ಶನಿವಾರ, ಮೇ 21, 2022
28 °C

ವಿಶ್ವಕಪ್ ಕ್ರಿಕೆಟ್: ಯುವಿ ತಂದ ಗೆಲುವಿನ ಸಿಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ ತಂಡದೊಳಗಿರುವ ‘ರೋಮ್ಯಾಂಟಿಕ್ ಹೀರೊ’ ಯುವರಾಜ್ ಸಿಂಗ್! ವರ್ಣರಂಜಿತ ವ್ಯಕ್ತಿತ್ವದಿಂದ ಸಾವಿರಾರು ಹೆಂಗಳೆಯರ ಹೃದಯ ಕದ್ದ ಇದೇ ಹುಡುಗ ಭಾನುವಾರದಂದು ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳ ಮನವನ್ನೂ ಗೆದ್ದ.ಸದಾ ಸಹ ಆಟಗಾರರಿಗೆ ಕೀಟಲೆ ಮಾಡಿ ಮನೆಯ ಮುದ್ದು ಮಗನಂತೆ ಬೆಳೆದು, ತಂಡದೊಳಗೆ ಬಹುಕಾಲ ಉಳಿದಿರುವ ‘ಯುವಿ’ ಗೆಲುವಾಗಿರುವಂಥ ಯುವಕ. ಇಂಥ ಚುರುಕಿನ ಹಾಗೂ ಚಂಚಲ ಮನದ ಕ್ರಿಕೆಟಿಗನ ಆಟವೇ ಭಾರತ ತಂಡವು ಐರ್ಲೆಂಡ್ ವಿರುದ್ಧ 24 ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್‌ಗಳ ಗೆಲುವು ಪಡೆಯಲು ನೆರವಾಯಿತು.ಅದರೊಂದಿಗೆ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡವು ‘ಬಿ’ ಗುಂಪಿನಿಂದ ಮೇಲೇರಿ ಕ್ವಾರ್ಟರ್‌ಫೈನಲ್‌ನಲ್ಲಿ ಆಡುವ ಕನಸೂ ಬಲವಾಯಿತು.ಎರಡು ಜಯ ಹಾಗೂ ಒಂದು ‘ಟೈ’ ಪಂದ್ಯದ ಫಲವಾಗಿ ಭಾರತದ ಖಾತೆಯಲ್ಲಿನ ಪಾಯಿಂಟ್‌ಗಳ ಸಂಖ್ಯೆ ಈಗ ಐದಕ್ಕೆ ಏರಿದೆ. ಇನ್ನೊಂದು ಯಶಸ್ಸು ಸಾಧ್ಯವಾದರೆ ಎಂಟರ ಘಟ್ಟದಲ್ಲಿ ಆಡುವುದು ಸ್ಪಷ್ಟ. ಇಂಥದೊಂದು ಆಶಯದ ಹಕ್ಕಿ ಗರಿಗೆದರುವಂತಾಗಿದ್ದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಡೆದ ವಿಜಯದಿಂದ. 208 ರನ್‌ಗಳ ಗೆಲುವಿನ ಗುರಿ ಮುಟ್ಟುವುದು ಒಂದಿಷ್ಟು ಕಷ್ಟವಾದರೂ, ಇಷ್ಟವಾಗುವಂಥ ಆಟವಾಡಿ ಸಂಕಷ್ಟ ನಿವಾರಿಸಿಕೊಂಡಿತು ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡ. 