ಬುಧವಾರ, ಮೇ 25, 2022
23 °C

ವ್ಯಕ್ತಿ: ನೇಪಥ್ಯಕ್ಕೆ ಸರಿದ ನಿಷ್ಠುರ ರಾಜಕಾರಣ

ಬಿ.ಎಸ್.ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಲ. ವಿಧಾನಸಭೆಯಲ್ಲಿ ಅಂದು ಆ ವರ್ಷದ ಬಜೆಟ್ ಮಂಡನೆಯಾಗಬೇಕಿತ್ತು. ಆದರೆ ಮಂಡನೆಗೂ ಮೊದಲೇ ಬಜೆಟ್ ಸೋರಿಕೆಯಾಗಿತ್ತು. ಬಜೆಟ್ ಪ್ರತಿ ಆಡಳಿತ ಪಕ್ಷದವರೇ ಆದ ಕೆ.ಎಚ್.ರಂಗನಾಥ್ ಅವರ ಕೈಗೆ ಸಿಕ್ಕಿತ್ತು. ವಿಧಾನ ಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ರಂಗನಾಥ್ ಬಜೆಟ್ ಪ್ರತಿಯನ್ನು ಎತ್ತಿ ಹಿಡಿದು ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು! ಇದು ಕ್ರಿಯಾಲೋಪ. ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯನ್ನೇ ಕಳೆದುಕೊಂಡಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದರು. ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಎಸ್.ಎಂ.ಕೃಷ್ಣ ಅವರಿಗೆ ಆಡಳಿತ ಪಕ್ಷದ ಹಿರಿಯ ನಾಯಕರಿಂದ ಎದುರಾದ ಈ ಇರಿಸು ಮುರಿಸಿನ ಪ್ರಸಂಗ ನಿಭಾಯಿಸುವಲ್ಲಿ ಸಾಕಾಗಿ ಹೋಗಿತ್ತು.ಇದು  ಕೊಟ್ರಪ್ಪ ಹರಿಹರಪ್ಪ ರಂಗನಾಥ್ ವ್ಯಕ್ತಿತ್ವಕ್ಕೆ ಒಂದು ಸಣ್ಣ ನಿದರ್ಶನ. ರಂಗನಾಥ್ ಇದ್ದುದೇ ಹಾಗೆ. ಕೊನೆ ಉಸಿರಿನವರೆಗೂ ಬದುಕಿದ್ದೂ ಹಾಗೇ. ನೇರ, ನಿಷ್ಠುರ ಮತ್ತು ನಿರ್ದಾಕ್ಷಿಣ್ಯ ಸ್ವಭಾವಗಳ ಜೊತೆ ಸಮಾಜವಾದದ ತತ್ವಗಳನ್ನು ರೂಢಿಸಿಕೊಂಡಿದ್ದ ನಾಡಿನ ಅಪರೂಪದ ರಾಜಕಾರಣಿ ಕೆ.ಎಚ್.ರಂಗನಾಥ್. ರಾಜಕಾರಣದಲ್ಲಿದ್ದರೂ ಅದಕ್ಕೆ ಅಪವಾದ ಎಂಬಂತೆ ಮಾದರಿಯಾಗಿ ಬದುಕಿದ್ದರು. ಮೊನ್ನೆ ಅಕ್ಟೋಬರ್ 18ರಂದು ಅವರು ಇಹಲೋಕದ ಯಾತ್ರೆ ಮುಗಿಸಿದಾಗ ಅವರಿಗೆ  85 ವರ್ಷಗಳು ತುಂಬಿದ್ದವು.