ಗುರುವಾರ , ಮೇ 19, 2022
21 °C

ವಿಶ್ವಬ್ಯಾಂಕ್‌ಗೂ ಮಸಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಮಗಿಂತ ಕಡಿಮೆ ಮಳೆ ಬೀಳುವ ರಾಜಸ್ತಾನದಲ್ಲಿ `ಅರವಾರಿ'ಯಂಥ ಬತ್ತಿದ ನದಿಗಳೇ ಹರಿಯಬೇಕಾದರೆ, ನಮ್ಮೂರ ಕೆರೆಗಳೇಕೆ ತುಂಬಿ ತುಳುಕಲಾರವು?ರಾಜಸ್ತಾನದ ಯಶೋಗಾಥೆ ಗೊತ್ತಿರಬೇಕಲ್ಲ. ಅಲ್ಲಿ ಬತ್ತಿದ ನದಿಗಳಿಗೆ ಜಲಪೂರಣದ ಮೂಲಕ ಮತ್ತೇ ಜೀವ ತುಂಬಿದ್ದು ಜಲತಜ್ಞ ಡಾ.ರಾಜೇಂದ್ರಸಿಂಗ್. ದಶಕಗಳ ಕಾಲ ಒಣಗಿದ್ದ ಅನೇಕ ನದಿಗಳು ಈಗ ಅಲ್ಲಿ ಹರಿಯುತ್ತಿವೆ. ಯಥೇಚ್ಛ ಮಳೆ ಬೀಳುವ ಕೇರಳದಲ್ಲೂ ಬತ್ತಿದ ನದಿಗಳಿಗೆ ಜೀವ ತರಿಸಿದ್ದಾರೆ.ಹೀಗೆ ನಮ್ಮ ಕೆರೆಗಳಿಗೂ ಜೀವ ನೀಡಲು ಯತ್ನಿಸಿದ ವಿಶ್ವಬ್ಯಾಂಕ್ ಮುಖಕ್ಕೂ ನಾವು ಮಸಿ ಬಳಿದೆವು. ಜಿಲ್ಲೆಯಲ್ಲಿ ಕೆರೆಗಳ ಪುನಶ್ಚೇತನಕ್ಕೆ ವಿಶ್ವಬ್ಯಾಂಕ್ ಹಣಕಾಸಿನ ನೆರವಿನಲ್ಲಿ ಜಲಸಂವರ್ಧನಾ ಯೋಜನೆ ಜಾರಿಯಾಗಿ ಸರಿಯಾಗಿ ಹತ್ತು ವರ್ಷ ಆಯಿತು. ಆದರೆ ಫಲಿತಾಂಶ ಏನೇನೂ ಇಲ್ಲವಾಗಿದೆ.2004-05ನೇ ಸಾಲಿನಿಂದ ಜಾರಿಯಾದ ಜಲ ಸಂವರ್ಧನಾ ಯೋಜನೆ ಉದ್ದೇಶ ಚೆನ್ನಾಗಿತ್ತು. ಜನರ ಸಹಭಾಗಿತ್ವದಲ್ಲಿ ಕೆರೆಗಳನ್ನು ಅಭಿವೃದ್ಧಿಗೊಳಿಸುವುದು. ಗ್ರಾಮ ಅರಣ್ಯ ಬೆಳೆಸುವುದು ಉದ್ದೇಶವಾಗಿತ್ತು.ಬತ್ತಿದ ನದಿಗಳಿಗೆ ಜೀವ ತರಿಸಿದ ಜಲತಜ್ಞ ರಾಜೇಂದ್ರಸಿಂಗ್ ಕೂಡ `ನಮ್ಮ ಗ್ರಾಮದ ಜುಟ್ಟು, ನಮ್ಮ ಕೈಯಲ್ಲಿ ಇರಬೇಕು. ನೀರಿನ ಯೋಜನೆಗೆ ಸರ್ಕಾರದ ಭಿಕ್ಷೆ ಏಕೆ ಬೇಡಬೇಕು' ಎನ್ನುತ್ತಾರೆ. ಆದರೆ ಬಯಲುಸೀಮೆ ಜನರು ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಯೋಜನೆ ಜಾರಿಯ ಹೊಣೆ ಹೊತ್ತ ಅಧಿಕಾರಿಗಳ ತಂಡ ಕೂಡ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ ಎಂಬುದು ಯೋಜನೆ ವಿಫಲವಾಗಲು ಕಾರಣ ಎಂದು ಬೇರೆ ಹೇಳಬೇಕಿಲ್ಲ.