ಸೋಮವಾರ, ಜೂನ್ 21, 2021
30 °C

ವೀರಗಲ್ಲುಗಳ ಸರದಾರ ಶೇಷಶಾಸ್ತ್ರಿ

ಡಾ. ಎಚ್.ಎಸ್. ಗೋಪಾಲ ರಾವ್ Updated:

ಅಕ್ಷರ ಗಾತ್ರ : | |

ನಾಡಿನ ಪ್ರಮುಖ ಸಾಂಸ್ಕೃತಿಕ ಸ್ಮಾರಕಗಳಾದ ವೀರಗಲ್ಲುಗಳ ಪ್ರಸ್ತಾಪವಾದ ಯಾವುದೇ ಸಂದರ್ಭದಲ್ಲಿ ತಪ್ಪದೇ ನೆನಪಾಗುವುದು ಡಾ. ಆರ್. ಶೇಷಶಾಸ್ತ್ರಿಯವರ ಹೆಸರು. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದಂತಹ ಶ್ರೇಷ್ಠ ಸಂಶೋಧನಾ ಕೃತಿಯನ್ನು ನೀಡಿದ ಡಾ. ಎಂ.ಚಿದಾನಂದಮೂರ್ತಿಯವರ ಮಾರ್ಗದರ್ಶನದಲ್ಲಿ ಸಿದ್ಧವಾದ ಶೇಷಶಾಸ್ತ್ರಿಯವರ `ಕರ್ನಾಟಕದ ವೀರಗಲ್ಲುಗಳು~ ಬಹುಕಾಲ ನಿಲ್ಲುವ ಸಾಮರ್ಥ್ಯದ ಮಹಾಪ್ರಬಂಧ.ಸಂತೆಕಲ್ಲಹಳ್ಳಿಯ ರಾಮಸ್ವಾಮಿಶಾಸ್ತ್ರಿಗಳ ಕಿರಿಯ ಮಗ ಶೇಷಶಾಸ್ತ್ರಿ. ಅವರ ದೊಡ್ಡಪ್ಪ ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಜ್ಞಾನದ ಖನಿಯಂತಿದ್ದವರು. ಅವರ ಸಾಮೀಪ್ಯ ಮತ್ತು ದೇವುಡು ನರಸಿಂಹಸ್ವಾಮಿ ಶಾಸ್ತ್ರಿಗಳು, ಅ.ನ.ಕೃ ಮುಂತಾದ ಆ ಕಾಲದ ಶ್ರೇಷ್ಠ ಸಾಹಿತಿಗಳ ಸಂಪರ್ಕದೊಡನೆ ಬೆಂಗಳೂರಿನ ಕಲಾಸಿಪಾಳ್ಯದ ಟ್ಯಾಂಕ್‌ಬಂಡ್ ರಸ್ತೆಯಲ್ಲೇ ತಮ್ಮ ಆರಂಭಿಕ ಜೀವನದ ಬಹುಭಾಗವನ್ನು ಕಳೆದ ಶೇಷಶಾಸ್ತ್ರಿ ಕನ್ನಡ ಅಧ್ಯಯನದ ಕಡೆಗೆ ಒಲಿದದ್ದು ನಾಡಿನ ಭಾಗ್ಯ. ಸಾರ್ಥಕ 60 ವರ್ಷಗಳನ್ನು ಪೂರೈಸಿ 61ನೇ ವರ್ಷದ ಕೊನೆಯ ಹಂತದಲ್ಲಿಯೂ ಲವಲವಿಕೆಯ ಜೀವನ ನಡೆಸುತ್ತಿರುವ ಶೇಷಶಾಸ್ತ್ರಿಯವರಿಗೆ ಕನ್ನಡ ನಾಡು ಕೆಲಸ ನೀಡಿ ಸಾಕದೇ ಹೋದದ್ದು ಕೆಲವರ ಪಾಲಿಗೆ ನಷ್ಟ ಎನಿಸಿದರೂ ಕನ್ನಡ ಭಾಷೆಯ ಪಾಲಿಗೆ ಲಾಭದಾಯಕವಾಗಿದೆ.ಬೆಂಗಳೂರು ವಿ.ವಿ.ಯಿಂದ ಬಿ.ಎ. (ಆನರ್ಸ್) ಮತ್ತು ಎಂ.ಎ. (ಕನ್ನಡ) ಪದವಿಗಳನ್ನು ಪಡೆದು ಅದೇ ವಿ.ವಿ.ಯಿಂದ ಪಿಎಚ್.ಡಿ ಪದವಿ ಪಡೆದ ಶೇಷಶಾಸ್ತ್ರಿಯವರು, ಕನ್ನಡ ಸಾಹಿತ್ಯ ಪರಿಷತ್ತು ಶಾಸನಶಾಸ್ತ್ರ ತರಗತಿಗಳ ಆರಂಭಿಸಿದಾಗ ಆರಂಭದ ಹಲವು ವರ್ಷ ಅಲ್ಲಿ ಅಧ್ಯಾಪಕರಾಗಿ ನಗರದ ಅನೇಕ ಆಸಕ್ತರಲ್ಲಿ ಶಾಸನಶಾಸ್ತ್ರದ ಬಗೆಗೆ ಪ್ರೀತಿಯನ್ನಷ್ಟೇ ಅಲ್ಲ, ವಿಶ್ವಾಸವನ್ನೂ ಬೆಳೆಸಿದರು.