ಈಗಿನ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ 1926ರ ಅಕ್ಟೋಬರ್ 20ರಂದು ಹರಿಹರಪ್ಪ ಮತ್ತು ಸಿದ್ದಮ್ಮ ದಂಪತಿಯ ಪುತ್ರನಾಗಿ ಜನಿಸಿದ ರಂಗನಾಥ್ ಬಡತನದ ಜೊತೆಗೇ ಬೆಳೆದವರು. ತಂದೆ ಹರಿಹರಪ್ಪ ಅಬಕಾರಿ ಇಲಾಖೆಯಲ್ಲಿ ಗುಮಾಸ್ತರಾಗಿದ್ದವರು.ಪರಿಶಿಷ್ಟ ಜಾತಿಯ ಬಲಗೈ ಪಂಗಡಕ್ಕೆ ಸೇರಿದ ಈ ಕುಟುಂಬದ ಜತೆ `ಧನಲಕ್ಷ್ಮಿ~  ಮುನಿಸಿಕೊಂಡಿದ್ದಳು. ಹರಿಹರಪ್ಪನವರಿಗೆ ರಂಗನಾಥ್ ಮತ್ತು ಮೂವರು ಹೆಣ್ಣು ಮಕ್ಕಳು. ಇದ್ದುದರಲ್ಲೇ ಮಗನಿಗೆ ಕೈಲಾದಷ್ಟು ವಿದ್ಯಾಭ್ಯಾಸ ಕೊಡಿಸುವುದನ್ನು ಅವರು ಮರೆಯಲಿಲ್ಲ. ರಂಗನಾಥ್ ಹರಿಹರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಜಗಳೂರಿನಲ್ಲಿ ಮಾಧ್ಯಮಿಕ ಹಾಗೂ ಚಿತ್ರದುರ್ಗದಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದರು. ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಮತ್ತು ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬಿ.ಎಲ್ ಪದವಿಯನ್ನು ಪಡೆದರು. ಈ ನಡುವೆ ಬಿ.ಎಸ್ಸಿ ಫೇಲಾಗಿದ್ದ ಸಮಯದಲ್ಲಿ ಚಿತ್ರದುರ್ಗದ ಆಹಾರ ಇಲಾಖೆಯ ಉಗ್ರಾಣದಲ್ಲಿ ಕೆಲಕಾಲ ಗುಮಾಸ್ತರಾಗಿ ದುಡಿದರು. ಆಮೇಲೆ ಸ್ವಲ್ಪ ಕಾಲ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿಯ ಪ್ರೌಢಶಾಲೆಯಲ್ಲಿ ಜೀವಶಾಸ್ತ್ರ ಬೋಧಿಸುವ ಶಿಕ್ಷಕರಾಗಿದ್ದರು. ಬಿ.ಎಲ್. ಪದವಿ ಮುಗಿಯುತ್ತಿದ್ದಂತೆಯೇ ತಮ್ಮ ತಂದೆಯ ಅತ್ಯಂತ ಆಪ್ತರೂ, ಸಭ್ಯ ರಾಜಕಾರಣಿ ಎನಿಸಿದ್ದ ಕೆ.ಕೆಂಚಪ್ಪ ಅವರಲ್ಲಿ ಜೂನಿಯರ್ ಆಗಿ ವಕೀಲಿ ವೃತ್ತಿ ಆರಂಭಿಸಿದರು. ರಂಗನಾಥ್ ಅವರು ಈ ಹೊತ್ತಿಗಾಗಲೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಚಿತ್ರದುರ್ಗದಲ್ಲಿ ಸೆರೆಮನೆ ವಾಸದ ಸವಿ ಉಂಡಿದ್ದರು.ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಗುರುತಿಸಿಕೊಂಡಿದ್ದರು. ಗಾಂಧೀಜಿಯ ಪ್ರಭಾವವೇ ಸಾಮಾಜಿಕ ಕಳಕಳಿ, ಹೋರಾಟಗಳಿಗೆ ಪ್ರೇರಣೆಯಾಗಿತ್ತು. ಒಮ್ಮೆ ಬೆಂಗಳೂರಿನಲ್ಲಿ ಸಮಾಜವಾದಿ ನೇತಾರ  ಆಚಾರ್ಯ ನರೇಂದ್ರ ದೇವ ಅವರ ಭಾಷಣ ಕೇಳಿ ಪ್ರಭಾವಿತರಾದರು. ಅಂದಿನಿಂದಲೇ ಸಮಾಜವಾದಕ್ಕೆ ಶರಣಾದರು. ಮುಂದೆ ಅವರ ರಾಜಕೀಯ ಬದುಕಿಗೆ ಸಮಾಜವಾದ  ಭದ್ರ ಬುನಾದಿ ಆಯಿತು.ಬೆಂಗಳೂರಿನ ಗಾಂಧಿನಗರದ ಕಚೇರಿಯಲ್ಲಿ ಕೆ.ಕೆಂಚಪ್ಪನವರ ಬಳಿ ಕಿರಿಯ ವಕೀಲರಾಗಿ ಬಿ.ಎಲ್.ಗೌಡ ಮತ್ತು ಕೆ.ಎಚ್.ರಂಗನಾಥ್ ಇದ್ದರು. ಮುಂದೆ ರಂಗನಾಥ್ ಮತ್ತು ಗೌಡ ಚಿತ್ರದುರ್ಗ ಸಂಸತ್ ಕ್ಷೇತ್ರಕ್ಕೆ ಚುನಾವಣೆಗೆ ನಿಂತು ಕಾದಾಡಿದರು. ವಿಜಯಲಕ್ಷ್ಮಿ ರಂಗನಾಥ್ ಅವರಿಗೇ ಒಲಿದಿದ್ದಳು. ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಇಬ್ಬರಲ್ಲಿ ರಂಗನಾಥ್ ಒಬ್ಬರಾಗಿದ್ದರು. ಎಂದೂ ಎಲ್ಲಿಯೂ ದ್ವೇಷದ ರಾಜಕಾರಣ ಮಾಡದೆ ಸಜ್ಜನಿಕೆಯ ರಾಜಕಾರಣಕ್ಕೆ ಅವರು ಹೆಸರಾಗಿದ್ದರು. ಈ ಗುಣವನ್ನು ಅವರು ಕಡೇತನಕ ಕಾಪಾಡಿಕೊಂಡು ಬಂದರು.ಕೆ.ಕೆಂಚಪ್ಪನವರೇ ರಂಗನಾಥ್‌ಗೆ ರಾಜಕೀಯ ಗುರು. ಸ್ವಾತಂತ್ರ್ಯ ಬಂದ ನಂತರ ಸಮಾಜವಾದಿಗಳ ಒಡನಾಟದಲ್ಲೇ ಇದ್ದ ಅವರು 1962ರಲ್ಲಿ ಮೊದಲ ಬಾರಿಗೆ ಪ್ರಜಾ ಸೋಷಲಿಸ್ಟ್ (ಪಿಎಸ್‌ಪಿ) ಪಕ್ಷದಿಂದ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು. 1969ರ ಸುಮಾರಿಗೆ ಅಶೋಕ್ ಮೆಹ್ತಾ ನೇತೃತ್ವದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆಯಾದ ಯಂಗ್ ಟರ್ಕ್‌ಗಳ ತಂಡದಲ್ಲಿ ಚಂದ್ರಶೇಖರ್, ಮೋಹನ್ ಧಾರಿಯಾ, ಕೃಷ್ಣಕಾಂತ್ ಅನುಸರಿಸಿದ ಹೆಜ್ಜೆಗಳನ್ನು ರಾಜ್ಯದ ಸಮಾಜವಾದಿ ನಾಯಕರೂ ತುಳಿದರು. ಪರಿಣಾಮ ಕರ್ನಾಟಕದ  ಪಿಎಸ್‌ಪಿಯ ನಾಯಕರುಗಳಾದ ಎಸ್.ಎಂ.ಕೃಷ್ಣ, ಕೆ.ಎಚ್.ರಂಗನಾಥ್, ಮಲ್ಕಾ ಗೋವಿಂದ ರೆಡ್ಡಿ, ಎಸ್.ಶಿವಪ್ಪ, ಎ.ಎಚ್.