ಗುರುವಾರ , ಸೆಪ್ಟೆಂಬರ್ 24, 2020
20 °C

ವೀರಗಲ್ಲು ಟೆಂಡರ್ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರಗಲ್ಲು ಟೆಂಡರ್ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತ

ಬೆಂಗಳೂರು: ಹುತಾತ್ಮರಾದ ವೀರ ಸೈನಿಕರ ಸ್ಮರಣೆಗಾಗಿ ರಾಷ್ಟ್ರೀಯ ಸೈನಿಕ ಸ್ಮಾರಕವನ್ನು ಬೆಂಗಳೂರಿನಲ್ಲಿ ಬಿಡಿಎ ನಿರ್ಮಾಣ ಮಾಡುತ್ತಿದೆ. ಆದರೆ, ಸ್ಮಾರಕದ ಹೃದಯಭಾಗವಾದ `ವೀರಗಲ್ಲು~ ನಿರ್ಮಾಣ ಕಾರ್ಯವು ಟೆಂಡರ್ ಪ್ರಕ್ರಿಯೆಯ ತೊಡಕಿನಿಂದ ಅರ್ಧಕ್ಕೆ ಸ್ಥಗಿತವಾಗಿದ್ದು, ಸ್ಮಾರಕ ಪೂರ್ಣಗೊಳ್ಳುವುದು ವಿಳಂಬವಾಗುವ ಸಾಧ್ಯತೆಯಿದೆ.



ಹೈಗ್ರೌಂಡ್ಸ್ ರಸ್ತೆಯಲ್ಲಿ ಇಂದಿರಾಗಾಂಧಿ ಸಂಗೀತ ಕಾರಂಜಿ ಪಕ್ಕದಲ್ಲಿ ಸೈನಿಕ ಸ್ಮಾರಕ ನಿರ್ಮಾಣವಾಗುತ್ತಿದ್ದು, ಸ್ಮಾರಕದ ಆಕರ್ಷಣೆಯಾದ ಏಕಶಿಲೆಯ `ವೀರಗಲ್ಲು~ ಕೆತ್ತನೆ ಕಾರ್ಯ ನಡೆಯುತ್ತಿದೆ. ಆದರೆ, ವೀರಗ್ಲ್ಲಲಿನ ಟೆಂಡರ್ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವುದರಿಂದ ಸ್ಮಾರಕದ ಕಾರ್ಯ ವಿಳಂಬವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.



550 ಟನ್ ತೂಕ ಮತ್ತು 78 ಅಡಿ ಎತ್ತರದ ಏಕಶಿಲೆಯ ವೀರಗಲ್ಲು ಸೈನಿಕರ ಸಾಹಸಗಾಥೆಯನ್ನು ಹೇಳಲಿದೆ. ಶಿಲ್ಪಿ ಅಶೋಕ ಗುಡಿಗಾರ ಅವರು ಈ ವೀರಗಲ್ಲಿನ ಕೆತ್ತನೆಯನ್ನು ದೇವನಹಳ್ಳಿಯ ಕೊಯಿರಾ ಕಲ್ಲು ಗಣಿ ಪ್ರದೇಶದಲ್ಲಿ ಮಾಡುತ್ತಿದ್ದಾರೆ.



ಒಟ್ಟು ಸ್ಮಾರಕದ ನಿರ್ಮಾಣ ವೆಚ್ಚ 10 ಕೋಟಿ ರೂಪಾಯಿಗಳು. ಆದರೆ ವೀರಗಲ್ಲು ನಿರ್ಮಾಣದ ಯೋಜನೆಗೆ ಅಂದರೆ, ಕಲ್ಲನ್ನು ಕೆತ್ತಲು, ಜರುಗಿಸಲು, ಸಾರಿಗೆಗೆ ಮತ್ತು ನಿಲ್ಲಿಸಲು ಟೆಂಡರ್ ಕರೆಯಲಾಗಿತ್ತು.