46 ಓವರುಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 210 ರನ್ ಗಳಿಸಿದ ಭಾರತದ ಖಾತೆಗೆ ಎರಡು ಪಾಯಿಂಟುಗಳೂ ಸೇರಿದವು.ಐರ್ಲೆಂಡ್ ಬೌಲರ್‌ಗಳ ಬಿಗುವಿನ ದಾಳಿಯ ನಡುವೆಯೂ ಜಯದ ದಡ ಸೇರುವ ಆಸೆ ಬಿಡದ ಭಾರತಕ್ಕೆ ದೆಹಲಿಯ ಬ್ಯಾಟ್ಸ್‌ಮನ್‌ಗಳಾದ ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರಿಂದ ತಕ್ಕ ನೆರವು ಸಿಗಲಿಲ್ಲ. ಕಷ್ಟ ಕಾಲದಲ್ಲಿ ಸಚಿನ್ ತೆಂಡೂಲ್ಕರ್ (38; 56 ಎ., 4 ಬೌಂಡರಿ) ಹಾಗೂ ವಿರಾಟ್ ಕೊಹ್ಲಿ (34; 53 ಎ., 3 ಬೌಂಡರಿ) ಮೂರನೇ ವಿಕೆಟ್‌ನಲ್ಲಿ ಒಂದಿಷ್ಟು ಹೊತ್ತು ಆಸರೆಯಾಗಿ ನಿಂತರು. ಆದರೆ ಆಗ ರನ್‌ಗತಿ ಕುಸಿದಿದ್ದು ಮಾತ್ರ ಆತಂಕಕ್ಕೆ ಕಾರಣ.‘ಮಾಸ್ಟರ್ ಬ್ಲಾಸ್ಟರ್’ ಮೇಲೆ ಜಾರ್ಜ್ ಡಾಕ್ರೆಲ್ ‘ಎಲ್‌ಬಿಡಬ್ಲ್ಯು’ ಬಲೆ ಬೀಸಿದರು, ಕೊಹ್ಲಿಗೆ ರನ್‌ಔಟ್ ಆಘಾತವಾಯಿತು. ಆಗ ಸುಲಭವಾಗಿ ಗೆಲ್ಲುವ ಪಂದ್ಯ ಕಷ್ಟದ್ದಾಗುತ್ತಿದೆ ಎನ್ನುವ ಆತಂಕದಲ್ಲಿ ಭಾರತದ ಬೆಂಬಲಿಗರ ಮುಖದಲ್ಲಿನ ಅಂದದ ಮಂದಹಾಸವೂ ಮಾಯವಾಯಿತು. ಆದರೆ ಹೀಗೆ ಆಗಿದ್ದು ಸ್ವಲ್ಪೇ ಹೊತ್ತು. ಯುವರಾಜ್ (ಔಟಾಗದೆ 50; 75 ಎ., 3 ಬೌಂಡರಿ) ಹಾಗೂ ನಾಯಕ ದೋನಿ (34; 50 ಎ., 2 ಬೌಂಡರಿ) ನಡುವಣ ಐದನೇ ವಿಕೆಟ್ ಜೊತೆಯಾಟ 67 ರನ್‌ಗಳಿಗೆ (68 ನಿ., 99 ಎ.) ಹಿಗ್ಗಿದಾಗ ಹೋದ ಜೀವ ಮತ್ತೆ ಬಂದಂಥ ಅನುಭವ.