ಶಿವಾನಂದ ಸ್ವಾಮಿ ಮುಂತಾದ ಸಮಾಜವಾದಿಗಳ ದಂಡು ಕಾಂಗ್ರೆಸ್‌ನಲ್ಲಿ ವಿಲೀನವಾಯಿತು. ಇವರ ನಿಷ್ಠೆ ಸಿದ್ಧಾಂತಕ್ಕೆ ಎಂಬುದೇ ಆಗಿತ್ತು.ಆದರೂ ಇಂದಿರಾ ಗಾಂಧಿ ಬಡವರ ಬಗ್ಗೆ ಹೊಂದಿದ್ದ ಕನಸುಗಳು ಮತ್ತು ದೇವರಾಜ ಅರಸು ಅವರ ಸಾಮಾಜಿಕ ನ್ಯಾಯದ ಕಲ್ಪನೆ ಇವರಿಗೆ ಪ್ರಮುಖ ಆಕರ್ಷಣೆಯಾಗಿತ್ತು. 1972ರಲ್ಲಿ ಮೊದಲ ಬಾರಿಗೆ ಪ್ರದೇಶ ಕಾಂಗ್ರೆಸ್ ಸಮಿತಿಯ ಚುನಾಯಿತ ಅಧ್ಯಕ್ಷರಾಗಿ ರಂಗನಾಥ್ ನೇಮಕಗೊಂಡರು. 85-86ರಲ್ಲಿಯೂ ಎರಡನೇ ಬಾರಿಗೆ ಅಧ್ಯಕ್ಷರಾಗಿದ್ದರು. ಅರಸು ಸಂಪುಟದಲ್ಲಿ 1973ರಲ್ಲಿ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಅವರು ಪ್ರಜ್ಞಾಪೂರ್ವಕವಾಗಿ ಸಮಷ್ಟಿ ಪ್ರಜ್ಞೆಯನ್ನು ಜತನವಾಗಿ ಪೋಷಿಸಿಕೊಂಡು ಬಂದರು. 1978ರಲ್ಲಿ ಅರಸು ಸಂಪುಟದಲ್ಲಿ ಸಹಕಾರ ಸಚಿವರಾಗಿ, 1981-83ರಲ್ಲಿ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು. 1984ರಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅನ್ನು ಪ್ರತಿನಿಧಿಸಿ ಗೆದ್ದಿದ್ದರು. 1989ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗೃಹ, ಶಿಕ್ಷಣ ಹಾಗೂ ಕೃಷಿ ಸಚಿವ ಸ್ಥಾನ ನಿಭಾಯಿಸಿದರು. ನಂತರದ ದಿನಗಳಲ್ಲಿ ವೀರಪ್ಪ ಮೊಯಿಲಿ ಸಂಪುಟದಲ್ಲಿ ಲೋಕೋಪಯೋಗಿ ಮಂತ್ರಿಯಾಗಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ  ಅವಧಿಯಲ್ಲಿ ಪರಿಸರ ಮತ್ತು ಅರಣ್ಯ ಖಾತೆಯ ಜವಾಬ್ದಾರಿ. ಒಟ್ಟು ಆರು ಬಾರಿ ವಿಧಾನಸಭೆಗೆ ಮತ್ತು ಒಮ್ಮೆ ಲೋಕಸಭೆಗೆ ಆಯ್ಕೆಯಾಗಿದ್ದ ಅವರು ಒಮ್ಮೆ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು.ರಂಗನಾಥ್ ಸ್ವಭಾವತಃ ಮುಂಗೋಪಿ, ವ್ಯಗ್ರ ಹಾಗೂ ಹಟಮಾರಿ ಗುಣ ಹೊಂದಿದ್ದವರು. ರಂಗನಾಥ್ ಐ.ಬಿ.