ಸೋಮವಾರ, ಜನವರಿ 20, 2020
20 °C

ವ್ಯರ್ಥ ಕಲಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್‌ನ ಇತ್ತೀಚಿನ ಅಧಿವೇಶನ ಈ ಹಿಂದಿನ ಇತರ ಅಧಿವೇಶ­ನಗಳಂತೆ ಸಾಕಷ್ಟು ಸದ್ದುಗದ್ದಲಗಳೊಂದಿಗೆ ನಡೆದು ಸಮಾಪ್ತಿ­ಗೊಂಡಿದೆ. ಈ ಅಧಿವೇಶನದ ದೊಡ್ಡ ಸಾಧನೆ ಎಂದರೆ ಲೋಕ­ಪಾಲ್‌ ಮಸೂದೆಗೆ ಸಿಕ್ಕಿರುವ ಒಪ್ಪಿಗೆ. ಬಹುತೇಕ ರಾಜಕೀಯ ಪಕ್ಷಗಳ ಸಮ್ಮತಿಯೊಂದಿಗೆ ಈ ಮಸೂದೆ ಅಂಗೀಕಾರವಾಯಿತು ಎನ್ನುವುದು ಗಮ­ನಾರ್ಹವಾದುದು.

ಎಲ್ಲ ಪಕ್ಷಗಳು ಒಂದಾಗಿದ್ದರೆ ಇಂತಹ ಮಸೂ­ದೆಗಳು ಒಪ್ಪಿಗೆ ಪಡೆಯುವುದು ಸಲೀಸು. ಈ ಮಸೂದೆಯ ಮೇಲಿನ ಚರ್ಚೆಯೂ ಉತ್ತಮ ಗುಣಮಟ್ಟದ್ದಾಗಿತ್ತು. ಪ್ರತಿ ಪಕ್ಷಗಳು ಮತ್ತು ಆಳುವ ಪಕ್ಷದ ಮಧ್ಯೆ ಪರಸ್ಪರ ಕೊಡುಕೊಳ್ಳುವಿಕೆಯ ಮನೋಧರ್ಮ ಕಂಡುಬಂತು.  ಪ್ರತಿಪಕ್ಷಗಳ ಕೆಲವೊಂದು ತಿದ್ದುಪಡಿ ಮತ್ತು ಸಲಹೆಗಳಿಗೆ ಸರ್ಕಾರ ಕೂಡ ಒಪ್ಪಿಗೆ ನೀಡಿತ್ತು. ಆದರೆ ಅಧಿವೇಶನದ ಅವಧಿ ಸಂಕ್ಷಿಪ್ತವಾಗಿತ್ತು.

ನಿಗದಿತ ದಿನಕ್ಕಿಂತ ಎರಡು ದಿನಗಳ ಮುನ್ನವೇ ಅಧಿವೇಶನವನ್ನು ಮುಂದೂಡಲಾಯಿತು. 10 ದಿನಗಳ ಕಾಲಾವಧಿಯಲ್ಲಿ ರಾಜ್ಯಸಭೆಯಲ್ಲಿ ಸುಗಮವಾಗಿ ಕಲಾಪ ನಡೆದಿದ್ದು ಎರಡು ದಿನ ಮತ್ತು ಲೋಕಸಭೆಯಲ್ಲಿ ಕೇವಲ ಒಂದು ದಿನ. ಉಳಿದ ದಿನಗಳಲ್ಲಿ ತೆಲಂಗಾಣ ಅಥವಾ ಇತರ ವಿಷಯಗಳನ್ನು ಪ್ರಸ್ತಾಪಿಸಿ ಸದಸ್ಯರು ಗದ್ದಲ ನಡೆಸಿದ್ದು ಹಾಗೂ ಇದರಿಂದಾಗಿ ಕಲಾಪವನ್ನು ಮುಂದೂಡಿದ್ದೇ ಜಾಸ್ತಿ. ಸದ್ದುಗದ್ದಲಕ್ಕೆ ಕಾರಣವಾಗುವ ವಿಷಯಗಳು ಅಧಿವೇಶನದಿಂದ ಅಧಿವೇಶನಕ್ಕೆ ಬೇರೆಯಾದರೂ ಸದಸ್ಯರ ವರ್ತನೆಯಿಂದ ಈ ಬಾರಿಯೂ ಕಲಾಪಕ್ಕೆ ತೊಂದರೆಯಾದುದು ನಿಜ.ಈ ಅಧಿವೇಶನದಲ್ಲಿ ನೇರ ತೆರಿಗೆಯ ನಿಯಮಾವಳಿ, ನ್ಯಾಯಾಂಗದ ಉತ್ತರದಾಯಿತ್ವ, ಕೋಮು ಹಿಂಸಾಚಾರ ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಮೇಲೆ ಚರ್ಚೆಗಳನ್ನು ನಿರೀಕ್ಷಿಸಲಾಗಿತ್ತು. ಒಟ್ಟು 29 ಮಸೂದೆಗಳನ್ನು ಪರಿಶೀಲನೆಗೆ ಕೈಗೆತ್ತಿಕೊಳ್ಳಲು ಸರ್ಕಾರ ಬಯಸಿತ್ತು. ಆದರೆ ಸದನದಲ್ಲಿ ಮಂಡನೆಯಾದುದು ಮೂರು,  ಮಂಜೂರಾದುದು ಕೇವಲ ಒಂದು. ಅದು ಲೋಕಪಾಲ್ ಮಸೂದೆ. ಒಟ್ಟು 120 ಮಸೂದೆಗಳು ಸಂಸತ್ತಿನ ಒಪ್ಪಿಗೆಗಾಗಿ ಕಾಯುತ್ತಿವೆ.