ದೋನಿ ನಿರ್ಗಮಿಸಿದಾಗ ಕ್ರೀಸ್‌ಗೆ ಬಂದ ಯೂಸುಫ್ ಪಠಾಣ್ (ಔಟಾಗದೆ 30; 24 ಎ., 2 ಬೌಂಡರಿ, 3 ಸಿಕ್ಸರ್) ಸೊಗಸಿನಿಂದ ಭಾರತದ ಇನಿಂಗ್ಸ್‌ಗೆ ಸಿಕ್ಸರ್ ಹಾಗೂ ಬೌಂಡರಿಗಳಿಂದ ಕಳೆಕಟ್ಟಿದರು. ಅಷ್ಟೇ ಅಲ್ಲ ವಿಶ್ವಕಪ್‌ನಲ್ಲಿ ಅತಿ ದೂರಕ್ಕೆ ಚೆಂಡನ್ನು ಸಿಕ್ಸರ್‌ಗೆ (99 ಮೀಟರ್) ಎತ್ತಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿದರು. ಈ ಪಟ್ಟಿಯಲ್ಲಿ ಕೆವಿನ್ ಓಬ್ರಿಯನ್ (102 ಮೀ.) ಅಗ್ರಸ್ಥಾನದಲ್ಲಿದ್ದಾರೆ.ಇದಕ್ಕೂ ಮುನ್ನ ಮಧ್ಯಾಹ್ನ ದೋನಿ ಮಾಡಿದ ದೊಡ್ಡ ಒಳಿತೆಂದರೆ ಪಂದ್ಯದ ಮುನ್ನಾದಿನ ತಾವೇ ಆಡಿದ ಮಾತನ್ನು ಉಳಿಸಿಕೊಂಡಿದ್ದು. ಟಾಸ್ ಗೆದ್ದರೆ ಮೊದಲ ಕ್ಷೇತ್ರ ರಕ್ಷಣೆ ಮಾಡುವ ಮನದಾಳದ ಇಂಗಿತವನ್ನು ಕಾರ್ಯರೂಪಕ್ಕೂ ತಂದರು.ಗುರಿಯನ್ನು ಬೆನ್ನಟ್ಟುವುದು ಹೆಚ್ಚು ಸುಲಭ ಎನ್ನುವ ಲೆಕ್ಕಾಚಾರದೊಂದಿಗೆ ಐರ್ಲೆಂಡ್‌ಗೆ ಮೊದಲು ಬ್ಯಾಟಿಂಗ್ ಮಾಡಲು ಇಳಿಸಿದ್ದರಿಂದ ಪ್ರಯೋಜನವೂ ಆಯಿತು. ಪೂರ್ಣ ಕೋಟಾ ಮುಗಿಸಿದ ಸಾಂದರ್ಭಿಕ ಬೌಲರ್ ಯುವರಾಜ್ ಸಿಂಗ್ (31ಕ್ಕೆ5) ಹಾಗೂ ಒಂಬತ್ತು ಓವರ್‌ನಲ್ಲಿ ಪ್ರಭಾವಿ ಎನಿಸಿದ ಎಡಗೈ ವೇಗಿ ಜಹೀರ್ ಖಾನ್ (30ಕ್ಕೆ3) ಅವರ ಶ್ರಮದ ಫಲವಾಗಿ ಐರ್ಲೆಂಡ್ 47.5 ಓವರುಗಳಲ್ಲಿ 207 ರನ್‌ಗೆ ಕುಸಿಯಿತು. ಸವಾಲಿನ ಮೊತ್ತ ಎದುರಿಗೆ ಭೂತಾಕಾರವಾಗಿ ನಿಲ್ಲುವ ಅಪಾಯವೂ ತಪ್ಪಿತು.ಐರ್ಲೆಂಡ್ ತಂಡದ ನಾಯಕ ವಿಲಿಯಮ್ ಪೋರ್ಟರ್‌ಫೀಲ್ಡ್ ಖಾತೆ ತೆರೆಯುವ ಮುನ್ನವೇ ನಿರ್ಗಮಿಸುವಂತೆ ಮಾಡಿದ್ದರೆ ಇನ್ನೂರಕ್ಕೂ ಹೆಚ್ಚು ರನ್ ಮೊತ್ತ ಭಾರತದ ಮುಂದೆ ಖಂಡಿತ ಇರುತ್ತಿರಲಿಲ್ಲ. ಜಹೀರ್ ಮೊದಲ ಓವರ್‌ನಲ್ಲಿ ಯೂಸುಫ್ ಪಠಾಣ್ ಎರಡನೇ ಸ್ಲಿಪ್‌ನಲ್ಲಿ ಚೆಂಡನ್ನು ಕೈಚೆಲ್ಲಿದ್ದು ದುಬಾರಿ ಎನಿಸಿತು. ಆ ಒಂದು ಜೀವದಾನದ ಸಂಜೀವಿನಿಯಿಂದ ಬೆಳೆದ ಪೋರ್ಟರ್‌ಫೀಲ್ಡ್(75; 