ಯಲ್ಲಿ ಬೀಡು ಬಿಟ್ಟಿದ್ದಾರೆ ಎಂದರೆ ಅಧಿಕಾರಿಗಳು  ಹೆಡ್ ಕ್ವಾರ್ಟ್‌ರ್ಸ್‌ ಬಿಟ್ಟು ಕದಲುತ್ತಿರಲಿಲ್ಲ. ಅವರು ಕೆಡಿಪಿ ಮೀಟಿಂಗ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರೆ ಅಧಿಕಾರಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿತ್ತು. ಯಾವುದೇ ಸರ್ಕಾರಿ ಕೆಲಸಗಳಿಗೆ ರಂಗನಾಥ್ ಎಂದೂ ಹೋಂ ವರ್ಕ್ ಇಲ್ಲದೇ ಹೋಗುತ್ತಿರಲಿಲ್ಲ. ಅಷ್ಟೇಕೆ ಪತ್ರಕರ್ತರೂ ದಿಢೀರ್‌ಆಗಿ ಏನಾದರೂ ಕೇಳಲು ಹೋದರೆ, `ಈಗೇಕೆ ಬಂದಿರಿ? ಏನಾದರೂ ಇದ್ದರೆ ನಾನೇ ಹೇಳಿ ಕಳುಹಿಸುತ್ತೇನೆ, ಈಗ ಹೋಗಿ~ ಎಂದು ಕಡ್ಡಿ ಮುರಿದಂತೆ ನುಡಿಯುತ್ತಿದ್ದರು.ರಂಗನಾಥ್ ಕ್ಷೇತ್ರಕ್ಕೆ ಹೆಚ್ಚಿನದೇನನ್ನೂ ಮಾಡಲಿಲ್ಲ ಎಂದು ಹಿರಿಯೂರಿನ ಮತದಾರರು ಸಾಕಷ್ಟು ಬಾರಿ  ಹಳಹಳಿಸಿದ್ದುಂಟು. ಅಂತೆಯೇ ಇಡೀ ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ಲೆಕ್ಕ ಹಾಕುತ್ತಾ ಹೋದರೆ  ಹೇಳಿಕೊಳ್ಳುವಂತಹ ಸಾಧನೆಗಳು ಕಾಣುವುದಿಲ್ಲ. ಆದರೂ ಇಂದಿನ ಪೀಳಿಗೆಯ ರಾಜಕಾರಣಿಗಳ ಜೊತೆ ರಂಗನಾಥ್ ಅವರ ಸಾಧನೆಗಳನ್ನು ಮೌಲ್ಯಮಾಪನ ಮಾಡಿದಾಗ ಅವರ ಬಗ್ಗೆ ನಮಗೆ ಗೌರವ ಮೂಡುತ್ತದೆ. ಅವರೆಂದೂ ಕೈ, ಬಾಯಿ ಕೆಡಿಸಿಕೊಳ್ಳಲಿಲ್ಲ. ಭ್ರಷ್ಟಾಚಾರದ ಸಣ್ಣ ಆರೋಪವೂ ಅವರ ಮೇಲೆ ಬರಲಿಲ್ಲ. ಅವರು ತಮ್ಮ ಮಕ್ಕಳನ್ನು  ರಾಜಕೀಯಕ್ಕೆ ಎಳೆದು ತರಲಿಲ್ಲ. ಕೊನೆ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.ಅರಸು ಸರ್ಕಾರದಲ್ಲಿ  `ಡಿಫ್ಯಾಕ್ಟೊ ಸಿ.ಎಂ~ ಎಂದೇ ಕರೆಸಿಕೊಳ್ಳುತ್ತಿದ್ದ ರಂಗನಾಥ್, ಅವರ ಬಳಿ ಹಣವಿಲ್ಲ ಎಂಬ ಕಾರಣಕ್ಕಾಗಿಯೇ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶಗಳಿಂದ ವಂಚಿತರಾದರು. ಆದರೆ ಅವರು ಯಾವತ್ತೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ  ಸ್ಥಿತಪ್ರಜ್ಞ ಮನಸ್ಸಿನ ಬುದ್ಧನಂತೆ ಬದುಕಿದ್ದರು.