ಭಾನುವಾರ, ಜನವರಿ 19, 2020
22 °C

ವೃತ್ತಿಶಿಕ್ಷಣ ಸಂಸ್ಥೆ ಕಾಯ್ದೆಗೆ ಎಸ್‌ಎಫ್‌ಐ ವಿರೋಧ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯನ್ನು ಅನು­ಷ್ಠಾನಕ್ಕೆ ತರಬಾರದೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಸಂಘಟನೆಯ (ಎಸ್ಎಫ್ಐ) ಸದಸ್ಯರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಸರ್ಕಾರ ಕಾಯ್ದೆ ಅನುಷ್ಠಾನಕ್ಕೆ ತರುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರಲು ಮುಂದಾಗಿದೆ ಎಂದು ಆರೋಪಿಸಿದ ಪ್ರತಿಭಟನಾ­ಕಾರರು ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿ ಸರ್ಕಾರದ ವಿರುದ್ಧ ಘೋಷಣೆ­ಗಳನ್ನು ಕೂಗಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಎಫ್‌ಐ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎನ್‌. ಅನಂತ ನಾಯ್ಕ, ‘ಕಾಯ್ದೆಯ ಹೆಸರಿನಲ್ಲಿ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲು ಸರ್ಕಾರ ಮುಂದಾಗಿದೆ. ಕಾಯ್ದೆಯಿಂದ ವೃತ್ತಿ­ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ­ದರು.‘ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚಳದ ಜತೆಗೆ  ಮೆರಿಟ್‌ ಕೋಟಾ ರದ್ದುಗೊಳಿಸಿ ಸೀಟುಗಳ ಭರ್ತಿಯ ಅಧಿಕಾರವನ್ನು ಸಂಪೂರ್ಣವಾಗಿ ಖಾಸಗಿ ಕಾಲೇಜುಗಳ ನಿರ್ಧಾರಕ್ಕೇ ಬಿಡಲು ಸರ್ಕಾರ ಮುಂದಾಗಿದೆ. ಇದರಿಂದ ವೃತ್ತಿಶಿಕ್ಷಣವನ್ನು ಮಾರುಕಟ್ಟೆ­ಯಲ್ಲಿ ಹರಾಜಿಗಿಟ್ಟಂತಾಗು­ತ್ತದೆ’ ಎಂದು ಅವರು ದೂರಿದರು.ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರತಿಭಟನೆಗೆ ಎಪಿವಿಪಿ ಕರೆ: ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ ಕಾಯ್ದೆ ಅನುಷ್ಠಾನ­ಗೊಳಿಸದಂತೆ ಒತ್ತಾಯಿಸಿ ಬುಧವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕರೆ ನೀಡಿದೆ.ಸರ್ಕಾರ ಈ ಕಾಯ್ದೆಯ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲು ಮುಂದಾಗಿದ್ದು, ಸರ್ಕಾರದ ಈ ನಡೆ­ಯನ್ನು ಎಲ್ಲರೂ ವಿರೋಧಿಸಬೇಕು  ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)