104 ಎ., 6 ಬೌಂಡರಿ, 1 ಸಿಕ್ಸರ್)ಗೆ ಪೆವಿಲಿಯನ್ ದಾರಿ ತೋರಿಸಲು ಯುವರಾಜ್ ಕೈಗೆ ದೋನಿ ಚೆಂಡನ್ನು ನೀಡಬೇಕಾಯಿತು. ಆದರೆ ಐರ್ಲೆಂಡ್ ತಂಡದ ನಾಯಕನ ಬ್ಯಾಟ್‌ನಿಂದ ಸಿಡಿದ ಚೆಂಡನ್ನು ಹರಭಜನ್ ಸಿಂಗ್ ತೀರ ಸುಲಭವಾಗಿ ಹಿಡಿತಕ್ಕೆ ಪಡೆಯುವ ಹೊತ್ತಿಗಾಗಲೇ ಒಟ್ಟು ಮೊತ್ತ 160 ರನ್.ಜಹೀರ್ ತಮ್ಮ ಮೊದಲ ಎರಡು ಓವರ್‌ಗಳಲ್ಲಿ ಪಾಲ್ ಸ್ಟಿರ್ಲಿಂಗ್ ಹಾಗೂ ಎಡ್ ಜಾಯ್ಸಿ ಅವರನ್ನು ಬಲಿ ತೆಗೆದುಕೊಂಡಾಗ ಐರ್ಲೆಂಡ್ ಕಡಿಮೆ ಮೊತ್ತಕ್ಕೆ ಕುಸಿಯುತ್ತದೆ ಎನ್ನುವ ಆಸೆಯ ಹಕ್ಕಿ ಗರಿಗೆದರಿತ್ತು. ಆದರೆ ಯೂಸುಫ್ ಮಾಡಿದ ತಪ್ಪೊಂದು ದೋನಿ ಬಳಗದ ಆತಂಕ ಹೆಚ್ಚಲು ಕಾರಣವಾಯಿತು. ಆದರೂ ಕಷ್ಟಪಟ್ಟು ಐರ್ಲೆಂಡ್‌ಗೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿ ಆಯಿತು.ಆತಿಥೇಯರು ದೊಡ್ಡ ನಿಟ್ಟುಸಿರು ಬಿಟ್ಟಿದ್ದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಟ್ಟಹಾಸ ಮೆರೆದಿದ್ದ ಕೆವಿನ್ ಓಬ್ರಿಯನ್ ಎರಡಂಕಿಯ ಮೊತ್ತವನ್ನೂ ಮುಟ್ಟದೇ ಮುಗ್ಗರಿಸಿದಾಗ. ಕೆವಿನ್ ಎನ್ನುವ ‘ಬಾಂಬ್’ ಸ್ಫೋಟಗೊಳ್ಳುವ ಮೊದಲೇ ಯುವರಾಜ್ ತಣ್ಣೀರು ಸುರಿದರು. ತಮ್ಮದೇ ಎಸೆತದಲ್ಲಿ ಅವರು, ಕೆವಿನ್ ನೇರವಾಗಿ ಬ್ಯಾಟ್ ಬೀಸಿದಾಗ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ತಪ್ಪು ಮಾಡಲಿಲ್ಲ. ಆಗ ಕ್ರೀಡಾಂಗಣದಲ್ಲಿ ಮೆಕ್ಸಿಕನ್ ಅಲೆಯ ಸಂಚಲನ. ‘ತಪ್ಪಿತು ಒಂದು ಆಪತ್ತು’ ಎಂದು ಕ್ರಿಕೆಟ್ ಪ್ರೇಮಿಗಳೂ ಸಮಾಧಾನಪಟ್ಟರು.