 

ಎ.ಎಂ.ಅಣ್ಣಿಗೇರಿ ಮತ್ತು ಚಿದಾನಂದಮೂರ್ತಿ ಅವರ ಜೊತೆಗೆ ಅಧ್ಯಾಪನ ವೃತ್ತಿ ಮಾಡಿದ ಶಾಸ್ತ್ರಿಗಳು ಆ ಇಬ್ಬರು ಹಿರಿಯರಂತೆಯೇ `ಒಳ್ಳೆಯ ಮೇಷ್ಟ್ರು~ ಎನಿಸಿಕೊಂಡರು. ತರಗತಿಯ ವೇಳೆಯಲ್ಲಿ ಅತ್ಯಂತ ನಿಷ್ಠುರರಾಗಿರುತ್ತಿದ್ದ ಅವರು ತರಗತಿಯ ನಂತರ ಸ್ನೇಹಿತರಂತೆ ಬೆರೆಯುತ್ತಿದ್ದರು. ಲಿಪಿಶಾಸ್ತ್ರ ಮತ್ತು ಶಾಸನಪಠ್ಯ ಎರಡನ್ನೂ ಬೋಧಿಸುತ್ತಲೇ ತಾವೂ ಬೆಳೆದರು. ಅದರ ಫಲವಾಗಿ ಅವರು ಬೆಂಗಳೂರು ವಿ.ವಿ.ಯಿಂದ `ಶಾಸನ ಪರಿಚಯ~ ಎಂಬ ಪರಿಣಾಮಕಾರಿ ಪರಿಚಯಾತ್ಮಕ ಕೃತಿಯನ್ನು ಸಿದ್ಧಪಡಿಸಿದರು.

 

ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ತರಗತಿಗಳಿಗಾಗಿಯೇ ಅಣ್ಣಿಗೇರಿ ಅವರ ಜೊತೆಗೆ ಸಂಕಲಿಸಿ ಪ್ರಕಟಿಸಿದ `ಶಾಸನ ಸಂಗ್ರಹ~ ಕೃತಿಯು ಇಂದಿಗೂ ಶಾಸನ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯ ಕೃತಿಯಾಗಿದೆ.ಶೇಷಶಾಸ್ತ್ರಿಯವರಿಗೆ ಪಿಎಚ್.ಡಿ ಘೋಷಣೆಗೊಂಡ ದಿನ ಅವರಿಗಿಂತ ಹೆಚ್ಚು ಸಂಭ್ರಮಿಸಿದವರು ಡಾ. ಬಿ.ಜಿ.ಎಲ್.ಸ್ವಾಮಿ. ಸಂಶೋಧನೆ ಎಂದರೆ ಕೇವಲ ಗ್ರಂಥಾಲಯದಲ್ಲಿ ಕುಳಿತು ಮಾಹಿತಿ ಸಂಗ್ರಹಿಸಿ ಅವುಗಳನ್ನು ವ್ಯವಸ್ಥಿತವಾಗಿ ಜೋಡಿಸಿ ವಿಶ್ಲೇಷಣೆ ಮಾಡುವುದಷ್ಟೇ ಮುಖ್ಯ ಎಂದು ಶೇಷಶಾಸ್ತ್ರಿ ತಿಳಿದಿರಲಿಲ್ಲ. ಅದಕ್ಕೆ ಅವರ ಮಾರ್ಗದರ್ಶಕರು ಅವಕಾಶವನ್ನೂ ಕೊಟ್ಟಿರಲಿಲ್ಲ.ಗ್ರಂಥಾಲಯದಾಚೆಗೂ ಕ್ಷೇತ್ರಕಾರ್ಯದ ಮೂಲಕ ಅನೇಕ ಹೊಸ ವಿಷಯ ಸಂಗ್ರಹಿಸಿ, ದಾಖಲಿಸಿ ವಿಶ್ಲೇಷಿಸಿರುವ ಕಾರಣದಿಂದಲೇ `ಕರ್ನಾಟಕದ ವೀರಗಲ್ಲುಗಳು~ ಒಂದು ಮಹತ್ವದ ಕೃತಿಯಾಗಿದೆ. ರಾಜ್ಯದ ಎಲ್ಲ ಭಾಗದ ವೀರಗಲ್ಲುಗಳನ್ನು ಶಾಸ್ತ್ರಿಗಳು ಖುದ್ದು ಕಂಡಿದ್ದಾರೆ; ಕೈ ಸವರಿ ಮಾತನಾಡಿಸಿದ್ದಾರೆ.ಶಾಸನಸಹಿತ ವೀರಗಲ್ಲುಗಳು ಹಾಗೂ ಶಾಸನರಹಿತ ವೀರಗಲ್ಲುಗಳ ಬಗ್ಗೆ ಅಧಿಕೃತವಾಗಿ ವಿವರಿಸಬಲ್ಲ ಸಾಮರ್ಥ್ಯ ಅವರಿಗಿದೆ.ಆಗಿನ ಕಾಲಕ್ಕೆ ಲಭ್ಯವಿದ್ದ ಕ್ಯಾಮೆರಾಗಳಲ್ಲಿ ಶಾಸ್ತ್ರಿಯವರು ಕ್ಲಿಕ್ಕಿಸಿದ ಛಾಯಾಚಿತ್ರಗಳನ್ನು ವಿಶೇಷವಾಗಿ ಸಂಸ್ಕರಿಸಿ ಅವುಗಳಿಗೂ ಒಂದು ಹೊಸ ಆಯಾಮ ನೀಡಿದವರು ಕರ್ನಾಟಕದ ಪ್ರಸಿದ್ಧ ವೈಜ್ಞಾನಿಕ ಛಾಯಾಚಿತ್ರಗ್ರಾಹಕ ಡಾ. ಕೃಷ್ಣಾನಂದ ಕಾಮತ್.