ಬುಧವಾರ, ಜೂಲೈ 8, 2020
21 °C

ವಿಶ್ವಕಪ್ ಬಳಿಕ ಅಖ್ತರ್ ನಿವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಕಪ್ ಬಳಿಕ ಅಖ್ತರ್ ನಿವೃತ್ತಿ

ಕೊಲಂಬೊ (ಪಿಟಿಐ): ಪಾಕಿಸ್ತಾನ ತಂಡದ ವೇಗದ ಬೌಲರ್ ಶೋಯಬ್ ಅಖ್ತರ್ ಅವರು ಪ್ರಸಕ್ತ ವಿಶ್ವಕಪ್ ಟೂರ್ನಿಯ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ. ತಮ್ಮ ನಿರ್ಧಾರವನ್ನು ಅವರು ಗುರುವಾರ ಇಲ್ಲಿ ಪ್ರಕಟಿಸಿದರು.ಉದ್ದೀಪನ ಮದ್ದು ಸೇವೆ ಒಳಗೊಂಡಂತೆ ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿದ್ದ ಅಖ್ತರ್ ಹಲವು ಸಲ ಗಾಯದ ಸಮಸ್ಯೆ ಎದುರಿಸಿದ್ದರು. ಇವೆಲ್ಲದರ ನಡುವೆಯೂ ಪಾಕಿಸ್ತಾನದ ವೇಗದ ಬೌಲಿಂಗ್‌ನಲ್ಲಿ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದ್ದರು. ಈ ನಿರ್ಧಾರದಿಂದ ಅವರ 13 ವರ್ಷಗಳ ಕ್ರಿಕೆಟ್ ಜೀವನಕ್ಕೆ ತೆರೆ ಬೀಳಲಿದೆ. ಅಖ್ತರ್ 1997 ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದ್ದರು. ಇದುವರೆಗೆ 163 ಏಕದಿನ ಪಂದ್ಯಗಳನ್ನಾಡಿರುವ ಅವರು ಒಟ್ಟು 247 ವಿಕೆಟ್‌ಗಳನ್ನು ಪಡೆದಿದ್ದಾರೆ. 46 ಟೆಸ್ಟ್‌ಗಳಿಂದ 178 ವಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ.‘ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಇನ್ನೂ ಆಡಬೇಕೆಂದು ನನ್ನ ಮನಸ್ಸು ಹೇಳುತ್ತಿದೆ. ಆದರೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ವಿರಮಿಸುತ್ತಿದ್ದೇನೆ’ ಎಂದು ಅಖ್ತರ್ ಸುದ್ದಿಗೋಷ್ಠಿಯಲ್ಲಿ ನುಡಿದರು.‘ನನಗೆ ಯಾವುದೇ ಪಶ್ಚಾತಾಪವಿಲ್ಲ. ಈ ಅವಧಿಯಲ್ಲಿ ಸಾಕಷ್ಟು ಗೆಳೆಯರನ್ನು ಪಡೆದಿದ್ದೇನೆ. ಆದರೆ ಕೆಲವರು ನನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. ನನ್ನ ಜೊತೆ ಹಾಗೂ ನನ್ನ ಎದುರಾಳಿಯಾಗಿ ಆಡಿದ ಎಲ್ಲ ಆಟಗಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅವರು ಭಾವುಕರಾಗಿ ತಿಳಿಸಿದರು.‘ವಾಸೀಮ್ ಅಕ್ರಮ್ ಮತ್ತು ವಕಾರ್ ಯೂನಿಸ್ ಅವರಂತಹ ಆಟಗಾರರ ಜೊತೆ ಆಡುವ ಅವಕಾಶ ಲಭಿಸಿದ್ದು ಬಲುದೊಡ್ಡ ಗೌರವ. ಪಾಕಿಸ್ತಾನದ ಪರ ಆಡುವೆ ಎಂಬುದನ್ನು ಕನಸಿನಲ್ಲೂ ಯೋಚಿಸಿರಲಿಲ್ಲ. ಪಾಕ್ ಪರ ಆಡಿದ್ದು ನನ್ನ ಜೀವನದ ಬಲುದೊಡ್ಡ ಸಾಧನೆ. ಈ ವಿಶ್ವಕಪ್‌ನಲ್ಲಿ ಪಾಕ್ ಆಡುವ ಕೊನೆಯ ಪಂದ್ಯ ನನ್ನ ವೃತ್ತಿಜೀವನದ ಕೊನೆಯ ಪಂದ್ಯ ಎನಿಸಲಿದೆ. ಅದು ಏಪ್ರಿಲ್ 2 ರಂದು ಮುಂಬೈನಲ್ಲಿ ನಡೆಯುವ ಫೈನಲ್ ಆಗಿರಲಿ ಎಂಬ ವಿಶ್ವಾಸ ನನ್ನದು’ ಎಂದರು.‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಅಖ್ತರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಅವಧಿಯಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಫಿಟ್‌ನೆಸ್ ಸಮಸ್ಯೆ ಅವರ ವೃತ್ತಿಜೀವನದ ಉದ್ದಕ್ಕೂ ಕಾಡಿತು. ಅಖ್ತರ್ ಅವರು ಅಂಗಳದಲ್ಲಿ ನೀಡಿದ ಪ್ರದರ್ಶನದ ಮೂಲಕ ಸುದ್ದಿಯಾದದ್ದು ಕಡಿಮೆ. ಅದ್ಭುತ ಪ್ರತಿಭೆ ಹೊಂದಿದ್ದರೂ ವಿವಾದಗಳಿಂದಲೇ ಸುದ್ದಿಯಾದದ್ದು ವಿಪರ್ಯಾಸ. 2006 ರಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದ ಅವರು ಎರಡು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಇದರಿಂದ ಆ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ.ಫಿಟ್‌ನೆಸ್ ಸಮಸ್ಯೆಯಿಂದಾಗಿ 2007ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಡುವ ಅವಕಾಶ ಕಳೆದುಕೊಂಡಿದ್ದರು. ಅದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಮುನ್ನ ಸಹ ಆಟಗಾರ ಮೊಹಮ್ಮದ್ ಆಸಿಫ್ ಅವರಿಗೆ ಬ್ಯಾಟ್‌ನಿಂದ ಹೊಡೆದಿದ್ದರು. ಇದಕ್ಕೆ 13 ಏಕದಿನ ಪಂದ್ಯಗಳ ನಿಷೇಧಕ್ಕೆ ಗುರಿಯಾಗಿದ್ದರು.ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ಅಖ್ತರ್ ಬಹಿರಂಗವಾಗಿ ಟೀಕಿಸುತ್ತಿದ್ದರು. ಇದೇ ಕಾರಣ ಪಿಸಿಬಿ 2008 ರಲ್ಲಿ ಇವರ ಮೇಲೆ ಐದು ವರ್ಷಗಳ ನಿಷೇಧ ಹೇರಿತ್ತು. ಬಳಿಕ ಅದನ್ನು 18 ತಿಂಗಳುಗಳಿಗೆ ಕಡಿತಗೊಳಿಸಿತ್ತಲ್ಲದೆ, 70 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಅಖ್ತರ್ ಸೂಕ್ತ ಸಮಯದಲ್ಲಿ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಮತ್ತು ಕೋಚ್ ವಕಾರ್ ಯೂನಿಸ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.