ಕೆವಿನ್ ಆಸ್ಫೋಟಿಸದಿದ್ದರೂ ಅವರ ಸಹೋದರ ನೀಲ್ ಓಬ್ರಿಯನ್ (46; 78 ಎ., 3 ಬೌಂಡರಿ) ಸಹನೆಯ ಆಟದಿಂದ ಆತಿಥೇಯ ತಂಡದ ಬೌಲರ್‌ಗಳು ಚಡಪಡಿಸುವಂತೆ ಮಾಡಿದರು. ಆದರೆ ಆತುರದ ರನ್ ಗಳಿಕೆಯ ಉತ್ಸಾಹವು ನೀಲ್‌ಗೆ ಆಪತ್ತು ತಂದಿತು. ಆ ಹೊತ್ತಿಗಾಗಲೇ ಯುವರಾಜ್ ಭಯದ ಬೀಜವನ್ನು ಎದುರಾಳಿಗಳ ಮನದಲ್ಲಿ ಬಿತ್ತಿಯಾಗಿತ್ತು. ಅಲೆಕ್ಸ್ ಕ್ಯೂಸೆಕ್ (24; 30 ಎ., 3 ಬೌಂಡರಿ) ಇನಿಂಗ್ಸ್ ಹಿಗ್ಗಿಸುವ ಯತ್ನಕ್ಕೂ ತೊಡಕಾಗಿದ್ದು ಯುವರಾಜ್.ಕ್ಯೂಸೆಕ್ ಎಲ್‌ಬಿಡಬ್ಲುಗೆ ‘ಯುವಿ’ ಮನವಿ ಮಾಡಿದಾಗ ಅಂಪೈರ್ ರಾಡ್ನಿ ಟರ್ಕರ್ ನಿರಾಕರಿಸಿದರು. ಆ ಸಂದರ್ಭದಲ್ಲಿ ಪಟ್ಟುಬಿಡದ ‘ಯುವಿ’ ಅಂಪೈರ್ ತೀರ್ಪು ಮರುಪರಿಶೀಲನೆ(ಯುಡಿಆರ್‌ಎಸ್)ಗೆ ಕೋರಿದರು. ಅದೊಂದು ಸೂಕ್ಷ್ಮವಾದ ‘ಲೆಗ್ ಬಿಫೋರ್’ ಆಗಿತ್ತು. ತೀರ್ಪು ಭಾರತದ ಪರ ಬಂತು. ಇದು ‘ಯುಡಿಆರ್‌ಎಸ್’ನಿಂದ ಆದ ಪ್ರಯೋಜನ. ಕ್ಯೂಸೆಕ್ ವಿಕೆಟ್ ಪತನದೊಂದಿಗೆ ಯುವರಾಜ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಐದು ವಿಕೆಟ್ ಸಾಧನೆಯ ಶ್ರೇಯವೂ ಸಂದಿತು.ಭಾರತಕ್ಕೆ ಬೌಲಿಂಗ್‌ನಲ್ಲಿ ಹೆಚ್ಚು ನಿರಾಸೆಯಾಗಿದ್ದು ಪಿಯೂಶ್ ಚಾವ್ಲಾ ಅವರಿಂದ. ಆರ್.ಅಶ್ವಿನ್‌ಗೆ ಅವಕಾಶ ನೀಡುವ ಬದಲು ಚಾವ್ಲಾ ಅವರನ್ನು ಆಡಿಸಿದ್ದೇ ಅಚ್ಚರಿ! ಮೇಲ್ಪಂಕ್ತಿಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಹೆಚ್ಚಾಗಿ ಹೊಂದಿರುವ ಐರ್ಲೆಂಡ್ ತಂಡದ ಎದುರು ಅಶ್ವಿನ್ ‘ಆಫ್‌ಬ್ರೆಕ್’ ಹೆಚ್ಚು ಪ್ರಯೋಜನಕಾರಿ ಆಗಬಹುದಿತ್ತು. ಚಾವ್ಲಾಗೆ ದೋನಿ ಮಣೆಹಾಕಿದ್ದರ ಪರಿಣಾಮ ದುಬಾರಿ ಎನಿಸಿತು. ಉತ್ತರ ಪ್ರದೇಶದ ಲೆಗ್‌ಸ್ಪಿನ್ನರ್ ತಮ್ಮ ಮೊದಲ ಓವರ್‌ನಲ್ಲಿಯೇ ಹದಿನೈದು ರನ್ ನೀಡಿದ್ದು ಆಘಾತಕಾರಿ.

