ಮಂಗಳವಾರ, ಜೂನ್ 15, 2021
27 °C

ವಿಶ್ವ ಹಾಕಿ ಸರಣಿ: ಸಂಕಷ್ಟದಲ್ಲಿ ಕರ್ನಾಟಕ ಲಯನ್ಸ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಾಯಾಳುಗಳ ಸಂಕಷ್ಟದಿಂದ ಬಳಲುತ್ತಿರುವ ಆತಿಥೇಯ    ಕರ್ನಾಟಕ ಲಯನ್ಸ್ ತಂಡಕ್ಕೆ ಈಗ ಕಷ್ಟಕಾಲ ಎದುರಾಗಿದೆ. ಈ ಕಷ್ಟವನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಗೆಲುವಿನ ಹಾದಿಯಲ್ಲಿ ಸಾಗಬೇಕು ಎನ್ನುವುದು ಈ ತಂಡದ ಬಯಕೆ. ಅದಕ್ಕೆ ವೇದಿಕೆಯೂ ಸಿದ್ದವಾಗಿದೆ.ಘಟಾನುಘಟಿ ಆಟಗಾರರು ತಂಡದಲ್ಲಿದ್ದರೂ ವಿಶ್ವ ಹಾಕಿ ಸರಣಿಯಲ್ಲಿ ಒಂದೂ ಗೆಲುವು ಒಲಿಯುತ್ತಿಲ್ಲ ಎನ್ನುವುದೇ ಈ ತಂಡದ ಬೇಸರಕ್ಕೆ ಕಾರಣ. ಈ ನಿರಾಸೆಯನ್ನು ಮರೆಯಲು ಸೋಮವಾರ ನಡೆಯುವ ಭೋಪಾಲ್ ಬಾದಷಾ ಎದುರಿನ ಪಂದ್ಯ ಉತ್ತಮ ಅವಕಾಶ. ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ರಾತ್ರಿ 7 ಗಂಟೆಗೆ ಈ ಪಂದ್ಯ ನಡೆಯಲಿದೆತವರು ನೆಲದಲ್ಲಿ ನಡೆಯುತ್ತಿರುವ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಪಡೆಯಬೇಕು. ಹಿಂದಿನ ಎರಡೂ ಪಂದ್ಯಗಳಲ್ಲಿನ ಸೋಲಿನ ನಿರಾಸೆ ಮರೆಯಬೇಕು ಎನ್ನುವುದು `ಕೊಡಗಿನ ಕಲಿ~ ಅರ್ಜುನ್ ಹಾಲಪ್ಪ ನೇತೃತ್ವದ ಕರ್ನಾಟಕ ತಂಡದ ಲೆಕ್ಕಾಚಾರ.ಹಾಲಪ್ಪ ಪಡೆ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ  ಡೆಲ್ಲಿ ವಿಜಾರ್ಡ್ಸ್ ಹಾಗೂ ಎರಡನೇ ಪಂದ್ಯದಲ್ಲಿ ಶೇರ್ -ಎ- ಪಂಜಾಬ್ ತಂಡದ ಎದುರು ಸೋಲು ಕಂಡಿದೆ. ಚಂಡೀಗಡ ಹಾಗೂ ಕರ್ನಾಟಕ ತಂಡವನ್ನು ಹೊರತು ಪಡೆಸಿದರೆ, ಉಳಿದ ಎಲ್ಲಾ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆದಿವೆ. ಒಂಬತ್ತು ಗೋಲುಗಳನ್ನು ಬಿಟ್ಟುಕೊಟ್ಟಿರುವ ಕಾರಣಕ್ಕೆ ಆತಿಥೇಯ ತಂಡಕ್ಕೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನವಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸೋಲಿನ ಸಂಕಷ್ಟಕ್ಕೆ ವಿದಾಯ ಹೇಳಬೇಕು ಎನ್ನುವ ನಿರೀಕ್ಷೆಯಲ್ಲಿದೆ ತಂಡ.ಕರ್ನಾಟಕ ತಂಡದ ಪರ ಆಡುತ್ತಿರುವ ವಿನಾಯಕ್ ಬಿಜ್ವಾಲ್, ಜರ್ನೈಲ್ ಸಿಂಗ್ ಹಾಗೂ ರವಿಪಾಲ್ ಸಿಂಗ್  ಮಾತ್ರ ಇದುವರೆಗೂ ಗೋಲು ಗಳಿಸಿದ್ದಾರೆ. ಇನ್ನುಳಿದ ಆಟಗಾರರು ಚುರುಕಿನ ಪ್ರದರ್ಶನ ನೀಡದೇ ಇರುವುದು ಈ ತಂಡದ ನೀರಸ ಪ್ರದರ್ಶನಕ್ಕೆ ಕಾರಣ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧ್ಯವಿದ್ದರೂ ರಕ್ಷಣಾ ವಿಭಾಗದಲ್ಲಿ ಆದ ಲೋಪ ತಂಡದ ಸೋಲಿಗೆ ಕಾರಣವಾಗಿತ್ತು. ಡೆಲ್ಲಿ ತಂಡದ ನಾಯಕ ರಾಜ್ಪಾಲ್‌ಸಿಂಗ್ ಎದುರಾಳಿ ಕರ್ನಾಟಕದ ರಕ್ಷಣಾ ಕೋಟೆಯನ್ನು ಹೊಡೆದು ಹಾಕಿ ಗೆಲುವು ತಂದು ಕೊಟ್ಟಿದ್ದರು.ತವರು ನೆಲದ ತಂಡಕ್ಕೆ ಸೋಲಿನ ಕಷ್ಟ ಮಾತ್ರವಲ್ಲದೇ, ಗಾಯಾಳುಗಳ ಸಮಸ್ಯೆಯೂ ಕಾಡುತ್ತಿದೆ. `ನಿರಂತರ ಪ್ರಯಾಣದಿಂದ ಬಳಲಿರುವಆಟಗಾರರಿಗೆ ವಿಶ್ರಾಂತಿ ಅಗತ್ಯವಿದೆ. ಧನರಾಜ್ ಪಿಳ್ಳೈ, ಅರ್ಜುನ್ ಅಂಟಿಲ್ ಹಾಗೂ ಅಮರ್ ಅಯ್ಯಮ್ಮ ಸೇರಿದಂತೆ ಐದು ಆಟಗಾರರಿಗೆ ಗಾಯದ ಸಮಸ್ಯೆಯಿದೆ. ಇವರು ಇಂದಿನ ಪಂದ್ಯದಲ್ಲಿ ಆಡುವ ಬಗ್ಗೆ ಕೊನೆಯ ಕ್ಷಣದಲ್ಲಿ ತೀರ್ಮಾನಿಸಲಾಗುವುದು~ ಎಂದು ಕರ್ನಾಟಕ ಲಯನ್ಸ್ ತಂಡದ ನಾಯಕ ಅರ್ಜುಲ್ ಹಾಲಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.