ಶನಿವಾರ, ಏಪ್ರಿಲ್ 10, 2021
32 °C

ವಿಶ್ವಕಪ್‌ನಿಂದ ಕೆವಿನ್ ಪೀಟರ್ಸನ್ ಔಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಕೆವಿನ್ ಪೀಟರ್ಸನ್ ಈ ವಿಶ್ವಕಪ್ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದಿದ್ದಾರೆ.‘ತಂಡ ಹಾಗೂ ಭಾರತವನ್ನು ಬಿಟ್ಟು ಹೋಗಲು ತುಂಬಾ ಬೇಸರವಾಗುತ್ತಿದೆ. ಇಲ್ಲಿನ ಜನರು ಹಾಗೂ ಅವರ ಆತಿಥ್ಯವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆದರೆ ಹರ್ನಿಯಾ ಸಮಸ್ಯೆಯಿಂದ ನಾನು ಸ್ವದೇಶಕ್ಕೆ ಹಿಂತಿರುಗಬೇಕಾಗಿದೆ. ವಿಶ್ವಕಪ್‌ನ ಉಳಿದ ಪಂದ್ಯಗಳು ಹಾಗೂ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಧನ್ಯವಾದ ಗೆಳೆಯರೇ’ ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆಯೇ 30 ವರ್ಷ ವಯಸ್ಸಿನ ಪೀಟರ್ಸನ್‌ಗೆ ಈ ಸಮಸ್ಯೆ ಉದ್ಭವಿಸಿತ್ತು. ಆದರೂ ಅವರು ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ ಆಡಿದ್ದರು. ಆದರೆ ಬೆಂಗಳೂರಿನಲ್ಲಿ ಭಾರತ ವಿರುದ್ಧದ ಪಂದ್ಯದ ಬಳಿಕ ಆ ಸಮಸ್ಯೆ ಉಲ್ಬಣಿಸಿದೆ. ‘ಹರ್ನಿಯಾ ಸಮಸ್ಯೆ ಕಾರಣ ಪೀಟರ್ಸನ್ ಸ್ವದೇಶಕ್ಕೆ ಹಿಂತಿರುಗಲಿದ್ದಾರೆ’ ಎಂದು ತಂಡದ ವಕ್ತಾರರೊಬ್ಬರು ಸೋಮವಾರ ದೃಢಪಡಿಸಿದ್ದಾರೆ. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಅಭ್ಯಾಸ ನಡೆಸುವಾಗ ಅವರು ಪದೇಪದೇ ವಿಶ್ರಾಂತಿ ಪಡೆಯುತ್ತಿದ್ದರು. ಅಷ್ಟು ಮಾತ್ರವಲ್ಲದೇ, ಸೊಂಟದ ಮೇಲೆ ಕೈಯಿಟ್ಟುಕೊಂಡು ಕೆಳಗೆ ಬಾಗುತ್ತಿದ್ದರು. ಆದರೂ ಆರು ರನ್‌ಗಳ ಗೆಲುವು ಕಂಡ ಭಾನುವಾರದ ಪಂದ್ಯದಲ್ಲಿ ಅವರು ಆಡಿದ್ದರು. ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಅವರ ಆಫ್ ಸ್ಪಿನ್ ತಂಡದ ನೆರವಿಗೆ ಬಂದಿತ್ತು.‘ಪೀಟರ್ಸನ್ ಅವರ ಸದ್ಯದ ಪರಿಸ್ಥಿತಿ ಗಮನಿಸಿದರೆ ಈ ವಿಶ್ವಕಪ್‌ನ ಉಳಿದ ಪಂದ್ಯಗಳಲ್ಲಿ ಆಡಬಹುದು. ಆದರೆ ಅವರ ಆರೋಗ್ಯದಲ್ಲಿ ಉಂಟಾಗುತ್ತಿರುವ ಏರುಪೇರಿನ ಕಾರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿರುವುದು ಅನಿವಾರ್ಯ. ಶಸ್ತ್ರ ಚಿಕಿತ್ಸೆಗೆ ಒಳಗಾದ ಮೇಲೆ ಅವರಿಗೆ ಆರು ವಾರಗಳ ವಿಶ್ರಾಂತಿ ಅಗತ್ಯವಿದೆ’ ಎಂದು ಶನಿವಾರವಷ್ಟೇ ತಂಡದ ಅಧಿಕಾರಿಗಳು ಹೇಳಿದ್ದರು.ಹಾಗಾಗಿ ದಕ್ಷಿಣ ಆಫ್ರಿಕಾ ಮೂಲದ ಪೀಟರ್ಸನ್ ಐಪಿಎಲ್ ನಾಲ್ಕನೇ ಆವೃತ್ತಿಗೆ ಕೂಡ ಲಭ್ಯರಾಗುತ್ತಿಲ್ಲ. ಇದು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡಕ್ಕೆ ಆರಂಭದಲ್ಲೇ ಪೆಟ್ಟು ನೀಡಿದೆ. ಚೆನ್ನೈನಲ್ಲಿ ಏಪ್ರಿಲ್ ಎಂಟಕ್ಕೆ ಐಪಿಎಲ್ ಆರಂಭವಾಗಲಿದೆ.ಮೊರ್ಗನ್‌ಗೆ ಸ್ಥಾನ: ಪೀಟರ್ಸನ್ ಬದಲಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಯೊನ್ ಮೊರ್ಗನ್‌ಗೆ ವಿಶ್ವಕಪ್‌ನ ಉಳಿದ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದಕ್ಕೆ ಐಸಿಸಿ ಒಪ್ಪಿಗೆ ನೀಡಿದೆ. ವಿಶೇಷವೆಂದರೆ ಮೊರ್ಗನ್ ಐರ್ಲೆಂಡ್ ತಂಡದ ಮಾಜಿ ಆಟಗಾರ! ಇಂಗ್ಲೆಂಡ್ ತಂಡದವರು ಶುಕ್ರವಾರ ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶ ಎದುರು ಆಡಲಿದ್ದಾರೆ. ಅಷ್ಟರೊಳಗೆ ಮೊರ್ಗನ್ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಇಂಗ್ಲೆಂಡ್ ತಂಡದವರು ಆಡಿದ ನಾಲ್ಕು ಪಂದ್ಯಗಳಿಂದ ಐದು ಪಾಯಿಂಟ್ ಹೊಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.