ಶುಕ್ರವಾರ, ಏಪ್ರಿಲ್ 23, 2021
28 °C

ವಿಸ್ತೃತ ತನಿಖೆಗೆ ಮುಂದಾದ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿಯ ತಿರುಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಚ್ಚಿನ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಕೈಗಳ ಮೇಲೆ ಕೈವಾರ, ಬಳೆ ಮತ್ತಿತರ ಆಯುಧಗಳಿಂದ ಗಾಯ ಮಾಡಿಕೊಂಡಿರುವ ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳಲು ವಿಸ್ತೃತವಾದ ತನಿಖೆ ನಡೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಆರ್.ರಂಗಸ್ವಾಮಿ `ಪ್ರಜಾವಾಣಿ~ ಗೆ ತಿಳಿಸಿದರು.`ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯ ಇರುವುದು ಕಂಡು ಬಂದಿದೆ. ಶಿಕ್ಷಕರನ್ನು ವರ್ಗಾಯಿಸಿದ್ದರಿಂದ ಮಕ್ಕಳು ಬೇಸತ್ತು ಹೀಗೆ ಅಚಾತುರ್ಯ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವ ಅಗತ್ಯ ಇರುವ ಕಾರಣ ಸತ್ಯಾಸತ್ಯತೆ ತಿಳಿಯಬೇಕಾದ ಅಗತ್ಯ ಇದೆ~ ಎಂದರು.`ಇಡೀ ಘಟನೆಯ ಹಿನ್ನೆಲೆ ಏನು ? ಮಕ್ಕಳು ತಮ್ಮ ಕೈಗಳನ್ನು ಹರಿತವಾದ ಆಯುಧಗಳಿಂದ ಕೊಯ್ದುಕೊಳ್ಳಲು ನೈಜ ಕಾರಣವೇನು? ಈ ಘಟನೆಗೆ ಶಿಕ್ಷಕರ ವರ್ಗಾವಣೆಯೇ ಮುಖ್ಯ ಕಾರಣವೇ ? ಮಕ್ಕಳನ್ನು ಯಾರಾದರೂ ಪ್ರಚೋದಿಸಿದ್ದಾರೆಯೇ ? ಎಂಬ ಅಂಶಗಳನ್ನು ಆಧರಿಸಿ ತನಿಖೆ ನಡೆಸಲಾಗುವುದು~ ಎಂದು ಪ್ರತಿಕ್ರಿಯಿಸಿದರು.

`ಶನಿವಾರ ಬೆಳಿಗ್ಗೆ ಆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪ್ರಾಥಮಿಕವಾಗಿ ದೊರೆತ ಮಾಹಿತಿಯನ್ನು ಉಪ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.`ಶಿಕ್ಷಕಿಯರಾದ ರಮಣಿ ಮತ್ತು ಮಂಜುಳಾ ಅವರ ವರ್ಗಾವಣೆ ನಿಯಮದ ಪ್ರಕಾರ ನಡೆದಿದೆ. ಅವರು 10-15 ವರ್ಷದಿಂದ ಇದೇ ಶಾಲೆಯಲ್ಲಿ ಶಿಕ್ಷಕಿಯರಾಗಿದ್ದರಿಂದ ಮಕ್ಕಳು ಹೆಚ್ಚಾಗಿ ಹಚ್ಚಿಕೊಂಡಿದ್ದಾರೆ. ಮಕ್ಕಳು ಕೈಗಳ ಮೇಲೆ ಕೈವಾರದಿಂದ ಗೀರಿಕೊಂಡಿರುವುದು ಗೊತ್ತಾಗಿದೆ. ಆದರೆ ಅವರಿಗೆ ಹೆಚ್ಚಿನ ಗಾಯಗಳೇನು ಆಗಿಲ್ಲವಾದ ಕಾರಣ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ~ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪ್ರಹ್ಲಾದ್ ಗೌಡ ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.