ದೇಶದಲ್ಲಿ ಇಂತಹ ಭಾರಿ ತೂಕವನ್ನು ಸಾಗಿಸುವಂತಹ ಎರಡು ಕಂಪೆನಿಗಳು ಮಾತ್ರ ಇವೆ. ಅವುಗಳೆಂದರೆ, ಎಬಿಸಿ ಟ್ರಾನ್ಸ್‌ಪೋರ್ಟ್ ಕಂಪೆನಿ ಮತ್ತು ನ್ಯಾಬ್ರೊಸ್ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮೆಟೆಡ್. ಈ ಎರಡು ಕಂಪೆನಿಗಳು ಐದು ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಕೋರುತ್ತಿವೆ.



ಹೀಗಾಗಿ ವೀರಗಲ್ಲು ನಿರ್ಮಾಣಕ್ಕೆ ವೆಚ್ಚ ಹೆಚ್ಚಾಯಿತು ಎನ್ನುವ ಕಾರಣದಿಂದ ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಯ ತಂತ್ರಜ್ಞಾನಿಗಳ ಅಭಿಪ್ರಾಯವನ್ನು ಬಿಡಿಎ ಕೇಳುತ್ತಿದೆ. ಅಲ್ಲದೇ, 1 ಕೋಟಿ ರೂಪಾಯಿಗಿಂತ ಟೆಂಡರ್ ಹಣ ಹೆಚ್ಚಾದರೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲೇಬೇಕು. ಹೀಗಾಗಿ ವೀರಗಲ್ಲಿನ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.



`ಇದುವರೆಗೂ ವೀರಗಲ್ಲಿನ ಒಂದು ಭಾಗದ ಕೆತ್ತನೆಯ ಕೆಲಸ ಮಾತ್ರ ಆಗಿದೆ. ಇನ್ನು ಮೂರು ಭಾಗದಲ್ಲಿ ಕೆತ್ತನೆಯ ಕೆಲಸವಾಗಬೇಕಿದೆ. ಟೆಂಡರ್ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವುದರಿಂದ ಅದನ್ನು ಜರುಗಿಸುವ ಕಾರ್ಯವೂ ಆಗಿಲ್ಲ. ವೀರಗ್ಲ್ಲಲ್ಲಿನ ನಿರ್ಮಾಣ ಕಾರ್ಯ ಶೇ 30 ರಷ್ಟು ಮಾತ್ರ ಆಗಿದೆ. ಈ ಪ್ರಕ್ರಿಯೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ. ಆದರೆ, ಇದುವರೆಗೂ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಶಿಲ್ಪಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.



ರಾಷ್ಟ್ರೀಯ ಸೈನಿಕ ಸ್ಮಾರಕದ ನಿರ್ಮಾಣ ಕಾರ್ಯವು 2010 ರಿಂದಲೇ ಆರಂಭವಾಗಿದೆ. ಒಟ್ಟು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ 7.5 ಎಕರೆ ಪ್ರದೇಶಗಳಲ್ಲಿ ನಿರ್ಮಾಣ ಕೆಲಸ ನಡೆಯುತ್ತಿದೆ.



ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ ನಮ್ಮ ದೇಶದ ಯುವಜನತೆಗೆ ಸೈನಿಕರ ಜೀವನ, ಅವರ ಹೋರಾಟ, ಸೈನ್ಯದ ಬಗ್ಗೆ ಅರಿವು ಮೂಡಿಸುವುದು, ಯುದ್ಧದ ಸನ್ನಿವೇಶ ಮತ್ತು ಬಂದೂಕಿನ ದೃಶ್ಯಾವಳಿಗಳ ಮಾದರಿಗಳನ್ನು ವೀಕ್ಷಣೆಗಾಗಿ ಸಿದ್ಧಪಡಿಸಲಾಗುತ್ತಿದೆ.



ಸ್ಮಾರಕದ ವಿಶೇಷಗಳು:

* ಎಂ.ಬಿ.ಟಿ. ಅರ್ಜುನ್ ಟ್ಯಾಂಕ್



* ಮಿಗ್-23 ವಿಮಾನ



* ಸಂಚಾರಿ ಸೇತುವೆ



* 85 ಅಡಿ ಎತ್ತರದ ಏಕಶಿಲೆ ವೀರಗಲ್ಲು



* ಭಾರತೀಯ ಸೇನೆಯ ವಿಜಯಂತ್ ಟ್ಯಾಂಕ್.



