ಭಾನುವಾರ, ಏಪ್ರಿಲ್ 18, 2021
29 °C

`ವಿಶೇಷ ಸ್ಥಾನಮಾನ ವಿಳಂಬವಾದರೆ ಹೋರಾಟ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಚಳಿಗಾಲದ ಅಧಿವೇಶನದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲು ಅಂಗೀಕಾರವನ್ನು ನೀಡಬೇಕು ಇಲ್ಲವಾದರೆ, ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು' ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 371 ನೇ ಕಲಂ ಅನ್ನು ಕೇಂದ್ರ ಸರ್ಕಾರ ಕಾಟಾಚಾರಕ್ಕೆ ಜಾರಿಗೆ ತರುತ್ತಿದೆ. ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜ್ಯಪಾಲರು ಆಗಿರುವುದು ಬೇಡ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಅಭಿಪ್ರಾಯ ಸರಿಯಲ್ಲ' ಎಂದರು.

`ನಮಗೆ ನಿಷ್ಪಕ್ಷಪಾತವಾದ ಅಭಿವೃದ್ಧಿ ಬೇಕು. ಅಭಿವೃದ್ಧಿ ಮಂಡಳಿಗೆ ರಾಜ್ಯಪಾಲರು ನೇತೃತ್ವ ಬೇಡ ಎಂದು ಹೇಳಿದರೆ ನಿಷ್ಪಕ್ಷಪಾತವಾದ ಅಭಿವೃದ್ಧಿ ದೊರೆಯುವುದಿಲ್ಲ. ದೇಶಕ್ಕೆ ಸ್ವತಂತ್ರ ದೊರೆತು, ಕರ್ನಾಟಕ ಏಕೀಕರಣವಾಗಿ ದಶಕಗಳೇ ಕಳೆದರೂ ಹೈದರಾಬಾದ್ ಕರ್ನಾಟಕ ಇನ್ನು ಅಭಿವೃದ್ಧಿಯಾಗಿಲ್ಲ' ಎಂದು ತಿಳಿಸಿದರು.

`ಸ್ವಾತಂತ್ರ್ಯಾನಂತರ ಮಾಡಿದ ಭಾಷಾವಾರು ವಿಂಗಡಣೆ ವಿಫಲವಾಗಿದೆ. ಯಾವ ರಾಜ್ಯದಲ್ಲಿಯೂ ನೆಮ್ಮದಿಯಿಲ್ಲ. ಪ್ರಭಾವಿ ಪ್ರದೇಶಗಳು ಮಾತ್ರ ಅಭಿವೃದ್ಧಿಯಾಗಿವೆ. ಅನೇಕ ಪ್ರದೇಶಗಳು ಹಿಂದುಳಿದಿವೆ' ಎಂದರು.

`ನಮಗೆ ರಾಜಕೀಯ ಬೇಕಿಲ್ಲ. ರಾಜ್ಯಸಭಾ ಸದಸ್ಯರಾದ ವೆಂಕಯ್ಯ ನಾಯ್ಡು ಅವರು ಮುಖ್ಯಮಂತ್ರಿಗೆ ಅಭಿವೃದ್ಧಿಯ ಜವಾಬ್ದಾರಿ ವಹಿಸಲಿ. ಅಲ್ಲಿಯವರೆಗೂ ಮಸೂದೆಗೆ ಒಪ್ಪಿಗೆಯನ್ನು ಕೊಡಬೇಡಿ ಎಂದು ಹೇಳಿದ್ದಾರೆ. ಅವರಿಗೆ ನಮ್ಮ ರಾಜ್ಯದ ಬಗ್ಗೆ ಅದರಲ್ಲೂ ಹೈದರಾಬಾದ್ ಕರ್ನಾಟಕದ ಅಳಲಿನ ಬಗ್ಗೆ ಏನು ಗೊತ್ತು. ಅಂತಹವರನ್ನು ನಮ್ಮ ನಾಡಿನ ರಾಜ್ಯ ಸಭಾ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ' ಎಂದು ಕಿಡಿಕಾರಿದರು.

`ರಾಜ್ಯದ ಭೂ ಮೇಲ್ಮೈ ಜಲ ಸಂಪನ್ಮೂಲವನ್ನು ಪರಿಪೂರ್ಣವಾಗಿ ಬಳಕೆಯಾಗುವಂತೆ ರಾಜ್ಯದಲ್ಲಿ ಒಟ್ಟು ಮೂರು ಭಾರಿ ನೀರಾವರಿ ನಿಗಮಗಳನ್ನು ಸರ್ಕಾರ ಸ್ಥಾಪಿಸಿದೆ. ಆದರೆ, ಅವುಗಳ ನಿರ್ವಹಣೆಯಲ್ಲಿ ಸಮನ್ವಯತೆಯು ಉಂಟಾಗದೆ ನೀರು ನಿರ್ವಹಣೆಯಲ್ಲಿ ಅಡಚಣೆಗಳು ಉಂಟಾಗಿ ಹೈದರಾಬಾದ್ ಕರ್ನಾಟಕವು ಹಿಂದುಳಿದ ಪ್ರದೇಶವಾಗಿದೆ' ಎಂದು ಹೇಳಿದರು.

`ರಾಜ್ಯದಲ್ಲಿರುವ ಮೂರು ಜಲ ನಿಗಮಗಳಾದ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸಂಪೂರ್ಣ ಉತ್ತರ ಕರ್ನಾಟಕ, ಕರ್ನಾಟಕ ನೀರಾವರಿ ನಿಗಮಕ್ಕೆ ಸಂಪೂರ್ಣ ಮಧ್ಯ ಕರ್ನಾಟಕ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಸಂಪೂರ್ಣ ದಕ್ಷಿಣ ಕರ್ನಾಟಕ ಭಾಗವನ್ನು ಆಡಳಿತಕ್ಕೆ ವಹಿಸಿಕೊಟ್ಟು ಯೋಜನೆಗಳ ಜಾರಿಗೆ ಅನುಕೂಲವಾಗುವಂತೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಅವರು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.