ಐರ್ಲೆಂಡ್: 47.5 ಓವರುಗಳಲ್ಲಿ 207

ವಿಲಿಯಮ್ ಪೋರ್ಟರ್‌ಫೀಲ್ಡ್ ಸಿ ಹರಭಜನ್ ಸಿಂಗ್ ಬಿ ಯುವರಾಜ್ ಸಿಂಗ್  75

ಪಾಲ್ ಸ್ಟಿರ್ಲಿಂಗ್ ಬಿ ಜಹೀರ್ ಖಾನ್  00

ಎಡ್ ಜಾಯ್ಸಿ ಸಿ ಮಹೇಂದ್ರ ಸಿಂಗ್ ದೋನಿ ಬಿ ಜಹೀರ್ ಖಾನ್  04

ನೀಲ್ ಓಬ್ರಿಯನ್ ರನ್‌ಔಟ್ (ಮಹೇಂದ್ರ ಸಿಂಗ್ ದೋನಿ/ವಿರಾಟ್ ಕೊಹ್ಲಿ)  46

ಆ್ಯಂಡ್ರ್ಯೂ ವೈಟ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಯುವರಾಜ್ ಸಿಂಗ್  05

ಕೆವಿನ್ ಓಬ್ರಿಯನ್ ಸಿ ಮತ್ತು ಬಿ ಯುವರಾಜ್ ಸಿಂಗ್ 09

ಅಲೆಕ್ಸ್ ಕ್ಯೂಸೆಕ್ ಎಲ್‌ಬಿಡಬ್ಲ್ಯು ಬಿ ಯುವರಾಜ್  24

ಜಾನ್ ಮೂನಿ ಎಲ್‌ಬಿಡಬ್ಲ್ಯು ಬಿ ಯುವರಾಜ್   05

ಟ್ರೆಂಟ್ ಜಾನ್‌ಸ್ಟನ್ ಎಲ್‌ಬಿಡಬ್ಲ್ಯು ಬಿ ಮುನಾಫ್ ಪಟೇಲ್  17

ಜಾರ್ಜ್ ಡಾಕ್ರೆಲ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಜಹೀರ್ ಖಾನ್  03

ಬಾಯ್ಡೆ ರಂಕಿನ್ ಔಟಾಗದೆ  01

ಇತರೆ: (ಲೆಗ್‌ಬೈ-4, ವೈಡ್-8, ನೋಬಾಲ್-6) 18

ವಿಕೆಟ್ ಪತನ: 1-1 (ಪಾಲ್ ಸ್ಟಿರ್ಲಿಂಗ್; 0.4), 2-9 (ಎಡ್ ಜಾಯ್ಸಿ; 2.3), 3-122 (ನೀಲ್ ಓಬ್ರಿಯನ್; 26.5), 4-129 (ಆ್ಯಂಡ್ರ್ಯೂ ವೈಟ್; 29.1), 5-147 (ಕೆವಿನ್ ಓಬ್ರಿಯನ್; 33.4), 6-160 (ವಿಲಿಯಮ್ ಪೋರ್ಟರ್‌ಫೀಲ್ಡ್; 37.1),  7-178 (ಜಾನ್ ಮೂನಿ; 41.5), 8-184 (ಅಲೆಕ್ಸ್ ಕ್ಯೂಸೆಕ್; 43.4), 9-201 (ಜಾರ್ಜ್ ಡಾಕ್ರೆಲ್; 46.6), 10-207 (ಟ್ರೆಂಟ್ ಜಾನ್‌ಸ್ಟನ್; 47.5).