* ಭಾರತೀಯ ಸೇನೆಯ ಎ.ಪಿ.ಸಿ. ಬಿಟಿಆರ್-60

* ಎಂ.ಬಿ.ಟಿ.ಅರ್ಜುನ್ ಟ್ಯಾಂಕ್: ಕೇವಲ ಎರಡು ವರ್ಷಗಳ ಹಿಂದಷ್ಟೇ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಾಣವಾದ ಎಂಬಿಟಿ ಅರ್ಜುನ್ ಟ್ಯಾಂಕ್ ಪ್ರದರ್ಶನಕ್ಕೆ ಇಡಲಾಗಿದೆ. ಇದರೊಂದಿಗೆ 1961 ಮತ್ತು 1971 ರಲ್ಲಿ ಸೇವೆ ಸಲ್ಲಿಸಿದ ರಷ್ಯಾ ನಿರ್ಮಿತ ಟ್ಯಾಂಕ್‌ಗಳು ಇವೆ.



* ಮಿಗ್-23 ವಿಮಾನ: ರಷ್ಯಾ ನಿರ್ಮಿತ ಸ್ವಿಂಗ್-ವಿಂಗ್ ಮಿಗ್-23 ವಿಮಾನ. 2445 ಕಿ.ಮೀ. ವೇಗದಲ್ಲಿ ಹಾರಾಡುವ ಈ ಯುದ್ಧ ವಿಮಾನದ ಮಾದರಿಯು ಪ್ರದರ್ಶನದಲ್ಲಿದೆ.



* ಅತ್ಯಂತ ಎತ್ತರದ ಧ್ವಜಸ್ತಂಭ: ದೇಶದ ಅತ್ಯಂತ ಎತ್ತರವಾದ 210 ಅಡಿ ಎತ್ತರದ ಧ್ವಜಸ್ತಂಭ ಉದ್ಯಾನದ ನಡುವೆ ನೆಡಲಾಗಿದೆ. ಅದರಲ್ಲಿ 72 ಅಡಿ ಅಗಲ, 48 ಅಡಿ ಉದ್ದದ ರಾಷ್ಟ್ರಧ್ವಜ ಹಾರಾಡಲಿದೆ. ಆಕಾಶಮಟ್ಟದಲ್ಲಿ ನೋಡಿದಾಗ ಸುಮಾರು 50 ಕಿ.ಮೀ. ದೂರದಿಂದಲೇ ಗೋಚರಿಸಲಿದೆ.



* ಹಡಗು, ಯುದ್ಧ ನೌಕೆಗಳು ಬರುವ ನಿರೀಕ್ಷೆ: 1971 ರ ಯುದ್ಧದಲ್ಲಿ ಭಾಗಿಯಾದ ಭಾರತೀಯ ನೌಕಾದಳದ ಯುದ್ಧ ವಿಮಾನ ಅಲ್ಲದೇ, ನೌಕಾದಳದ ಅತಿ ದೊಡ್ಡ ಹಡಗು ಮತ್ತು ಯುದ್ಧ ನೌಕೆಗಳು ಬರುವ ನಿರೀಕ್ಷೆಯಿದೆ.



* ಸೈನಿಕರಿಗೆ ನುಡಿ ನಮನ: ಸ್ಮಾರಕದಲ್ಲಿ ನಿರ್ಮಾಣ ವಾಗುತ್ತಿರುವ ಫಲಕಗಳ ಮೇಲೆ ವೀರ ಸೈನಿಕರಾಗಿ ಹುತಾತ್ಮರಾದ 22 ಸಾವಿರಕ್ಕೂ ಹೆಚ್ಚು  ಸೈನಿಕರ ಹೆಸರುಗಳನ್ನು ಬರೆಸುವ ಕಾರ್ಯ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಹುತಾತ್ಮರಾದ ವೀರ ಸೈನಿಕರಿಗೆ ನುಡಿ ನಮನವನ್ನು ಸಲ್ಲಿಸುವ ಕಾರ್ಯವಾಗಲಿದೆ.



