ಗುರುವಾರ , ಮೇ 28, 2020
27 °C

ವೇತನ ಮಂಡಲಿ ಶಿಫಾರಸು ತಿರಸ್ಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಾರ್ಯನಿರತ ಪತ್ರಕರ್ತರು ಹಾಗೂ ಪತ್ರಿಕಾ ನೌಕರರ ವೇತನವನ್ನು ಕನಿಷ್ಠ ಎರಡೂವರೆ ಪಟ್ಟು ಹೆಚ್ಚಿಸಲು ಪತ್ರಿಕಾ ವೇತನ ಮಂಡಲಿ ಶಿಫಾರಸು ಮಾಡಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಭಾರತೀಯ ವೃತ್ತಪತ್ರಿಕಾ ಸಂಘ (ಐಎನ್‌ಎಸ್), ಅದನ್ನು ತಿರಸ್ಕರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.

ಮಂಡಲಿಯ ಶಿಫಾರಸುಗಳಿಗೆ ಸರ್ಕಾರ ಅನುಮೋದನೆ ನೀಡಿದರೆ ವೃತ್ತಪತ್ರಿಕಾ ಸಂಸ್ಥೆಗಳು ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಸಂಘ ಪತ್ರಿಕಾ ಹೇಳಿಕೆ ನೀಡಿದೆ. ಇದಕ್ಕೆ ಮುನ್ನ ಸಂಘವು ಮುಂಬೈನಲ್ಲಿ ಗುರುವಾರ ತುರ್ತು ಸಭೆ ಕರೆದು ಶಿಫಾರಸುಗಳ ಕುರಿತು ಚರ್ಚಿಸಿತ್ತು.

ಮಂಡಲಿ ಹಲವಾರು ನಿಯಮಗಳನ್ನು ಉಲ್ಲಂಘಿಸಿ ವರದಿ ಸಿದ್ಧಪಡಿಸಿದೆ. ಮಂಡಲಿಯ ಸದಸ್ಯರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಂಘದ ಅಧ್ಯಕ್ಷ ಕುಂದನ್ ವ್ಯಾಸ್ ಆಪಾದಿಸಿದ್ದಾರೆ.

ತನ್ನ ಅಧಿಕಾರ ವ್ಯಾಪ್ತಿಗೆ ಮೀರಿದ ಹಲವು ಶಿಫಾರಸುಗಳನ್ನು ಮಂಡಲಿ ಮಾಡಿದೆ. ಸಂಸ್ಥೆಗಳ ವೇತನ ಪಾವತಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೇ ವರದಿ ಸಿದ್ಧಪಡಿಸಲಾಗಿದೆ ಎಂದೂ ಅವರು ದೂರಿದ್ದಾರೆ.

ಈ ಮುಂಚೆ ವೇತನ ಮಂಡಲಿಗಳು ವರದಿ ಸಲ್ಲಿಸುವ ಮುನ್ನ ಸಂಭಾವ್ಯ ಶಿಫಾರಸುಗಳನ್ನು ಮುಂಚಿತವಾಗಿಯೇ ಪ್ರಕಟಿಸಿ ಪಾರದರ್ಶಕತೆ ಪ್ರದರ್ಶಿಸಿದ್ದವು. ಆದರೆ ಪ್ರಸ್ತುತ ವೇತನ ಮಂಡಲಿ ಇದನ್ನು ಪಾಲಿಸಿಲ್ಲ ಎಂದು ವ್ಯಾಸ್ ಆಕ್ಷೇಪಿಸಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಪತ್ರಿಕಾ ವೇತನ ಮಂಡಳಿಯೇ ಅಪ್ರಸ್ತುತ. ರಾಷ್ಟ್ರೀಯ ಕಾರ್ಮಿಕ ಆಯೋಗ ಕೂಡ 2002ರಲ್ಲಿ ವೇತನ ಮಂಡಲಿ ಅಗತ್ಯವಿಲ್ಲವೆಂದು ಶಿಫಾರಸು ಮಾಡಿತ್ತು ಎಂದು  ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.