ಮಂಗಳವಾರ, ಆಗಸ್ಟ್ 3, 2021
23 °C

ವೈಭವೋಪೇತ ಕಟ್ಟಡದಲ್ಲಿ ಅಡಗಿದ್ದ ಲಾಡೆನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಒಸಾಮ ಬಿನ್ ಲಾಡೆನ್ ಯಾವುದೇ ಗುಹೆಯೊಳಗೆ ಹತ್ಯೆಗೀಡಾಗಿಲ್ಲ. ಬದಲಾಗಿ ಪಾಕಿಸ್ತಾನ ಮಿಲಿಟರಿ ಅಕಾಡೆಮಿಗೆ ಅತಿ ಸನಿಹದಲ್ಲಿಯೇ ಇದ್ದ ಎರಡು ಅಂತಸ್ತಿನ ವೈಭವೋಪೇತ ಕಟ್ಟಡದಲ್ಲಿ ಕೊಲ್ಲಲ್ಪಟ್ಟಿದ್ದಾನೆ.ಆಶ್ಚರ್ಯದ ವಿಷಯ ಎಂದರೆ ಪಾಕಿಸ್ತಾನ ಸೇನೆಯ ಮೂರು ರೆಜಿಮೆಂಟ್‌ಗಳು ಹಾಗೂ ಸೇನಾ ಅಧಿಕಾರಿಗಳ ವಸತಿ ಗೃಹಗಳು ಇರುವ ಅಬೋಟಾಬಾದ್‌ನಲ್ಲಿಯೇ ಲಾಡೆನ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಲಾಡೆನ್ ಆಫ್ಘನ್ ಗಡಿಗೆ ಹೊಂದಿಕೊಂಡಂತೆ ಬುಡಕಟ್ಟು ಪ್ರದೇಶದ ಗುಹೆಯಲ್ಲಿ ರಕ್ಷಣೆ ಪಡೆದಿರಬಹುದು ಎಂದು ಈ ಹಿಂದೆ ಹಲವು ಗುಪ್ತಚರ ಇಲಾಖೆಗಳು ಅಂದಾಜು ಮಾಡಿದ್ದವು.ಇಸ್ಲಾಮಾಬಾದ್‌ಗೆ ಸಮೀಪದಲ್ಲಿಯೇ ಇರುವ ಅಬೋಟಾಬಾದ್‌ನಲ್ಲಿ ಎಷ್ಟು ಸಮಯದಿಂದ ಲಾಡೆನ್ ತಂಗಿದ್ದ ಎನ್ನುವ ಮಾಹಿತಿ ಲಭ್ಯವಾಗಿಲ್ಲ.ಆದರೆ ಲಾಡೆನ್ ಅಡಗುದಾಣದ ಬಗ್ಗೆ ಖಚಿತ ಮಾಹಿತಿ ಪಡೆದ ಅಮೆರಿಕ ಪಡೆಯ ಹೆಲಿಕಾಪ್ಟರ್‌ಗಳು ವಾಯವ್ಯ ಪಾಕಿಸ್ತಾನದ ಘಾಜಿ ವಾಯು ನೆಲೆಯಿಂದ ದಾಳಿ ನಡೆಸಿದವು.ವಿಶಾಲವಾದ, ಬೃಹತ್ ಆವರಣಗೋಡೆಯನ್ನು ಒಳಗೊಂಡ ಪ್ರದೇಶದಲ್ಲಿ ಲಾಡೆನ್ ನಿವಾಸ ಇದೆ. ಆವರಣಗೋಡೆ 12-18 ಅಡಿ ಎತ್ತರವಿದ್ದು, ಕಬ್ಬಿಣದ ಸಲಾಖೆಗಳನ್ನು ಗೋಡೆಯ ಮೇಲ್ತುದಿಯಲ್ಲಿ ಹಾಕಲಾಗಿತ್ತು.ಆವರಣ ಪ್ರವೇಶಿಸಲು ನಿರ್ಬಂಧ ಇತ್ತು ಹಾಗೂ ಎರಡು ಭದ್ರತಾ ತಪಾಸಣೆಯ ಬಾಗಿಲಿನ ನಂತರವೇ ಒಳ ಪ್ರವೇಶಕ್ಕೆ ಅವಕಾಶ. 2005ರಲ್ಲಿ ಈ ಮನೆ ಹಾಗೂ ಆವರಣಗೋಡೆಯನ್ನು ನಿರ್ಮಿಸಲಾಗಿತ್ತು. ಎರಡು ಅಂತಸ್ತಿನ ಕಟ್ಟಡವಿದ್ದು, ತಾರಸಿ ಮೇಲೆ ಏಳು ಅಡಿ ಅಗಲದ ಏಕಾಂತ ಕೊಠಡಿ ಇದೆ.

 

ಕಟ್ಟಡ, ಆವರಣಗೋಡೆ ಸೇರಿದಂತೆ ಹತ್ತು ಲಕ್ಷ ಮೌಲ್ಯದ ಈ ಆಸ್ತಿಯಲ್ಲಿ ಯಾವುದೇ ದೂರವಾಣಿ, ಇಂಟರ್‌ನೆಟ್ ಸೌಲಭ್ಯ ಕಲ್ಪಿಸಿರಲಿಲ್ಲ. ದಾಳಿಗೆ ಮುನ್ನ ಮನೆಯಲ್ಲಿ ಆತ ಇದ್ದಾನೆಯೇ ಎನ್ನುವುದನ್ನು ಖಚಿತ ಪಡಿಸಿಕೊಂಡ ನಂತರವೇ ದಾಳಿ ನಡೆಸಲಾಯಿತು.

ಹಮಾಸ್ ಖಂಡನೆ

ಗಾಜಾ ಸಿಟಿ (ಎಎಫ್‌ಪಿ): ಒಸಾಮ ಬಿನ್ ಲಾಡೆನ್ ಹತ್ಯೆಯನ್ನು ಗಾಜಾ ಪಟ್ಟಿಯ ಹಮಾಸ್ ಸಂಘಟನೆಯ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಅವರು ಖಂಡಿಸಿದ್ದಾರೆ.‘ಧರ್ಮ ಯುದ್ಧದಲ್ಲಿ ನಿರತಾಗಿರುವ ಮುಸ್ಲಿಮ್, ಇಲ್ಲವೇ ಅರಬ್ ಜನರನ್ನು ಯಾರೇ ಆಗಲಿ ಕೊಲ್ಲುವುದನ್ನು ನಾವು ಖಂಡಿಸುತ್ತೇವೆ. ಅವರ ಮೇಲೆ ದೇವರ ದಯೆ ಇರುತ್ತದೆ’ ಎಂದು ಹನಿಯಾ ತಿಳಿಸಿದರು.‘ಲಾಡೆನ್ ಹತ್ಯೆ  ಮುಸ್ಲಿಮರು ಮತ್ತು ಅರಬ್ಬರ ವಿರುದ್ಧ ಅಮೆರಿಕ ಅನುಸರಿಸುತ್ತಿರುವ ರಕ್ತಪಿಪಾಸು ಮತ್ತು ದಬ್ಬಾಳಿಕೆಯ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.