ಆದರೆ ಸಂಸತ್ತಿನ ಕಾಲಾವಧಿ ಇನ್ನು ಜಾಸ್ತಿ ಇಲ್ಲದ ಕಾರಣ ಈ ಎಲ್ಲವೂ ಒಪ್ಪಿಗೆ ಪಡೆಯುವುದು ಅಸಾಧ್ಯ. ವಿರೋಧ ಪಕ್ಷದ ಸಹಕಾರ ಇದ್ದರೆ ವಿಶೇಷ ಅಧಿವೇಶನ ಕರೆದು ಚರ್ಚೆ ನಡೆಸಿ ಕೆಲವು ಪ್ರಮುಖ ಮಸೂದೆಗಳಿಗೆ ಸಂಸತ್ತಿನ ಒಪ್ಪಿಗೆ ಪಡೆಯಲು ಸಾಧ್ಯ  ಎಂದು ಸರ್ಕಾರ ಹೇಳಿದೆ. ಇದರ ಬಗ್ಗೆ ಖಚಿತವಾಗಿ ಏನನ್ನೂ ಹೇಳುವಂತಿಲ್ಲ.

ಮುಂದಿನ ವರ್ಷದ ಬಜೆಟ್ ಅಧಿವೇಶನದಲ್ಲಿ ಬಜೆಟ್‌ ಮೇಲಿನ ಚರ್ಚೆ ಮತ್ತು ಲೇಖಾನುದಾನ ಪಡೆಯುವುದರ ಹೊರತಾಗಿ ಪ್ರಮುಖ ಮಸೂದೆಗಳ ಮೇಲಿನ ಚರ್ಚೆಯ ಸಾಧ್ಯತೆ ಕಡಿಮೆ. ಏಕೆಂದರೆ ಆಗ ರಾಷ್ಟ್ರ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುತ್ತದೆ. ಶಾಸನ ರಚನೆಯ ಮೂಲ ಕರ್ತವ್ಯವನ್ನೇ ಸಂಸತ್ ಮರೆತಂತಿದೆ.

ಇದಕ್ಕೆ ವಿರೋಧ ಪಕ್ಷಗಳ ಜತೆಗೆ ಸರ್ಕಾರವೂ  ಹೊಣೆ ಹೊರಬೇಕಾಗುತ್ತದೆ. 2010ರ ಚಳಿಗಾಲದ  ಸಂಸತ್ ಅಧಿವೇಶನ ಸಂದರ್ಭದಲ್ಲಿ 2 ಜಿ ತರಂಗಾಂತರ ಹಗರಣದಿಂದಾಗಿ ಸಂಸತ್ ಕಲಾಪ ಸದ್ದುಗದ್ದಲಗಳಿಂದ ಕೊಚ್ಚಿಹೋಗಿತ್ತು. ನಂತರದ ದಿನಗ­ಳಲ್ಲೂ ಸುಗಮವಾಗಿ ಕಲಾಪ ನಡೆದದ್ದೇ ಕಮ್ಮಿ. ಇದು ಖಂಡಿತಾ ಸಂಸತ್  ಕಲಾಪ ನಡೆಯಬೇಕಾದ ರೀತಿಗೆ ಮಾದರಿಯಲ್ಲ.

ಪ್ರತಿಕ್ರಿಯಿಸಿ (+)