮೇಲುಶೃತಿಯಲ್ಲಿ ಉತ್ತಮ ಕಂಠ ಸಿರಿಯ ಗಾಯನದ ಅನುಭವವನ್ನು ಹಿರಿಯ ಹಾಗೂ ಬಹು ಕೌಶಲ್ಯದ ಗಾಯಕಿ ಆರ್.ಎ.ರಮಾಮಣಿ ಒದಗಿಸಿದರು. ಶಾಸ್ತ್ರೀಯ ಸಂಗೀತದ ವಿಶಿಷ್ಟತೆಗಳ ಸಾರಸಂಗ್ರಹದ ಅಡಕ, ಸುಸ್ಪಷ್ಟ ಸಂಗೀತ ಕಲ್ಪನೆ, ಲಯ ವೈವಿಧ್ಯದ ಕಲಾತ್ಮಕತೆ, ಸಾಹಿತ್ಯದ ಭಾವಪೂರ್ಣ ನಿರೂಪಣೆ ಇತ್ಯಾದಿ ಗುಣಗರಿಮೆಗಳಿಂದ ಅವರ ಗಾಯನ ಕೂಡಿತ್ತು.

ಚಾರುಲತಾ ರಾಮಾನುಜಂ (ಪಿಟೀಲು), ತಿರುಪತಿ ಸುಧಾಕರ್ (ಮೃದಂಗ) ಮತ್ತು ಸುಕನ್ಯಾ ರಾಂಗೋಪಾಲ್ (ಘಟ) ಅವರ ಒಪ್ಪು ಓರಣಗಳ ಸಹಕಾರದೊಂದಿಗೆ ರಮಾಮಣಿ ಚುರುಕಾಗಿ ಬೇಗಡೆ ವರ್ಣದೊಂದಿಗೆ ಕಛೇರಿಯನ್ನು ಆರಂಭಿಸಿದರು. ಪ್ರಣಮಾಮ್ಯಹಂ (ಗೌಳ), ಆಂದೋಳಿಕ (ರಾಗಸುಧಾರಸ), ದೇವಗಾಂಧಾರಿ (ವಿನರಾದ ನಾಮನವಿ) ಮತ್ತು ತೋಡಿ (ಶ್ರೀಕೃಷ್ಣಂ ಭಜಮಾನಸ) ರಾಗಗಳು ಎಲ್ಲಾ ಸ್ಥಾಯಿಗಳಲ್ಲೂ ಹರಿದು ಅವುಗಳ ಚಿತ್ರಣ ಸಮಗ್ರ ಸಂಪೂರ್ಣವಾಯಿತು.

ಸುಮಧುರ ಹಾರ್ಮೋನಿಯಂ: ನಾದಜ್ಯೋತಿ ಪುರಸ್ಕೃತ ನುರಿತ ಖಂಜರಿ ವಾದಕ ಸಿ.ಪಿ.ವ್ಯಾಸವಿಠಲ ಅವರ ನೇತೃತ್ವದ ದಶಪ್ರಮಥಿ ಸಂಗೀತ ಕಲಾಶಾಲೆಯ ವಾರ್ಷಿಕೋತ್ಸವದ ನಿಮಿತ್ತ ಎರಡು ದಿನ ಸಂಗೀತ ಕಛೇರಿಗಳು ನಡೆದವು. ಯುವ ಹಾರ್ಮೋನಿಯಂ ವಾದಕ ಸಾಯಿಕೀರ್ತಿ ಅವರು ತಮ್ಮ ಅತ್ಯುತ್ತಮ ಭರವಸೆಯ ವಾದನದಿಂದ ಮುದಗೊಳಿಸಿದರು. ಗಣೇಶ್‌ಕುಮಾರ್ (ಪಿಟೀಲು), ಹಿರಿಯ ಮೃದಂಗ ವಿದ್ವಾನ್ ಬಿ.ಕೆ.ಚಂದ್ರಮೌಳಿ ಮತ್ತು ಆನೂರು ದತ್ತಾತ್ರೇಯಶರ್ಮ (ಮೃದಂಗ) ಅವರ ಪರಿಣತ ಪಕ್ಕವಾದ್ಯಗಳೊಂದಿಗೆ ಹಾರ್ಮೋನಿಯಂನಲ್ಲಿ ಕರ್ನಾಟಕ ಸಂಗೀತದ ಬೆಡಗನ್ನು ಅನಾವರಣಗೊಳಿಸಿದರು.
ಅವರ ಕೈಬೆರಳುಗಳು ಮತ್ತು ಬೆಲ್ಲೋನ ನಿರ್ವಹಣೆ ಗಮಕಗಳು ಮತ್ತು ಸಾಹಿತ್ಯದ ಸ್ಫುಟತೆಯಿಂದ ರಂಜಿಸಿತು. ಮೋಹನ ವರ್ಣವನ್ನು ಐದು ಕಾಲಗಳಲ್ಲಿ ನುಡಿಸಿ ತಮ್ಮ ಲಯ ಪ್ರಭುತ್ವ ಮತ್ತು ವಾದ್ಯ ಕುಶಲತೆಯನ್ನು ಪರಿಚಯಿಸಿದರು. ಹಂಸಧ್ವನಿ (ವಂದೇನಿಶಮಹಂ), ಗಾನಮೂರ್ತೆ, ನಿನ್ನುವಿನಾ ರಚನೆಗಳ ನಂತರ ಮಾಯಾಮಾಳವಗೌಳ (ತುಳಸೀದಳ) ಮತ್ತು ಕಾಮವರ್ಧಿನಿ (ಶಿವಶಿವಎನರಾದ) ರಾಗಗಳ ಪ್ರಸರಣೆ ವಿಪುಲ ಸಂವೇದನೆಗಳಿಂದ ಕೂಡಿತ್ತು.
ಯುವ ಪ್ರತಿಭೆ : ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಗಾಯಕ ಆರ್.ರಘುರಾಮ್ ಅವರು ಮಲ್ಲೆೀಶ್ವರದ ಹಿಮಾಂಶು ಜ್ಯೋತಿ ಕಲಾ ಪೀಠದ ಸಭಾಂಗಣದಲ್ಲಿ ಸೌಗಂಧಿಕಾದ ಆಶ್ರಯದಲ್ಲಿ ಅಲ್ಪಾವಧಿಯ ಕಛೇರಿ ಮಾಡಿ ಭೇಷ್ ಅನಿಸಿಕೊಂಡರು.  ದಾಸರ ಕೃತಿಗಳು ಮತ್ತು ತ್ಯಾಗರಾಜರ ವಂದನಮು (ಶಹನ), ನಿನ್ನೆನೆರನಮ್ಮಿ (ಕಾಮವರ್ಧಿನಿ) ಮುಂತಾದ ರಚನೆಗಳನ್ನು ಗೋವಿಂದಸ್ವಾಮಿ (ಪಿಟೀಲು), ಜಗತಿಪ್ರಿಯ (ಮೃದಂಗ) ಮತ್ತು ಎಂ.ಎ.ಕೃಷ್ಣಮೂರ್ತಿ (ಘಟ) ಅವರ ಉಪಯುಕ್ತ ಸಹಕಾರದೊಂದಿಗೆ ಹಾಡಿದರು. ಕಲಾವಿದ ಗೊಪಾಲಕೃಷ್ಣ ಅವರ ಮುಂದಾಳತ್ವದಲ್ಲಿ ನಡೆದ ಶ್ರೀತ್ಯಾಗರಾಜ ಆರಾಧನೆ ಸಂದರ್ಭದಲ್ಲಿ ಈ ಕಛೇರಿ ನಡೆಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT