ಮಂಗಳವಾರ, ಜನವರಿ 28, 2020
19 °C

ವಿಶ್ವ ನುಡಿಸಿರಿ: ಆತ್ಮಾವಲೋಕನ

– ಬರಗೂರು ರಾಮಚಂದ್ರಪ್ಪ,ಬೆಂಗಳೂರು. Updated:

ಅಕ್ಷರ ಗಾತ್ರ : | |

ಸಾರಿಯ ‘ವಿಶ್ವ ನುಡಿಸಿರಿ’ ಸಮ್ಮೇಳನದಲ್ಲಿ ನಾನು ಭಾಗವಹಿಸಿದ್ದರ ಬಗ್ಗೆ ಓದುಗರೊಬ್ಬರ ಪ್ರತಿಕ್ರಿಯೆ ಓದಿದೆ. ಅದಕ್ಕೆ ನನ್ನ ಸ್ಪಷ್ಟನೆ ಹೀಗಿದೆ: ನಾನು ಮೊದಲ ನುಡಿಸಿರಿಯ ಅಧ್ಯಕ್ಷ­ನಾಗಿದ್ದೆ. ವಿಶ್ವನುಡಿಸಿರಿಯಲ್ಲಿ ಹಿಂದಿನ ಎಲ್ಲ ಅಧ್ಯಕ್ಷರೂ ಉಪಸ್ಥಿತರಿರಬೇಕೆಂಬ ಆಶಯಕ್ಕೆ ನಾನು ಕೊನೇ ಗಳಿಗೆ­ಯಲ್ಲಿ ಒಪ್ಪಿ ಹೋದೆ.

‘ಸಮಾಜ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲು ಒತ್ತಾಯಿಸಿದ್ದರೂ ನಾನು ಒಪ್ಪಿ­ರಲಿಲ್ಲ. ಒಪ್ಪಬಹುದೆಂಬ ಭಾವನೆಯಿಂದ ಅವರು ಕೆಲವು ಆಹ್ವಾನ ಪತ್ರಿಕೆಗಳಲ್ಲಿ ನನ್ನ ಹೆಸರು ಅಚ್ಚು ಮಾಡಿ ಆನಂತರ ಬೇರೆ ಆಹ್ವಾನ ಪತ್ರಿಕೆ ಮಾಡಿಸಿದ್ದಾರೆಂದು ತಿಳಿಯಿತು. ನನ್ನ­ನ್ನು ಕೇಳಿದ ವರದಿಗಾರರಿಗೆ ಇದೇ ವಿಷಯ­ವನ್ನು ಸ್ಪಷ್ಟ­ಪಡಿಸಿದೆ.

ಈ ಸಾರಿಯ ನುಡಿಸಿರಿಯ ಬಗ್ಗೆ ನನ್ನ ಅಭಿಪ್ರಾಯ ಕೇಳಿದಾಗ ತಾತ್ವಿಕ ವಿರೋಧದ ಅಂಶಗಳನ್ನು ಹೇಳಿದೆ. ಆ ಭಾಗದ ಹತ್ಯೆ, ಅತ್ಯಾಚಾರಗಳ ಬಗ್ಗೆಯೂ ಪ್ರಸ್ತಾಪಿಸಿ ಖಂಡಿ­ಸಿದೆ. ಮೊದಲ ನುಡಿಸಿರಿಯ ಅಧ್ಯಕ್ಷ­ನಾಗಿ­ದ್ದ­ರಿಂದ ನಾಲ್ಕು ಮಾತಾಡುವ ಅವಕಾಶ­ವಿರಬಹುದೆಂಬ ಪರೋಕ್ಷ ಸೂಚನೆ­ಯನ್ನು ಕೆಲವರು ಕೊಟ್ಟಿ­ದ್ದರಿಂದ, ಒಂದು ವೇಳೆ ಅವಕಾಶ ಸಿಕ್ಕಿದ್ದರೆ ಮುಖ್ಯವೇದಿಕೆಯಲ್ಲೇ ಈ ಎಲ್ಲ ವಿಷಯ ಪ್ರಸ್ತಾಪಿ­ಸು­­ತ್ತಿದ್ದೆನೆಂದು ಹೇಳಿದೆ.

ವರದಿಯಲ್ಲಿ ಉಪ­ನ್ಯಾಸ­ಕ್ಕೂ ಗೈರು­ಹಾಜರಿಗೂ ಸಂಬಂಧವಿರುವಂತೆ ಬಂದಿ­ದ್ದರಿಂದ ಪ್ರಶ್ನೆಗಳು ಎದುರಾಗಿವೆ. ನಮಗೆ ತಾತ್ವಿಕವಾಗಿ ಒಪ್ಪಿಗೆಯಾಗದ ವೇದಿಕೆ­ಗಳಿಗೂ ಹೋಗಿ ನಮ್ಮ ವಿಚಾರ­ಗಳನ್ನು ಹೇಳಬೇಕೇ ಬೇಡವೆ ಎಂಬುದೊಂದು ಚರ್ಚೆಯ ವಿಷಯ. ಆದರೆ ವಿಶ್ವನುಡಿ­ಸಿರಿ­ಯ ‘ವೈಭವ’ದಲ್ಲಿ ‘ವಿವೇಕ’ ಹಿಂದೆ ಸರಿದಿದೆ­ಯೆಂದು ನನಗೆ ಅನ್ನಿಸಿದ್ದು ನಿಜ.

