ಸೋಮವಾರ, ಮೇ 16, 2022
27 °C

ವೈಜ್ಞಾನಿಕ ಮನೋಭಾವ ಬೆಳೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ವಿಜ್ಞಾನ ದಿನಾಚರಣೆಯನ್ನು ಎಲ್ಲ ಶಾಲೆಗಳಲ್ಲೂ ಹಮ್ಮಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ವೃದ್ಧಿಸುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಸಿ.ಯು.ಚಂದ್ರಶೇಖರಪ್ಪ ಅಭಿಪ್ರಾಯಪಟ್ಟರು. ತಾಲ್ಲೂಕಿನ ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಲಾಗಿದ್ದ ವಿಜ್ಞಾನ ದಿನ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ‘ಮಕ್ಕಳೇ ಪಾಲ್ಗೊಂಡು ಮಾಡುವ ವಿಜ್ಞಾನ ಪ್ರಯೋಗಗಳು ಮತ್ತು ಮಾದರಿಗಳು ಹೆಚ್ಚು ವೈಶಿಷ್ಟ್ಯಪೂರ್ಣವಾಗಿರುತ್ತವೆ’ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ ಮಾತನಾಡಿ, ‘ರಾಷ್ಟ್ರಕವಿ ಕುವೆಂಪು ಅವರ ಮಾತಿನಂತೆ ಎಲ್ಲಾ ವಿದ್ಯಾರ್ಥಿಗಳಿಗೂ ವಿಜ್ಞಾನ ದೀವಿಗೆ ಹಿಡಿಯುವ ಚೈತನ್ಯ ಶಕ್ತಿ ಬಂದು ನಿತ್ಯ ಜೀವನದಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಯುವಂತಾಗಲಿ’ ಎಂದರು.ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಪ್ರಯೋಗಗಳನ್ನು ಪ್ರಾತ್ಯಕ್ಷಿಕೆಯ ರೂಪದಲ್ಲಿ ಮಕ್ಕಳೇ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ವನ್ಯಜೀವಿ ಛಾಯಾಗ್ರಹಕ ಕೃಪಾಕರ ಸೇನಾನಿ ಅವರ ಗ್ರೀನ್ ಆಸ್ಕರ್ ಪ್ರಶಸ್ತಿ ವಿಜೇತ ಸೀಳು ನಾಯಿಗಳ ಕುರಿತ ಸಾಕ್ಷ್ಯಚಿತ್ರ ‘ದಿ ಪ್ಯಾಕ್’ ಹಾಗೂ ಚಾಲ್ಸ್ ಚಾಪ್ಲಿನ್ ನಟನೆಯ ‘ದಿ ಮಾಡರ್ನ್ ಟೈಮ್ಸ್’ ಚಲನಚಿತ್ರ ಪ್ರದರ್ಶಿಸಲಾಯಿತು.ಸಂತೇಕಲ್ಲಹಳ್ಳಿಯ ನಿವೃತ್ತ ಪ್ರಾಧ್ಯಾಪಕ ಇಂದಿರಾಪಣಂ ವೇಣುಗೋಪಾಲ್ ಅವರು ‘ವಿಜ್ಞಾನ ಬೆಳೆದು ಬಂದ ಹಾದಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕೋಲಾರದ ಅರಣ್ಯ ಇಲಾಖೆಯ ಪುರುಷೋತ್ತಮರಾವ್ ‘ನಿತ್ಯ ಜೀವನದಲ್ಲಿ ವಿಜ್ಞಾನ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ವಿದ್ಯಾರ್ಥಿಗಳು ನೃತ್ಯ, ಹಾಡು, ನಾಟಕ, ಏಕಪಾತ್ರಾಭಿನಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಸುತ್ತಮುತ್ತಲಿನ ಸುಮಾರು 15 ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯೋಗಗಳು ಮತ್ತು ಕಾರ್ಯಕ್ರಮವನ್ನು ವೀಕ್ಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.