ತಮಗೆ ಪಾಠ ಮಾಡಿದ ಗುರುವರ್ಗವನ್ನಲ್ಲದೆ ಪಾಠ ಮಾಡದೆಯೇ ಗುರುವರ್ಗಕ್ಕೆ ಸೇರಿದ ಬಿ.ಜಿ.ಎಲ್.ಸ್ವಾಮಿ, ಕೃಷ್ಣಾನಂದ ಕಾಮತ್, ಆಲಂಪುರದ ಗಡಿಯಾರಂ ರಾಮಕೃಷ್ಣಶರ್ಮ ಮುಂತಾದ ಹಿರಿಯರ ಬಗ್ಗೆ ಶೇಷಶಾಸ್ತ್ರಿಯವರಿಗೆ ಅಪಾರ ಗೌರವ.ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಗ್ಯಾಸೆಟಿಯರ್ ಇತ್ಯಾದಿ ಸಂಸ್ಥೆ ಮತ್ತು ಇಲಾಖೆಗಳಲ್ಲಿ ತತ್ಕಾಲೀನ ಆಧಾರದ ಮೇಲೆ ಕೆಲವು ಕಾಲ ದುಡಿದ ಶೇಷಶಾಸ್ತ್ರಿಯವರನ್ನು ಕೈಬೀಸಿ ಕರೆದದ್ದು ನೆರೆಯ ಆಂಧ್ರಪ್ರದೇಶದ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ. ಅಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರವಾಚಕರಾಗಿ ಮತ್ತು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರೂ ವಿದ್ಯಾರ್ಥಿಗಳ ಪಾಲಿಗೆ `ಕನ್ನಡ ಮಾಸ್ಟರ್~ ಆಗಿಯೇ ಉಳಿದರು.`ಮಣಿಹ~, `ಕಮ್ಮಟಿಗ~, `ಗುಣಮಧುರ~ ಇತ್ಯಾದಿ ಕನ್ನಡ ಕೃತಿಗಳ ಸಂಪಾದನೆಯಲ್ಲದೆ ಡಾ. ಆರ್.ಗಣೇಶ್‌ರವರ ಸಹಾಯದಲ್ಲಿ ಸಂಪಾದಿಸಿದ `ಆಂಧ್ರಪ್ರದೇಶದ ಕನ್ನಡ ಶಾಸನಗಳು~ ಶೇಷಶಾಸ್ತ್ರಿಯವರ ಸಂಪಾದನಾ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿವೆ. ತೆಲುಗಿನಿಂದ ಕನ್ನಡಕ್ಕೆ ಶೇಷಶಾಸ್ತ್ರಿಯವರು ಮಾಡಿರುವ ಅನುವಾದಗಳು ಕನ್ನಡ ಭಾಷೆಗೆ ದೊರೆತ ಅಮೂಲ್ಯ ಕೊಡುಗೆಗಳು. `ಶುಕಸಪ್ತತಿ~ ಮತ್ತು `ಕಲಾಪೂರ್ಣೋದಯ~ ಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿರುವ ಕೃತಿಗಳು.

