ಗುರುವಾರ , ಮೇ 28, 2020
27 °C

ವೈದ್ಯಕೀಯ ಬೋಧಕರ ನಿವೃತ್ತಿ ವಯಸ್ಸು 70 ವರ್ಷಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವೈದ್ಯಕೀಯ ಕಾಲೇಜುಗಳ ಬೋಧಕ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು 70 ವರ್ಷಕ್ಕೆ ಏರಿಸಲು ನಿರ್ಧರಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಹೇಳಿದರು.ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ 15ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.‘ನೂರಾರು ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕಿದೆ. ಆ ಹಿನ್ನೆಲೆಯಲ್ಲಿ ವೈದ್ಯರು, ತಜ್ಞರು ಹಾಗೂ ಪರಿಣತ ಅರೆ ವೈದ್ಯಕೀಯ ಸಿಬ್ಬಂದಿಯ ಅಗತ್ಯವಿದೆ. ಹಾಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬೋಧಕರ ನಿವೃತ್ತಿ ವಯೋಮಿತಿಯನ್ನು 70 ವರ್ಷಕ್ಕೆ ಏರಿಸಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಒಪ್ಪಿಗೆ ನೀಡಿದೆ’ ಎಂದರು.‘ವೈದ್ಯಕೀಯ ಕ್ಷೇತ್ರದಲ್ಲಿನ ಸಿಬ್ಬಂದಿ ಕೊರತೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಾಗಾಗಿ ಎಂಸಿಐನ ಕೆಲವು ನಿಯಾಮಾವಳಿಗಳಿಗೆ ತಿದ್ದುಪಡಿ ತಂದು ಸಡಿಲಗೊಳಿಸಲಾಗಿದೆ. ಸದ್ಯ ಬೋಧಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಯ ಅನುಪಾತ 1:1 ಇದೆ. ಇದನ್ನು 1:2ಕ್ಕೆ ಏರಿಸಲು ಕ್ರಮ ಕೈಗೊಳ್ಳಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 4,000 ಹೆಚ್ಚುವರಿ ಸೀಟುಗಳ ಹಂಚಿಕೆಗೆ ಅನುಮೋದನೆ ನೀಡಲಾಗಿದೆ’ ಎಂದು ಹೇಳಿದರು.‘ದೇಶದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 13,000 ಸ್ನಾತಕೋತ್ತರ ಸೀಟುಗಳಿವೆ. ಮುಂದಿನ ಎರಡು ವರ್ಷಗಳಲ್ಲಿ ಈ ಸೀಟುಗಳ ಸಂಖ್ಯೆಯನ್ನು 23,000ಕ್ಕೆ ಏರಿಸುವ ಗುರಿ ಇದೆ. ಆ ಹಿನ್ನೆಲೆಯಲ್ಲಿ ಇನ್ನೆರಡು ವರ್ಷಗಳಲ್ಲಿ 10,000 ಸೀಟುಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.‘ರಾಜ್ಯ ಸರ್ಕಾರದ ಅಡಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಇನ್ನಷ್ಟು ಬಲವರ್ಧನೆಗೊಳಿಸುವ ಯೋಜನೆಗೆ ಕೇಂದ್ರ ಸರ್ಕಾರದ ವತಿಯಿಂದ 1,350 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ ದೊರೆತಿದೆ. ಇದರಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗಲಿದೆ’ ಎಂದರು.‘ಮನೋವಿಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮನೋವೈದ್ಯರ ಅಗತ್ಯವಿದ್ದು, ಶೇ 23ರಷ್ಟು ಮನೋವೈದ್ಯರಷ್ಟೇ ಲಭ್ಯರಿದ್ದಾರೆ. ಹಾಗೆಯೇ ಶೇ 25ರಷ್ಟು ನರ್ಸ್‌ಗಳಷ್ಟೇ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಮನೋವಿಜ್ಞಾನ ಕ್ಷೇತ್ರದಲ್ಲಿ 3,500 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು.