ಶುಕ್ರವಾರ, ಮೇ 20, 2022
23 °C

ವೈದ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯಕೀಯ ಸೇವೆಯ ಮೇಲೆ ಶೇಕಡಾ 5ರಷ್ಟು ಸೇವಾ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಮತ್ತು ಸಾರ್ವಜನಿಕರು ನಗರದ ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.‘ಕೇಂದ್ರ ಸರ್ಕಾರ ಆರೋಗ್ಯ ಸೇವೆಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹೇರಿದೆ.ರಾಷ್ಟ್ರದಲ್ಲಿ ಶೇ 90ರಷ್ಟು ಜನರಿಗೆ ವೈದ್ಯಕೀಯ ವೆಚ್ಚ ಭರಿಸುವ ಶಕ್ತಿ ಇಲ್ಲ. ಇದನ್ನು ಅರಿಯದ ಸರ್ಕಾರ ತೆರಿಗೆ ಹೇರುವ ಮೂಲಕ ಜನರ ಆರೋಗ್ಯದ ಹಕ್ಕನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ’ ಎಂದು ದೇವಿಶೆಟ್ಟಿ ದೂರಿದರು.‘ತೆರಿಗೆಯ ಸಂಪೂರ್ಣ ಹೊರೆ ಜನರ ಮೇಲೆ ಬೀಳಲಿದೆ. ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಐದು ಸಾವಿರ ರೂಪಾಯಿ ಹೆಚ್ಚು ಹಣ ಭರಿಸಬೇಕಾಗುತ್ತದೆ. ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವವರು ಹೆಚ್ಚಿನ ಹಣ ನೀಡಬೇಕಾಗಿದೆ. ರಾಜ್ಯ ಸರ್ಕಾರ ಬಡವರಿಗೆ ಜಾರಿಗೊಳಿಸಿರುವ ಆರೋಗ್ಯ ಯೋಜನೆಗಳಲ್ಲಿ ಚಿಕಿತ್ಸೆ ಪಡೆಯುವವರಿಗೆ ಇದರಿಂದ ತೊಂದರೆಯಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ತೆರಿಗೆಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಅವರು ಹೇಳಿದರು.‘ಕೇಂದ್ರ ಹಣಕಾಸು ಸಚಿವರನ್ನು  ಭೇಟಿ ಮಾಡಿ ಹೊಸ ತೆರಿಗೆಯಿಂದ ಆಗುವ ಅನಾನುಕೂಲಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಅವರು ಸಹ ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಕೆಲ ದಿನಗಳಲ್ಲಿ ಅವರು ಈ ಬಗ್ಗೆ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ’ ಎಂದು ದೇವಿಶೆಟ್ಟಿ ತಿಳಿಸಿದರು.ಆಸ್ಪತ್ರೆಯ ಸಿಬ್ಬಂದಿ, ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಹಾತ್ಮಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.