ಎಪ್ಪತ್ತರ ದಶಕದಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸಾಗಿತ್ತು. ಮರುದಿನವೇ ಮತದಾನ. ರಾತ್ರಿ ಹನ್ನೊಂದರ ವೇಳೆಗೆ ಅವರು ಪ್ರವಾಸಿ ಮಂದಿರದಲ್ಲಿ ಮಲಗಿದ್ದರು. ಮಧ್ಯರಾತ್ರಿ ಪಕ್ಷದ ಕಾರ್ಯಕರ್ತರು ಬಾಗಿಲು ಬಡಿದು ರಂಗನಾಥ್‌ರನ್ನು ಎಬ್ಬಿಸಿದರು. `ಸಾರ್, ನಿಮ್ಮ ರಾಜಕೀಯ ವಿರೋಧಿಗಳು ಮತದಾರರಿಗೆ ದುಡ್ಡು ಹಂಚುತ್ತಿದ್ದಾರೆ~ ಎಂದು ಒಂದೇ ಉಸಿರಿನಲ್ಲಿ ದಿಗಿಲು ತೋಡಿಕೊಂಡರು. ನಿದ್ದೆ ಹಾಳಾಗಿದ್ದರಿಂದ ಕೋಪಗೊಂಡಿದ್ದ ರಂಗನಾಥ್ `ಹೋಗ್ರಯ್ಯ  ಹಂಚಿದರೆ ಹಂಚಲಿ, ಅವರ ಹತ್ತಿರ ಹಣವಿದೆ ಹಂಚುತ್ತಾರೆ. ನೀವು ಹೋಗಿ ನಿದ್ದೆ ಮಾಡಿ. ಬೇಗ ಎದ್ದು ಮತ ಹಾಕಿ. ನನಗೆ ಓಟು ಹಾಕಬೇಕಾದವರು ಹಾಕಿಯೇ ಹಾಕುತ್ತಾರೆ~ ಎಂದು ನಿರ್ಲಿಪ್ತರಂತೆ ಹೇಳಿ ನಿರುಮ್ಮಳವಾಗಿ ನಿದ್ರೆಗೆ ಜಾರಿದ್ದರು. ಫಲಿತಾಂಶ ಬಂದಾಗ ಅವರು ಮೂವತ್ತೆರಡು ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಇದು ಅವರ ಆತ್ಮವಿಶ್ವಾಸಕ್ಕೆ ಒಂದು ಉದಾಹರಣೆ.  ರಂಗನಾಥ್ ಠಾಕು-ಠೀಕು ಮನುಷ್ಯ. ಮಟನ್ ಊಟವೆಂದರೆ ಪಂಚಪ್ರಾಣ. ಬೆರಳುಗಳಿಗೆ ಸಾರೇ ಅಂಟದಂತೆ  ಉಣ್ಣುತ್ತಿದ್ದುದು ಅವರ ವೈಶಿಷ್ಟ್ಯ. ಒಳ್ಳೆಯ ಪುಸ್ತಕಗಳನ್ನು ಓದುವುದು ಅವರ ಹವ್ಯಾಸವಾಗಿತ್ತು.  ಕ್ಷೇತ್ರದ ಯಾವುದೇ ವ್ಯಕ್ತಿಯನ್ನು ಹೆಸರು ಹಿಡಿದೇ ಮಾತನಾಡಿಸುವಂತಹ ತೀಕ್ಷ್ಣಮತಿಯಾಗಿದ್ದರು. ಅರಸು ಸರ್ಕಾರದಲ್ಲಿ ಕಾರ್ಯರೂಪಕ್ಕೆ ಬಂದ ಹಲವಾರು ಜನಪರ ಯೋಜನೆಗಳ ರೂಪುರೇಷೆಯಲ್ಲಿ ರಂಗನಾಥ್ ತೆರೆಮರೆಯಲ್ಲಿ ದುಡಿದಿದ್ದರು. ಖ್ಯಾತಿ, ಅಧಿಕಾರ, ಹಣಕ್ಕಾಗಿ ಅವರು ಎಂದೂ ಹಂಬಲಿಸಲಿಲ್ಲ. ಜಾತಿ ರಾಜಕಾರಣ ಮಾಡಲಿಲ್ಲ.ರಂಗನಾಥ್‌ರಂತಹ ರಾಜಕಾರಣಿಗಳ ಸಂತತಿ ಮುಂದಿನ ಪೀಳಿಗೆಗೆ ಕಾಣಸಿಗುವುದು ದುರ್ಲಭವೇ ಸರಿ. ಇಂಥವರನ್ನು  ನಾಡಿನ ಇತಿಹಾಸ ಸದಾ ಮೆಲುಕು ಹಾಕುತ್ತಲೇ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.