 

ಇವುಗಳಲ್ಲದೆ ಕೊರಡ ರಾಮಕೃಷ್ಣಯ್ಯ ಅವರ ದಾಕ್ಷಿಣಾತ್ಯ ಭಾಷಾ ಸಾಹಿತ್ಯ `ದೇಶೀ~ ತೆಲುಗು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೆ ಗುರ‌್ರಂ ಜೊಷುವಾ ಅವರ ಆತ್ಮಕಥೆಯನ್ನು `ನಮ್ಮ ತಂದೆಯವರು~ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಡಾ. ಶೇಷಶಾಸ್ತ್ರಿಯವರು ಅನುವಾದಿಸಿರುವ `ಹಂಪಿಯಿಂದ ಹರಪ್ಪಾದವರೆಗೆ~ ಕನ್ನಡಕ್ಕೆ ಲಭಿಸಿರುವ ಅನನ್ಯ ಕೃತಿಯಾಗಿದೆ.ತೆಲುಗಿನಿಂದ ಕನ್ನಡಕ್ಕಲ್ಲದೆ, ಕನ್ನಡದಿಂದ ತೆಲುಗಿಗೂ ಶಾಸ್ತ್ರಿಯವರ ಅನುವಾದ ಸೇವೆ ನಡೆದಿದೆ. ಜೋಸ್ಯಂ ಸದಾನಂದಂ ಅವರ ಜೊತೆಯಲ್ಲಿ `ಮಲಿಪೂತ~ ಎಂಬ ಹೆಸರಿನಲ್ಲಿ ಬೇಂದ್ರೆಯವರ ಕಾವ್ಯವನ್ನು ತೆಲುಗಿಗೆ ಪರಿಚಯಿಸಿದ ಅಮೂಲ್ಯ ಕೃತಿಯಾಗಿದೆ. ಇನ್ನೂ ಹಲವು ಕೃತಿಗಳ ಸಂಪಾದನೆ ಮಾಡಿರುವ ಶೇಷಶಾಸ್ತ್ರಿಯವರ ಇನ್ನೂ ಹಲವು ತೆಲುಗು ಕೃತಿಗಳ ಅನುವಾದವು ಪ್ರಕಟಣೆಯ ಹಾದಿಯಲ್ಲಿವೆ.`ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ~ ಎಂಬ ಸಣ್ಣಕತೆ ವೀರಗಲ್ಲಿನ ಪಠ್ಯವೊಂದನ್ನು ಆಧರಿಸಿದ್ದು, ಇಂತಹ ಕೆಲವು ಕತೆಗಳು ಕನ್ನಡದ ಓದುಗರಿಗೆ ಕರ್ನಾಟಕದ ವೀರಗಲ್ಲುಗಳ ಪರಿಚಯ ಮಾಡಿಸಿವೆ. ಕೆ.ಎಸ್. ನರಸಿಂಹಸ್ವಾಮಿಯವರ `ಶ್ಯಾನುಭೋಗರ ಮಗಳು, ತಾಯಿಯಿಲ್ಲದ ಹುಡುಗಿ~ ಇವರ ಲೇಖನಿಯಲ್ಲಿ `ಕಾರಕೂನರ ಮಗಳು, ತಾಯಿ ಇರುವಾ ಹುಡುಗಿ~ ಎಂಬ ಅಣಕುವಾಡಾಗಿ ಮನ್ನಣೆ ಪಡೆದಿದೆ.ಎಂದೂ ಗಂಟುಮುಖ ಹಾಕಿಕೊಳ್ಳದ, ಯಾರೊಬ್ಬರ ದೌರ್ಬಲ್ಯವನ್ನೂ ದುರುಪಯೋಗಪಡಿಸಿಕೊಳ್ಳದ, ಸದಾ ತಮ್ಮ ಸುತ್ತಲೂ ಲವಲವಿಕೆಯ ವಾತಾವರಣವನ್ನು ಸೃಷ್ಟಿಸುವ ಶೇಷಶಾಸ್ತ್ರಿಯವರು ತೆಲುಗಿನಿಂದ ಕನ್ನಡಕ್ಕೆ ಮತ್ತಷ್ಟು ಉತ್ಕೃಷ್ಟ ಕೃತಿಗಳನ್ನು ಅನುವಾದಿಸಿ ಎರಡೂ ಭಾಷೆಗಳ ನಂಟನ್ನು ಮತ್ತಷ್ಟು ಬಿಗಿಗೊಳಿಸುವ ನಿರೀಕ್ಷೆಯಿದೆ.ಶೇಷಶಾಸ್ತ್ರಿ ಅವರಿಗೆ ಮಾ.10ರಂದು ಬೆಂಗಳೂರಿನ `ಮಿಥಿಕ್ ಸೊಸೈಟಿ~ಯಲ್ಲಿ `ಕನ್ನಡ ಗೆಳೆಯರ ಬಳಗ~ದಿಂದ ಅಭಿನಂದನೆ, ಸನ್ಮಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.