ಕಾವೇರಿ ಕೊಳ್ಳದ ಕೆರೆಗಳನ್ನು ಕೈ ಬಿಟ್ಟು ಕೃಷ್ಣ ಕೊಳ್ಳದ ಕೆರೆಗಳ ಸಮಗ್ರ ಅಭಿವೃದ್ಧಿಗೆ ಜಾರಿಯಾದ ಮಹತ್ವದ ಯೋಜನೆ ಇದಾಗಿತ್ತು. ಪ್ರಸ್ತುತ ಕೃಷ್ಣ ಕೊಳ್ಳದ ನೂರಕ್ಕೂ ಅಧಿಕ ಟಿಎಂಸಿ ನೀರು ಪೋಲಾಗುತ್ತಿದೆ. ಈ ಪೋಲಾಗುವ ನೀರನ್ನು ಕೆರೆಗೆ ಸೇರಿಸಬಹುದಿತ್ತು. ಆದರೆ ಯೋಜನೆ ಜಾರಿಯಲ್ಲಿ ವಿಫಲವಾದ ಕಾರಣ ಈಗ ಕೆರೆಗಳಲ್ಲಿ ನೀರಿಲ್ಲದೆ ಅಂತರ್ಜಲ ಕುಸಿದು ಈ ಭಾಗದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಯೋಜನೆ ಮೊದಲ ಹಂತದಲ್ಲಿ 340 ಕೆರೆಗಳನ್ನು ಹಾಗೂ ಎರಡನೇ ಹಂತದಲ್ಲಿ 119 ಕೆರೆಗಳನ್ನು ಅಭಿವೃದ್ಧಿಗೊಳಿಸಬೇಕಿತ್ತು. ಯೋಜನೆ ಮೊದಲನೇ ಹಂತ ಟೆಂಡರ್ ಪದ್ಧತಿ ಇಲ್ಲದೆ ವಿಫಲವಾದರೆ, ಎರಡನೇ ಹಂತದಲ್ಲಿ ಟೆಂಡರ್ ಪದ್ಧತಿ ಜಾರಿಗೆ ಬಂದು ಯೋಜನೆ ಮತ್ತಷ್ಟು ಹಳ್ಳ ಹಿಡಿಯಲು ಕಾರಣವಾಯಿತು.ಯೋಜನೆಯಡಿ ಗ್ರಾಮಗಳಲ್ಲಿ ಕೆರೆ ಬಳಕೆದಾರರ ಸಂಘಕಟ್ಟಲಾಯಿತು. ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಸಮಿತಿ ಅಧ್ಯಕ್ಷರಾಗಿದ್ದರು. ಶೇ 6ರಷ್ಟು ಶ್ರಮದಾನ, ಶೇ 6ರಷ್ಟು ಗ್ರಾಮದ ಜನರ ಹಣ, ಉಳಿದ ಹಣ ವಿಶ್ವಬ್ಯಾಂಕ್ ನೀಡುತ್ತಿತ್ತು. ಜನರ ಸಹಭಾಗಿತ್ವ ಒಳಗೊಂಡ ಯೋಜನೆ ಅತ್ಯುತ್ತಮ ಯೋಜನೆ. ಆದರೆ ಯೋಜನೆ ಜಾರಿ ಮಾಡಲು ಬದ್ಧತೆ ಇದ್ದ ಅಧಿಕಾರಿಗಳೇ ಇರಲಿಲ್ಲ.ಕೆರೆ ಅಭಿವೃದ್ಧಿಗೆ ಎರಡನೇ ಹಂತದಲ್ಲಿ ಜಿಲ್ಲೆಗೆ ಬಂದಿದ್ದ ರೂ. 26 ಕೋಟಿಯಲ್ಲಿ ಇನ್ನೂ ರೂ. 16 ಕೋಟಿ ಉಳಿದಿದೆ. ಯೋಜನೆ ಶೇ 50ರಷ್ಟು ಪ್ರಗತಿ ಸಾಧಿಸಲಿಲ್ಲ ಎನ್ನುತ್ತಾರೆ ಜಲ ಸಂವರ್ಧನ ಯೋಜನೆಯಲ್ಲಿ ಕೆಲಸ ಮಾಡಿದ ಅಧಿಕಾರಿಯೊಬ್ಬರು.ನೀರು, ಕೆರೆ, ಅಂತರ್ಜಲ ಕುರಿತು ಸಾಕಷ್ಟು ಕೆಲಸ ಮಾಡಿರುವ ಜಿಲ್ಲೆಯ ಕೆಲವೇ ಜನರಲ್ಲಿ ಒಬ್ಬರಾಗಿರುವ ಮಲ್ಲಿಕಾರ್ಜುನ ಹೊಸಪಾಳ್ಯ `ಜಲಸಂವರ್ಧನಾ ಯೋಜನೆ ಯಶ ಕಾಣಲಿಲ್ಲ. ಅಲ್ಲೊಂದು, ಇಲ್ಲೊಂದು ಕೆರೆಗಳು ಅಭಿವೃದ್ಧಿಯಾದವು' ಎನ್ನುತ್ತಾರೆ.