ಮಂಗಳವಾರ, ಏಪ್ರಿಲ್ 20, 2021
27 °C

ವೇತನ ಸಮಿತಿ ರಚಿಸಲು ಸಂಘ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದೇಶದ ಇತರ ರಾಜ್ಯಗಳಂತೆ ಕರ್ನಾಟಕದ ಸರ್ಕಾರಿ ನೌಕರರು ಸಮಾನ ವೇತನ ಮತ್ತು ಭತ್ಯೆಗಳನ್ನು ಪಡೆಯುವುದಕ್ಕೆ ನೆರವಾಗುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ವೇತನ ಸಮಿತಿ ರಚನೆ ಹಾಗೂ ಅದರ ಕಾರ್ಯಾರಂಭಕ್ಕೆ ಆದೇಶ ಹೊರಡಿಸಬೇಕು ಎಂದು ರಾಮನಗರ ಜಿಲ್ಲೆಯ ಸರ್ಕಾರಿ ನೌಕರರ ಸಂಘ ಆಗ್ರಹಿಸಿದೆ.

ಕೇಂದ್ರ ಸರ್ಕಾರ 2001ರ ಜನಗಣತಿಯನ್ನು ಆಧರಿಸಿ ರಾಜ್ಯದ ನಗರ ಮತ್ತು ಪಟ್ಟಣ ಪ್ರದೇಶಗಳನ್ನು ಮೇಲ್ದರ್ಜೆಗೇರಿಸಿ ತನ್ನ ನೌಕರರಿಗೆ ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಿರುವ ಮಾದರಿಯಲ್ಲಿಯೇ ರಾಜ್ಯದಲ್ಲಿ ಇರುವ ನಗರ ಮತ್ತು ಪಟ್ಟಣ ಪ್ರದೇಶಗಳನ್ನು ಮೇಲ್ದರ್ಜೆಗೇರಿಸಿ, ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯಯಲ್ಲಿ ವ್ಯತ್ಯಾಸ ಸರಿಪಡಿಸುವಂತೆ ಸಂಘದ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಜಿಲ್ಲಾ ಕೇಂದ್ರಗಳಿಗೂ ಇತರೆ ಜಿಲ್ಲಾ ಕೇಂದ್ರಗಳಿಗೆ ನೀಡುವ ಮಾದರಿಯಲ್ಲಿಯೇ ಮನೆ ಬಾಡಿಗೆ ಭತ್ಯೆ ಪರಿಷ್ಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಅನುಷ್ಠಾನಗೊಳಿಸಿರುವ ‘ಆರೋಗ್ಯ ಭಾಗ್ಯ ಯೋಜನೆ’ಯನ್ನು ಇತರೆ ಇಲಾಖೆಗಳ ರಾಜ್ಯ ಸರ್ಕಾರಿ ನೌಕರರಿಗೂ ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ವಿವಿಧ ವೃಂದದ ಸುಮಾರು 1.7 ಲಕ್ಷ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ತ್ವರಿತವಾಗಿ ಭರ್ತಿಗೊಳಿಸಲು ಪ್ರಕ್ರಿಯೆ ಆರಂಭಿಸಬೇಕು. ವರ್ಗಾವಣೆ ವಿಷಯದಲ್ಲಿ ನೌಕರರಿಗೆ ಆಗುತ್ತಿರುವ ತೊಂದರೆ ಹಾಗೂ ಎದುರಿಸಬೇಕಾದ ಸಮಸ್ಯೆ ನಿವಾರಣೆಗೆ ನೂತನ ವರ್ಗಾವಣೆ ಕಾಯ್ದೆ ರೂಪಿಸುವಂತೆ ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.