ಆರಂಭದ ನುಡಿಸಿರಿ­ಗಳಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸ ಕಂಡು ನನ್ನ ಆತ್ಮಾವ­ಲೋಕನಕ್ಕೆ ಕಾರಣ­ವಾಯಿತು. ಹೀಗಾಗಿ, ಪೂರ್ವ  ಸೂಚನೆ­ಯಿಲ್ಲದೆ ಸನ್ಮಾನದ ಸಂದರ್ಭದಲ್ಲಿ ಕೊಟ್ಟ ಹಣ­ವನ್ನು ವಾಪಸ್‌ ಮಾಡುವು­ದಾಗಿ ಸಂಘಟಕರಿಗೆ ತಿಳಿಸಿ, ದಾಖಲೆ­ಗೆಂದು ಚೆಕ್‌ ಮೂಲಕವೇ ಕಳಿಸಿದ್ದೇನೆ (ಚೆಕ್‌ ನಂ. 156905).ಇದು ನುಡಿಸಿರಿಯ ಬಗೆಗಿನ ಸ್ಪಷ್ಟನೆಯಾದರೆ, ಇದೇ ಓದು­ಗರು ಎತ್ತಿರುವ ದಸರಾ ಉದ್ಘಾಟನೆಯ ವಿಷಯ­ವನ್ನು ಅನಗತ್ಯ ಆಕ್ಷೇಪ ಎನ್ನಬೇಕಾಗಿದೆ. ನಾನು ಹಿಂಬದಿ­ಯಿಂದ ವೇದಿಕೆಗೆ ಬಂದು ದಸರಾ ಉದ್ಘಾಟನೆ ಮಾಡಿದೆ ಎನ್ನು­ವುದು ಅವಿವೇಕದ ಆರೋಪ. ಸರ್ಕಾರ ನಡೆಸುವ ಉದ್ಘಾಟನಾ ಸಮಾರಂಭವು ಸಂವಿಧಾನಾತ್ಮಕ ಆಶಯ­ಕ್ಕನುಗುಣವಾಗಿ ನಡೆಯಬೇಕೆಂಬ ನಿಬಂಧನೆ ತಿಳಿಸಿಯೇ ನಾನು ನೇರವಾಗಿ ವೇದಿಕೆಗೆ ಬಂದು ಉದ್ಘಾಟನೆ ಮಾಡಿದೆ.

ಲಿಖಿತ ಭಾಷಣವನ್ನು ಹಂಚಿದೆ. ಸಂವಿಧಾನಾತ್ಮಕ ಆಶಯಕ್ಕೆ ಬದ್ಧ­ವಾಗಿರುವುದೇ ತಪ್ಪೆ? ಇನ್ನು ಬೆಂಗಳೂರಿನ ಸಮಾರಂಭ­ದಲ್ಲಿ ಆಡಿದ ನನ್ನ ಮಾತನ್ನು ಇಲ್ಲಿ ಎಳೆತಂದು ವ್ಯಂಗ್ಯ ಮಾಡಿ­ರು­­ವುದನ್ನು ಅರ್ಥಮಾಡಿಕೊಳ್ಳಬಲ್ಲೆ! 

ಇಷ್ಟಾಗಿಯೂ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ: ‘ವಿಶ್ವ­ ನುಡಿಸಿರಿ­’ಯ ಭಾಗವಹಿಸುವಿಕೆಯಿಂದ ಹಿಡಿದು ಯಾವು­ದೇ ಸಂಗತಿಯ ಬಗ್ಗೆ ನಾನು ಆತ್ಮಾವಲೋಕನ ಮಾಡಿ­ಕೊಳ್ಳಲು, ತಪ್ಪಾಗಿದ್ದರೆ ತಿದ್ದಿಕೊಳ್ಳಲು ಹಿಂಜರಿ­ಯುವುದಿಲ್ಲ; ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ. ಉದ್ದೇಶ­ಪೂರ್ವಕವಾಗಿ ಕಾಲೆಳೆಯುವವರಿಗೆ ಅಳುಕು­ವುದೂ­ ಇಲ್ಲ.

– ಬರಗೂರು ರಾಮಚಂದ್ರಪ್ಪ,ಬೆಂಗಳೂರು.

ಪ್ರತಿಕ್ರಿಯಿಸಿ (+)