ಬೌಲಿಂಗ್: ಜಹೀರ್ ಖಾನ್ 9-1-30-3 (ವೈಡ್-1), ಮುನಾಫ್ ಪಟೇಲ್ 4.5-0-25-1 (ವೈಡ್-1), ಯೂಸುಫ್ ಪಠಾಣ್ 7-1-32-0, ಹರಭಜನ್ ಸಿಂಗ್ 9-1-29-0 (ವೈಡ್-1), ಪಿಯೂಶ್ ಚಾವ್ಲಾ 8-0-56-0 (ನೋಬಾಲ್-2, ವೈಡ್-3), ಯುವರಾಜ್ ಸಿಂಗ್ 10-0-31-5 (ವೈಡ್-1)ಭಾರತ: 46 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 210

ವೀರೇಂದ್ರ ಸೆಹ್ವಾಗ್ ಸಿ ಮತ್ತು ಬಿ ಜಾನ್‌ಸ್ಟನ್  05

ಸಚಿನ್ ತೆಂಡೂಲ್ಕರ್ ಎಲ್‌ಬಿಡಬ್ಲ್ಯು ಬಿ ಜಾರ್ಜ್ ಡಾಕ್ರೆಲ್  38

ಗೌತಮ್ ಗಂಭೀರ್ ಸಿ ಅಲೆಕ್ಸ್ ಕ್ಯೂಸೆಕ್ ಬಿ ಟ್ರೆಂಟ್ ಜಾನ್‌ಸ್ಟನ್  10

ವಿರಾಟ್ ಕೊಹ್ಲಿ ರನ್‌ಔಟ್ (ಜಾರ್ಜ್ ಡಾಕ್ರೆಲ್/ಕೆವಿನ್ ಓಬ್ರಿಯನ್)  34

ಯುವರಾಜ್ ಸಿಂಗ್ ಔಟಾಗದೆ  50

ಮಹೇಂದ್ರ ಸಿಂಗ್ ದೋನಿ ಎಲ್‌ಬಿಡಬ್ಲ್ಯು ಬಿ ಜಾರ್ಜ್ ಡಾಕ್ರೆಲ್  34

ಯೂಸುಫ್ ಪಠಾಣ್ ಔಟಾಗದೆ  30

ಇತರೆ: (ಲೆಗ್‌ಬೈ-4, ವೈಡ್-5)  09

ವಿಕೆಟ್ ಪತನ: 1-9 (ವೀರೇಂದ್ರ ಸೆಹ್ವಾಗ್; 1.1), 2-24 (ಗೌತಮ್ ಗಂಭೀರ್; 5.2), 3-87 (ಸಚಿನ್ ತೆಂಡೂಲ್ಕರ್; 20.1), 4-100 (ವಿರಾಟ್ ಕೊಹ್ಲಿ; 23.4), 5-167 (ಮಹೇಂದ್ರ ಸಿಂಗ್ ದೋನಿ; 40.1).

ಬೌಲಿಂಗ್: ಬಾಯ್ಡಿ ರಂಕಿನ್ 10-1-34-0 (ವೈಡ್-2), ಟ್ರೆಂಟ್ ಜಾನ್‌ಸ್ಟನ್ 5-1-16-2 (ವೈಡ್-1), ಜಾರ್ಜ್ ಡಾಕ್ರೆಲ್ 10-0-50-2, ಜಾನ್ ಮೂನಿ 2-0-18-0, ಪಾಲ್ ಸ್ಟಿರ್ಲಿಂಗ್ 10-0-45-0 (ವೈಡ್-2), ಆ್ಯಂಡ್ರ್ಯೂ ವೈಟ್ 5-0-23-0, ಕೆವಿನ್ ಓಬ್ರಿಯನ್ 1-0-3-0, ಅಲೆಕ್ಸ್ ಕ್ಯೂಸೆಕ್ 3-0-18-0   

ಫಲಿತಾಂಶ: ಭಾರತಕ್ಕೆ 5 ವಿಕೆಟ್‌ಗಳ ಗೆಲುವು.

ಪಾಯಿಂಟ್ಸ್: ಭಾರತ-2, ಐರ್ಲೆಂಡ್-0

ಪಂದ್ಯ ಶ್ರೇಷ್ಠ: ಯುವರಾಜ್ ಸಿಂಗ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.