‘ಸುಮಾರು 8,000 ತಜ್ಞ ಮನೋವೈದ್ಯರ ಅಗತ್ಯವಿದೆ. ಹಾಗೆಯೇ 17,000 ಕ್ಲಿನಿಕಲ್ ಸೈಕಾಲಾಜಿಸ್ಟ್, 23,000 ಮನೋವೈದ್ಯಕೀಯ ಸಮಾಜ ಸೇವಕರು, 9000 ನರ್ಸ್‌ಗಳ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಪ್ರತಿ ವರ್ಷ 1,756 ಮಂದಿ ತಜ್ಞ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಕೆಲಸ ಪ್ರಗತಿಯಲ್ಲಿದೆ’ ಎಂದರು.ತಜ್ಞರ ಸಮಿತಿ ರಚನೆ: ‘ಗುಜರಾತ್‌ನಲ್ಲಿ ಇತ್ತೀಚೆಗೆ ವೈರಾಣು ಸೋಂಕು ತಗುಲಿ ಮೂರು ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆಯಿಂದ ಆತಂಕ ಪಡಬೇಕಾದ ಅಗತ್ಯವಿಲ್ಲ. ಈಗಾಗಲೇ ಆರು ತಜ್ಞರ ಸಮಿತಿ ರಚಿಸಲಾಗಿದ್ದು, ವರದಿ ಕೈಸೇರಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.ಘಟಿಕೋತ್ಸವ ಭಾಷಣ ಮಾಡಿದ ಜವಾಹರಲಾಲ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಎಂಜಿನಿಯರಿಂಗ್ ಮೆಕಾನಿಕ್ಸ್ ಘಟಕದ ಅಧ್ಯಕ್ಷ ಪ್ರೊ.ರೊದ್ದ ನರಸಿಂಹ, ‘ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಸರ್ಕಾರ ಕೂಡ ಪ್ರೋತ್ಸಾಹ ನೀಡಬೇಕು. ದೇಶದಲ್ಲಿ ಪ್ರತಿವರ್ಷ ಸುಮಾರು 1,000 ಮಂದಿ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ ಪದವಿ ಪಡೆಯುತ್ತಿದ್ದಾರೆ. ಆದರೆ ಚೀನಾ ಮತ್ತು ಅಮೆರಿಕದಲ್ಲಿ ಈ ಪ್ರಮಾಣ ಹತ್ತು ಪಟ್ಟು ಹೆಚ್ಚು ಇದೆ’ ಎಂದರು.‘ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶೇ 1ಕ್ಕಿಂತ ಕಡಿಮೆ ಮೊತ್ತವನ್ನು ವಿಜ್ಞಾನ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತಿದೆ. ಆದರೆ ಚೀನಾದಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಇದಕ್ಕಿಂತ ನಾಲ್ಕು ಪಟ್ಟು ಹೆಚ್ಚು ವಿನಿಯೋಗಿಸಲಾಗುತ್ತಿದೆ. ಇನ್ನು ಮುಂದಾದರೂ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡಬೇಕಿದೆ’ ಎಂದರು.ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ‘ಯುವ ಜನತೆ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಹಾಗಾಗಿ ಎಲ್ಲೆಡೆ ಮನೋವೈದ್ಯಕೀಯ ಸಂದರ್ಶನ ಕೇಂದ್ರಗಳನ್ನು ತೆರೆಯಬೇಕಿದೆ’ ಎಂದರು.ಇದೇ ವೇಳೆ ಆಜಾದ್ ಅವರು ‘ಕಾಗ್ನಿಟಿವ್ ನ್ಯೂರೋಸೈನ್ಸ್ ಸೆಂಟರ್ ಅಡ್ವಾನ್‌ಸ್ಡ್ ಬ್ರೈನ್ ಇಮೇಜಿಂಗ್ ಫೆಸಿಲಿಟಿ’ ಕೇಂದ್ರ, ಡಾ.ಎಂ.ವಿ. ಗೋವಿಂದಸ್ವಾಮಿ ಕೇಂದ್ರವನ್ನು ಉದ್ಘಾಟಿಸಿದರು. ನಿಮ್ಹಾನ್ಸ್ ನಿರ್ದೇಶಕ ಪ್ರೊ.ಪಿ. ಸತೀಶ್‌ಚಂದ್ರ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.