ವೀರಗಲ್ಲಿನ ಕೆತ್ತನೆಯ ಕೆಲಸಕ್ಕೆ ನನಗೆ 94 ಲಕ್ಷ ರೂಪಾಯಿ ನೀಡಲಾಗಿದೆ. ವೀರಗಲ್ಲಿನ ಟೆಂಡರ್ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಅದನ್ನು ಜರುಗಿಸುವ ಕಾರ್ಯ ಆಗದ ಕಾರಣ ಪ್ರಸ್ತುತ ವೀರಗಲ್ಲಿನ ಕೆತ್ತನೆಯ ಕಾರ್ಯ ಅರ್ಧಕ್ಕೆ ನಿಂತಿದೆ. ಅದರ ಒಂದು ಭಾಗದ ಕೆತ್ತನೆಯ ಕೆಲಸ ಮುಗಿದಿದೆ. ಜರುಗಿಸಿದ ಮೇಲೆ ಕಾರ್ಯ ಆರಂಭವಾಗಬೇಕು. ಇನ್ನು ಮೂರು ತಿಂಗಳು ಕೆಲಸ ನಡೆಯಬೇಕಾಗಿದೆ. ಒಟ್ಟು 20 ಮಂದಿ ಶಿಲ್ಪಿಗಳು ಕೆತ್ತನೆಯ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ~ 

-ಅಶೋಕ ಗುಡಿಗಾರ, ಶಿಲ್ಪಿ.



ರಾಷ್ಟ್ರೀಯ ಸೈನಿಕರ ಸ್ಮಾರಕದ ನಿರ್ಮಾಣ ಕಾಮಗಾರಿಯು ಶೇ 80 ರಷ್ಟು ಮುಗಿದಿದೆ. ವೀರಗಲ್ಲು ಸ್ಮಾರಕದ ಮುಖ್ಯ ಭಾಗ. ಅದರ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧಗೊಳ್ಳಲಿದೆ~

-ಪ್ರದೀಪ್ ಸಿಂಗ್ ಕರೋಲಾ, ಬಿಡಿಎ ಮಾಜಿ ಆಯುಕ್ತ



ದೇಶದ ಪ್ರಥಮ ರಾಷ್ಟ್ರೀಯ ಸೈನಿಕ ಸ್ಮಾರಕವು ಬೆಂಗಳೂರಿನಲ್ಲಿ ಆಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಸೈನಿಕರಿಗೆ ಅಭಿಮಾನದಿಂದ ನಮಿಸುವ ಕಾರ್ಯವಾಗುತ್ತಿದೆ~

-ರಾಜೀವ್ ಚಂದ್ರಶೇಖರ್, ರಾಷ್ಟ್ರೀಯ ಸೈನಿಕ ಸ್ಮಾರಕದ ಅಧ್ಯಕ್ಷ



ಸ್ಮಾರಕ ನಿರ್ಮಾಣದಿಂದ ನನಗೆ ಮಾತ್ರವಲ್ಲದೇ ಸೈನಿಕರ ಕುಟುಂಬದವರಿಗೆಲ್ಲಾ ಸಂತೋಷವಾಗಿದೆ. ಹಲವು ವರ್ಷಗಳ ಹಿಂದೆಯೇ ಸೈನಿಕರಿಗೆ ಗೌರವ ನೀಡುವ ಇಂತಹ ಕಾರ್ಯವಾಗಬೇಕಿತ್ತು. ಆದರೆ, ತಡವಾದರೂ ಇಂತಹ ಸ್ಮಾರಕವನ್ನು ನಿರ್ಮಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇನ್ನು ಸ್ಮಾರಕದ ನಿರ್ಮಾಣ ಕಾಮಗಾರಿಯನ್ನು ವಿಳಂಬಿಸುತ್ತಿರುವುದು ಬೇಡ~

-ಸುಭಾಷಿಣಿ ವಸಂತ

ಲೆಫ್ಟಿನೆಂಟ್ ಕರ್ನಲ್ ವಸಂತ(ಕಾರ್ಗಿಲ್ ಯುದ್ಧದಲ್ಲಿ ಮಡಿದವರು) ಅವರ ಪತ್ನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.