ವಿಶ್ವಬ್ಯಾಂಕ್ ನೀಡಿದ ಹಣದಲ್ಲಿ ಅಭಿವೃದ್ಧಿಯಾಗಬೇಕಿದ್ದ ಜಿಲ್ಲೆಯ 459 ಕೆರೆಗಳು ಏನಾಗಿವೆ. ಸಣ್ಣ ನೀರಾವರಿ ಇಲಾಖೆ ಸಚಿವರ ಅಧೀನದಲ್ಲಿ ನಡೆದ ಸಮಗ್ರ ಕೆರೆ ಅಭಿವೃದ್ಧಿ ದಾರಿ ತಪ್ಪಲು ಸರ್ಕಾರದ ನೀತಿಯೇ ಕಾರಣವಾಯಿತು. ಮೊದಲ ಯೋಜನೆಗೂ, ಎರಡನೆ ಯೋಜನೆಯ ಗುತ್ತಿಗೆಯ ಎಸ್‌ಆರ್ ದರದಲ್ಲಿ ಮಾಡಿದ ವ್ಯತ್ಯಾಸ ಜನರ ನಡುವೆ ಅಸಮಾಧಾನ ಹುಟ್ಟಿಸಿದವು. ಮೊದಲ ಹಂತದ ಕೆರೆ ಬಳಕೆದಾರರ ಸಂಘಗಳು ಸರ್ಕಾರದ ಈ ನಿರ್ಧಾರದ ವಿರುದ್ಧ ಕೋಪಿಸಿಕೊಂಡು ಅವರೂರಿನ ಕೆರೆಗಳನ್ನು ಅಭಿವೃದ್ಧಿ, ನಿರ್ವಹಣೆ ನಿಲ್ಲಿಸಿದವು.ಎರಡನೇ ಹಂತದಲ್ಲಿ ಜಾರಿಗೆ ಬಂದ ಟೆಂಡರ್ ಪದ್ಧತಿಯಲ್ಲಿನ ಭ್ರಷ್ಟಾಚಾರ, ಆಡಳಿತಶಾಹಿಯ ನಿಧಾನಗತಿಗೆ ಕಾರಣವಾಗಿ ಜನರು ಕೆರೆ ಅಭಿವೃದ್ಧಿಯಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಯಿತು. ಕೊನೆಗೆ ನಮ್ಮೂರ ಕೆರೆ ಅಭಿವೃದ್ಧಿಪಡಿಸುವ ಹುಮ್ಮಸ್ಸಿನಿಂದ ಬಂದ ವಿಶ್ವಬ್ಯಾಂಕ್ ಮುಖಕ್ಕೂ ಮಸಿ ಬಳಿಯಲಾಯಿತು.`ನಮ್ಮ ಮಕ್ಕಳು ಏಕೆ ಬೆಂಗಳೂರಿಗೆ ಹೋಗಿ ದುಡಿಯಬೇಕು. ನಮ್ಮಲ್ಲೇ ನೀರು ಇದ್ದರೆ ಇಲ್ಲೇ ಲಕ್ಷಾಂತರ ಸಂಪಾದಿಸಬಹುದು. ಜಲ ಸಂವರ್ಧನಾ ಯೋಜನೆ ದೇಶದ ಅತ್ಯುತ್ತಮ ಯೋಜನೆ. ಆದರೆ ಜನರಿಗೆ ಅವರ ಕೆರೆ ಕುರಿತು ಅಭಿಮಾನ ಇಲ್ಲದೆ, ಸ್ಥಳೀಯ ಕೆಟ್ಟ ರಾಜಕಾರಣ ಯೋಜನೆ ಹಾಳು ಮಾಡಿತು. ಮೊದಲು ನಾವು ಸರ್ಕಾರದ ಕೆರೆ ಅನ್ನುವುದನ್ನು ಬಿಡಬೇಕು. ನಮ್ಮ ಕೆರೆ ನಾವು ಉಳಿಸಿಕೊಂಡರೆ ನಾವು ಉಳಿಯುತ್ತೇವೆ. ಸರ್ಕಾರದ ಸಬ್ಸಿಡಿ ಸಾಲಕ್ಕೆ ಆಸೆ ಪಡುವ ಬದಲು ಕೆರೆ ಉಳಿಸಿಕೊಂಡರೆ ಸರ್ಕಾರಕ್ಕೆ ನಾವೇ ಸಾಲ ಕೊಡಬಹುದು' ಎನ್ನುತ್ತಾರೆ ಮಧುಗಿರಿ ತಾಲ್ಲೂಕಿನ ಕೂನಹಳ್ಳಿಯ ರಮೇಶ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.